2೦ ಹಸಿರು ಶನಿ ಸಾಧಾರಣ ಕಾಲದಹದಿನೈದನೇ ವಾರ
1ನೇ ವಾಚನ - ವಿಮೋ 12: 37-42
ಕೀರ್ತನೆ - 136: 1, 23-24, 1೦-15
ಶುಭಸಂದೇಶ - ಮತ್ತಾಯ 12: 14-21
ಐಚ್ಛಿಕ ಸ್ಮರಣೆ - ಸಂತ ಅಪೋಲಿನಾರಿಸ್, (ಧರ್ಮಾ ಮತ್ತು ರ.ಸಾ)
ನಂದಿ ಹೋಗುತಿಹ ದೀನದಲಿತರಿಗೆ ಕೃಪಾಸಿಂಧು
1ನೇ ವಾಚನ - ವಿಮೋ 12: 37-42
ಕೀರ್ತನೆ - 136: 1, 23-24, 1೦-15
ಶುಭಸಂದೇಶ - ಮತ್ತಾಯ 12: 14-21
ಐಚ್ಛಿಕ ಸ್ಮರಣೆ - ಸಂತ ಅಪೋಲಿನಾರಿಸ್, (ಧರ್ಮಾ ಮತ್ತು ರ.ಸಾ)
1ನೇ ವಾಚನ - ವಿಮೋ 12: 37-42
37 : ಇಸ್ರಯೇಲರ ರಮ್ಸೇಸ್ ಪಟ್ಟಣದಿಂದ ಹೊರಟು ಸುಕ್ಯೋತಿಗೆ ಬಂದರು. ಅವರಲ್ಲಿ ಮಹಿಳೆಯರನ್ನೂ ಮಕ್ಕಳನ್ನೂ ಬಿಟ್ಟು ಗಂಡಸರ ಸಂಖ್ಯೆಯೇ ಸುಮಾರು ಆರು ಲಕ್ಷವಿತ್ತು.
38 : ಅವರೊಂದಿಗೆ ಬಹುಮಂದಿ ಅನ್ಯದೇಶೀಯರೂ ಹೊರಟುಬಂದಿದ್ದರು. ಕುರಿ, ದನ ಮುಂತಾದ ಪಶುಪ್ರಾಣಿಗಳು ಬಹಳವಿದ್ದವು.
39 : ಈಜಿಪ್ಟ್ ದೇಶದಿಂದ ಅವರು ತಂದಿದ್ದ ಕಣಕದ ಮುದ್ದೆಯಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿ ಸುಟ್ಟರು. ಅಲ್ಲಿಂದ ಅವರನ್ನು ಹೊರಡಿಸಿದಾಗ ಸ್ವಲ್ಪವೂ ಸಮಯ ಸಿಕ್ಕದೆ ಕಣಕದಲ್ಲಿ ಹುಳಿಯನ್ನು ಕಲಸಲಿಕ್ಕೂ ಆಗಲಿಲ್ಲ ಹಾಗು ಬೇರೆ ಆಹಾರವನ್ನು ಸಿದ್ಧಪಡಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ.
40 : ಇಸ್ರಯೇಲರು ಈಜಿಪ್ಟ್ ದೇಶದಲ್ಲಿ ನಾನೂರಮೂವತ್ತು ವರ್ಷಗಳ ಕಾಲ ವಾಸವಾಗಿ ಇದ್ದರು.
41 : ಈ ನಾನೂರಮೂವತ್ತು ವರ್ಷಗಳು ಕಳೆದ ನಂತರ ಅದೇ ದಿವಸದಲ್ಲಿ ಸರ್ವೇಶ್ವರನ ಪಡೆಗಳೆಲ್ಲವೂ ಈಜಿಪ್ಟ್ ದೇಶವನ್ನು ಬಿಟ್ಟು ಹೊರಟುಬಂದವು.
42 : ಸರ್ವೇಶ್ವರ ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ಬರಮಾಡಲು ಜಾಗರೂಕರಾಗಿದ್ದದ್ದು ಆ ರಾತ್ರಿಯೇ. ಆದುದರಿಂದಲೆ ಇಸ್ರಯೇಲರೆಲ್ಲರು ತಲತಲಾಂತರಕ್ಕೂ ಸರ್ವೇಶ್ವರನ ಗೌರವಾರ್ಥ ಈ ರಾತ್ರಿಯಲ್ಲೇ ಜಾಗರಣೆಯನ್ನು ಅನುಸರಿಸಬೇಕು.
ಕೀರ್ತನೆ - 136: 1, 23-24, 1೦-15
ಪ್ರಭುವಿನ ಪ್ರೀತಿ ಶಾಶ್ವತ
ಪ್ರಭುವಿನ ಪ್ರೀತಿ ಶಾಶ್ವತ
1 : ಒಳ್ಳೆಯವನಾದ ಪ್ರಭುವಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
23 : ಹೀನ ಸ್ಥಿತಿಯಲ್ಲಿದ್ದ ನಮ್ಮನ್ನು ಜ್ಞಾಪಿಸಿ ಕೊಂಡಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
24 : ಶತ್ರುಹಗೆಗಳಿಂದ ನಮ್ಮನ್ನು ಬಿಡಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
2 : ಭುಜಬಲದಿಂದ ಕೈಚಾಚಿ ಅವರನು ಬಿಡಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
13 : ಕೆಂಪು ಕಡಲನು ಇಬ್ಭಾಗಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
14 : ಇಸ್ರಯೇಲರನು ಅದರ ನಡುವೆ ದಾಟಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
15 : ಫರೋಹನನ್ನೂ ಅವನ ಸೈನ್ಯವನ್ನೂ ಆ ಕಡಲಲ್ಲಿ ಮುಳುಗಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
ಶುಭಸಂದೇಶ - ಮತ್ತಾಯ 12: 14-21
14 : ಫರಿಸಾಯರಾದರೋ ಅಲ್ಲಿಂದ ಹೊರಗೆ ಹೋಗಿ ಯೇಸುವನ್ನು ಕೊಲೆ ಮಾಡಲು ಒಳಸಂಚು ಹೂಡಿದರು. ಪ್ರವಾದನೆ ಪೂರೈಸಿತು
15 : ತಮಗೆ ವಿರುದ್ಧ ಒಳಸಂಚು ನಡೆಯುತ್ತಿದೆ ಎಂದು ಯೇಸುಸ್ವಾಮಿ ಅರಿತುಕೊಂಡು ಅಲ್ಲಿಂದ ಹೊರಟುಹೋದರು.
16 : ಅನೇಕ ಜನರು ಅವರ ಹಿಂದೆಯೇ ಹೋದರು. ಯೇಸು ಅಸ್ವಸ್ಥರಾಗಿದ್ದ ಎಲ್ಲರನ್ನು ಗುಣಪಡಿಸಿದರು ಮತ್ತು ತಮ್ಮ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಆಜ್ಞೆಮಾಡಿದರು.
17 : ಹೀಗೆ ದೇವರು ಪ್ರವಾದಿ ಯೆಶಾಯನ ಮುಖಾಂತರ ಹೇಳಿದ ಈ ವಚನ ನೆರವೇರಿತು:
18 : "ಇದಿಗೋ, ನನ್ನ ದಾಸನು, ನನ್ನಿಂದಾಯ್ಕೆಯಾದವನು, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ನೆಲೆಗೊಳಿಸುವೆ ಇವನಲಿ ಎನ್ನಾತ್ಮವನು; ಸಾರುವನಿವನು ಜಗದಲಿ ನನ್ನ ಧರ್ಮವನು.
19 : ವಾದಿಸುವವನಲ್ಲ, ದನಿಯೆತ್ತಿ ಕೂಗುವವನಲ್ಲ, ಹಾದಿ ಬೀದಿಯಲ್ಲಿವನ ಕಂಠ ಮೊರೆಯುವುದಿಲ್ಲ.
20 : ಮುರಿದ ಜೊಂಡಿನಂತಹ ದುರ್ಬಲರಿಗಿಂತ ದೀನಬಂಧು ನಂದಿಹೋಗುತಿಹ ದೀನದಲಿತರಿಗೆ ಕೃಪಾಸಿಂಧು ನ್ಯಾಯನೀತಿಗೆ ಜಯದೊರಕಿಸದೆ ಬಿಡನಿವನು.
21 : ನೆಮ್ಮುವರು ಅನ್ಯಜನರೆಲ್ಲರು ಇವನ ನಾಮವನು."
ಚಿಂತನೆ
ಮುರಿದ ಜೊಂಡಿನಂತಿಹ ದುರ್ಬಲರಿಗೀತ ದೀನಬಂಧು ನಂದಿ ಹೋಗುತಿಹ ದೀನದಲಿತರಿಗೆ ಕೃಪಾಸಿಂಧು
ಸೆರೆಯಾಗಿದ್ದ ಇಸ್ರಯೇಲರನ್ನು ಅದ್ಭುತಕರವಾಗಿ, ಈಜಿಪ್ಟಿನಿಂದ ಬಿಡುಗಡೆ ಮಾಡಿದ ಮಹತ್ತಾದ ಘಟನೆಯನ್ನು ಇಂದಿನ ಮೊದಲನೆಯ ವಾಚನ ವರ್ಣಿಸುತ್ತದೆ. ಭೀಕರ ದಾಸತ್ವದಿಂದ ಬಿಡುಗಡೆ ಹೊಂದಿದ ಇಸ್ರಯೇಲರಿಗೆ ದೇವರು ಒಂದು ಭವ್ಯ ಭವಿಷ್ಯವನ್ನು ತೆರೆದಿಡುತ್ತಾರೆ. ಈಜಿಪ್ಟ್ ದೇಶದಲ್ಲಿ ನಾನೂರ ಮೂವತ್ತು ವರ್ಷಗಳ ಕಾಲ ಸಹಿಸಲಾರದಷ್ಟು ಕ್ರೂರತನಕ್ಕೆ ಬಲಿಯಾಗಿದ್ದರು. ಜೀವನವೇ ಬೇಡವೆನ್ನುವಷ್ಟು ಕಠೋರವಾಗಿತ್ತು ಅವರ ಜೀವನ (ವಿಮೋ ೧:೧೪). ಆದರೆ ದೇವರಲ್ಲಿ ಇಸ್ರಾಯೇಲರಿಗೆ ಇದ್ದ ಅದಮ್ಯ ವಿಶ್ವಾಸ, ಅವರ ವಿಮೋಚನೆಗೆ ಕಾರಣವಾಯಿತು. ಹಿಬ್ರಿಯರಿಗೆ ಬರೆದ ಪತ್ರದಲ್ಲಿ ಲೇಖಕನು ಹೀಗೆನ್ನುತ್ತಾನೆ: ವಿಶ್ವಾಸವಿದ್ದುದರಿಂದಲೇ ಮೋಶೆಯು ಅರಸನ ಕಡುಕೋಪಕ್ಕೆ ಅಂಜದೆ ಈಜಿಪ್ಟ್ ದೇಶವನ್ನು ಬಿಟ್ಟು ಬಂದನು. ಕಣ್ಣಿಗೆ ಕಾಣದ ದೇವರನ್ನು ಕಣ್ಣಾರೆ ಕಾಣುತ್ತಿರುವನೋ ಎನ್ನುವಷ್ಟು ದೃಢಚಿತ್ತನಾಗಿ ಅವನು ಮುನ್ನಡೆದನು.....ವಿಶ್ವಾಸದಿಂದಲೇ ಇಸ್ರಾಯೇಲರು ಒಣನೆಲವನ್ನು ದಾಟುವಂತೆ ಕೆಂಪು ಸಮುದ್ರವನ್ನು ದಾಟಿದರು... (ಹಿಬ್ರಿಯರಿಗೆ೧೧:೨೭-೩೦) ಇಸ್ರಾಯೇಲರ ವಿಶ್ವಾಸ ನಮ್ಮ ಆಧ್ಯಾತ್ಮಿಕ ಜೀವನಕ್ಕೆ ಸ್ಪೂರ್ತಿ ನೀಡಬಲ್ಲದು.
ಪ್ರಪಂಚದ ಆದಿಯಿಂದಲೂ ಶ್ರುತಪಡಿಸಲಾಗಿರುವ ದೇವದತ್ತ ವಾಗ್ದಾನಗಳನ್ನೆಲ್ಲ ಯೇಸುಸ್ವಾಮಿಯ ಮುಖಾಂತರವೇ ಈಡೇರಿಸಲಾಗಿವೆ ಎನ್ನುವ ಸಂದೇಶ ನೀಡುತ್ತದೆ ಇವತ್ತಿನ ಶುಭಸಂದೇಶ. ಲೋಕೋದ್ಧಾರಕನೊಬ್ಬನನ್ನು ಧರೆಗೆ ಕಳುಹಿಸುವುದಾಗಿ ದೇವರು ಆದಿಯಲ್ಲಿಯೇ ವಾಗ್ದಾನಮಾಡಿದ್ದರು. ಹಳೆಯ ಒಡಂಬಡಿಕೆಯ ಪ್ರವಾದನೆಗಳೆಲ್ಲವೂ ಕ್ರಿಸ್ತಯೇಸುವಿನಲ್ಲಿ ಸಂಪೂರ್ಣವಾಗಿ ಈಡೇರಿವೆ. ಕಾರ್ಗತ್ತಲಲ್ಲಿ ವಾಸಿಸುವವರಿಗೆ ದಿವ್ಯಜ್ಯೋತಿಯೊಂದು ಕಾಣಿಸಿತು. ಮರಣಛಾಯೆ ಕವಿದ ನಾಡಿಗರಿಗೆ ಅರುಣೋದಯವಾಯಿತು, ಎಂದು ಪ್ರವಾದಿ ಯೆಶಾಯನು ಪ್ರವಾದನೆ ಮಾಡಿದ್ದನು. ನಮ್ಮ ದುರ್ಬಲತೆಗಳನ್ನು ವಹಿಸಿಕೊಂಡನು; ನಮ್ಮ ರೋಗರುಜಿನಗಳನ್ನು ಆತನೇ ಪರಿಹರಿಸಿದನು ಎಂಬ ಯೆಶಾಯನ ಪ್ರವಾದನೆ ಈಗ ನೆರವೇರಿದೆ. ಯೇಸುಸ್ವಾಮಿ ಬಂದಿರುವುದು ದುರ್ಬಲರಿಗೆ, ದೀನದಲಿತರಿಗೆ ಹೊಸ ಭರವಸೆಯನ್ನು ನೀಡಲು. ಜೀವನದ ಕಷ್ಟ ಸಂಕಷ್ಟಗಳಿಂದ ಬಳಲಿ ಬೆಂಡಾದವರಿಗೆ ಯೇಸುಕ್ರಿಸ್ತರೇ ಚೈತನ್ಯ, ಸ್ಪೂರ್ತಿ. ಕತ್ತಲಾದ ಬಾಳಲ್ಲಿ ನಂದಾದೀಪ ಬೆಳಗಿಸುವ ಕೃಪಾಸಿಂಧು ಅವರು.
ಮನುಜರ ನೆನೆದಾಗ ಕಷ್ಟಗಳು ಹೆಚ್ಚುತ್ತವೆ. ದೇವರ ನೆನೆದಾಗ ಕಷ್ಟಗಳು ಬೆಚ್ಚುತ್ತವೆ
No comments:
Post a Comment