3೦/ ಹಸಿರು/ ಮಂಗಳ /ಸಾಧಾರಣ ಕಾಲದ ಹದಿನೇಳನೇ ವಾರ
1ನೇ ವಾಚನ - ವಿಮೋ 33: 7-11, 34: 5-9, 28
ಕೀರ್ತನೆ - 1೦3: 6-13
ಶುಭಸಂದೇಶ - ಮತ್ತಾಯ 13: 36-43
ಐಚ್ಛಿಕ ಸ್ಮರಣೆ - ಸಂತ ಪೀಟರ್ ಕ್ರಿಸೊಲಗಸ್
1ನೇ ವಾಚನ - ವಿಮೋ 33: 7-11, 34: 5-9, 28
ಕೀರ್ತನೆ - 1೦3: 6-13
ಶುಭಸಂದೇಶ - ಮತ್ತಾಯ 13: 36-43
ಐಚ್ಛಿಕ ಸ್ಮರಣೆ - ಸಂತ ಪೀಟರ್ ಕ್ರಿಸೊಲಗಸ್
7 : ಮೋಶೆ ಗುಡಾರವನ್ನು ಪಾಳೆಯದ ಹೊರಗೆ ದೂರದಲ್ಲಿ ಹಾಕಿಸುತ್ತಿದ್ದನು. ಅದಕ್ಕೆ ‘ದೇವದರ್ಶನದ ಗುಡಾರ’ ಎಂದು ಹೆಸರಿಟ್ಟನು. ಸರ್ವೇಶ್ವರನಿಂದ ಉತ್ತರವನ್ನು ಬಯಸುತ್ತಿದ್ದವರೆಲ್ಲರು ಪಾಳೆಯದ ಹೊರಗಿದ್ದ ಆ ದೇವದರ್ಶನದ ಗುಡಾರಕ್ಕೆ ಹೋಗುತ್ತಿದ್ದರು.
8 : ಮೋಶೆ ಗುಡಾರಕ್ಕೆ ಹೋಗುವಾಗಲೆಲ್ಲಾ ಜನರೆಲ್ಲರು ಎದ್ದು ತಮ್ಮ ತಮ್ಮ ಡೇರೆಗಳ ಬಾಗಿಲಲ್ಲಿ ನಿಂತು ಮೋಶೆ ಆ ಗುಡಾರದೊಳಕ್ಕೆ ಹೋಗುವ ತನಕ ಅವನ ಹಿಂದೆ ನೋಡುತ್ತಿದ್ದರು.
9 : ಮೋಶೆ ಗುಡಾರದೊಳಕ್ಕೆ ಹೋದಕೂಡಲೆ ಮೇಘಸ್ತಂಭವೊಂದು ಇಳಿದು ಆ ಗುಡಾರದ ಬಾಗಿಲಲ್ಲಿ ನಿಲ್ಲುತ್ತಿತ್ತು. ಆಗ ಮೋಶೆಯ ಸಂಗಡ ಸರ್ವೇಶ್ವರ ಮಾತಾಡುತ್ತಿದ್ದರು.
10 : ಆ ಮೇಘಸ್ತಂಭ ಗುಡಾರದ ಬಾಗಿಲಲ್ಲಿ ನಿಲ್ಲುವುದನ್ನು ಜನರೆಲ್ಲರು ನೋಡಿ, ಎದ್ದುನಿಂತು ತಮ್ಮ ತಮ್ಮ ಡೇರೆಗಳ ಬಾಗಿಲಲ್ಲೇ ಅಡ್ಡಬೀಳುತ್ತಿದ್ದರು
11 : ಒಬ್ಬ ಮನುಷ್ಯ ತನ್ನ ಗೆಳೆಯನೊಡನೆ ಹೇಗೆ ಮಾತಾಡುತ್ತಾನೋ ಹಾಗೆಯೇ ಸರ್ವೇಶ್ವರ ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದರು. ತರುವಾಯ ಮೋಶೆ ಪಾಳೆಯಕ್ಕೆ ಮರಳಿ ಬರುತ್ತಿದ್ದನು. ಆದರೆ ನೂನನ ಮಗನಾದ ಯೆಹೋಶುವ ಎಂಬ ಹೆಸರುಳ್ಳ ಯುವಕನೊಬ್ಬನು ಮೋಶೆಯ ಶಿಷ್ಯನಾಗಿ ಆ ಗುಡಾರದಲ್ಲೇ ಇರುತ್ತಿದ್ದನು. ಅದನ್ನು ಬಿಟ್ಟು ಹೋಗುತ್ತಿರಲಿಲ್ಲ.
5 : ಆಗ ಸರ್ವೇಶ್ವರಸ್ವಾಮಿ ಮೇಘಾವ್ರತರಾಗಿ ಇಳಿದುಬಂದು ಅಲ್ಲಿ ಅವನ ಹತ್ತಿರ ನಿಂತು, ‘ಸರ್ವೇಶ್ವರ’ ಎಂಬ ತಮ್ಮ ನಾಮವನ್ನು ಪ್ರಕಟಿಸಿದರು.
6 : ಸರ್ವೇಶ್ವರ ಮೋಶೆಯ ಎದುರಿನಲ್ಲಿ ಹಾದುಹೋಗುತ್ತಾ ಹೀಗೆಂದು ಪ್ರಕಟಿಸಿದರು: “ಸರ್ವೇಶ್ವರನು; ಸರ್ವೇಶ್ವರನು ಕರುಣಾಮಯನು, ದಯಾಳುದೇವರು. ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿಪಾತ್ರನು, ನಂಬಿಗಸ್ಥನು.
7 : ಸಾವಿರಾರು ತಲೆಗಳವರೆಗೂ ಅಚಲಪ್ರೀತಿ ತೋರುವವನು, ದೋಷಾಪರಾಧಗಳನ್ನೂ ಪಾಪಗಳನ್ನೂ ಕ್ಷಮಿಸುವವನು; ಆದರೂ ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡದವನು. ಹೆತ್ತವರ ದೋಷ ಪರಿಣಾಮಗಳನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು.”
8 : ಕೂಡಲೇ ಮೋಶೆ ನೆಲದಮೇಲೆ ಅಡ್ಡಬಿದ್ದು ನಮಸ್ಕರಿಸಿ,
9 : “ಸ್ವಾಮಿ ಸರ್ವೇಶ್ವರಾ, ನಿಮ್ಮ ಅನುಗ್ರಹ ನಮಗೆ ದೊರಕಿತಾದರೆ, ತಾವೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಹಟಮಾರಿಗಳು. ಆದರೂ ತಾವು ನಮ್ಮ ಪಾಪಗಳನ್ನೂ ಅಧರ್ಮಗಳನ್ನೂ ಕ್ಷಮಿಸಿ ನಿಮ್ಮ ಜನರಾಗುವಂತೆ ನಮ್ಮನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು.
28 : ಮೋಶೆ ಆ ಬೆಟ್ಟದಲ್ಲಿ ನಾಲ್ವತ್ತು ದಿನ ಹಗಲಿರುಳೂ ಅನ್ನಪಾನವಿಲ್ಲದೆ ಸರ್ವೇಶ್ವರನ ಸನ್ನಿಧಿಯಲ್ಲಿ ಇದ್ದನು. ಒಡಂಬಡಿಕೆಯ ವಾಕ್ಯಗಳನ್ನು, ಅಂದರೆ ಹತ್ತು ಆಜ್ಞೆಗಳನ್ನು, ಆ ಕಲ್ಲಿನ ಹಲಗೆಗಳ ಮೇಲೆ ಬರೆದನು.
ಕೀರ್ತನೆ - 1೦3: 6-13
6 : ಸಾಧಿಸುವನು ಪ್ರಭು ನ್ಯಾಯನೀತಿಯನು / ದೊರಕಿಸುವನು ಶೋಷಿತರಿಗೆ ನ್ಯಾಯವನು //
7 : ತೋರಿಸಿದಾತ ತನ್ನ ಮಾರ್ಗವನು ಮೋಶೆಗೆ / ತನ್ನ ಮಹತ್ಕಾರ್ಯಗಳನು ಇಸ್ರಯೇಲರಿಗೆ //
8 : ಪ್ರಭು ದಯಾಳು, ಕೃಪಾಪೂರ್ಣನು / ಸಹನಶೀಲನು, ಪ್ರೀತಿಮಯನು //
9 : ಆತನು ಸದಾ ತಪ್ಪು ಹುಡುಕುವವನಲ್ಲ / ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ //
10 : ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ / ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ //
11 : ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ / ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ //
12 : ಪಡುವಣದಿಂದ ಮೂಡಣವೆಷ್ಟೋ ದೂರ / ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ // 13 ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ /
13 : ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ / ಕನಿಕರಿಸುವನಾತ ತನಗೆ ಅಂಜುವವರಿಗೆ //
ಶುಭಸಂದೇಶ - ಮತ್ತಾಯ 13: 36-43
35 : “ಸಾಮತಿಗಳಲ್ಲೇ ಬೋಧಿಸುವೆನು; ಲೋಕಾದಿಯಿಂದ ರಹಸ್ಯವಾದವುಗಳನ್ನು ಬಯಲುಗೊಳಿಸುವೆನು" ಎಂದು ದೇವರು ಪ್ರವಾದಿಯ ಮುಖಾಂತರ ತಿಳಿಸಿದ್ದ ಪ್ರವಚನವನ್ನು ಯೇಸು ಹೀಗೆ ನೆರವೇರಿಸಿದರು. ಕಳೆಗಳ ಸಾಮತಿಗೆ ಅರ್ಥ
36 : ಯೇಸುಸ್ವಾಮಿ ಜನರನ್ನು ಬೀಳ್ಕೊಟ್ಟು ಮನೆಗೆ ಬಂದರು. ಶಿಷ್ಯರು ಅವರ ಬಳಿಗೆ ಬಂದು, "ಹೊಲದಲ್ಲಿ ಬಿತ್ತಲಾದ ಕಳೆಗಳ ಸಾಮತಿಯನ್ನು ನಮಗೆ ವಿವರಿಸಿರಿ," ಎಂದು ಕೇಳಿಕೊಂಡರು.
37 : ಅದಕ್ಕೆ ಯೇಸು, "ಒಳ್ಳೆಯ ಗೋದಿಯನ್ನು ಬಿತ್ತುವವನು ಎಂದರೆ ನರಪುತ್ರನು;
38 : ಹೊಲವೇ ಈ ಲೋಕ; ಒಳ್ಳೆಯ ಕಾಳುಗಳೇ ಶ್ರೀಸಾಮ್ರಾಜ್ಯದ ಮಕ್ಕಳು; ಕಳೆಗಳೇ ಕೇಡಿಗನ ಮಕ್ಕಳು.
39 : ಆ ಕಳೆಗಳನ್ನು ಬಿತ್ತಿದ ವೈರಿಯೇ ಪಿಶಾಚಿ. ಸುಗ್ಗಿಯೇ ಕಾಲಾಂತ್ಯ, ಕೊಯ್ಲುಗಾರರೇ ದೇವದೂತರು.
40 : ಕಳೆಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟು ಹಾಕಿದಂತೆ ಕಾಲಾಂತ್ಯದಲ್ಲೂ ನಡೆಯುವುದು.
41 : ನರಪುತ್ರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದಿಂದ ಪಾಪಕ್ಕೆ ಕಾರಣವಾದುದೆಲ್ಲವನ್ನೂ
42 : ಮತ್ತು ದುಷ್ಕರ್ಮಿಗಳೆಲ್ಲರನ್ನೂ ಒಟ್ಟುಗೂಡಿಸಿ ಅಗ್ನಿಕುಂಡದಲ್ಲಿ ಹಾಕುವರು; ಅಲ್ಲಿ ಅವರು ಕಟಕಟನೆ ಹಲ್ಲು ಕಡಿದುಕೊಂಡು ಗೋಳಾಡುವರು.
43 : ಸದ್ದರ್ಮಿಗಳು ತಮ್ಮ ತಂದೆಯ ಸಾಮ್ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕಿವಿಯುಳ್ಳವನು ಕೇಳಿಸಿಕೊಳ್ಳಲಿ!
ಚಿಂತನೆ
"ಸರ್ವೇಶ್ವರ ಕರುಣಾಮಯನು, ದಯಾಳು ದೇವರು, ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿ ಪಾತ್ರನು, ನಂಬಿಗಸ್ಥನು" ಎಂದು ಮೋಶೆಗೆ ವಿಷದವಾಗುತ್ತದೆ. ಅದೇ ಸತ್ಯವನ್ನು ಇಂದಿನ ಶುಭಸಂದೇಶದಲ್ಲೂ ಕಾಣುತ್ತೇವೆ. ಬೆಳೆಯ ನಡುವೆ ಕಳೆ (ಒಳ್ಳೆಯವರ ನಡುವೆ ಕೆಟ್ಟತನ) ಇರುವಾಗ ಸರ್ವೇಶವರ ತಟ್ಟನೆ ಸಿಟ್ಟುಗೊಳ್ಳದೆ ಪ್ರೀತಿಯಿಂದ ಕಾಪಾಡುತ್ತಾರೆ. ದೇವರು ನಾಶ ಮಾಡುವವರಲ್ಲ. ನಾವು ಮೂಲತಃ ಒಳ್ಳೆಯವರು. ಕೆಲವೊಮ್ಮೆ ಕೆಟ್ಟತನಕ್ಕೆ ದಾಸರಾಗಬಹುದು, ಪಾಪ ಮಾಡಬಹುದು. ಆದರೆ ಒಳ್ಳೆಯವರಾದ ನಾವು ಅಂತಹ ಕತ್ತಲೆಯಿಂದ ಹೊರಬಂದು ವಿನಾಶವನ್ನು ದೂರ ಮಾಡಬೇಕು. ನಾವು ಬದುಕಬೇಕು, ಬಾಳಬೇಕು ಎಂಬುವುದೇ ದೇವರ ಇಚ್ಛೆ.
No comments:
Post a Comment