Thursday, 25 July 2019

ಸಾಧಾರಣ ಕಾಲದಹದಿನೇಳನೇ ಭಾನುವಾರ

28 ಹಸಿರು ಭಾನು ಸಾಧಾರಣ ಕಾಲದಹದಿನೇಳನೇ ಭಾನುವಾರ
1ನೇ ವಾಚನ - ಆದಿ 18: 2೦-32
ಕೀರ್ತನೆ - 137: 1-8
2ನೇ ವಾಚನ - ಕೊಲೊ: 2: 12-14
ಶುಭಸಂದೇಶ - ಲೂಕ 11: 1-13
ಸಂತ ಅಲ್ಫೊನ್ಸಾ ಸ್ಮರಣೆ ಇರುವುದಿಲ್ಲ

1ನೇ ವಾಚನ - ಆದಿ 18: 2೦-32


20 : ಇದಲ್ಲದೆ ಸರ್ವೇಶ್ವರ, “ಸೊದೋಮ್ ಗೊಮೋರಗಳ ವಿರುದ್ಧ ಎಷ್ಟೋ ಘನತರವಾದ ದೂರುಗಳು ನನಗೆ ಬಂದಿವೆ; ಆ ಊರಿನವರ ಮೇಲೆ ಹೊರಿಸಲಾಗಿರುವ ಪಾಪಕೃತ್ಯವೂ ಘೋರವಾದುದು.
21 : ನನಗೆ ಮುಟ್ಟಿರುವ ದೂರಂತೆ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳಿದುಕೊಳ್ಳುತ್ತೇನೆ,” ಎಂದುಕೊಂಡರು.
22 : ಆಗ ಆ ಇಬ್ಬರು ಮನುಷ್ಯರು ಅಲ್ಲಿಂದ ಸೊದೋಮಿನ ಕಡೆಗೆ ಹೋದರು. ಆದರೆ ಅಬ್ರಹಾಮನು ಸರ್ವೇಶ್ವರಸ್ವಾಮಿಯ ಸಂಗಡವೇ ಉಳಿದುಕೊಂಡನು.
23 : ಅವನು ಅವರ ಹತ್ತಿರಕ್ಕೆ ಬಂದು, “ನೀವು ದುರ್ಜನರ ಸಂಗಡ ಸಜ್ಜನರನ್ನೂ ನಾಶ ಮಾಡುವಿರೋ?
24 : ಒಂದು ವೇಳೆ ಆ ಊರೊಳಗೆ ಐವತ್ತು ಮಂದಿ ಸಜ್ಜನರಿದ್ದಾರು. ಅದರಲ್ಲಿ ಐವತ್ತು ಮಂದಿ ಸಜ್ಜನರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿರೋ?
25 : ಹೀಗೆ ದುಷ್ಟರಿಗೂ ಶಿಷ್ಟರಿಗೂ ಭೇದ ಮಾಡದೆ ದುಷ್ಟರ ಸಂಗಡ ಸಜ್ಜನರನ್ನೂ ಸಂಹರಿಸುವುದು ನಿಮ್ಮಿಂದ ಎಂದಿಗೂ ಆಗಬಾರದು. ಇಡೀ ಜಗತ್ತಿನ ನ್ಯಾಯಾಧಿಪತಿ ಸರಿಯಾಗಿ ನ್ಯಾಯತೀರಿಸಬೇಕಲ್ಲವೆ?” ಎಂದನು.
26 : ಅದಕ್ಕೆ ಸರ್ವೇಶ್ವರ, “ಸೊದೋಮಿನಲ್ಲಿ ಐವತ್ತು ಮಂದಿ ಸಜ್ಜನರು ನನಗೆ ಸಿಕ್ಕಿದರೆ ಅವರ ನಿಮಿತ್ತ ಊರನ್ನೆಲ್ಲಾ ಉಳಿಸುತ್ತೇನೆ,” ಎಂದರು.
27 : ಆಗ ಅಬ್ರಹಾಮನು “ನಾನಂತೂ ಮಣ್ಣುಬೂದಿ. ಆದರೂ ಸ್ವಾಮಿಯ ಸಂಗಡ ವಾದಿಸುವುದಕ್ಕೆ ಧೈರ್ಯಗೊಂಡಿದ್ದೇನೆ.
28 : ಒಂದು ವೇಳೆ ಐವತ್ತು ಮಂದಿ ಸಜ್ಜನರಿಗೆ ಐದು ಮಂದಿ ಕಡಿಮೆಯಾಗಿದ್ದಾರು. ಐದು ಮಂದಿ ಕಡಿಮೆಯಾದುದಕ್ಕೆ ಪಟ್ಟಣವನ್ನೆಲ್ಲ ನಾಶ ಮಾಡುವಿರೋ?” ಎಂದು ಕೇಳಲು ಸರ್ವೇಶ್ವರ, “ಅಲ್ಲಿ ನಲವತ್ತೈದು ಮಂದಿ ಸಿಕ್ಕಿದರೆ ಅದನ್ನು ನಾಶಮಾಡುವುದಿಲ್ಲ” ಎಂದರು.
29 : ಅಬ್ರಹಾಮನು ಇನ್ನೂ ಮುಂದುವರೆದು, “ಒಂದು ವೇಳೆ ಅಲ್ಲಿ ನಲವತ್ತು ಮಂದಿ ಸಿಕ್ಕಾರು” ಎನ್ನಲು “ನಲವತ್ತು ಮಂದಿ ಸಿಕ್ಕಿದರೆ ಆ ಪಟ್ಟಣವನ್ನು ನಾಶಮಾಡುವುದಿಲ್ಲ,” ಎಂದರು.
30 : ಅಬ್ರಹಾಮನು, “ಸ್ವಾವಿೂ, ಕೋಪಮಾಡಬೇಡಿ; ಇನ್ನೂ ಮಾತಾಡುತ್ತೇನೆ. ಒಂದು ವೇಳೆ ಮೂವತ್ತು ಮಂದಿ ಅಲ್ಲಿ ಸಿಕ್ಕಾರು” ಎನ್ನಲು ಸರ್ವೇಶ್ವರ, “ಅಲ್ಲಿ ಮೂವತ್ತು ಮಂದಿ ಸಿಕ್ಕಿದರೂ ಅದನ್ನು ನಾಶಮಾಡುವುದಿಲ್ಲ” ಎಂದರು.
31 : ಅವನು, “ಸ್ವಾಮಿಯ ಸಂಗಡ ಮಾತನಾಡಲು ನಾನು ಇನ್ನೂ ಧೈರ್ಯಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತೇ ಮಂದಿ ಅಲ್ಲಿ ಸಿಕ್ಕಾರು,” ಎನ್ನಲು, ಸರ್ವೇಶ್ವರ, “ಇಪ್ಪತ್ತು ಮಂದಿಯಿದ್ದರೆ ಅವರ ನಿಮಿತ್ತ ಅದನ್ನು ಉಳಿಸುತ್ತೇನೆ, ನಾಶಮಾಡುವುದಿಲ್ಲ,” ಎಂದರು.
32 : ಅಬ್ರಹಾಮನು, “ಸ್ವಾವಿೂ, ಸಿಟ್ಟುಗೊಳ್ಳಬೇಡಿ; ಇನ್ನು ಒಂದೇ ಒಂದು ಸಾರಿ ಮಾತಾಡುತ್ತೇನೆ; ಒಂದು ವೇಳೆ ಹತ್ತೇ ಮಂದಿ ಸಿಕ್ಕಾರು” ಎನ್ನಲು, ಸರ್ವೇಶ್ವರ, “ಹತ್ತು ಮಂದಿಯ ನಿಮಿತ್ತವೂ ಅದನ್ನು ಉಳಿಸುತ್ತೇನೆ, ನಾಶಮಾಡುವುದಿಲ್ಲ,” ಎಂದರು.
33 : ಅನಂತರ ಅಬ್ರಹಾಮನೊಡನೆ ಮಾತಾಡುವುದನ್ನು ಮುಗಿಸಿ ಸರ್ವೇಶ್ವರಸ್ವಾಮಿ ಹೊರಟುಹೋದರು. ಅಬ್ರಹಾಮನು ತನ್ನ ಮನೆಗೆ ಹಿಂದಿರುಗಿದನು.


ಕೀರ್ತನೆ - 137: 1-8

1 : ಹೃದಯಪೂರ್ವಕ ವಂದನೆ ಪ್ರಭು ನಿನಗೆ / ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ
2 : ಪೊಗಳುವೆ ನಿನ್ನ ನಾಮವನು ತಲೆಬಾಗಿ ನಿನ್ನ ಪವಿತ್ರಾಲಯದತ್ತ / ನಿನ್ನ ಪ್ರೀತಿಸತ್ಯತೆಗಳ, ನಾಮ ನುಡಿಗಳ ಮಹತ್ವದ ಪ್ರಯುಕ್ತ
3 : ಮೊರೆಯಿಟ್ಟಾಗ ದಯಪಾಲಿಸಿದೆ ಸದುತ್ತರವನು / ಅಧಿಕಮಾಡಿದೆ ನೀನು ನನ್ನಾತ್ಮ ಶಕ್ತಿಯನು
4 : ನಿನ್ನ ಗುಣಗಾನ ಮಾಳ್ಪರು ಪ್ರಭು, ಭೂರಾಜರೆಲ್ಲರು / ಏಕೆನೆ, ನೀ ಉಸುರಿದ ನುಡಿಗಳನು ಕೇಳ್ವರವರೆಲ್ಲರು
5 : ಪ್ರಭುವಿನ ಮಹಿಮೆಯು ಮಹೋನ್ನತ ಎನ್ನುವರು / ಆತನ ಮಾರ್ಗಗಳನು ಹಾಡಿ ಹರಸುವರು
6 : ಉನ್ನತನಾದರೂ ಗಮನಿಸುವನು ಪ್ರಭು ದೀನರನು / ದೂರದಿಂದಲೇ ಗುರುತಿಸುವನಾತನು ಗರ್ವಿಷ್ಠರನು
7 : ಇಕ್ಕಟ್ಟಿನಲಿ ನಡೆವಾಗಲೂ ನೀ ರಕ್ಷಿಸುವೆ ಪ್ರಭು, ಪ್ರಾಣವನು / ಶತ್ರುಕೋಪಕೆ ವಿರುದ್ಧವಾಗಿ ತೋರುವೆ ನೀ ಮುಷ್ಟಿಯನು
8 : ಸಿದ್ಧಿಗೆ ತರುವೆ ನೀ ಪ್ರಭು, ನನ್ನ ಕಾರ್ಯವನು / ಶಾಶ್ವತವಾಗಿಸು ನಿನ್ನ ಅಚಲ ಪ್ರೀತಿಯನು / ಮರೆತುಬಿಡಬೇಡ ನಿನ್ನಯ ಕೈ ಕೃತಿಯನು //

2ನೇ ವಾಚನ - ಕೊಲೊ: 2: 12-14
12 : ದೀಕ್ಷಾಸ್ನಾನದಲ್ಲಿ ನೀವು ಅವರೊಂದಿಗೆ ಸಮಾಧಿಯಾದಿರಿ. ಕ್ರಿಸ್ತ ಯೇಸುವನ್ನು ಮೃತರ ಮಧ್ಯದಿಂದ ದೇವರು ತಾವೇ ಎಬ್ಬಿಸಿದರು. ಈ ದೇವರ ಶಕ್ತಿಯಲ್ಲಿ ನೀವು ವಿಶ್ವಾಸವಿಟ್ಟಿರುವುದರಿಂದ ದೀಕ್ಷಾಸ್ನಾನದಲ್ಲಿಯೇ ನಿಮ್ಮನ್ನು ಕ್ರಿಸ್ತಯೇಸುವಿನೊಂದಿಗೆ ಎಬ್ಬಿಸಲಾಯಿತು.
13 : ನಿಮ್ಮ ಪಾಪಮಯ ಜೀವನದಿಂದಲೂ ಸುನ್ನತಿ ರಹಿತವಾದ ಸ್ವಭಾವದಿಂದಲೂ ಒಮ್ಮೆ ನೀವು ಮೃತರಾಗಿದ್ದಿರಿ. ಆದರೆ ಈಗ ದೇವರು ಕ್ರಿಸ್ತ ಯೇಸುವಿನೊಂದಿಗೆ ನಿಮ್ಮನ್ನು ಜೀವಂತಗೊಳಿಸಿದ್ದಾರೆ.
14 : ಅವರು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾರೆ. ನಮ್ಮನ್ನು ಬಂಧಿಸಿದ್ದ ಧರ್ಮಶಾಸ್ತ್ರದ ವಿಧಿ ನಿಯಮಗಳನ್ನು ಕ್ರಿಸ್ತಯೇಸು ತೊಡೆದುಹಾಕಿದ್ದಲ್ಲದೆ ಅವುಗಳನ್ನು ಶಿಲುಬೆಗೆ ಜಡಿದು ನಮ್ಮನ್ನು ಬಿಡುಗಡೆ ಮಾಡಿದ್ದಾರೆ.

ಶುಭಸಂದೇಶ - ಲೂಕ 11: 1-13

1 : ಒಮ್ಮೆ ಯೇಸುಸ್ವಾಮಿ ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಮೇಲೆ ಶಿಷ್ಯರಲ್ಲಿ ಒಬ್ಬನು, “ಪ್ರಭುವೇ ಯೊವಾನ್ನನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ,” ಎಂದನು. ಅದಕ್ಕೆ ಯೇಸು ಇಂತೆಂದರು, “ನೀವು ಹೀಗೆ ಪ್ರಾರ್ಥನೆಮಾಡಬೇಕು: ‘ತಂದೆಯೇ,
2 ನಿಮ್ಮ ಪವಿತ್ರನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ.
3 : ನಮಗೆ ಅಗತ್ಯವಾದ ಆಹಾರವನ್ನು ಅನುದಿನವೂ ಕೊಡಿ.
4 : ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ’.” ಪ್ರಾರ್ಥನೆಯ ಫಲ
5 : ಪುನಃ ಯೇಸುಸ್ವಾಮಿ ಶಿಷ್ಯರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು, ‘ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು.
6 : ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಈಗತಾನೆ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು,
7 : ಈ ಸ್ನೇಹಿತ ಒಳಗಿನಿಂದಲೇ, ‘ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದಕ್ಕಾಗುವುದಿಲ್ಲ,’ ಎಂದು ಉತ್ತರ ಕೊಡುವುದು ಸಹಜವಲ್ಲವೇ?
8 : ಆದರೂ, ತನ್ನ ಗೆಳೆಯ ಇವನು ಎಂದು ಎದ್ದು ಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದು ಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ.
9 : ಆದುದರಿಂದ ‘ಕೇಳಿರಿ, ನಿಮಗೆ ದೊರಕುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು.
10 : ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು.’
11 : “ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ?
12 : ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ?
13 : ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅವಕ್ಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು! ಎಂದು ನಾನು ನಿಮಗೆ ಹೇಳುತ್ತೇನೆ.”
ಚಿಂತನೆ

ಪ್ರಭು ಕ್ರಿಸ್ತರು ತಮ್ಮ ಜೀವಂತಕಾಲದಲ್ಲಿ ಹಲವಾರು ಬಗೆಯಲ್ಲಿ ತಮ್ಮ ತಂದೆಯಲ್ಲಿ ಪ್ರಾರ್ಥಿಸುತ್ತಿದ್ದರು. ಮೊತ್ತಮೊದಲು ಶಿಷ್ಯರಿಗೆ ಆ ಪ್ರಾರ್ಥನೆ ಕಲಿಸಿಕೊಟ್ಟರು. ಪ್ರಾರ್ಥನೆ ಹಾಗು ಅವರ ಜೀವನದ ನಡವಳಿಕೆಗಳು ಶಿಷ್ಯರನ್ನು ನಿಬ್ಬೆರಗುಗೊಳಿಸಿತು. ಬಹುಶಃ ಪ್ರಭುಕ್ರಿಸ್ತರ ಪ್ರಾರ್ಥನೆಗೂ ಅವರು ಕೈಗೊಳ್ಳುತ್ತಿದ್ದ ಪವಾಡಗಳಿಗೂ ಸಂಬಂಧವಿದೆ ಎನ್ನುವ ಸತ್ಯ ಶಿಷ್ಯರಿಗೆ ಅನಂತರ ಮನವರಿಕೆಯಾಗಿರಬೇಕು. ಅಂತೆಯೇ ಅವರು ಪ್ರಾರ್ಥನೆಯಲ್ಲಿ ವಿಶೇಷ ಕಾಳಜಿವಹಿಸಿ ತಾವು ಪ್ರಾರ್ಥನೆ ಯಾವ ರೀತಿ ಮಾಡಬೇಕು ಎನ್ನುವುದನ್ನು ಪ್ರಭುವಿನಲ್ಲಿ ಕೇಳಿ ತಿಳಿದುಕೊಳ್ಳುತ್ತಾರೆ. ಪ್ರಭುಕ್ರಿಸ್ತರು ಕಲಿಸಿಕೊಟ್ಟ ಪ್ರಾರ್ಥನೆ ಕೇವಲ ಪ್ರಾರ್ಥನೆಯಲ್ಲ, ನಮ್ಮ ಇಡೀ ಕ್ರೈಸ್ತ ಜೀವನದ ಮೌಲ್ಯಗಳು ಇದರಲ್ಲಿ ಅಡಕವಾಗಿವೆ. ಆದುದರಿಂದಲೇ ಈ ಪ್ರಾರ್ಥನೆ ಇತರ ಪ್ರಾರ್ಥನೆಗಳ ಉತ್ತುಂಗ ಎಂಬುವುದರಲ್ಲಿ ಸಂದೇಹವೇ ಇಲ್ಲ.
ಹೌದು ಪ್ರಿಯರೇ! ಪ್ರಾರ್ಥನೆಗೆ ಅತ್ಯಂತ ಅಧಿಕ ಶಕ್ತಿ ಇದೆ. ನಾವು ಎಡೆಬಿಡದೆ ನಿರಂತರವಾಗಿ ಪ್ರಾರ್ಥಿಸಬೇಕು. ಪ್ರಾರ್ಥನೆಯಲ್ಲಿ ನಿರಾಸಕ್ತಿ ಮೂಡಬಹುದು. ಆದರೂ ತಾಳ್ಮೆಗೆಡದೆ ಭಕ್ತಿಯಿಂದ ನಿಸ್ವಾರ್ಥತೆಯಿಂದ ಪ್ರಾರ್ಥಿಸಬೇಕು. ಅಲ್ಲದೆ ನಮ್ಮ ಪ್ರಾರ್ಥನೆ ಈಡೇರದಿರಲು ನಮ್ಮಲ್ಲಿರುವ ಕುಂದುಕೊರತೆಗಳೇನು ಎಂಬುವುದನ್ನು ಅರಿತು ತಿದ್ದಿಕೊಂಡು ನಮ್ಮ ದೈನಂದಿನ ಪ್ರಾರ್ಥನೆಯಲ್ಲಿ ಮಗ್ನರಾಗೋಣ. ಆಗ ನಮ್ಮ ಪ್ರಾರ್ಥನೆ ಖಂಡಿತ ಫಲದಾಯವಾಗುತ್ತದೆ.
"ಪ್ರಾರ್ಥನೆ ನಾವು ಬೇರೆಯವರಿಗೆ ಕೊಡಬಹುದಾದ ಶ್ರೇಷ್ಠ ಕೊಡುಗೆ"

No comments:

Post a Comment