Saturday, 3 August 2019

ಸಾಧಾರಣ ಕಾಲದ ಹದಿನೆಂಟನೇ ವಾರ ಸೋಮವಾರ

ಸಾಧಾರಣ ಕಾಲದ ಹದಿನೆಂಟನೇ ವಾರ ಸೋಮವಾರ 

5/ಹಸಿರು/ಸೋಮ 
1ನೇ ವಾಚನ - ಸಂಖ್ಯಾ 11: 4-15 
ಕೀರ್ತನೆ - 81: 11-16 
ಶುಭಸಂದೇಶ - ಮತ್ತಾಯ 14: 13-21

1ನೇ ವಾಚನ - ಸಂಖ್ಯಾ 11: 4-15
ಇಸ್ರಯೇಲರೊಡನೆ ಪ್ರಯಾಣಮಾಡುತ್ತಿದ್ದ ಅನ್ಯಜನರು ಮಾಂಸಕ್ಕಾಗಿ ಹಂಬಲಿಸಿದರು. ಇಸ್ರಯೇಲರು ಕೂಡ, ಕಣ್ಣೀರಿಡುತ್ತಾ: “ಅಯ್ಯೋ, ನಮಗೆ ಮಾಂಸ ಕೊಡುವವರಾರು?
ಈಜಿಪ್ಟ್ ದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ವಿೂನು, ಸೌತೆಕಾಯಿ, ಕರ್ಬೂಜ, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಇವೆಲ್ಲಾ ನೆನಪಿಗೆ ಬರುತ್ತವೆ. ಇಲ್ಲಿಯಾದರೋ ನಮ್ಮ ಜೀವ ಬತ್ತಿಹೋಯಿತು. ಈ ‘ಮನ್ನ’ವನ್ನು ಬಿಟ್ಟರೆ ನಮಗೆ ಇನ್ನೇನು ಗತಿಯಿಲ್ಲ,” ಎಂದು ನಿಷ್ಠುರವಾಗಿ ಮಾತನಾಡಿಕೊಳ್ಳುತ್ತಿದ್ದರು.
ಆ ‘ಮನ್ನ’ ಕೊತ್ತುಂಬರಿ ಬೀಜದಂತಿತ್ತು; ಗುಗ್ಗುಲದಂತೆ ಕಾಣಿಸುತ್ತಿತ್ತು. ಜನರು ಹೊರಗೆ ಹೋಗಿ ಅದನ್ನು ಕೂಡಿಸಿಕೊಂಡು ಬಂದು ಬೀಸುವ ಕಲ್ಲುಗಳಿಂದ ಬೀಸಿ, ಇಲ್ಲವೆ ಒರಳಲ್ಲಿ ಕುಟ್ಟಿ, ಮಡಿಕೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡಿಕೊಳ್ಳುತ್ತಿದ್ದರು. ಅದರ ರುಚಿ ಎಣ್ಣೆಬೆರೆಸಿ ಮಾಡಿದ ತಿಂಡಿಯಂತೆ ಇರುತ್ತಿತ್ತು. ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುತ್ತಿದ್ದಾಗ ಅದರೊಂದಿಗೆ ‘ಮನ್ನ’ವೂ ಬೀಳುತ್ತಿತ್ತು.
ಎಲ್ಲ ಕುಟುಂಬದವರು ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತು ನಿಷ್ಠುರವಾಗಿ ಮಾತನಾಡಿಕೊಳ್ಳುತ್ತಿದ್ದದ್ದು ಮೋಶೆಗೆ ಕೇಳಿಸಿತು. ಆಗ ಸರ್ವೇಶ್ವರನ ಕೋಪ ಉಕ್ಕೇರಿತು; ಮೋಶೆಗೆ ಇದನ್ನು ಸಹಿಸಲಾಗಲಿಲ್ಲ. ಆತ ಸರ್ವೇಶ್ವರನಿಗೆ, “ನಿಮ್ಮ ದಾಸನಾದ ನನಗೇಕೆ ಈ ಜನರನ್ನು ಕರೆದೊಯ್ಯುವ ಭಾರವನ್ನು ಹಾಕಿದಿರಿ? ನಿಮ್ಮ ದಯೆಗೆ ನಾನು ಅಯೋಗ್ಯನಾದೆನೇ? ‘ಮೊಲೆ ಕೂಸನ್ನು ಎತ್ತಿಕೊಂಡು ಹೋಗುವವಳಂತೆ ಈ ಜನರನ್ನು ತೋಳತೆಕ್ಕೆಯಲ್ಲಿರಿಸಿ, ಅವರ ಪೂರ್ವಜರಿಗೆ ನಾನು ಪ್ರಮಾಣಮಾಡಿದ ನಾಡಿಗೆ ಒಯ್ಯಿ’ ಎಂದು ಹೇಳುತ್ತೀರಲ್ಲವೆ? ನಾನು ಇವರಿಗೆ ಹೆತ್ತ ತಾಯಿಯೋ? ಇವರು ನಿಷ್ಠುರವಾಗಿ ಮಾತಾಡುತ್ತಾ ನನ್ನ ಬಳಿಗೆ ಬಂದು, ‘ತಿನ್ನಲಿಕ್ಕೆ ನಮಗೆ ಮಾಂಸವನ್ನು ಕೊಡು’ ಎಂದು ಕೇಳುತ್ತಿದ್ದಾರಲ್ಲಾ’ ಇಷ್ಟು ಜನಕ್ಕೆ ಬೇಕಾದ ಮಾಂಸ ನನಗೆಲ್ಲಿ ದೊರಕೀತು. ಇಷ್ಟು ಜನರ ಭಾರವನ್ನು ನಾನೊಬ್ಬನೇ ಹೊರುವುದು ಅಸಾಧ್ಯ. ಅದು ನನ್ನ ಶಕ್ತಿಗೆ ವಿೂರಿದ ಕೆಲಸ. ನೀವು ಹೀಗೆ ಮಾಡುವುದಕ್ಕಿಂತಲೂ ನನ್ನನ್ನು ಈ ಕೂಡಲೆ ಕೊಂದು ಹಾಕಿದರೆ ಉಪಕಾರವಾದೀತು; ನನಗೆ ಆಗುತ್ತಿರುವ ಸಂಕಟವನ್ನು ಸಹಿಸಲಾರೆ,” ಎಂದನು.

ಕೀರ್ತನೆ - 81: 11-16
11 : “ಆದರೆ ಕೇಳಲಿಲ್ಲಾ ಜನತೆ ನನ್ನ ಮಾತುಗಳನು / ತೋರಲಿಲ್ಲ ಇಸ್ರಯೇಲರು ನನಗೆ ವಿಧೇಯತೆಯನು, //
12 : “ಎಂತಲೇ ಕೈಬಿಟ್ಟೆ ಅವರನು ಹಟಮಾರಿಗಳೆಂದು / ತಮಗಿಷ್ಟಬಂದಂತೆಯೆ ನಡೆದುಕೊಳ್ಳಲಿಯೆಂದು, //
13 : “ಒಳಿತಾಗಿರುತ್ತಿತ್ತು ನನ್ನ ಜನರು ನನಗೆ ಕಿವಿಗೊಟ್ಟಿದ್ದರೆ / ಮೇಲಾಗಿರುತ್ತಿತ್ತು ಇಸ್ರಯೇಲರು ನನ್ನ ಹಾದಿ ಹಿಡಿದಿದ್ದರೆ, //
14 : “ಅಡಗಿಸುತ್ತಿದ್ದೆ ಅವರ ಶತ್ರುಗಳನು ಸುಲಭವಾಗಿ / ಸದೆಬಡಿಯುತ್ತಿದ್ದೆ ಅವರ ವೈರಿಗಳನು ಸರಿಯಾಗಿ, //
15 : “ಮುದುರಿಕೊಳ್ಳುತ್ತಿದ್ದರಾ ಎದುರಾಳಿಗಳು ಅವರ ಮುಂದೆ / ಅಳಿಯದೆ ಉಳಿದುಕೊಳ್ಳುತ್ತಿತ್ತು ಅವರಿಗಾದ ದಂಡನೆ ಮುಗಿವಿಲ್ಲದೆ,//
16 : “ನಿಮಗಾದರೋ ಬಡಿಸುತ್ತಿದ್ದೆ ಅತ್ಯುತ್ತಮ ಗೋದಿಯನು / ಉಣಿಸುತ್ತಿದ್ದೆ ನಾ ನಿಮಗೆ ಬೆಟ್ಟದ ಜೇನುತುಪ್ಪವನು” //

ಶುಭಸಂದೇಶ - ಮತ್ತಾಯ 14: 13-21
ಯೊವಾನ್ನನ ಮರಣದ ಸಮಾಚಾರವನ್ನು ಕೇಳಿದ ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ದೋಣಿಹತ್ತಿ ನಿರ್ಜನ ಪ್ರದೇಶಕ್ಕೆ ಒಬ್ಬಂಟಿಗರಾಗಿ ಹೊರಟರು. ಇದನ್ನು ತಿಳಿದುಕೊಂಡ ಜನರು ಊರೂರುಗಳಿಂದ ಹೊರಟು ಗುಂಪುಗುಂಪಾಗಿ ಅವರ ಹಿಂದೆಯೇ ಕಾಲ್ದಾರಿಯಲ್ಲಿ ನಡೆದುಹೋದರು. ಯೇಸು ದೋಣಿಯಿಂದ ಇಳಿದಾಗ, ದೊಡ್ಡ ಜನಸಮೂಹ ಆಗಲೇ ಅಲ್ಲಿ ಸೇರಿತ್ತು. ಆ ಸಮೂಹವನ್ನು ಕಂಡು ಅವರ ಮನ ಕರಗಿತು; ಅವರಲ್ಲಿ ಅಸ್ವಸ್ಥರಾಗಿದ್ದವರನ್ನು ಗುಣಪಡಿಸಿದರು. ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, "ಇದು ನಿರ್ಜನ ಪ್ರದೇಶ. ಈಗಾಗಲೇ ಹೊತ್ತು ಮೀರಿಹೋಗಿದೆ. ಜನಸಮೂಹವನ್ನು ಕಳುಹಿಸಿಬಿಡಿ, ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೆ ಬೇಕಾದ ತಿಂಡಿತಿನಿಸುಗಳನ್ನು ಕೊಂಡುಕೊಳ್ಳಲಿ." ಎಂದರು. ಅದಕ್ಕೆ ಯೇಸು, “ಅವರು ಹೋಗಬೇಕಾಗಿಲ್ಲ, ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ,” ಎಂದರು. ಶಿಷ್ಯರು ಪ್ರತ್ಯುತ್ತರವಾಗಿ, "ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ," ಎಂದರು. ಯೇಸು, "ಅವನ್ನು ಇಲ್ಲಿಗೆ ತನ್ನಿ," ಎಂದು ಹೇಳಿ, ಜನರೆಲ್ಲರೂ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿದರು. ಬಳಿಕ ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನರಿಗೆ ಹಂಚಿದರು. ಎಲ್ಲರೂ ಹೊಟ್ಟೆತುಂಬ ತಿಂದು ತೃಪ್ತರಾದರು. ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿಗಳ ತುಂಬ ಆದುವು. ಊಟ ಮಾಡಿದವರಲ್ಲಿ ಹೆಂಗಸರು, ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು. ಕಡಲ ಮೇಲೆ ಕಾಲುನಡೆ.

ಚಿಂತನೆ:
ಸರ್ವೇಶ್ವರಸ್ವಾಮಿ ಮರುಳು ಗಾಡಿನಲ್ಲಿ ಇಸ್ರಾಯೇಲರಿಗೆ ಮನ್ನವನ್ನು ನೀಡಿ ಪೋಷಿಸಿದಂತೆ, ಯೇಸುವು ಕೂಡ ಹಸಿದಿದ್ದ ಜನರಿಗೆ ರೊಟ್ಟಿಯನ್ನು  ನೀಡಿ ಪೋಷಿಸುತ್ತಾರೆ. ಯೇಸು ಇರುವ ಕಡೆ ಕೊರತೆ ಇರುವುದಿಲ್ಲ. ಶುಭಸಂದೇಶದಲ್ಲಿ ಕಾಣುವಂತೆ ಎಲ್ಲರೂ ಹೊಟ್ಟೆ ತುಂಬಾ ತಿಂದು ತೃಪ್ತರಾದರು ಹಾಗೂ ಉಳಿದ್ದ ತುಂಡುಗಳು 12 ಬುಟ್ಟಿಗಳ ತುಂಬಾ ಆದವು. ಹನ್ನೆರಡು ಬುಟ್ಟಿಗಳು ಇಸ್ರಾಯೇಲರ 12 ಕುಲಗಳನ್ನು  ಹೋಲುತ್ತದೆ. ಚದುರಿದ್ದ ಕುಲಗಳನ್ನು ಯೇಸು ಒಂದುಗೂಡಿಸಿದರು ಎಂಬುವುದು ಇದರ ತಾತ್ವರ್ಯ. ಯೇಸು ಇರುವೆಡೆ ಕುಂದು ಕೊರತೆ ಇರದು. (ಯೊವಾನ್ನ 2:1-12). ದೇವರೊಂದಿಗೆ ನಾವು ಸಹಕರಿಸಿದಾಗ ಯಥೇಚ್ಚವಾಗಿ ನಾವು ಪಡೆದುಕೊಳ್ಳುತ್ತೇವೆ. ಯೇಸು 5 ರೊಟಿ ಮತ್ತು 2 ಮೀನುಗಳಿಲ್ಲದೆಯೇ ಅದ್ಭುತ ಮಾಡಬಹುದಿತ್ತು. ಆದರೆ ನಮ್ಮ ಸಹಕಾರ, ಅರ್ಪಣಾ ಮನೋಭಾವವನ್ನು ಅವರು ಬಯಸುತ್ತಾರೆ.

No comments:

Post a Comment