Thursday, 18 July 2019

ಸಾಧಾರಣ ಕಾಲದ ಹದಿನಾರನೇ ಭಾನುವಾರ

21 ಹಸಿರು ಭಾನು ಸಾಧಾರಣ ಕಾಲದ ಹದಿನಾರನೇ ಭಾನುವಾರ
1ನೇ ವಾಚನ - ಆದಿ 18: 1-1೦
ಕೀರ್ತನೆ - 15: 1-5
2ನೇ ವಾಚನ - ಕೊಲೊ 1: 24-28
ಶುಭಸಂದೇಶ - ಲೂಕ 1೦: 38-42


1ನೇ ವಾಚನ - ಆದಿ 18: 1-1೦ 
1 : ಒಂದು ದಿನ ಅಬ್ರಹಾಮನು ಉರಿಬಿಸಿಲ ವೇಳೆಯಲ್ಲಿ ಮಮ್ರೋತೋಪಿನ ತನ್ನ ಗುಡಾರದ ಬಾಗಿಲಲ್ಲಿ ಕುಳಿತಿದ್ದನು. ಆಗ ಅವನಿಗೆ ಸರ್ವೇಶ್ವರ ಸ್ವಾಮಿಯ ದರ್ಶನವಾಯಿತು.
2 : ಅವನು ಕಣ್ಣೆತ್ತಿ ನೋಡಿದಾಗ ಯಾರೋ ಮೂರು ಮಂದಿ ಪುರುಷರು ಹತ್ತಿರದಲ್ಲೇ ನಿಂತಿದ್ದರು. ಅವರನ್ನು ಎದುರುಗೊಳ್ಳಲು ಅಬ್ರಹಾಮನು ಕೂಡಲೆ ಗುಡಾರದ ಬಾಗಿಲಿನಿಂದ ಓಡಿಬಂದು, ತಲೆಬಾಗಿ ನಮಸ್ಕರಿಸಿ,
3 : ಸ್ವಾವಿೂ, ದಯವಿರಲಿ, ದಾಸನ ಬಳಿಗೆ ದಯಮಾಡದೆ ಮುಂದೆ ಹೋಗಬೇಡಿ.
4 : ನೀರು ತರಿಸಿಕೊಡುತ್ತೇನೆ. ಕಾಲು ತೊಳೆದುಕೊಂಡು ಈ ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳಿ.
5 : ಸ್ವಲ್ಪ ಆಹಾರ ತರುತ್ತೇನೆ. ಊಟವಾದ ಮೇಲೆ ನೀವು ಮುಂದಕ್ಕೆ ಪ್ರಯಾಣ ಮಾಡಬಹುದು. ದಾಸನಿರುವ ಸ್ಥಳದ ಹತ್ತಿರ ಹಾದುಹೋಗುತ್ತಿದ್ದೀರಲ್ಲವೆ?” ಎನ್ನಲು ಅವರು “ನೀನು ಹೇಳಿದಂತೆಯೇ ಆಗಲಿ,” ಎಂದರು.
6 : ಆಗ ಅಬ್ರಹಾಮನು ಗುಡಾರದಲ್ಲಿದ್ದ ಸಾರಳ ಬಳಿಗೆ ಓಡಿ ಆಕೆಗೆ, “ಹಸನಾದ ಮೂರು ಸೇರುಹಿಟ್ಟನ್ನು ನಾದಿ, ಬೇಗ ರೊಟ್ಟಿಗಳನ್ನು ಮಾಡು,” ಎಂದನು.
7 : ಅನಂತರ ದನಗಳ ಹಟ್ಟಿಗೆ ಓಡಿಹೋಗಿ ಕೊಬ್ಬಿದ ಎಳೇ ಕರುವನ್ನು ತೆಗೆದು ಆಳಿನ ಕೈಗೆ ಕೊಟ್ಟನು. ಆಳು ಬೇಗನೆ ಅಡಿಗೆಮಾಡಿದನು.
8 : ತರುವಾಯ ಅಬ್ರಹಾಮನು ಹಾಲು ಮೊಸರನ್ನು ಹಾಗೂ ಅಟ್ಟಮಾಂಸವನ್ನು ತೆಗೆದುಕೊಂಡು ಬಂದು ಆ ಮನುಷ್ಯರಿಗೆ ಬಡಿಸಿದನು. ಅವರು ಮರದ ಕೆಳಗೆ ಊಟಮಾಡಿ ಮುಗಿಸುವವರೆಗೂ ಅವನೇ ಹತ್ತಿರ ನಿಂತು ಉಪಚಾರ ಮಾಡಿದನು.
9 : ಬಳಿಕ, “ನಿನ್ನ ಹೆಂಡತಿ ಸಾರಳು ಎಲ್ಲಿ?” ಎಂದು ಆ ಅತಿಥಿಗಳು ವಿಚಾರಿಸಿದಾಗ, “ಅಲ್ಲಿ ಗುಡಾರದಲ್ಲಿದ್ದಾಳೆ,” ಎಂದು ಉತ್ತರಕೊಟ್ಟನು.
10 : ಆಗ ಸರ್ವೇಶ್ವರಸ್ವಾಮಿ, “ಬರುವ ವರ್ಷ ಇದೇ ಕಾಲದಲ್ಲಿ ನಾನು ತಪ್ಪದೆ ಮರಳಿ ನಿನ್ನ ಬಳಿಗೆ ಬರುತ್ತೇನೆ; ಬಂದಾಗ ನಿನ್ನ ಹೆಂಡತಿ ಸಾರಳಿಗೆ ಮಗನಿರುತ್ತಾನೆ,” ಎಂದರು. ಈ ಮಾತು ಹಿಂದೆ ಗುಡಾರದ ಬಾಗಿಲಲ್ಲಿ ನಿಂತಿದ್ದ ಸಾರಳ ಕಿವಿಗೆ ಬಿದ್ದಿತು.

ಕೀರ್ತನೆ - 15: 1-5
1 : ಯೋಗ್ಯನಾರು ಪ್ರಭು ನಿನ್ನ ಗುಡಾರದಲಿ ಬಿಡಾರಮಾಡಲು? / ಅರ್ಹನಾರು ನಿನ್ನ ಪವಿತ್ರ ಶಿಖರದಲಿ ವಾಸವಾಗಿರಲು? //
2 : ಅಂಥವನಿರಬೇಕು ನಿರ್ದೋಷಿ, ಸನ್ಮಾರ್ಗಿ / ಸತ್ಯವ ನುಡಿಯಬೇಕು ಹೃತ್ಪೂರ್ವಕವಾಗಿ //
3 : ಚಾಡಿಯನು ಹೇಳನು, ಕೇಡನು ಮಾಡನನ್ಯರಿಗೆ / ಗುರಿಮಾಡನವನು ನೆರೆಹೊರೆಯವರನು ನಿಂದೆಗೆ //
4 : ಭ್ರಷ್ಟರನು ಧಿಕ್ಕರಿಸುವನು, ಭಕ್ತರನು ಗೌರವಿಸುವನು / ನಷ್ಟವಾದರೂ ಕೊಟ್ಟ ಮಾತನು ತಪ್ಪನವನು //
5 : ಕೊಡುವನು ಕಡವನು, ಬಯಸನು ಬಡ್ಡಿಯನು / ಎಡವರ ಕೇಡಿಗೆ ಪಡೆಯನು ಲಂಚವನು / ಕದಲನೆಂದಿಗೂ ಈಪರಿ ನಡೆವವನು //
2ನೇ ವಾಚನ - ಕೊಲೊ 1: 24-28 
24 : ಈಗ ನಿಮಗೋಸ್ಕರ ಸಂಕಟಪಡುವುದರಲ್ಲಿ ನನಗೆ ಸಂತೋಷವಿದೆ. ಕ್ರಿಸ್ತಯೇಸು ತಮ್ಮ ಶರೀರವಾದ ಧರ್ಮಸಭೆಗೋಸ್ಕರ ಅನುಭವಿಸಬೇಕಾದ ಯಾತನೆಗಳಲ್ಲಿ ಉಳಿದದ್ದನ್ನು ನಾನು ನನ್ನ ದೇಹದಲ್ಲಿ ಅನುಭವಿಸಿ ಪೂರ್ಣಗೊಳಿಸುತ್ತಿದ್ದೇನೆ.
25 : ದೇವರು ನನ್ನನ್ನು ಧರ್ಮಸಭೆಯ ದಾಸನನ್ನಾಗಿ ನೇಮಿಸಿದ್ದಾರೆ. ನಿಮ್ಮ ಹಿತಕ್ಕಾಗಿ ಒಂದು ಮಹತ್ವದ ಕಾರ್ಯವನ್ನು ನನಗೆ ವಹಿಸಿರುತ್ತಾರೆ
26 : ಯುಗಯುಗಾಂತರಗಳಿಂದಲೂ ತಲತಲಾಂತರಗಳಿಂದಲೂ ನಿಗೂಢವಾಗಿದ್ದ ರಹಸ್ಯವನ್ನು, ಅಂದರೆ ತಮ್ಮ ವಾಕ್ಯವನ್ನು, ಈಗ ತಮ್ಮ ಜನರಿಗೆ ದೇವರು ಪ್ರಕಟಿಸಿದ್ದಾರೆ.
27 : ಈ ರಹಸ್ಯ ಎಷ್ಟು ಶ್ರೀಮಂತವಾದುದು, ಎಷ್ಟು ಮಹಿಮಾನ್ವಿತವಾದುದು ಎಂಬುದನ್ನು ಎಲ್ಲಾ ಜನಾಂಗಗಳಿಗೂ ತಿಳಿಸಲು ದೇವರು ಇಚ್ಛಿಸಿದರು. ಕ್ರಿಸ್ತ ಯೇಸು ನಿಮ್ಮಲ್ಲಿದ್ದು ಮುಂದಿನ ಮಹಿಮೆಯ ನಿರೀಕ್ಷೆಗೆ ಆಧಾರವಾಗಿದ್ದಾರೆ ಎಂಬುದೇ ಈ ರಹಸ್ಯ.
28 : ನಾವು ಸಾರುತ್ತಲಿರುವುದೂ ಯೇಸುಕ್ರಿಸ್ತರನ್ನೇ. ಎಲ್ಲರಿಗೂ ಬುದ್ಧಿ ಹೇಳುತ್ತಾ ಎಲ್ಲರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ ದೇವರ ಮುಂದೆ ಎಲ್ಲರನ್ನು ಕ್ರಿಸ್ತಯೇಸುವಿನಲ್ಲಿ ಪರಿಣತರನ್ನಾಗಿ ಊರ್ಜಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ.

ಶುಭಸಂದೇಶ - ಲೂಕ 1೦: 38-42
38 : ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದಳು.
39 : ಆಕೆಗೆ ಮರಿಯಳೆಂಬ ಸೋದರಿ ಇದ್ದಳು. ಈಕೆ ಪ್ರಭುವಿನ ಪಾದತಳದಲ್ಲಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು.
40 : ಮಾರ್ತಳಾದರೋ, ಅತಿಥಿಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, “ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ,” ಎಂದಳು.
41 : ಯೇಸು ಆಕೆಗೆ ಪ್ರತ್ಯುತ್ತರವಾಗಿ, “ಮಾರ್ತಾ, ಮಾರ್ತಾ, ನೀನು ಅನಾವಶ್ಯ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ.
42 ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು,” ಎಂದರು.

ಚಿಂತನೆ

ಸೇವಾಸಕ್ತ ಮಾರ್ತಳು – ಧ್ಯಾನಾಸಕ್ತ ಮರಿಯಳು…

ಮರಿಯಳು ಪ್ರಭುವಿನ ಪಾದತಳದಲ್ಲಿ ಕುಳಿತು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ, ಅತಿಥಿ ಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಮಾರ್ತಳು “ಪ್ರಭೂ ನನ್ನ ಸೋದರಿ ಈ ಕೆಲದವನ್ನೆಲಾ ನನ್ನೊಬ್ಬಳಿಗೆ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ” ಎಂದು ಯೇಸುವನ್ನು ಕೇಳಿಕೊಂಡಳು. ಯೇಸು ಆಕೆಗೆ ಪ್ರತ್ಯುತ್ತರವಾಗಿ “ಮಾರ್ತ ಮಾರ್ತ, ನೀನು ಅನವಶ್ಯಕ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು” ಎಂದರು.
ಮರಿಯಳು ಏನು ಮಾಡದೆ ನಿಷ್ಕ್ರಿಯವಾಗಿರುವಂತೆ ನಮಗೆ ಕಾಣಿಸುತ್ತದೆ. ಇನ್ನೊಂದು ಕಡೆ ಅತಿಥಿ ಸತ್ಕಾರದ ಗಡಿಬಿಡಿಯಲ್ಲಿದ್ದ ಮಾರ್ತಳಿಗೆ “ ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ ಅದನ್ನು ಆಕೆಯಿಂದ… ಎಂದು ಯೇಸು ಹೇಳಿದನು ಕೇಳಿ ನಮಗೆ ಆಶ್ಚರ್ಯವಾಗಿರಬಹುದಲ್ಲವೇ?
ಯೇಸುವಿನ ಬೋಧನೆಗೆ ಕಿವಿಗೊಡುವುದನ್ನು ನಾವು ನಿರಂತರವಾಗಿ ಮಾಡಬೇಕಾದ್ದ ಕರ್ತವ್ಯ. ಆಲಿಸುವ ಕ್ರಿಯೆವೆಂಬುವುದು ಕೇಳಿಸಿಕೊಳ್ಳುವುದು ಕೇಳಿಸಿಕೊಂಡಿದ್ದನ್ನು ಅರ್ಥೈಸಿಕೊಂಡು, ಸ್ವೀಕರಿಸಿ ಮೈಗೂಡಿಸಿಕೊಳ್ಳುವ ಒಂದು ಪ್ರಕ್ರಿಯೆ.
ಯೇಸುವಿನ ಬೋಧನೆಗೆ ಕಿವಿಗೊಡದೆ ನಮ್ಮ ಕೆಲಸಕಾರ್ಯಗಳ ದಿಕ್ಕುದೆಸೆ ತಿಳಿಯುವುದಾದರೂ ಹೇಗೆ? ನಾವೆಲ್ಲರು  ಸರಿಯಾದ ಕೆಲಸಕಾರ್ಯಗಳಲ್ಲಿ ಮಗ್ನರಾಗಿದ್ದೇವೆಯೇ? ಎಂಬ ಪ್ರಶ್ನೆಗೆ ಉತ್ತರವನ್ನು ತಿಳಿಯುವುದಾದರೂ ಹೇಗೆ? ಆದ್ದರಿಂದ ನಾವು ಆಲಿಸಬೇಕು, ವಿವೇಚಿಸಬೇಕು ಮತ್ತು ಪ್ರಾರ್ಥಿಸಬೇಕು. ಪ್ರಾರ್ಥಿಸಲು ನನಗೆ ಸಮಯವಿಲ್ಲವೆಂದರೆ ನನ್ನ ಕ್ರೈಸ್ತ ಜೀವನದಲ್ಲಿ ಏರುಪೇರು ಆಗಿದೆ ಅಂತ ಅರ್ಥ…




No comments:

Post a Comment