Monday, 29 July 2019

ಸಾಧಾರಣ ಕಾಲದಹದಿನೇಳನೇ ವಾರ ಬುಧವಾರ

31/ ಬಿಳಿ /ಬುಧ/ ಲೊಯೋಲಾದ ಸಂತ ಇಗ್ನೇಷಿಯಸ್ ಯಾ (ಸ್ಮರಣೆ)
1ನೇ ವಾಚನ - ವಿಮೋ 34: 29-35
ಕೀರ್ತನೆ - 98: 5-7, 9
ಶುಭಸಂದೇಶ - ಮತ್ತಾಯ 13: 44-46


1ನೇ ವಾಚನ - ವಿಮೋ 34: 29-35 
29 : ಮೋಶೆ ಆಜ್ಞಾಶಾಸನಗಳಾದ ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಸೀನಾಯಿ ಬೆಟ್ಟದಿಂದ ಇಳಿದುದಾಗ ಅವನ ಮುಖ ಪ್ರಕಾಶಮಾನವಾಗಿತ್ತು. ಏಕೆಂದರೆ ಅವನು ಸರ್ವೇಶ್ವರನ ಸಂಗಡ ಸಂಭಾಷಿಸಿದ್ದನು. ಆದರೆ ಅದು ಅವನಿಗೆ ತಿಳಿದಿರಲಿಲ್ಲ.
30 : ಮೋಶೆಯ ಮುಖ ಹೀಗೆ ಪ್ರಕಾಶವಾಗಿರುವುದನ್ನು ಆರೋನನು ಮತ್ತು ಇಸ್ರಯೇಲರೆಲ್ಲರು ನೋಡಿ ಅವನ ಹತ್ತಿರಕ್ಕೆ ಬರಲು ಭಯಪಟ್ಟರು.
31 : ಆದರೆ ಮೋಶೆ ಅವರನ್ನು ಕರೆದನು. ಆಗ ಆರೋನನು ಹಾಗು ಜನನಾಯಕರೆಲ್ಲರು ಅವನ ಬಳಿಗೆ ಬಂದರು. ಆಗ ಮೋಶೆ ಅವರ ಸಂಗಡ ಮಾತಾಡಿದನು.
32 : ಅನಂತರ ಇಸ್ರಯೇಲರೆಲ್ಲರು ಕೂಡ ಹತ್ತಿರಕ್ಕೆ ಬಂದರು. ಮೋಶೆ ತಾನು ಸೀನಾಯಿ ಬೆಟ್ಟದಲ್ಲಿ ಸರ್ವೇಶ್ವರನಿಂದ ಹೊಂದಿದ ಆಜ್ಞೆಗಳನ್ನೆಲ್ಲ ಅವರಿಗೆ ತಿಳಿಸಿದನು.
33 : ಅವರೊಡನೆ ಮಾತಾಡಿ ಮುಗಿಸಿದ ಮೇಲೆ ಮೋಶೆ ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡನು.
34 : ಸರ್ವೇಶ್ವರನ ಸಂಗಡ ಮಾತಾಡಬೇಕೆಂದು ಅವರ ಸನ್ನಿಧಿಗೆ ಹೋಗುವಾಗಲೆಲ್ಲ ಅಲ್ಲಿಂದ ಹೊರಗೆ ಬರುವ ತನಕ ಅವನು ಆ ಮುಸುಕನ್ನು ತೆಗೆದಿಡುತ್ತಿದ್ದನು. ಹೊರಗೆ ಬಂದಾಗ ಸರ್ವೇಶ್ವರ ಆಜ್ಞಾಪಿಸಿದ್ದನ್ನೆಲ್ಲ ಇಸ್ರಯೇಲರಿಗೆ ತಿಳಿಸುತ್ತಿದ್ದನು.
35 : ಮೋಶೆಯ ಮುಖ ಪ್ರಕಾಶಮಾನವಾಗಿರುವುದನ್ನು ಇಸ್ರಯೇಲರು ಗಮನಿಸುತ್ತಿದ್ದರು. ಆದಕಾರಣ ಅವನು ಸರ್ವೇಶ್ವರನ ಸಂಗಡ ಮಾತಾಡಲು ಹೋಗುವವರೆಗೆ ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡಿರುತ್ತಿದ್ದನು.


ಕೀರ್ತನೆ - 98: 5-7, 9
1 : ವಹಿಸಿಹನು ಪ್ರಭು ರಾಜ್ಯಾಧಿಕಾರವನು : ನಡುಗುತಿಹುದು ಜನಾಂಗವು / ಕೆರೂಬಿಯರ ಮಧ್ಯೆ ಆಸೀನನಾಗಿಹನು: ಕಂಪಿಸುತಿಹುದು ಜಗವು //
2 : ಸಿಯೋನಿನಲಿ ಪ್ರಭು ಶ್ರೇಷ್ಠನು / ರಾಷ್ಟ್ರಗಳಲ್ಲೆಲ್ಲಾ ಉತ್ಕøಷ್ಠನು //
3 : ಆತ ಪರಮ ಪವಿತ್ರನು, ಸ್ತುತಿಸಲಿ ಅವರೆಲ್ಲರು | ಆತ ಘನಗಂಭೀರನು, ಸ್ತುತಿಸಲಿ ಆತನ ಶ್ರೀನಾಮವನು ||
4 : ಶಕ್ತಿಸ್ವರೂಪಿಯೇ, ನ್ಯಾಯಪ್ರಿಯ ರಾಜನೇ / ನ್ಯಾಯ ನೀತಿ, ಯಥಾರ್ಥತೆಗೆ ಸ್ಥಾಪಕ ನೀನೆ / ಇಸ್ರಯೇಲ ವಂಶಕ್ಕಿದನು ಮನದಟ್ಟಾಗಿಸಿದವ ನೀನೆ //
5 : ಪರಮ ಪಾವನನು ನವಿ್ಮೂ ಸ್ವಾಮಿ ದೇವನು / ಹೊಗಳಿರಿ, ಆತನ ಪಾದಪೀಠಕೆ ಅಡ್ಡಬೀಳಿರಿ ನೀವೆಲ್ಲರು //
6 : ಪ್ರಭುವಿನ ಯಾಜಕರು, ಮೋಶೆ ಮತ್ತು ಆರೋನನು / ಸಮುವೇಲನು ಸಹ ಆತನ ಶರಣರಲಿ ಒಬ್ಬನು / ಪ್ರಾರ್ಥಿಸಲು ಇವರು, ಪ್ರಭುವು ಸದುತ್ತರಿಸಿದನು //
7 : ಮೇಘಸ್ತಂಭದಲಿದ್ದು ಅವರೊಡನೆ ಮಾತಾಡಿದನು / ಕೈಗೊಂಡರು ಅವರು ಆತನಿತ್ತ ವಿಧಿನಿಯಮಗಳನು //
8 : ಸ್ವಾಮಿ ದೇವಾ, ನೀನವರಿಗೆ ಸದುತ್ತರ ಪಾಲಿಸಿದೆ / ತಪ್ಪನು ದಂಡಿಸಿದೆಯಾದರೂ ಕ್ಷಮಿಸುವ ದೇವನಾಗಿದ್ದೆ //
9 : ಘನಪಡಿಸಿರೆಮ್ಮ ಸ್ವಾಮಿ ದೇವನನು / ಶ್ರೀಪರ್ವತದಲಿ ವಂದಿಸಿ ಆತನನು / ಪರಮಪವಿತ್ರನು ಆ ನಮ್ಮ ದೇವನು //

ಶುಭಸಂದೇಶ - ಮತ್ತಾಯ 13: 44-46
44 : "ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು. ಇದನ್ನು ಒಬ್ಬನು ಪತ್ತೆಹಚ್ಚಿ ಅಲ್ಲಿಯೇ ಮುಚ್ಚಿಡುತ್ತಾನೆ. ತನಗಾದ ಸಂತೋಷದಿಂದ ಹೋಗಿ ತನಗೆ ಇದ್ದುಬದ್ದುದೆಲ್ಲವನ್ನೂ ಮಾರಿ ಈ ಹೊಲವನ್ನೇ ಕೊಂಡು ಕೊಂಡುಬಿಡುತ್ತಾನೆ.
45 : "ಸ್ವರ್ಗಸಾಮ್ರಾಜ್ಯವನ್ನು ಉತ್ತಮವಾದ ಮುತ್ತುರತ್ನಗಳನ್ನು ಹುಡುಕಿಕೊಂಡು ಹೋಗುವ ವರ್ತಕನಿಗೂ ಹೋಲಿಸಬಹುದು.
46 : ಅನಘ್ರ್ಯವಾದ ಒಂದು ಮುತ್ತನ್ನು ಕಂಡ ಕೂಡಲೆ ವರ್ತಕ ತನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಆ ಮುತ್ತನ್ನು ಕೊಂಡುಕೊಳ್ಳುತ್ತಾನೆ.
ಚಿಂತನೆ
ಇಗ್ನೇಷಿಯಸ್ ಲೊಯೋಲ ಯೇಸುಸಭೆ ಎಂಬ ಧಾರ್ಮಿಕಸಭೆಯನ್ನು ಸ್ಥಾಪಿಸಿದ ಶ್ರೇಷ್ಟ ಸಂತ. ಹುಟ್ಟು ಸಾಹಸಿಯಾದ ಅವನು ಪಾಂಪ್ಲೊನಾ ಎಂಬಲ್ಲಿ ನಡೆಯುತ್ತಿದ್ದ ಯುದ್ಧದಲ್ಲಿ ಹೋರಾಡುತ್ತಿದ್ದಾಗ ಪಿರಂಗಿ ಗುಂಡೊಂದು ಅವನ ಕಾಲಿಗೆ ಬಡಿಯಿತ್ತು. ೧೫೨೧ರಲ್ಲಿ ನಡೆದ ಈ ಮಾರಣಾಂತಿಕ ಘಟನೆ ಅವನ ಬದುಕ ಪರಿಯನ್ನೇ ಬದಲಾಯಿಸಿತು. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಗ್ನಾಸಿ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಾಡುವ ಕೆಟ್ಟ ಬೇಸಾರದಿಂದ ಹೊರಬರಲು ಪುಸ್ತಕಗಳ ಮೊರೆಹೋಗಲು ನಿಶ್ಚಿಯಿಸಿದ. ಆದರೆ ಅವನಿಗೆ ಬೇಕಾಗಿದ್ದ ರೋಮ್ಯಾಂಟಿಕ್ ಪುಸ್ತಕಗಳು ಸಿಗದ ಕಾರಣ, ಒಲ್ಲದ ಮನಸ್ಸಿನಿಂದ ಸಿಕ್ಕ ಎರಡು ಗ್ರಂಥಗಳಾದ ಯೇಸುವಿನ ಜೀವನ ಚರಿತ್ರೆ ಮತ್ತು ಸಂತರ ಜೀವನ ಚರಿತ್ರೆಗಳನ್ನು ಓದಲಾಂಭಿಸಿದ. ಈ ಓದಿನಿಂದ ಅವನಿಗೆ ಹೊಸ ದರ್ಶನ ಪ್ರಾಪ್ತವಾಗಿ, ಹೊಸ ಜೀವನದತ್ತ ಪ್ರಯಾಣ ಬೆಳೆಸಿದ. 

ಓದಿದ ಪುಸ್ತಕಗಳಲ್ಲಿ ಕಂಡ ಕ್ರಿಸ್ತನ ಹಾಗು ಇತರ ಸಂತರ ವ್ಯಕ್ತಿತ್ವ ಹಾಗು ಬೋಧನೆಗಳಿಂದ ಪ್ರೇರಿತನಾದ ಇಗ್ನಾಸಿ, ಅಶಾಂತನಾದ. ಒಂದು ಕಡೆ ನಿಲ್ಲಲಾಗದಂತಹ ಮನಸ್ಥಿತಿಯಲ್ಲಿ ಊರೂರು ಸುತ್ತಿದ. ಹುಟ್ಟೂರಾದ ಲೊಯೋಲಾದಿಂದ ಮೊನ್‍ಸೆರತ್, ಮೊನ್‍ಸೆರತಿನಿಂದ ಮನ್ರೇಸಾ ಮತ್ತು ಮನ್ರೇಸಾದಿಂದ ಜೆರೊಸಲೆಮ್, ಜೆರೊಸಲೆಮ್ನಿಂದ ಪುನ: ಸ್ಪೇಯ್ನ್ , ಪ್ಯಾರಿಸ್, ವೆನಿಸ್ ಕೊನೆಗೆ ರೋಮ್ ನಗರವನ್ನು ತಲುಪಿದ. 
ಈ ಯಾತ್ರೆಯಲ್ಲಿ ಧ್ಯಾನ, ಅಧ್ಯಯನ, ಬೋಧನೆ ಹೀಗೆ ಮೊದಲಾದ ಆಧ್ಯಾತ್ಮಿಕ ಕಾರ್ಯಗಳಲ್ಲಿ ಮಗ್ನನಾಗಿ ಆತ್ಮಸಿದ್ಧಿಯನ್ನು ಸಾಧಿಸಿದ. ಕೊನೆಗೆ ಲೋಕದ ನಶ್ವರತೆಯನ್ನು ಮನಗೊಂಡ ಇಗ್ನಾಸಿ ಇಡೀ ಲೋಕವನ್ನು ಗೆದ್ದುಕೊಂಡು ತನ್ನ ಅತ್ಮವನ್ನು ಕಳೆದುಕೊಂಡರೆ ಏನು ಪ್ರಯೋಜನ ಎಂಬ ಅಲೌಕಿಕತೆಯ ಆದರ್ಶದಲ್ಲಿ ದೃಢಗೊಂಡ. 
ತನಗಾದ ಆಧ್ಯಾತ್ಮಿಕತೆಯ ಅನುಭವಗಳ ಒಳಹುಗಳನ್ನು Spiritual Exercises ಎಂಬ ಪುಸ್ತಕದಲ್ಲಿ ದಾಖಲಿಸುವ ಮುನ್ನ ಕಂಡ ಕಂಡ ಜನರಿಗೆ ಆಧ್ಯಾತ್ಮಿಕತೆಯನ್ನು ಬೋಧಿಸಿದ. ಇವನ ಆದರ್ಶ, ಆಶಯಗಳಿಂದ ಪ್ರೇರಿತಗೊಂಡ ಅನೇಕರು ಇವನ ಜೊತೆ ಸೇರಿಕೊಂಡರು. ಕೊನೆಗೆ ದೇವರ ಉನ್ನತ ಮಹಿಮೆಗಾಗಿ ಎಂಬ ಧ್ಯೇಯವಾಕ್ಯದೊಂದಿಗೆ ಯೇಸುಸಭೆಯು ಇವರಿಂದ ಸ್ಥಾಪನೆ ಗೊಂಡಿತ್ತು 

ಇಗ್ನೇಶಿಯಸ್ ಬೋಧಿಸಿದ ಅನೇಕ ಆಧ್ಯಾತ್ಮಿಕ ಸಂಗತಿಗಳಲ್ಲಿ ಮುಖ್ಯವಾಗಿ ಇಂದು ನಮಗೆ ಬೇಕಾಗಿರುವುದು ಇವಿಷ್ಟು
· ೧. ಲೋಕದ ನಶ್ವರತೆಯ ಅರಿವು ನಮಗಾಗಬೇಕಿದೆ 
· ೨. ಎಲ್ಲವೂ ದೇವರಿಂದ, ದೇವರಿಗಾಗಿ, ದೇವರಲ್ಲಿ ಮತ್ತು ದೇವರೆಡೆಗೆ ಎಂಬ ಆಧ್ಯಾತ್ಮಿಕತೆಯಲ್ಲಿ ನಾವು ಬೆಳೆಯಬೇಕಿದೆ 
· ೩. ಒಳ್ಳೆದು ಮತ್ತು ಕೆಟ್ಟದು ಎಂಬುವುದನ್ನು ಬೆರ್ಪಡಿಸುವ ವಿವೇಚನ ಶಕ್ತಿ ನಮಗೆ ಬೇಕಾಗಿದೆ 
· ೪. ಎಲ್ಲರಲ್ಲೂ ಎಲ್ಲದರಲ್ಲೂ ಎಲ್ಲೆಲ್ಲಿಯೂ ದೇವರನ್ನು ಕಾಣುವ ಆತ್ಮದೃಷ್ಟಿಯನ್ನು ನಾವು ಬೆಳಸಿಕೊಳ್ಳಬೇಕಾಗಿದೆ.


No comments:

Post a Comment