17 ಹಸಿರು ಬುಧ ಸಾಧಾರಣ ಕಾಲದಹದಿನೈದನೇ ವಾರ
1ನೇ ವಾಚನ - ವಿಮೋ 3: 1-6, 9-12.
ಕೀರ್ತನೆ - 1೦3: 1-4, 6-7
ಶುಭಸಂದೇಶ - ಮತ್ತಾಯ 11: 25-27
1ನೇ ವಾಚನ - ವಿಮೋ 3: 1-6, 9-12.
ಕೀರ್ತನೆ - 1೦3: 1-4, 6-7
ಶುಭಸಂದೇಶ - ಮತ್ತಾಯ 11: 25-27
1ನೇ ವಾಚನ - ವಿಮೋ 3: 1-6, 9-12.
1 : ಮೋಶೆ ಮಿದ್ಯಾನರ ಪೂಜಾರಿಯೂ ತನ್ನ ಮಾವನೂ ಆದ ಇತ್ರೋನನ ಮಂದೆಯನ್ನು ಮೇಯಿಸುತ್ತಿದ್ದನು. ಒಮ್ಮೆ ಆ ಮಂದೆಯನ್ನು ಕಾಡಿನ ಹಿಂಭಾಗಕ್ಕೆ ನಡೆಸಿಕೊಂಡು ‘ಹೋರೇಬ್’ ಎಂಬ ದೇವರ ಬೆಟ್ಟಕ್ಕೆ ಬಂದನು.
2 : ಅಲ್ಲಿ ಮುಳ್ಳಿನ ಪೊದೆಯೊಂದರ ಒಳಗೆ ಉರಿಯುವ ಬೆಂಕಿಯಲ್ಲಿ ಸರ್ವೇಶ್ವರನ ದೂತನು ಅವನಿಗೆ ಕಾಣಿಸಿಕೊಂಡನು. ಮೋಶೆ ನೋಡಿದನು. ಆ ಮುಳ್ಳಿನ ಪೊದೆ ಉರಿಯುತ್ತಲೇ ಇತ್ತು; ಆದರೆ ಸುಟ್ಟುಹೋಗದೆ ಇತ್ತು.
3 : ಆಗ ಮೋಶೆ, “ಇದೇನು ಆಶ್ಚರ್ಯ! ಪೊದೆ ಸುಟ್ಟುಹೋಗದೆ ಇರುವುದಕ್ಕೆ ಕಾರಣವೇನು? ನಾನು ಹತ್ತಿರ ಹೋಗಿ ತಿಳಿದುಕೊಳ್ಳುತ್ತೇನೆ” ಎಂದುಕೊಂಡನು.
4 : ಅದನ್ನು ನೋಡಲು ಅವನು ಮುಂದಕ್ಕೆ ಬರುವುದನ್ನು ಸರ್ವೇಶ್ವರಸ್ವಾಮಿ ಕಂಡರು. ಪೊದೆಯೊಳಗಿಂದ, “ಮೋಶೇ, ಮೋಶೇ,” ಎಂದು ದೇವರು ಕರೆದರು. ಅದಕ್ಕವನು, “ಇಗೋ, ಇದ್ದೇನೆ,” ಎಂದು ಉತ್ತರಕೊಟ್ಟನು.
5 : ದೇವರು ಅವನಿಗೆ, “ಹತ್ತಿರ ಬರಬೇಡ! ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು; ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರಭೂಮಿ,” ಎಂದು ಹೇಳಿದರು.
6 : ಅದೂ ಅಲ್ಲದೆ, “ನಾನು ನಿನ್ನ ತಂದೆಯ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು,” ಎಂದರು. ಆಗ ಮೋಶೆ ದೇವರನ್ನು ದಿಟ್ಟಿಸಿ ನೋಡಲು ಭಯಪಟ್ಟು ಮುಖವನ್ನು ಮುಚ್ಚಿಕೊಂಡನು.
7 : ಆಗ ಸರ್ವೇಶ್ವರ, “ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಬಿಟ್ಟೀ ಕೆಲಸ ಮಾಡಿಸಿಕೊಳ್ಳುವವರ ಬಗ್ಗೆ ಅವರು ಇಟ್ಟ ಮೊರೆ ನನಗೆ ಕೇಳಿಸಿದೆ. ಅವರ ಕಷ್ಟದುಃಖವನ್ನೆಲ್ಲಾ ನಾನು ಬಲ್ಲೆ.
8 : ಆದಕಾರಣ ಅವರನ್ನು ಈಜಿಪ್ಟಿನವರ ಕೈಯಿಂದ ಬಿಡಿಸುವುದಕ್ಕು ಮತ್ತು ಆ ದೇಶದಿಂದ ಹೊರತಂದು ಹಾಲೂ ಜೇನೂ ಹರಿಯುವ ಸವಿಸ್ತಾರವಾದ ಒಳ್ಳೆಯ ನಾಡಿಗೆ, ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಹಾಗು ಯೆಬೂಸಿಯರು ವಾಸವಾಗಿರುವ ನಾಡಿಗೆ ನಡೆಸಿಕೊಂಡು ಹೋಗುವುದಕ್ಕು ಇಳಿದು ಬಂದಿದ್ದೇನೆ.
9 : ಈಗ ಕೇಳು: “ಇಸ್ರಯೇಲರ ಮೊರೆ ನನಗೆ ಮುಟ್ಟಿದೆ. ಈಜಿಪ್ಟಿನವರು ಅವರಿಗೆ ಕೊಡುತ್ತಿರುವ ಉಪದ್ರವವನ್ನು ನಾನು ನೋಡಿದ್ದೇನೆ.
10 : ಆದ್ದರಿಂದ ಹೋಗು ನನ್ನ ಜನರಾಗಿರುವ ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಹೊರತರುವುದಕ್ಕಾಗಿ ನಿನ್ನನ್ನು ಫರೋಹನ ಬಳಿಗೆ ಕಳಿಸುತ್ತಿದ್ದೇನೆ,” ಎಂದರು.
11 : ಮೋಶೆ ದೇವರಿಗೆ, “ಫರೋಹನ ಸನ್ನಿಧಾನಕ್ಕೆ ಹೋಗುವುದಕ್ಕಾಗಲಿ, ಇಸ್ರಯೇಲರನ್ನು ಈಜಿಪ್ಟಿನಿಂದ ಕರೆದುಕೊಂಡು ಬರುವುದಕ್ಕಾಗಲಿ ನಾನು ಎಷ್ಟರವನು?” ಎಂದನು.
12 : ಅದಕ್ಕೆ ದೇವರು, “ನಾನೇ ನಿನ್ನ ಸಂಗಡ ಇರುವೆನು; ನೀನು ನನ್ನ ಜನರನ್ನು ಈಜಿಪ್ಟಿನಿಂದ ಹೊರಗೆ ತಂದಾಗ ನೀವು ಈ ಬೆಟ್ಟದಲ್ಲೇ ದೇವರನ್ನು ಆರಾಧಿಸುವಿರಿ. ನಿನ್ನನ್ನು ಕಳಿಸಿದವನು ನಾನೇ ಎಂಬುದಕ್ಕೆ ಇದೇ ನಿನಗೆ ಗುರುತಾಗಿ ಇರುವುದು,” ಎಂದರು.
ಕೀರ್ತನೆ - 1೦3: 1-4, 6-7
ಪ್ರಭು ದಯಾಳು, ಕೃಪಾಪೂರ್ಣನು
1 : ಭಜಿಸು ನನ್ನ ಮನವೇ, ಭಜಿಸು ಪ್ರಭುವನು / ನನ್ನ ಅಂತರಂಗವೇ, ಭಜಿಸು ಆತನನು / ನೆನೆ ಆತನ ಪರಮಪಾವನ ನಾಮವನು //
2 : ಭಜಿಸು ನನ್ನ ಮನವೇ, ಭಜಿಸು ಪ್ರಭುವನು / ಮರೆಯದಿರು ಆತನ ಉಪಕಾರಗಳೊಂದನು //
3 : ಮನ್ನಿಸುವನಾತ ನನ್ನ ದೋಷಗಳನು / ವಾಸಿಮಾಡುವನು ನನ್ನ ರೋಗಗಳನು //
4 : ಉಳಿಸುವನು ಪಾತಾಳದ ಕೂಪದಿಂದ ನನ್ನನು / ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು //
5 : ಒಳ್ಳೆಯವುಗಳಿಂದ ತುಂಬಿಸುವನು ನನ್ನ ಜೀವಮಾನವನು / ಪುನರುಜ್ಜೀವನಗೊಳಿಸುವನು ಗರುಡನಂತೆ ನನ್ನ ಯೌವನವನು //
6 : ಸಾಧಿಸುವನು ಪ್ರಭು ನ್ಯಾಯನೀತಿಯನು / ದೊರಕಿಸುವನು ಶೋಷಿತರಿಗೆ ನ್ಯಾಯವನು //
7 : ತೋರಿಸಿದಾತ ತನ್ನ ಮಾರ್ಗವನು ಮೋಶೆಗೆ / ತನ್ನ ಮಹತ್ಕಾರ್ಯಗಳನು ಇಸ್ರಯೇಲರಿಗೆ //
ಶುಭಸಂದೇಶ - ಮತ್ತಾಯ 11: 25-27
25 : ಆ ಸಮಯದಲ್ಲಿ ಯೇಸುಸ್ವಾಮಿ, "ಪಿತನೇ, ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ.
26 : ಹೌದು, ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ.
27 : "ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ; ಪುತ್ರನು ಯಾರೆಂಬುದನ್ನು ಪಿತನೇ ಹೊರತು ಬೇರಾರೂ ಅರಿಯರು. ಪಿತನು ಯಾರು ಎಂಬುದನ್ನು ಪುತ್ರನು ಮತ್ತು ಯಾವನಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ, ಅವರೇ ಹೊರತು ಮತ್ತಾರೂ ಅರಿಯರು.
ಚಿಂತನೆ (ಜೀವವಾಕ್ಯ ಪುಸ್ತಕದಿಂದ)
ಮುಗ್ಧ ಮನಸ್ಸು
ಪಿತನೇ ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ.
ಜಗತ್ತಿನಲ್ಲಿ ಮೆರೆದು ಹೋದ ಮಹಾಪುರುಷರ ಗುಣಗಳಲ್ಲಿ ನಮಗೆ ಏರುಪೇರುಗಳು ಕಾಣಿಸಬಹುದು. ಆದರೆ ಅವರಲ್ಲಿದ್ದ ಕೃತಜ್ಞತೆಯ ಗುಣ ಮಾತ್ರ ಸಂಪೂರ್ಣವಾಗಿ ಏಕರೂಪವಾಗಿರುವುದು ನಮಗೆ ಕಾಣಿಸುತ್ತದೆ. ನೆಪೋಲಿಯನ್ ಮಹಾ ರಾಜಾಧಿರಾಜ ರೋಂ ಹಾಗೂ ಈಜಿಪ್ಟ್‌ಗಳನ್ನು ಗೆದ್ದು ಬಂದಾಗ ಪ್ಯಾರಿಸ್‌ನಲ್ಲೂ ಅದ್ಭುತ ಸ್ವಾಗತ ಕಾದಿತ್ತು. ಅನೇಕ ರಾಜ ಮಹರಾಜರ ಗುಂಪಿನಲ್ಲಿ ತನ್ನ ಮುದಿ ಸಾಕು ತಾಯಿಯನ್ನು ನೋಡಿದ ನೆಪೋಲಿಯನ್ ಅವಳ ಬಳಿಗೆ ಸರಿದು ಇತರರು ತಂದ ನಾನಾ ರೀತಿಯ ಫಲಪುಷ್ಪ ಸ್ವೀಕರಿಸುವುದಕ್ಕೆ ಮೊದಲು ಕಾಮಿಲಾ ಲಾರಿ ಎಂಬ ಆ ಮುದುಕಿ ತಂದ ಆಡಿನ ಹಾಲನ್ನು ಕುಡಿದು ಫ್ರಾನ್ಸಿನ ಸಿಂಹಾಸನದಲ್ಲಿ ಕುಳಿತಾಗ ಆ ಮುದಿತಾಯಿಯನ್ನು ಸತ್ಕರಿಸಿ ತನ್ನ ಯಶಸ್ವಿಗೆ ಕಾರಣಳಾದ ಅವಳಿಗೆ ಕೃತಜ್ಞತೆಯನ್ನು ಸಲ್ಲಿಸಿದ.
ಕೃತಜ್ಞತೆ ಒಬ್ಬನು ಇನ್ನೊಬ್ಬನಿಗೆ ಅರ್ಪಿಸುವ ಮಹಾನ್ ಕೊಡುಗೆ. ಇಂತಹ ಮಹಾನ್ ಕಾರ್ಯವನ್ನು ಪ್ರಭು ಯೇಸು ತಮ್ಮ ತಂದೆಗೆ ಅರ್ಪಿಸುತ್ತಾರೆ. ತಮ್ಮ್ಮ ಮೂಲಕ ಅದ್ಭುತ ಕೆಲಸ ಮಾಡಿದ ತಂದೆಗೆ ಕೃತಜ್ಞತೆಯನ್ನು ಸಲ್ಲಿಸುವುದು ಮಾತ್ರವಲ್ಲದೇ ತಮ್ಮ ಸಂದೇಶವನ್ನು ಸ್ವೀಕರಿಸಿದವರು ಜ್ಞಾನಿಗಳು, ಮೇಧಾವಿಗಳು ಅಲ್ಲ, ಕೇವಲ ಕೆಲವು ರೈತರು, ಕೆಲವು ಬೆಸ್ತರು ಹಾಗೂ ಸಾಮಾನ್ಯ ಜನರು.
ಹಾಗಾದರೆ ಈ ಜ್ಞಾನಿಗಳು, ಮೇಧಾವಿಗಳು ಪ್ರಭುವಿನ ಸಂದೇಶವನ್ನು ಯಾಕೆ ಸ್ವೀಕರಿಸಲಿಲ್ಲ? ಅವರಲ್ಲಿ ಜ್ಞಾನವಿರಲಿಲ್ಲವೇ? ಎಂಬ ಪ್ರಶ್ನೆ ಉದ್ಭವಿಸಬಹುದು. ಪ್ರಭುವಿನ ಸಂದೇಶ ಸ್ವೀಕರಿಸಲು ಬರೀ ಜ್ಞಾನ ಮತ್ತು ವೈಚಾರಿಕತೆಯಿದ್ದರೆ ಸಾಲದು. ಅದನ್ನು ಸ್ವೀಕರಿಸುವ ವಿಶ್ವಾಸ ಹಾಗೂ ಮುಗ್ಧ ಮನಸ್ಸು ಅಗತ್ಯ. ಅಂತಹ ಮುಗ್ಧ ಮನಸ್ಸು ಮತ್ತು ವಿಶ್ವಾಸ ಹಾಗೂ ಮುಗ್ಧ ಮನಸ್ಸು ಅಗತ್ಯ. ಅಂತಹ ಮುಗ್ಧ ಮನಸ್ಸು ಮತ್ತು ವಿಶ್ವಾಸ ಆ ಫರಿಸಾಯ ಮತ್ತು ಬುದ್ಧಿಜೀವಿಗಳಲ್ಲಿ ನಾಪತ್ತೆಯಾಗಿತ್ತು.
ಆದ್ದರಿಂದ ನಾವು ಕೂಡ ಮಕ್ಕಳಂತೆ ಮುಗ್ಧ ಮನಸ್ಸಿನವರಾಗಿ ಪ್ರಭುವಿನ ಸಂದೇಶವನ್ನು ಸ್ವೀಕರಿಸಲು ಪ್ರಯತ್ನಿಸಬೇಕು. ಇಂದಿನ ಮೊದಲನೆ ವಾಚನದಲ್ಲಿ ಓದಿದಂತೆ ದೇವರು ಯಾವಾಗಲೂ ಮುಗ್ಧ ಮನಸ್ಸಿನವರನ್ನು ತಮ್ಮ ಬಳಿಗೆ ಕರೆಯುತ್ತಾರೆ. ಇಸ್ರಾಯೇಲ್ ಜನಾಂಗದಲ್ಲಿ ಬಹಳ ಜ್ಞಾನಿಗಳು, ಮೇಧಾವಿಗಳು, ಗಟ್ಟಿಮುಟ್ಟಾದ ಜನರಿದ್ದರು. ಸರಿಯಾಗಿ ಮಾತನಾಡಲೂ ಬಾರದ ಮೋಶೆಯನ್ನು ದೇವರು ಅವರ ಸೇವೆಗೆ ಕರೆಯುತ್ತಾರೆ. ಏಕೆಂದರೆ ಅವರಲ್ಲಿ ಮುಗ್ಧವಾದ ಮನಸ್ಸಿತ್ತು. ಆದ್ದರಿಂದ ನಾವು ಈ ಲೋಕದಲ್ಲಿ ಬುದ್ಧಿವಂತರಾಗಿರಬಹುದು. ಆದರೆ ದೇವರ ಸಂದೇಶ ನಮಗೆ ಅರ್ಥವಾಗಬೇಕಾದರೆ ನಮ್ಮ ಲೌಕಿಕ ಬುದ್ಧಿವಂತಿಕೆ, ಜ್ಞಾನವನ್ನು ಬದಿಗೆ ಇಟ್ಟು ಕರ್ತರ ಮುಂದೆ ಮುಗ್ಧ ಮನಸ್ಕರಾಗಿ ಅಚಲ ವಿಶ್ವಾಸವುಳ್ಳರಾಗಿ ಅವರ ಬಳಿ ಸರಿದರೆ ಅವರ ಸಂದೇಶ ನಮಗೆ ಅರ್ಥವಾಗುವುದು.
************
No comments:
Post a Comment