Tuesday, 16 July 2019

ಸಾಧಾರಣ ಕಾಲದಹದಿನೈದನೇ ವಾರ ಗುರುವಾರ

18/ ಹಸಿರು /ಗುರು /ಸಾಧಾರಣ ಕಾಲದಹದಿನೈದನೇ ವಾರ 
1ನೇ ವಾಚನ - ವಿಮೋ: 3: 13-2೦ 
ಕೀರ್ತನೆ - 1೦5: 1, 6, 8-9, 24-27 
ಶುಭಸಂದೇಶ - ಮತ್ತಾಯ 11: 28-3೦

1ನೇ ವಾಚನ - ವಿಮೋ: 3: 13-2೦ 
13 : ಮೋಶೆ ದೇವರಿಗೆ, “ನಾನು ಇಸ್ರಯೇಲರ ಬಳಿಗೆ ಹೋಗಿ, ‘ನಿಮ್ಮ ಪೂರ್ವಜರ ದೇವರು ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾರೆ,’ ಎಂದು ಹೇಳಿದಾಗ ಅವರು ಒಂದು ವೇಳೆ, ‘ಆತನ ಹೆಸರೇನು?’ ಎಂದು ನನ್ನನ್ನು ಕೇಳಿದರೆ ನಾನೇನು ಉತ್ತರ ಕೊಡಬೇಕು?” ಎಂದು ಕೇಳಿದನು.
14 : ಆಗ ದೇವರು ಹೀಗೆಂದರು: “ಇರುವವನಾಗಿ ಇರುವವನು ನಾನೇ; ನೀನು ಇಸ್ರಯೇಲರಿಗೆ ‘ತಾನಾಗಿ ಇರುವವನು,’ ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾನೆ ಎಂದು ಹೇಳು.”
15 : ದೇವರು ಮೋಶೆಗೆ ಮತ್ತೆ ಇಂತೆಂದರು: “ನೀನು ಇಸ್ರಯೇಲರಿಗೆ, ‘ನಿಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ ಹಾಗು ಯಕೋಬರ ದೇವರಾಗಿರುವ ಸರ್ವೇಶ್ವರ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ’ ಎಂದು ಹೇಳು. ಇದು ಸದಾಕಾಲಕ್ಕೂ ನನ್ನ ಹೆಸರು. ಈ ಹೆಸರಿನಿಂದಲೆ ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕು.
16 : ನೀನು ಹೋಗಿ ಇಸ್ರಯೇಲರ ಹಿರಿಯರನ್ನು ಕೂಡಿಸು. ಅವರಿಗೆ, ‘ನಿಮ್ಮ ಪೂರ್ವಜರ ದೇವರು, ಅಂದರೆ ಅಬ್ರಹಾಮ, ಇಸಾಕ ಹಾಗು ಯಕೋಬರ ದೇವರು ಆಗಿರುವ ಸರ್ವೇಶ್ವರ ನನಗೆ ದರ್ಶನ ಕೊಟ್ಟು ನಿಮ್ಮ ವಿಷಯದಲ್ಲಿ ಹೀಗೆಂದಿದ್ದಾರೆ: ನಿಮ್ಮನ್ನೂ ಈಜಿಪ್ಟ್ ದೇಶದಲ್ಲಿ ನಿಮಗೆ ಸಂಭವಿಸಿದ್ದೆಲ್ಲವನ್ನೂ ನಾನು ಕಣ್ಣಾರೆ ಕಂಡು ತಿಳಿದುಕೊಂಡಿದ್ದೇನೆ.
17 : ಈಜಿಪ್ಟಿನಲ್ಲಿ ನಿಮಗುಂಟಾಗಿ ಇರುವ ಸಂಕಷ್ಟಗಳಿಂದ ನಿಮ್ಮನ್ನು ಪಾರುಮಾಡಿ ಹಾಲೂ ಜೇನೂ ಹರಿಯುವ ನಾಡಿಗೆ, ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಹಾಗು ಯೆಬೂಸಿಯರು ವಾಸವಾಗಿರುವ ನಾಡಿಗೆ ಬರಮಾಡಬೇಕೆಂದು ತೀರ್ಮಾನಿಸಿದ್ದೇನೆ’ ಎಂದು ತಿಳಿಸು.
18 : “ಅವರು ನಿನ್ನ ಮಾತಿಗೆ ಕಿವಿಗೊಡುವರು. ನೀನು ಮತ್ತು ಇಸ್ರಯೇಲಿನ ಹಿರಿಯರು ಈಜಿಪ್ಟ್ ದೇಶದ ಅರಸನ ಬಳಿಗೆ ಹೋಗಿ ಅವನಿಗೆ, ‘ಹಿಬ್ರಿಯರ ದೇವರಾಗಿರುವ ಸರ್ವೇಶ್ವರ ನಮಗೆ ಪ್ರತ್ಯಕ್ಷರಾದರು. ಆದುದರಿಂದ ನಾವು ಮರುಭೂಮಿಯಲ್ಲಿ ಮೂರು ದಿನದ ಪ್ರಯಾಣದಷ್ಟು ದೂರ ಹೋಗಿ ನಮ್ಮ ದೇವರಾದ ಸರ್ವೇಶ್ವರನಿಗೆ ಬಲಿಯೊಪ್ಪಿಸಬೇಕಾಗಿದೆ. ಅಪ್ಪಣೆಯಾಗಬೇಕು’ ಎಂದು ಕೇಳಿಕೊಳ್ಳಿ.
19 : ಆ ಈಜಿಪ್ಟಿನ ಅರಸನು ಎಷ್ಟು ಬಲಾತ್ಕಾರ ಮಾಡಿದರೂ ನಿಮ್ಮನ್ನು ಬಿಡುವುದಿಲ್ಲವೆಂದು ತಿಳಿದಿದ್ದೇನೆ.
20 : ಆದಕಾರಣ ನನ್ನ ಭುಜಬಲವನ್ನು ಪ್ರದರ್ಶಿಸುವೆನು. “ಅಲ್ಲಿ ಮಹತ್ಕಾರ್ಯಗಳನ್ನು ಮಾಡಿ, ಈಜಿಪ್ಟ್ ದೇಶವನ್ನೆ ನಾನಾವಿಧವಾಗಿ ಬಾಧಿಸುವೆನು. ಆಮೇಲೆ ಅರಸನು ನಿಮ್ಮನ್ನು ಬಿಡುಗಡೆ ಮಾಡುವನು.
ಕೀರ್ತನೆ - 1೦5: 1, 6, 8-9, 24-27 
ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು 
1 : ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು / ಮಾಡಿರಿ ಆತನ ನಾಮಸ್ಮರಣೆಯನು / ಸಾರಿರಿ ಜಗಕೆ ಆತನ ಸತ್ಕಾರ್ಯಗಳನು //
6 : ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು / ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು //
8 : ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು / ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು //
9 : ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು / ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು //
24 : ತನ್ನ ಜನರ ಸಂತಾನವನು ಪ್ರಭು ಅಭಿವೃದ್ಧಿಗೊಳಿಸಿದ / ಶತ್ರುಗಳಿಗಿಂತಲೂ ಅವರನು ಬಲಿಷ್ಠರನ್ನಾಗಿಸಿದ //
25 : ಮಾರ್ಪಡಿಸಿದ ಈಜಿಪ್ಟರನು ತನ್ನ ಜನರನು ದ್ವೇಷಿಸುವಂತೆ | ತನ್ನ ದಾಸರೊಡನವರು ಕುಯುಕ್ತಿಯಿಂದ ನಡೆದುಕೊಳ್ಳುವಂತೆ ||
26 : ಕಳಿಸಿದ ತನ್ನ ದಾಸ ಮೋಶೆಯನು | ತಾನು ಆರಿಸಿಕೊಂಡ ಆರೋನನನು ||
27 : ನೋಡಿದರಿವರು ಆತನ ಸೂಚಕ ಕಾರ್ಯಗಳನು | ಹಾಮ ನಾಡಿನಲಿ ನಾನಾ ಅದ್ಭುತ ಕಾರ್ಯಗಳನು ||

ಶುಭಸಂದೇಶ - ಮತ್ತಾಯ 11: 28-3೦
ಶ್ರಮಜೀವಿಗಳಿಗೆ ವಿಶ್ರಾಂತಿದಾತ
28 : "ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ.
29 : ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು.
30 ನನ್ನ ನೊಗ ಹಗುರ, ನನ್ನ ಹೊರೆ ಸುಗಮ," ಎಂದರು.

ಚಿಂತನೆ
ಶ್ರಮಜೀವಿಗಳಿಗೆ ವಿಶ್ರಾಂತಿದಾತ
ಇಸ್ರಾಯೇಲರು ಐಗುಪ್ತ ದೇಶದಲ್ಲಿ ಭೀಕರ ದಾಸತ್ವದಲ್ಲಿ ತೊಳಲಾಡುವಾಗ ದೇವರು ಮೋಶೆಯನ್ನು ವಿಮೋಚಕನನ್ನಾಗಿ ಕಳುಹಿಸುತ್ತಾರೆ. ಫರೋಹ ರಾಜನ ಕೈಯಡಿ ಕ್ರೂರ ಶಿಕ್ಷೆಗೆ ತುತ್ತಾದ ಜನರ ಸಂಕಟವನ್ನು ಕಂಡು ದೇವರ ಮನಸ್ಸು ಕರಗುತ್ತದೆ. ದೇವರ ಸಾಧನವಾದ ಮೋಶೆಯು ಇಸ್ರಾಯೇಲರ ನಾಯಕನಾಗುತ್ತಾನೆ. ದೇವರ ವಾಗ್ದಾನವನ್ನು ಮುರಿದು ದೇವರ ಸ್ನೇಹವನ್ನು ಕಳಕೊಂಡ ಇಸ್ರಾಯೇಲ್ ಜನರನ್ನು ದೇವರು ಶಿಕ್ಷಿಸದೆ ಅವರನ್ನು ಕ್ಷಮಿಸಿ ಅವರ ಕಷ್ಟಗಳಲ್ಲಿ ಸ್ಪಂಧಿಸಿ ಅವರ ರಕ್ಷಕರಾಗುತ್ತಾರೆ. ದೇವರು ಅತ್ಯಂತ ಕರುಣೆಯುಳ್ಳವರು, ಧೀನ ಹೃದಯರು, ವಿನಯಶೀಲರು. ಇಸ್ರಾಯೇಲರು ತಾವು ಮಾಡಿದ ಒಡಂಬಡಿಕೆಯನ್ನು ಮರೆತು ಕೃತಘ್ನರಾದರು. ಆದರೂ ದೇವರು ಕೈಬಿಡಲಿಲ್ಲ. ಇಸ್ರಾಯೇಲರು ಕಷ್ಟದ ಕಾರ್ಗತ್ತಲಲ್ಲಿ ವಿಲಿವಿಲಿ ಒದ್ದಾಡಲೂ ಅವರು ಮಾಡಿದ ಪಾಪಕ್ಕೆ ತಕ್ಕ ಶಿಕ್ಷೆ ಅನುಭವಿಸಲಿ ಎಂದು ದೇವರು ಸುಮ್ಮನಿರಲಿಲ್ಲ. ಬದಲಾಗಿ ನಾನು ನಿಮ್ಮೊಡನೆ ಇದ್ದೇನೆ. ನಾನು ಮಹಾತ್ಕಾರ್ಯಗಳನ್ನು ಮಾಡಿ ನಿಮ್ಮನ್ನು ದಾಸತ್ವದಿಂದ ಬಿಡುಗಡೆ ಮಾಡುವೆನು ಎಂದು ಆಶ್ವಾಸನೆ ನೀಡುತ್ತಾರೆ. (ವಿಮೋ ೪:೧೦)
ಇವತ್ತಿನ ಶುಭಸಂದೇಶದಲ್ಲಿ ಪ್ರಭು ಯೇಸು ನೊಗವನ್ನು ಮಾಡುವುದರಲ್ಲಿ ಅತ್ಯಂತ ನಿಪುಣರು ಎಂಬುದನ್ನು ನಾವು ನೋಡುತ್ತೇವೆ. ಅವರು ತಮ್ಮ ಮೂವತ್ತು ವರ್ಷಗಳನ್ನು ತಮ್ಮ ಸಾಕು ತಂದೆ ಜೋಸೆಫರ ಕುಟೀರದಲ್ಲಿ ನೊಗಗಳನ್ನು ತಯಾರಿಸುವುದರಲ್ಲಿ ಕಳೆದರು. ಯೇಸು ತಯಾರಿಸಿದ ನೊಗವು ಹಗುರ ಮತ್ತು ಸುಲಭವಾಗಿತ್ತು. ಒಂದು ನೊಗವು ಎರಡು ಎತ್ತುಗಳನ್ನು ಅಥವ ಕತ್ತೆಗಳನ್ನು ಸಂಧಿಸುತ್ತದೆ. ಹೀಗೆ ಭಾರವು ಸಮಾನವಾಗಿ ಹಂಚಲ್ಪಡುತ್ತದೆ. ನೊಗವು ಒಂದು ಜೋಡಿಯನ್ನು ಸಂಘಟಿಸುತ್ತದೆ. ಆ ಜೋಡಿಯು ಜೊತೆಯಾಗಿ ಕೆಲಸ ಮಾಡುವುದರ ಮೂಲಕ ಗಾಡಿಯನ್ನು ಅಥವ ನೊಗವನ್ನು ಮುಂದಕ್ಕೆ ಸಾಗುವಂತೆ ಮಾಡುತ್ತದೆ. ಇದು ನಿಜವಾಗಿಯೂ ಒಂದು ವಾಸ್ತವಿಕ ನಿಯಮ. ಆದರೆ ಫರಿಸಾಯರು ಹೊರುವ ನೊಗವು ಅತ್ಯಂತ ಭಾರ ಮತ್ತು ಕಠಿಣ ಹಾಗೂ ತುಂಬಾ ನೋಯಿಸುವಂತಹದ್ದು. ಏಕೆಂದರೆ ಫರಿಸಾಯರು ಅವರ ಅನುಕೂಲಕ್ಕಾಗಿ ಅವರದೆ ಆದ ಅನೇಕ ಕಟ್ಟಳೆಗಳನ್ನು ರೂಪಿಸಿದ್ದರು. ಆ ಕಟ್ಟಳೆಗಳು ತುಂಬಾ ನೋಯಿಸುವಂತಹದ್ದು. ಏಕೆಂದರೆ ಆ ನಿಯಮಗಳು ಜನಸಾಮಾನ್ಯರ ದಿನನಿತ್ಯದ ಜೀವನಕ್ಕೆ ಅನುಕೂಲವಾಗುವಂತೆ ಇರಲಿಲ್ಲ. ಅದಲ್ಲದೆ ಅವುಗಳು ಉದ್ದೇಶರಹಿತವೂ ಮತ್ತು ಅರ್ಥಹೀನವೂ ಆಗಿದ್ದವು. ಹಾಗೂ ಆ ಕಟ್ಟಳೆಗಳಲ್ಲಿ ವಿವೇಕವಿರಲಿಲ್ಲ. ಅದು ಯೇಸು ಹೇಳಿದ ನೊಗದಂತಿರಲಿಲ್ಲ. ಬದಲಾಗಿ ದಾಸತ್ವವಾಗಿತ್ತು. ಪ್ರಭು ಯೇಸು ಈ ದಾಸತ್ವದಿಂದ ನಮ್ಮನ್ನು ಬಿಡಿಸಿ ಒಂದು ಹೊಸ ನಿಯಮವನ್ನೇ ರಚಿಸಿದರು. ದೇವರ ಕರುಣೆ, ದೀನತೆ, ವಿನಯತೆ ಪ್ರಭು ಯೇಸುವಿನಲ್ಲಿ ಪ್ರಜ್ವಲಿಸಿದವು.
ಜೀವನ ಕೇವಲ ಹೂವಿನಿಂದಾವೃತವಾದ ಮಂಚವಲ್ಲ, ಮುಳ್ಳುಗಳು ಅಡಗಿವೆ. ಆದರೆ ಯೇಸುವಿನಲ್ಲಿ ಜೀವಿಸುವವನು ನವ ಜೀವನದ ಸವಿಯನ್ನು ಸವಿಯುವನು. ನೋವಿಲ್ಲದೆ ನಲಿವಿಲ್ಲ, ಕಹಿಯಿಲ್ಲದೆ ಸಿಹಿಯಿಲ್ಲ. ಆದರೆ ನಮ್ಮ ಎಲ್ಲಾ ಕಷ್ಟ ನೋವುಗಳನ್ನು ಯೇಸುವಿನಲ್ಲಿ ತೋಡಿಕೊಂಡರೆ ಅವರು ನಮ್ಮನ್ನು ಆಲಿಸುವರು. ಅವರು ನಮಗೋಸ್ಕರ ನಮ್ಮ ಕಷ್ಟಗಳನ್ನು ಅವರ ಹೆಗಲ ಮೇಲೆ ಹೊರುವರು. ಹೀಗೆ ಯೇಸು ನೀಡುವ ನೊಗವು ಹಗುರ ಮತ್ತು ಸುಲಭವಾಗಿರುವುದು.
ಪ್ರೀತಿ ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳು, ಪ್ರೀತಿಯಿಂದ ಗೈದ ಕರ್ತವ್ಯ ಆನಂದದಾಯಕವಾಗಿದೆ
-ಡಾನ್ ಜೆನ್ನಿಂಗ್ಸ್

No comments:

Post a Comment