14 ಹಸಿರು ಭಾನು ಸಾಧಾರಣ ಕಾಲದ ಹದಿನೈದನೇ ಭಾನುವಾರ
ಐಚ್ಛಿಕ ಸ್ಮರಣೆ ಇಲ್ಲ - ಸಂತ ಕಮಿಲ್ಲಿಸ್ ದೆ ಲೆಲ್ಲಿಸ್.
1ನೇ ವಾಚನ - ಧರ್ಮೋ 3೦: 1೦-14
1ನೇ ವಾಚನ - ಧರ್ಮೋ 3೦: 1೦-14
10 : ನೀವು ನಿಮ್ಮ ದೇವರಾದ ಸರ್ವೇಶ್ವರನ ನುಡಿಗೆ ವಿಧೇಯರಾಗಿ ಈ ಧರ್ಮಶಾಸ್ತ್ರದ ಆಜ್ಞಾವಿಧಿಗಳನ್ನು ಅನುಸರಿಸಿ ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಅವರ ಕಡೆಗೆ ತಿರುಗಿಕೊಳ್ಳುವಿರಿ. ಅವರು ನಿಮ್ಮ ಪಿತೃಗಳ ವಿಷಯದಲ್ಲಿ ಸಂತೋಷಪಟ್ಟ ಹಾಗೆಯೇ ನಿಮ್ಮ ವಿಷಯದಲ್ಲೂ ಮತ್ತೆ ಸಂತೋಷಪಟ್ಟು ನಿಮಗೆ ಒಳಿತನ್ನುಂಟುಮಾಡುವರು.
11 : “ನಾನು ಈಗ ನಿಮಗೆ ಬೋಧಿಸಿದ ಧರ್ಮೋಪದೇಶ ನಿಮಗೆ ಗ್ರಹಿಸುವುದಕ್ಕೆ ಕಷ್ಟ ಆದುದಲ್ಲ, ಸಾಧಿಸುವುದಕ್ಕೆ ಅಸಾಧ್ಯವಾದದ್ದೂ ಅಲ್ಲ.
12 : ಇದು ಮೇಲಣ ಲೋಕದಲ್ಲಿರುವ ಮಾತಲ್ಲ. ‘ನಮಗಾಗಿ ಮೇಲಣ ಲೋಕವನ್ನು ಏರಿ ಅದನ್ನು ತಿಳಿದುಕೊಂಡು ಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ದಾರೆ? ಇದ್ದಿದ್ದರೆ ನಾವು ಕೈಗೊಳ್ಳುತ್ತಿದ್ದೆವು’ ಎಂದುಕೊಳ್ಳುವುದಕ್ಕೆ ಅವಕಾಶವೇನೂ ಇಲ್ಲ.
13 : ಇದು ಸಮುದ್ರದ ಆಚೆ ಇರುವ ಮಾತಲ್ಲ; ‘ನಮಗಾಗಿ ಸಮುದ್ರವನ್ನು ದಾಟಿ ಅದನ್ನು ತೆಗೆದುಕೊಂಡು ಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ದಾರೆ? ಇದ್ದಿದ್ದರೆ ನಾವು ಕೈಗೊಳ್ಳುತ್ತಿದ್ದೆವು’ ಎಂದುಕೊಳ್ಳುವುದಕ್ಕೆ ಆಸ್ಪದವೇನೂ ಇಲ್ಲ.
14 : ಅನುಸರಿಸುವುದಕ್ಕೆ ಸಾಧ್ಯವಾಗುವಂತೆ ಈ ವಾಕ್ಯ ನಿಮಗೆ ಸಮೀಪದಲ್ಲಿ ಇದೆ; ಇದು ನಿಮ್ಮ ಬಾಯಲ್ಲೇ ಇದೆ; ಹೃದಯದಲ್ಲೇ ಇದೆ.
ಕೀರ್ತನೆ - 69: 13, 16, 29-3೦, 32- 33, 35-36
13 : ಪ್ರಸನ್ನಕಾಲದಲ್ಲಿ ಪ್ರಭು, ನಾ ಮೊರೆಯಿಡುತ್ತಿರುವೆ ನಿನಗೆ / ಪ್ರೀತಿಮಯ ದೇವಾ, ಜೀವೋದ್ಧಾರಕ, ಸದುತ್ತರ ನೀಡೆನಗೆ //
14 : ಕಳ್ಳುಸುಬಿನಲಿ ನಾನಿಳಿದು ಹೋಗದಂತೆ ಸೆಳೆದುಕೊ / ಪೊಳ್ಳು ದುರುಳರ ಮಡುವಿನಲಿ ನಾ ಮುಳುಗದಂತೆ ಎಳೆದುಕೊ //
15 : ಹುಚ್ಚು ಹೊಳೆಯು ಎನ್ನ ಕೊಚ್ಚದಿರಲಯ್ಯಾ / ಮಡುವು ಎನ್ನ ಸೆಳೆದುಕೊಳ್ಳದಿರಲಯ್ಯಾ / ಪಾತಾಳವೆನ್ನನು ನುಂಗದಿರಲಯ್ಯಾ //
16 : ಆಲಿಸೆನ್ನ ಪ್ರಭು, ನಿನ್ನ ಪ್ರೀತಿ ಸುಮಧುರ / ಕಟಾಕ್ಷಿಸೆನ್ನನು ದೇವಾ, ಕರುಣಾಸಾಗರ //
17 : ನಿನ್ನ ದಾಸನಿಗೆ ವಿಮುಖನಾಗಬೇಡಯ್ಯಾ / ಆಪತ್ತಿನಲ್ಲಿರುವೆ, ತಡಮಾಡಬೇಡಯ್ಯಾ //
29 : ದೇವಾ, ನಾ ನೊಂದುಬೆಂದಿಹೆನಯ್ಯಾ / ಉದ್ಧರಿಸಿ ನನ್ನನು ಕಾಪಾಡಯ್ಯಾ //
30 : ದೇವಾ, ನಾ ನೊಂದುಬೆಂದಿಹೆನಯ್ಯಾ / ಉದ್ಧರಿಸಿ ನನ್ನನು ಕಾಪಾಡಯ್ಯಾ //
32 : ಇದನರಿತು ದೀನದಲಿತರು ಆನಂದಗೊಳ್ಳಲಿ / ದೇವನನು ಅರಸುವವರು ಪುನಶ್ಚೇತನಗೊಳ್ಳಲಿ //
33 : ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು / ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು //
35 : ರಕ್ಷಿಸುವನು ದೇವನು ಆ ಸಿಯೋನ್ ಪಟ್ಟಣವನು / ಕಟ್ಟಿಸುವನು ಯೆಹೂದ ನಾಡಿನ ನಗರಗಳನು / ಸ್ವಂತವಾಗಿರಿಸಿಕೊಂಬರು ಆತನ ಪ್ರಜೆ ಅದನು //
36 : ಅವರ ವಂಶಜರೇ ಬಾಧ್ಯಸ್ಥರಾಗುವರದಕೆ / ದೇವರನಾಮ ಪ್ರಿಯರೇ ನಿವಾಸಿಗಳು ಅದಕೆ //
2ನೇ ವಾಚನ - ಕೊಲೊ 1: 15-2೦
15 : ಅದೃಶ್ಯ ದೇವನ ಸದೃಶ್ಯರೂಪನು ಕ್ರಿಸ್ತ, ಸೃಷ್ಟಿಗೆಲ್ಲ ಜೇಷ್ಠಪುತ್ರನಾತ.
16 : ಇರಲಿ ಇಹದಲಿ, ಇರಲಿ ಪರದಲಿ, ಅಶರೀರ ಒಡೆಯರಾಗಲಿ, ಒಡೆತನವಾಗಲಿ, ಅಧಿಕಾರಿಗಳಾಗಲಿ, ಆಧಿಪತ್ಯವಾಗಿರಲಿ, ಆದುದೆಲ್ಲವೂ ಆತನಲಿ, ಆತನಿಂದ, ಆತನಿಗಾಗಿ.
17 : ಎಲ್ಲಕ್ಕೂ ಮೊದಲೇ ಇರುವನಾತ, ಸಮಸ್ತಕ್ಕೂ ಆಧಾರಭೂತ.
18 : ಸಭೆಯೆಂಬ ಶರೀರಕ್ಕೆ ಶಿರಸ್ಸಾತ, ಆದಿಸಂಭೂತ, ಆಗಲೆಲ್ಲದರಲೂ ಅಗ್ರಸ್ಥ, ಸತ್ತವರಿಂದ ಮೊದಲೆದ್ದು ಬಂದನಾತ.
19 : ಆ ಸುತನಲ್ಲೇ ಇರಿಸಲು ನಿರ್ಧರಿಸಿದನು ಪಿತದೇವ ತನ್ನ ಸರ್ವ ಸಂಪೂರ್ಣತೆಯನು.
20 : ಶಿಲುಬೆಯಿಂದಾತ ಹರಿಸಿದ ರಕುತದಿಂದ ಆಗುತಲಿದೆ ಶಾಂತಿಸಮಾಧಾನ, ನಡೆದಿದೆ ದೇವರೊಡನೆ ಸಂಧಾನ, ಇಹಪರಗಳೆಲ್ಲಕ್ಕೂ ಆತನ ಮುಖೇನ.
ಶುಭಸಂದೇಶ - ಲೂಕ 1೦: 25-37
25 : ಒಬ್ಬ ಶಾಸ್ತ್ರಜ್ಞನು ಎದ್ದು ಯೇಸುಸ್ವಾಮಿಯನ್ನು ಪರೀಕ್ಷಿಸುವ ಉದ್ದೇಶದಿಂದ “ಬೋಧಕರೇ, ಅಮರಜೀವ ನನಗೆ ಪ್ರಾಪ್ತಿ ಆಗಬೇಕಾದರೆ ನಾನು ಮಾಡಬೇಕಾದುದು ಏನು?” ಎಂದು ಕೇಳಿದನು.
26 : ಅದಕ್ಕೆ ಯೇಸು, “ಧರ್ಮಶಾಸ್ತ್ರದಲ್ಲಿ ಏನು ಬರೆದಿದೆ? ಹೇಗೆ ಪಠಿಸುತ್ತೀಯೆ?” ಎಂದು ಮರುಪ್ರಶ್ನೆ ಹಾಕಿದರು.
27 : ಅವನು, “ ‘ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು’ ಎಂದಿದೆ,” ಎಂದು ಉತ್ತರಕೊಟ್ಟನು.
28 : ಯೇಸು, “ಸರಿಯಾಗಿ ಉತ್ತರಕೊಟ್ಟೆ. ಅದರಂತೆ ಮಾಡು. ನಿನಗೆ ಅಮರಜೀವ ಲಭಿಸುವುದು,” ಎಂದನು.
29 : ಆದರೆ ಆ ಶಾಸ್ತ್ರಜ್ಞನು ತನ್ನನ್ನು ತಾನೇ ಸಮರ್ಥಿಸಿಕೊಳ್ಳಲು, “ನನ್ನ ನೆರೆಯವನು ಯಾರು?” ಎಂದು ಯೇಸುವನ್ನು ಮತ್ತೆ ಪ್ರಶ್ನಿಸಿದನು.
30 : ಯೇಸು ಅವನಿಗೆ ಹೀಗೆಂದು ವಿವರಿಸಿದರು: “ಒಬ್ಬನು ಜೆರುಸಲೇಮಿನಿಂದ ಇಳಿದು ಜೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ದರೋಡೆಗಾರರ ಕೈಗೆ ಸಿಕ್ಕಿಬಿದ್ದ. ದರೋಡೆಗಾರರು ಅವನನ್ನು ಸುಲಿಗೆ ಮಾಡಿ, ಹೊಡೆದು ಬಡಿದು, ಅರೆಜೀವ ಮಾಡಿ, ಅಲ್ಲೇ ಬಿಟ್ಟುಹೋದರು.
31 : ಅದೇ ಮಾರ್ಗವಾಗಿ ಒಬ್ಬ ಯಾಜಕನು ಹಾದು ಹೋಗಬೇಕಾಗಿ ಬಂದಿತು. ಈತನು, ಅವನನ್ನು ಕಂಡದ್ದೇ ಆಚೆ ಬಳಸಿಕೊಂಡು ಹೋದ.
32 : ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ, ಹಾಗೆಯೇ ಬಳಸಿಕೊಂಡು ಹೋದ.
33 : ಆದರೆ ಆ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದ ಒಬ್ಬ ಸಮಾರಿಯದವನು ಅಲ್ಲಿಗೆ ಬಂದಾಗ, ಅವನನ್ನು ಕಂಡು ಕನಿಕರಪಟ್ಟ.
34 : ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ. ಬಳಿಕ ಅವನನ್ನು ತನ್ನ ಸ್ವಂತ ವಾಹಕಪಶುವಿನ ಮೇಲೆ ಹತ್ತಿಸಿಕೊಂಡು ಒಂದು ಛತ್ರಕ್ಕೆ ಕರೆದುಕೊಂಡು ಹೋಗಿ, ಆರೈಕೆ ಮಾಡಿದ.
35 : ಮಾರನೆಯ ದಿನ ಎರಡು ದಿನಾರಿ ನಾಣ್ಯಗಳನ್ನು ಛತ್ರದವನಿಗೆ ಕೊಟ್ಟು, ‘ಇವನನ್ನು ಚೆನ್ನಾಗಿ ನೋಡಿಕೊ, ಇದಕ್ಕಿಂತ ಹೆಚ್ಚು ವೆಚ್ಚ ಆದರೆ ನಾನು ಹಿಂದಿರುಗಿ ಬರುವಾಗ ಸಲ್ಲಿಸುತ್ತೇನೆ,’ ಎಂದ.
36 : “ದರೋಡೆಗಾರರ ಕೈಗೆ ಸಿಕ್ಕಿದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?” ಎಂದು ಯೇಸು ಆ ಶಾಸ್ತ್ರಜ್ಞನನ್ನು ಕೇಳಿದರು.
37 : ದಕ್ಕೆ ಅವನು, “ದಯೆ ತೋರಿದವನೇ ನೆರೆಯವನು,” ಎಂದನು. ಆಗ ಯೇಸು, “ಹೋಗು, ನೀನೂ ಹಾಗೆಯೇ ಮಾಡು,” ಎಂದು ಹೇಳಿದರು
ಚಿಂತನೆ
ಚಿಂತನೆ
ಪ್ರಿಯ ಕ್ರಿಸ್ತ ಬಾಂದವರೇ, ಇಂದಿನ ವಾಚನಗಳು ದೈವಾಜ್ಞೆಗಳ ಮೇಲೆ ನೆಲೆಸಿವೆ. ಇಂದಿನ ಮೊದಲನೆಯ
ವಾಚನದಲ್ಲಿ ಮೋಶೆಯು ಇಸ್ರಾಯೇಲರಿಗೆ, “ನಿನ್ನ ಸರ್ವೇಶ್ವರನಾದ ನುಡಿಗೆ ವಿಧೇಯನಾಗಿದ್ದು,
ಆ ಆಜ್ಞಾವಿಧಿಗಳನ್ನು ಪೂರ್ಣ ಹೃದಯದಿಂದಲೂ, ಪೂರ್ಣ ಮನಸ್ಸಿನಿಂದಲೂ ಅನುಸರಿಸಿ ಅವರೆಡೆಗೆ
ತಿರುಗಿಕೊಳ್ಳಬೇಕು’ ಎಂದು ತಿಳಿಸುತ್ತಾನೆ. ಇದೆಲ್ಲಕ್ಕಿಂತಲೂ ಒಂದು ಹೆಜ್ಜೆ ಮುಂದೆ ಬಂದು
’ನಿನ್ನ ದೇವರನ್ನು ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು ಎಂದು ತಿಳಿಸುವುದರ ಮೂಲಕ
ಪ್ರತಿಯೊಬ್ಬರು ದೇವರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಾಗ ದೇವರಿಗೆ ಸಂತೋಷ ಉಂಟಾಗಿ ನಮಗೆ
ಒಳಿತನ್ನು ಮಾಡುವುದರ ಜೋತೆಗೆ ಸದಾ ಕಾಲ ದೇವರ ದಯೆ ನೆಲೆಸಿರುತ್ತದೆ ಎಂದು ಒಳ್ಳೆಯ ಸಮಾರಿಯನ
ಮೂಲಕ ತಿಳಿಸಿಕೊಡುತ್ತಾರೆ.
ಕ್ರೈಸ್ತ ಸಮುದಾಯ ಬೆಳೆದ ಕೆಲವು ವರ್ಷಗಳ ನಂತರ ಅನೇಕ ಬೋಧಕರು ಈ ಒಳ್ಳೆಯ ಸಮಾರಿಯನ ಕಥೆ
ಹೇಳಲು ಬಹಳ ಸಂತೋಷಪಡುತ್ತಿದ್ದರು. ಅವರಲ್ಲಿ ಕೆಲವರೆಂದರೆ, ಸಂತರುಗಳಾದ ಅಗಸ್ಟೀನ್, ಜೆರೋಮ್,
ಅಂಬ್ರೋಸ್ ಮತ್ತಿತರ ಮಹಾನ್ ಸಂತರುಗಳು ತಮ್ಮ ಬೋಧನೆಗಳಲ್ಲಿ ಹೇಳುತ್ತಿದ್ದರು. ಹಲವರು ಈ ಸಾಮತಿಗೆ
ತಮ್ಮದೇ ಆದ ಪಾತ್ರಗಳನ್ನು ಹೋಲಿಕೆ ಮಾಡಿ ಅರ್ಥೈಸುತ್ತಿದ್ದರು. ಈ ಕಥೆಯಲ್ಲಿ ಶಿಲುಬೆ ಹೊತ್ತು
ಮರಣ ಜಯಿಸಿ ಮೃತ್ಯುಂಜಯನಾದ ಯೇಸುಕ್ರಿಸ್ತರನ್ನೇ ಒಳ್ಳೆಯ ಸಮಾರಿಯನನ್ನಾಗಿಸಿ, ಕಳ್ಳರ ಅಥವಾ
ದರೋಡೆಕಾರರ ಕೈಯಲ್ಲಿ ಸಿಕ್ಕಿ ದೋಚಲ್ಪಟ್ಟು ಗಾಯಗಳಾಗಿ ಅರ್ಧ ಜೀವದಿಂದ ಬಿದ್ದಿರುವವನನ್ನು
ಒಬ್ಬರಿಗೊಬ್ಬರು ನೋವುಂಟು ಮಾಡುವ, ಇತರರ ಬಾಳಲ್ಲಿ ಬಿರುಕು ತರುವ ಮತ್ತು ಪಾಪದ ಗಾಯಗಳಿಂದ
ಬಿದ್ದಿರುವ ಮನುಕುಲವನ್ನು ಪ್ರತಿಬಿಂಬಿಸುತ್ತದೆ. ಒಳ್ಳೆಯ ಸಮಾರಿಯನಾದ ಯೇಸು ಮನುಷ್ಯ ಕುಮಾರನಾಗಿ
ಜನ್ಮ ತಾಳಿ ಈ ಭೂಲೋಕದ ಮನುಕುಲಕ್ಕೆ ಹತ್ತಿರವಾಗಿ ವಿವಿಧ ಪಾಪದ ಗಾಯಗಳಿಂದ ನರಳಾಡುತ್ತಿರುವ
ಮಾನವರನ್ನು ರಕ್ಷಿಸಲು, ಪಾಪದ ಗಾಯ ವಾಸಿಮಾಡಲು ಮತ್ತು ಹೊಸಜೀವ ಕೊಡಲು ಒಳ್ಳೆಯ ಸಮಾರಿಯದವನಂತೆ
ಮುಂದೆ ಬರುತ್ತಾರೆ. ಒಳ್ಳೆಯ ಸಮಾರಿಯದವನಂತೆ ಪಾಪದ ಗಾಯ ವಾಸಿಮಾಡಲು ಮನುಕುಲವನ್ನು ಹೊತ್ತು
ಧರ್ಮಸಭೆಯೆಂಬ ತಂಗುದಾಣದಲ್ಲಿ ಮನುಕುಲವನ್ನು ಸಂಪೂರ್ಣ ಶುಶ್ರೂಷೆಗೆ ಒಳಪಡಿಸುತ್ತಾರೆ. ಇದಕ್ಕಾಗಿ
ಯೇಸು ತಮ್ಮನ್ನೇ ಸಮರ್ಪಿಸಿಕೊಳ್ಳುತ್ತಾರೆ.
ಇಂದು ನಮ್ಮಲ್ಲಿ ಆನೇಕರು ಪ್ರೀತಿ ಮತ್ತು ಕರುಣಾಭರಿತ ಯೇಸುವಿನ ಮುಖವನ್ನು ನೋಡಿ ಅನುಭವಿಸಿ,
ಒಬ್ಬ ಒಳ್ಳೆಯ ಸಮಾರಿಯನಾಗಿ ಕ್ರಿಸ್ತನ ಪ್ರತಿರೂಪಗಳಾರುತ್ತಾರೆ. ಅಂತೆಯೇ ಇಂದು ಈ ಒಳ್ಳೆಯ
ಸಮಾರಿಯನು ನಾವಾಗಿ ಬೀದಿ ಬೀದಿಯಲ್ಲಿರುವವರನ್ನು, ಸಂಸಾರದಲ್ಲಿ ನೊಂದವರನ್ನು, ಅನೇಕ ರೀತಿಯಲ್ಲಿ
ಶೋಷಣೆಗೆ ಒಳಗಾದವರನ್ನು ತಂದು ಯೇಸುವಿನ ಪವಿತ್ರ ಕರುಣೆಯ ಹೃದಯದಿಂದ ಅವರನ್ನೆಲ್ಲಾ ಸಂಪೂರ್ಣ
ಸ್ವಸ್ಥಗೊಳಿಸಲು ಕರೆ ನೀಡುತ್ತಿದ್ದಾರೆ. ಒಳ್ಳೆಯ ಸಮಾರಿಯನಾಗಿ ನಮ್ಮ ಬಾಳಲ್ಲಿ ಬಂದ
ಯೇಸುವಿನ ಪ್ರತಿರೂಪಗಳಾಗಿ, ನಾವು ಸಹ ನೊಂದಂತಹ, ದೀನದಲಿತರ, ಸಮಾಜದ ಶೋಷಣೆಗೆ ಒಳಗಾಗಿರುವವರ
ಮತ್ತು ದಿಕ್ಕು ದೆಸೆಯಿಲ್ಲದವರಿಗೆ ಒಳ್ಳೆಯ ಸಮಾರಿಯರಾಗಿ ಬಾಳುವಂತೆ ಬೇಕಾದ ವರಗಳಿಗಾಗಿ
ಪ್ರಾರ್ಥಿಸೋಣ.
No comments:
Post a Comment