Tuesday, 9 July 2019

ಸಾಧಾರಣ ಕಾಲದ ಹದಿನಾಲ್ಕನೇವಾರ ಬುಧವಾರ

1೦/ ಹಸಿರು/ ಬುಧ /ಸಾಧಾರಣ ಕಾಲದ ಹದಿನಾಲ್ಕನೇ ವಾರ
1ನೇ ವಾಚನ - ಆದಿ 41: 55-57; 42: 5-7, 17-24
ಕೀರ್ತನೆ - 33: 2-3, 1೦-11, 18-19
ಶುಭಸಂದೇಶ - ಮತ್ತಾಯ 1೦: 1-7   
1ನೇ ವಾಚನ - ಆದಿ 41: 55-57; 42: 5-7, 17-24 
55 : ಕ್ರಮೇಣ ಈಜಿಪ್ಟಿಗೂ ಬರಬಂದಾಗ ಪ್ರಜೆಗಳು ಆಹಾರಬೇಕೆಂದು ಫರೋಹನಿಗೆ ಮೊರೆಯಿಟ್ಟರು. ಆಗ ಅವನು ಅವರಿಗೆ, “ಹೋಗಿ, ಜೋಸೆಫನ ಬಳಿಗೆ, ಅವನು ಹೇಳಿದಂತೆ ಮಾಡಿ,” ಎಂದು ಉತ್ತರಕೊಟ್ಟನು.
56 : ಬರವು ದೇಶದಲ್ಲೆಲ್ಲ ಹರಡಿಕೊಂಡಾಗ ಜೋಸೆಫನು ಕಣಜಗಳನ್ನೆಲ್ಲ ತೆಗೆಸಿ, ಈಜಿಪ್ಟರಿಗೆ ಧಾನ್ಯವನ್ನು ಮಾರಿಸಿದನು. ಈಜಿಪ್ಟ್ ದೇಶದಲ್ಲಿ ಬರವು ಬಹು ಘೋರವಾಗಿತ್ತು.
57 : ಅಂತೆಯೇ ಲೋಕದಲ್ಲೆಲ್ಲಾ ಬರವು ಭಯಂಕರವಾಗಿತ್ತು. ಎಲ್ಲ ದೇಶದವರು ಜೋಸೆಫನಿಂದ ಧಾನ್ಯ ಕೊಂಡುಕೊಳ್ಳಲು ಈಜಿಪ್ಟಿಗೆ ಬರುತ್ತಿದ್ದರು.
5 : ಕಾನಾನ್ ನಾಡಿನಲ್ಲೂ ಬರವಿತ್ತು. ಧಾನ್ಯ ಕೊಂಡುಕೊಳ್ಳಲು ಅಲ್ಲಿಂದ ಈಜಿಪ್ಟಿಗೆ ಬಂದವರಲ್ಲಿ ಯಕೋಬನ (ಇಸ್ರಯೇಲನ) ಮಕ್ಕಳೂ ಇದ್ದರು.
6 : ಆಗ ಈಜಿಪ್ಟ್ ದೇಶದಲ್ಲಿ ಅಧಿಕಾರ ನಡೆಸುತ್ತಿದ್ದವನು ಹಾಗೂ ಜನರಿಗೆ ದವಸಧಾನ್ಯ ಮಾರಾಟ ಮಾಡಿಸುತ್ತಿದ್ದವನು ಜೋಸೆಫನೇ. ಇಂತಿರಲು ಅವನ ಅಣ್ಣಂದಿರು ಬಂದು ಅವನ ಮುಂದೆ ನೆಲದವರೆಗೂ ಬಾಗಿ ನಮಸ್ಕರಿಸಿದರು.
7 : ಜೋಸೆಫನು ಅವರನ್ನು ನೋಡಿದ ಕೂಡಲೆ ಗುರುತುಹಿಡಿದನು. ಆದರೂ ಅವರ ಪರಿಚಯ ಇಲ್ಲದವನಂತೆ ಬಿರುನುಡಿಯಿಂದ, “ನೀವು ಎಲ್ಲಿಯವರು?” ಎಂದು ಕೇಳಿದನು. ಅವರು, “ನಾವು ಧಾನ್ಯ ಕೊಂಡುಕೊಳ್ಳುವುದಕ್ಕಾಗಿ ಕಾನಾನ್ ನಾಡಿನಿಂದ ಬಂದವರು,” ಎಂದು ಹೇಳಿದರು.
17 : ಅವರೆಲ್ಲರನ್ನು ಮೂರು ದಿನಗಳವರೆಗೆ ಕಾವಲಲ್ಲಿ ಇರಿಸಿದನು.
18 : ಮೂರನೆಯ ದಿನ ಜೋಸೆಫನು ಅವರನ್ನು ಕರೆಸಿ, “ನಾನು ದೇವರಲ್ಲಿ ಭಯಭಕ್ತಿ ಯುಳ್ಳವನು; ನಿಮಗೆ ಜೀವದ ಮೇಲೆ ಆಶೆ ಇದ್ದರೆ ನಾನು ಹೇಳಿದಂತೆ ಮಾಡಿ;
19 : ನೀವು ಸತ್ಯವಂತರಾದರೆ ನಿಮ್ಮಲ್ಲಿ ಒಬ್ಬನನ್ನು ಮಾತ್ರ ಸೆರೆಯಲ್ಲಿಡುತ್ತೇನೆ. ಮಿಕ್ಕವರು ಕ್ಷಾಮದಿಂದ ಬಳಲುತ್ತಿರುವ ನಿಮ್ಮ ನಿಮ್ಮ ಕುಟುಂಬಗಳಿಗೆ ಅಗತ್ಯವಾದ ಧಾನ್ಯವನ್ನು ತೆಗೆದುಕೊಂಡು ಹೋಗಿ.
20 : ಆದರೆ ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬರಬೇಕು. ಕರೆದುಕೊಂಡು ಬಂದರೆ, ನಿಮ್ಮ ಮಾತು ಸತ್ಯವೆಂದು ತಿಳಿದುಕೊಳ್ಳುತ್ತೇನೆ. ಆಗ ನೀವು ಸಾಯದೆ ಉಳಿಯುವಿರಿ,” ಎಂದನು. ಅವರು ಹಾಗೆಯೇ ಮಾಡಲು ಒಪ್ಪಿಕೊಂಡರು.
21 : ಆಗ ಅವರು ತಮ್ಮ ತಮ್ಮೊಳಗೆ, “ನಾವು ನಮ್ಮ ತಮ್ಮನಿಗೆ ಮಾಡಿದ ದ್ರೋಹಕ್ಕೆ ತಕ್ಕ ದಂಡನೆಯನ್ನು ಅನುಭವಿಸುತ್ತಿದ್ದೇವೆ. ಅವನು ನಮ್ಮನ್ನು ಕಳಕಳಿ ಬೇಡಿಕೊಂಡ. ಅವನ ಪ್ರಾಣ ಸಂಕಟವನ್ನು ತಿಳಿದೂ ನಾವು ಅವನ ಮೊರೆಗೆ ಕಿವಿಗೊಡಲಿಲ್ಲ. ಆದ್ದರಿಂದಲೆ ಈ ಸಂಕಟದಲ್ಲಿ ಸಿಕ್ಕಿಹಾಕಿಕೊಂಡು ಇದ್ದೇವೆ,” ಎಂದು ಮಾತಾಡಿಕೊಂಡರು.
22 : ಅಂತೆಯೇ ರೂಬೇನನು, “‘ಆ ಹುಡುಗನಿಗೆ ಯಾವ ಕೇಡೂ ಮಾಡಬೇಡಿ’ ಎಂದು ನಾನು ಹೇಳಲಿಲ್ಲವೆ? ನೀವು ಕೇಳದೆ ಹೋದಿರಿ. ಅವನ ರಕ್ತ ಈಗ ನಮ್ಮಿಂದ ಪ್ರಾಯಶ್ಚಿತ್ತ ಕೇಳುತ್ತಿದೆ,” ಎಂದ.
23 : ಜೋಸೆಫನು ಒಬ್ಬ ಅನುವಾದಕನ ಮುಖಾಂತರ ಅವರ ಸಂಗಡ ಮಾತಾಡುತ್ತಿದ್ದುದರಿಂದ ಅವನಿಗೆ ತಮ್ಮ ಮಾತು ಗೊತ್ತಾಗುತ್ತಿದೆ ಎಂದು ಅವರು ನೆನೆಸಲಿಲ್ಲ.
24 : ಜೋಸೆಫನಾದರೋ ಅವರ ಬಳಿಯಿಂದ ಮರೆಯಾಗಿ ಹೋಗಿ ಕಣ್ಣೀರು ಸುರಿಸಿದ. ತರುವಾಯ ಅವರ ಬಳಿಗೆ ಬಂದು, ಸಂಭಾಷಣೆ ಮುಂದುವರೆಸಿ, ಸಿಮೆಯೋನನನ್ನು ಆರಿಸಿ, ಅವರ ಕಣ್ಣೆದುರಿನಲ್ಲೇ ಅವನಿಗೆ ಬೇಡಿಹಾಕಿಸಿದ.

ಕೀರ್ತನೆ - 33: 2-3, 1೦-11, 18-19 
 ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ / ಕಾದಿಹೆವು ಇದೋ ನಿನ್ನ ನಂಬಿ ಭರವಸದಿ //
2 : ಪ್ರಭುವನು ಕೊಂಡಾಡಿ ಕಿನ್ನರಿಯನು ನುಡಿಸುತ / ಕೀರ್ತಿಸಿ ದಶತಂತಿ ವೀಣೆಯನು ಬಾರಿಸುತ //
3 : ನೂತನ ಕೀರ್ತನೆಯನು ಆತನಿಗೆ ಹಾಡಿರಿ / ಇಂಪಾಗಿ ಬಾರಿಸಿ, ಸೊಂಪಾಗಿ ಭಜಿಸಿರಿ //
10 : ವ್ಯರ್ಥವಾಗಿಪನು ಪ್ರಭು ರಾಷ್ಟ್ರ ಯೋಜನೆಗಳನು / ನಿರರ್ಥಕವಾಗಿಪನು ಜನರ ದುಷ್ಟ ಸಂಕಲ್ಪಗಳನು //
11 : ಪ್ರಭುವಿನ ಯೋಜನೆ ಶಾಶ್ವತ / ಅವನ ಸಂಕಲ್ಪ ಅನವರತ //
18 : ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು / ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು //
19 : ತಪ್ಪಿಸುವನವನು ಪ್ರಾಣವನು ಮರಣದಿಂದ / ಉಳಿಸುವನು ಜೀವವನು ಕ್ಷಾಮಡಾಮರದಿಂದ //
22 : ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ / ಕಾದಿಹೆವು ಇದೋ ನಿನ್ನ ನಂಬಿ ಭರವಸದಿ //

ಶುಭಸಂದೇಶ - ಮತ್ತಾಯ 1೦: 1-7   
1 : ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು.
2 : ಆ ಹನ್ನೆರಡು ಮಂದಿ ಪ್ರೇಷಿತರ ಹೆಸರುಗಳು ಇವು; ಮೊದಲನೆಯವನು ಪೇತ್ರ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ; ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ;
3 : ಫಿಲಿಪ್ಪ ಮತ್ತು ಬಾರ್ತೊಲೊಮಾಯ; ತೋಮ ಮತ್ತು ಸುಂಕ ವಸೂಲಿಗಾರ ಮತ್ತಾಯ; ಅಲ್ಫಾಯನ ಮಗ ಯಕೋಬ ಮತ್ತು ತದ್ದಾಯ;
4 : ದೇಶಾಭಿಮಾನಿ ಎಂದು ಕರೆಯಲಾದ ಸಿಮೋನ ಮತ್ತು ಗುರುದ್ರೋಹಿ ಆಗಲಿದ್ದ ಯೂದ ಇಸ್ಕರಿಯೋತ.
5 : ಆ ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸುಸ್ವಾಮಿ ಅವರಿಗೆ ಕೊಟ್ಟ ಆದೇಶ ಇದು: "ಪರಕೀಯರತ್ತ ಹೋಗಲೇಬೇಡಿ; ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ.
6 : ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ;
7 : ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ.
ಚಿಂತನೆ
ಇಂದಿನ ಶುಭಸಂದೇಶದಲ್ಲಿ ಯೇಸುಕ್ರಿಸ್ತರು ದೈವಚಿತ್ತದ ಅನುಷ್ಠಾನಕ್ಕೆ ಸಹಾಯಕರನ್ನಾಗಿ ಹನ್ನೆರಡು ಹುಲುಮಾನವರನ್ನು ಆರಿಸಿಕೊಳ್ಳುತ್ತಾರೆ. ಮುಂದೆ ಇದು ಕೇವಲ ಒಂದು ಸಂಘಟನೆ ಅಥವಾ ಸಂಸ್ಥೆಯಾಗಿ ಉಳಿಯದೆ ಅನೇಕ ಸಂಘ-ಸಂಸ್ಥೆಗಳನ್ನು ಹುಟ್ಟುಹಾಕಿ ಪ್ರಪಂಚಾದ್ಯಾಂತ ದೇವರ ಸುವಾರ್ತೆ ಮತ್ತು ದೈವೀಕಾರ್ಯಗಳ ನೆಲೆಯಾಗಿದೆ. ಸಂಘಟನೆಯ ಹೋರಾಟ ಏಕಾಂಗಿ ಹೋರಾಟಕ್ಕಿಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ. ಶಿಷ್ಯರುಗಳಲ್ಲಿ ಬೇರೆಬೇರೆ ಗುಣಗಳಿದ್ದರೂ, ವಿಭಿನ್ನ ಕಾಯಕದ, ಕುಟುಂಬದ ಮತ್ತು ವ್ಯಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೂ ದೈವಕಾರ್ಯಕ್ಕೆ ಎಲ್ಲರು ಪವಿತ್ರಾತ್ಮವರಗಳಿಂದ ಅಭಿಷಿಕ್ತರಾಗಿ ಪ್ರಪಂಚದ ಮೂಲೆಮೂಲೆಗೂ ಯೇಸುವಿನ ಬೋಧನಕಾರ್ಯಾಗಳನ್ನು ಮಾಡುತ್ತ ಯೇಸುವಿಗೋಸ್ಕರ ಪ್ರಾಣತ್ಯಾಗ ಮಾಡುತ್ತಾರೆ. ನಮ್ಮ ಕ್ರೈಸ್ತಸಮುದಾಯಗಳು ಸಹ ಇಂತಹ ಹೊಸ ಹುರುಪಿನಿಂದ ಅಭಿಷಿಕ್ತರಾಗಿ ಅನ್ಯಾಯ, ಕೋಮುಗಲಭೆ, ಭ್ರಷ್ಟಚಾರ, ಜಾತಿ, ಮೇಲು-ಕೀಳು, ಮಹಿಳೆ-ಮಕ್ಕಳ ಶೊಷಣೆಗಳ ವಿರದ್ಧ ಸಿಡಿದೆದ್ದು  ಕುಟುಂಬಗಳ ಮತ್ತು ಲೋಕ ಕಲ್ಯಾಣಗಳಿಗೆ ಶ್ರಮಿಸಿ ದೈವಸಮ್ರಾಜ್ಯವನ್ನು ಸ್ಥಾಪಿಸಲು ನಮ್ಮಿಂದಾಗಬಹುದಾದ ಅಳಿಲು ಸೇವೆಯನ್ನು ಮಾಡಲು ಬೇಕಾದ ವರಗಳ್ಗಿಗೊಸ್ಕರ ಪ್ರಾರ್ಥಿಸೋಣ.

No comments:

Post a Comment