ಸಾಧಾರಣ ಕಾಲದ ಹದಿನೆಂಟನೇ ಭಾನುವಾರ
4/ಹಸಿರು/ಭಾನು/ಸಂತ ಜಾನ್ ಮರಿಯಾ ವಿಯಾನ್ನಿ ಸ್ಮರಣೆ
1ನೇ ವಾಚನ - ಉಪ 1: 2; 2: 21-23
ಕೀರ್ತನೆ - 95: 1-2, 6-7, 8-9
2ನೇ ವಾಚನ - ಕೊಲೊ 3: 1-5, 9-11
ಶುಭಸಂದೇಶ - ಲೂಕ 12: 13-21
1ನೇ ವಾಚನ - ಉಪ 1: 2; 2: 21-23
ಉಪದೇಶಕನು ಹೇಳುವುದನ್ನು ಕೇಳಿ: ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥವೇ ವ್ಯರ್ಥ, ಎಲ್ಲವೂ ವ್ಯರ್ಥ! ಒಬ್ಬನು ಜ್ಞಾನದಿಂದಲೂ ತಿಳುವಳಿಕೆ ಇಂದಲೂ ಕೆಲಸಮಾಡಿ ಕಾರ್ಯವನ್ನು ಸಿದ್ಧಿಗೆ ತಂದಮೇಲೆ, ಅದಕ್ಕಾಗಿ ಪ್ರಯಾಸಪಡದವನಿಗೆ ಅದನ್ನು ವಾರಸುದಾರನಾಗಿ ಬಿಡಬೇಕಾಗುತ್ತದೆ. ಇದು ಸಹ ವ್ಯರ್ಥವಲ್ಲವೆ? ಇದು ಅನ್ಯಾಯವಲ್ಲವೇ? ಲೋಕದಲ್ಲಿ ಮಾನವನು ಹೃತ್ಪೂರ್ವಕವಾಗಿ ಪಡುವ ಪ್ರಯಾಸದಿಂದ ಅವನಿಗೆ ಸಿಗುವ ಲಾಭವಾದರೂ ಏನು? ಅವನ ಮನಸ್ಸಿಗೆ ನೆಮ್ಮದಿ ಇಲ್ಲ. ಇದು ಸಹ ವ್ಯರ್ಥವೇ ಸರಿ.
ಕೀರ್ತನೆ - 95: 1-2, 6-7, 8-9
1 : ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ / ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ //
2 : ಆತನ ಸನ್ನಿಧಿ ಸೇರೋಣ ಕೃತಜ್ಞತಾಸ್ತುತಿಯೊಂದಿಗೆ / ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ //
6 : ಬನ್ನಿ, ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ /
ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ //
7 : ಆತನೆಮ್ಮ ದೇವರು, ನಾವು ಆತನ ಕೈಮಂದೆ /
ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ //
8 : ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ / ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ /ಮೆರಿಬಾದಲಿ, ಮಸ್ಸಾ ಮರುಭೂಮಿಯಲಿ ಅವರು ಮಾಡಿದಂತೆ//
9 : ನೋಡಿದರಾದರೂ ನನ್ನ ಮಹತ್ಕಾರ್ಯಗಳನು | ಅಲ್ಲವರು ಕೆಣಕಿದರು, ಪರಿಶೋಧಿಸಿದರು ನನ್ನನು//
2ನೇ ವಾಚನ - ಕೊಲೊ 3: 1-5, 9-11
ನೀವು ಯೇಸುಕ್ರಿಸ್ತರೊಂದಿಗೆ ಪುನರುತ್ಥಾನ ಹೊಂದಿರುವುದಾದರೆ ಸ್ವರ್ಗೀಯ ವಿಷಯಗಳ ಕಡೆಗೆ ಗಮನಕೊಡಿ. ಕ್ರಿಸ್ತಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ. ನೀವು ಕ್ರಿಸ್ತಯೇಸುವಿನೊಂದಿಗೆ ಮರಣ ಹೊಂದಿರುವುದರಿಂದ ಅವರೊಂದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ. ನಿಮ್ಮ ಮನಸ್ಸು ಪ್ರಾಪಂಚಿಕ ವಿಷಯಗಳ ಮೇಲೆ ಅಲ್ಲ, ಸ್ವರ್ಗೀಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರಲಿ. ಕ್ರಿಸ್ತಯೇಸುವೇ ನಿಮ್ಮ ನೈಜ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವೂ ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಅವರೊಂದಿಗೆ ಪ್ರತ್ಯಕ್ಷರಾಗುವಿರಿ. ನಿಮ್ಮಲ್ಲಿರುವ ಪ್ರಾಪಂಚಿಕ ಆಶೆ ಆಕಾಂಕ್ಷೆಗಳನ್ನು ತ್ಯಜಿಸಿರಿ. ಹಾದರ, ಅನೈತಿಕತೆ, ಕಾಮಾಭಿಲಾಷೆ, ದುರಾಲೋಚನೆ, ವಿಗ್ರಹಾರಾಧನೆಗೆ ಸಮವಾಗಿರುವ ಲೋಭ - ಇವುಗಳನ್ನು ದಮನಮಾಡಿರಿ. ಒಬ್ಬರಿಗೊಬ್ಬರು ಸುಳ್ಳುಹೇಳಬೇಡಿ. ಏಕೆಂದರೆ, ನಿಮ್ಮಲ್ಲಿದ್ದ ಹಳೆಯ ಸ್ವಭಾವವನ್ನೂ ಅದಕ್ಕೆ ಸಂಬಂಧಿಸಿದ ದುರಭ್ಯಾಸಗಳನ್ನೂ ತೊರೆದು ಬಿಟ್ಟಿದ್ದೀರಿ. ಮಾತ್ರವಲ್ಲ, ನೂತನ ಸ್ವಭಾವವನ್ನು ಧರಿಸಿಕೊಂಡಿದ್ದೀರಿ. ನೀವು ಸೃಷ್ಟಿಕರ್ತನನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಸ್ವಭಾವವನ್ನು ಅನುದಿನವೂ ನವೀಕರಿಸಲಾಗುತ್ತಿದೆ. ಇಂಥ ಹೊಸ ಜೀವನದಲ್ಲಿ ಯೆಹೂದ್ಯ-ಗ್ರೀಕ, ಸುನ್ನತಿ ಹೊಂದಿದವ-ಸುನ್ನತಿ ಇಲ್ಲದವ, ನಾಗರಿಕ-ಅನಾಗರಿಕ, ಯಜಮಾನ-ಗುಲಾಮ ಎಂಬ ಭಿನ್ನಭೇದಗಳಿಲ್ಲ. ಕ್ರಿಸ್ತಯೇಸುವೇ ಸಮಸ್ತದಲ್ಲಿ ಸಮಸ್ತವೂ ಆಗಿದ್ದಾರೆ.
ಶುಭಸಂದೇಶ - ಲೂಕ 12: 13-21
ಜನಸಮೂಹದಿಂದ ಒಬ್ಬನು, “ಬೋಧಕರೇ, ನಮ್ಮ ಪಿತ್ರಾರ್ಜಿತ ಸೊತ್ತನ್ನು ನನಗೆ ಭಾಗಮಾಡಿ ಕೊಡುವಂತೆ ನನ್ನ ಸೋದರನಿಗೆ ಹೇಳಿ,” ಎಂದು ಕೇಳಿಕೊಂಡನು. ಅದಕ್ಕೆ ಯೇಸು, “ಏನಯ್ಯಾ, ನಿಮ್ಮಿಬ್ಬರ ನ್ಯಾಯತೀರಿಸುವುದಕ್ಕೂ ನಿಮ್ಮ ಸ್ವತ್ತನ್ನು ಭಾಗಮಾಡಿಕೊಡುವುದಕ್ಕೂ ನನ್ನನ್ನು ನೇಮಿಸಿದವರು ಯಾರು?” ಎಂದು ಮರುಪ್ರಶ್ನೆ ಹಾಕಿದರು. ಅನಂತರ ಜನರನ್ನುದ್ದೇಶಿಸಿ, “ಎಚ್ಚರಿಕೆ, ಯಾವ ವಿಧವಾದ ಲೋಭಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಏಕೆಂದರೆ, ಒಬ್ಬನಿಗೆ ಎಷ್ಟೇ ಸಿರಿಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ,” ಎಂದು ಹೇಳಿದರು. ಅನಂತರ ಅವರಿಗೆ ಈ ಸಾಮತಿಯನ್ನು ಹೇಳಿದರು: “ಒಬ್ಬ ಧನಿಕನಿದ್ದ. ಅವನ ಭೂಮಿ ಒಮ್ಮೆ ಸಮೃದ್ಧಿಯಾದ ಬೆಳೆಕೊಟ್ಟಿತು. ಆಗ ಅವನು, ‘ನನ್ನ ಬೆಳೆಯನ್ನೆಲ್ಲಾ ತುಂಬಿಡಲು ಸ್ಥಳವಿಲ್ಲವಲ್ಲಾ, ಏನು ಮಾಡಲಿ?’ ಎಂದು ತನ್ನಲ್ಲೇ ಆಲೋಚಿಸುತ್ತಾ, ಹೌದು, ಹೀಗೆ ಮಾಡುತ್ತೇನೆ: ಇರುವ ಕಣಜಗಳನ್ನು ಕಿತ್ತುಹಾಕಿಸಿ, ಇನ್ನೂ ದೊಡ್ಡವುಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ಎಲ್ಲಾ ದವಸ ಧಾನ್ಯಗಳನ್ನೂ ಸರಕು ಸಾಮಗ್ರಿಗಳನ್ನೂ ತುಂಬಿಸಿಡುತ್ತೇನೆ. ಅಲ್ಲದೆ, “ಎಲೈ ಮನವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ಬಿದ್ದಿದೆ; ಆರಾಮವಾಗಿರು. ತಿನ್ನು, ಕುಡಿ, ಸುಖಪಡು ಎಂದು ಹೇಳಿಕೊಳ್ಳುತ್ತೇನೆ”, ಎಂದುಕೊಂಡ. ಆಗ ದೇವರು, ‘ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧ ಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದರು. “ತನಗೋಸ್ಕರ ಸಂಪತ್ತನ್ನು ಶೇಖರಿಸಿಟ್ಟುಕೊಂಡು ದೇವರ ದೃಷ್ಟಿಯಲ್ಲಿ ಧನಿಕನಲ್ಲದವನು ಇವನಿಗೆ ಸಮಾನನು,” ಎಂದರು ಯೇಸು. ಇಂದಿಗೆಂತು ನಾಳೆಗೆಂತೆಂದು ಚಿಂತೆಯೇಕೆ?
ಚಿಂತನೆ:
ಇಂದಿನ ಸಾಮತಿಯಲ್ಲಿ ಯೇಸು ಶ್ರೀಮಂತನ ಸ್ವಾರ್ಥ, ದುರಾಸೆಯನ್ನು ಖಂಡಿಸುತ್ತಾರೆ. ಆ ಶ್ರೀಮಂತನ ದುರಾಳತನ, ಹೃದಯವೈಶಾಲತೆ, ಹಂಚಿಕೊಳ್ಳುವ ಮನೋಭಾವ ಇರಲಿಲ್ಲ. ಆತ ತನಗಾಗಿ ಮಾತ್ರ ಜೀವಿಸಿದ್ದ. ಈ ಸಾಮತಿಯ ಮೂಲಕ ಸಂತ ಲೂಕರು ಅಂದಿನ ಕಾಲದ ಶ್ರೀಮಂತರ ಮನಸ್ಥಿತಿಯನ್ನು ಹೇಳುತ್ತಿದ್ದಾರೆ. ಲೂಕ ೧೬:೧೯-೩೧ ರಲ್ಲೂ ಶ್ರೀಮಂತರನ್ನು ಖಂಡಿಸಲಾಗಿದೆ. ಶ್ರೀಮಂತಿಕೆಯನ್ನು ಇಲ್ಲಿ ಖಂಡಿಸುತ್ತಿಲ್ಲ. ಆದರೆ ಬಡವರಲ್ಲಿ ಅವರಿಗಿದ್ದ ತಾತ್ಸಾರ ಮನೋಭಾವವನ್ನು ಖಂಡಿಸಲಾಗಿದೆ. ಶ್ರೀಮಂತರಾದ ಮಾತ್ರಕ್ಕೆ ಯಾರೊಬ್ಬರೂ ಗೌರವಾನ್ವಿತರೆನಿಸಲಾರರು, ಶ್ರೀಮಂತಿಕೆ ಇರುವಲ್ಲಿ ಉದಾರತೆ ಇರಬೇಕು. ದಾನಧರ್ಮದ ಗುಣ ಇರಬೇಕು. ಸೂರ್ಯನು ಎತ್ತರದಲ್ಲಿ ಇದ್ದಾನೆಂದು ಅವನಿಗೆ ನಾವು ಗೌರವ ಕೊಡುವುದಿಲ್ಲ. ಜಗತ್ತಿಗೆ ಉಪಾಯಕಾರಿ ಅವರ ಜೀವಧಾರಕ ಶಕ್ತಿಯೆಂದು ನಾವು ಅವನಿಗೆ ಗೌರವ ಕೊಡುತ್ತೇವೆ. ಉಪಯೋಗ ಮಾಡಲು ಅರಿಯದ ಜನರ ಕೈಯಲ್ಲಿ ಶ್ರೀಮಂತಿಕೆ ನಿಷ್ಪ್ರಯೋಜಕ. ಅನೇಕ ಶ್ರೀಮಂತರು ಯಾರಿಗೂ ಉಪಯೋಗವಾಗದಂತೆ ತಮಗೂ ಉಪಯೋಗವಾಗದಂತೆ ಬದುಕುತಿದ್ದಾರೆ. ಯಾರಿಗೂ ಉಪಯೋಗವಲ್ಲದ ಹಣ್ಣನ್ನು ಹೊತ್ತ ಮರವು ಅವುಗಳ ಭಾರದಿಂದಲೇ ಕುಸಿದುಬೀಳುತ್ತದೆ. ಶ್ರೀಮಂತಿಕೆ ಇನ್ನೊಬ್ಬನಿಗೆ ಉಪಯೋಗವಾಗದಿದ್ದರೆ ಅದು ನಿರರ್ಥಕವೆನಿಸುತ್ತದೆ.
No comments:
Post a Comment