ಸಾಧಾರಣ ಕಾಲದ ಹತ್ತೊಂಬತ್ತನೇ ವಾರ ಶನಿವಾರ
17/ಹಸಿರು/ಶನಿ
1ನೇ ವಾಚನ - ಯಹೋ 24:14-29
ಕೀರ್ತನೆ - 16: 1-2, 5, 7-8, 11
ಶುಭಸಂದೇಶ - ಮತ್ತಾಯ 19:13-15
1ನೇ ವಾಚನ - ಯಹೋ 24:14-29
ಚಿಂತನೆ:
17/ಹಸಿರು/ಶನಿ
1ನೇ ವಾಚನ - ಯಹೋ 24:14-29
ಕೀರ್ತನೆ - 16: 1-2, 5, 7-8, 11
ಶುಭಸಂದೇಶ - ಮತ್ತಾಯ 19:13-15
1ನೇ ವಾಚನ - ಯಹೋ 24:14-29
“ಈ ಕಾರಣ ನೀವು ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿರಿ. ಪೂರ್ಣಮನಸ್ಸಿನಿಂದ ಯಥಾರ್ಥಚಿತ್ತದಿಂದ ಅವರಿಗೆ ಸೇವೆಸಲ್ಲಿಸಿರಿ. ನಿಮ್ಮ ಪೂರ್ವಜರು ಯೂಪ್ರಟಿಸ್ ನದಿಯಾಚೆ ಯಲ್ಲೂ ಈಜಿಪ್ಟಿನಲ್ಲೂ ಪೂಜಿಸುತ್ತಿದ್ದ ದೇವತೆಗಳನ್ನು ತೊರೆದುಬಿಡಿ. ಸರ್ವೇಶ್ವರನಿಗೆ ಸೇವೆ ಸಲ್ಲಿಸಿರಿ. ನಿಮಗೆ ಇದು ಸರಿಕಾಣದಿದ್ದರೆ ಯಾರಿಗೆ ಸೇವೆಸಲ್ಲಿಸಬೇಕೆಂದಿದ್ದೀರಿ? ಇಂದೇ ಆರಿಸಿಕೊಳ್ಳಿ: ನಿಮ್ಮ ಪೂರ್ವಜರು ಯೂಪ್ರಟಿಸ್ ನದಿಯ ಆಚೆಯಲ್ಲಿ ಪೂಜಿಸುತ್ತಿದ್ದ ದೇವತೆಗಳಿಗೋ? ಈ ನಾಡಿನ ಮೂಲನಿವಾಸಿಗಳಾದ ಅಮೋರಿಯರ ದೇವತೆಗಳಿಗೋ? ಹೇಳಿ. ನಾನು ಮತ್ತು ನನ್ನ ಮನೆಯವರು ಮಾತ್ರ ಸರ್ವೇಶ್ವರನಿಗೇ ಸೇವೆ ಸಲ್ಲಿಸುತ್ತೇವೆ,’’ ಎಂದನು. ಅದಕ್ಕೆ ಜನರು, “ಸರ್ವೇಶ್ವರನನ್ನು ಬಿಟ್ಟು ಅನ್ಯದೇವತೆಗಳಿಗೆ ಸೇವೆಸಲ್ಲಿಸುವುದು ನಮ್ಮಿಂದ ದೂರವಿರಲಿ. ನಾವು ದಾಸತ್ವದಲ್ಲಿದ್ದ ಈಜಿಪ್ಟಿನಿಂದ ನಮ್ಮನ್ನೂ ನಮ್ಮ ಪೂರ್ವಜರನ್ನೂ ಹೊರತಂದವರು ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಯೇ. ನಮ್ಮೆದುರಿನಲ್ಲೇ ಅವರು ಮಾಡಿದ ಅದ್ಭುತಕಾರ್ಯಗಳನ್ನು ನೋಡಿದ್ದೇವೆ. ನಮ್ಮ ಎಲ್ಲಾ ಪ್ರಯಾಣಗಳಲ್ಲೂ ನಾವು ದಾಟಿಬಂದ ಜನಾಂಗಗಳಿಂದ ನಮ್ಮನ್ನು ಕಾಪಾಡಿದವರು ಅವರೇ. ಈ ನಾಡಿನ ನಿವಾಸಿಗಳಾಗಿದ್ದ ಅಮೋರಿಯರು ಮೊದಲಾದ ಎಲ್ಲಾ ಜನಾಂಗಗಳನ್ನು ಇಲ್ಲಿಂದ ಹೊರಡಿಸಿಬಿಟ್ಟವರು ಅವರೇ. ಆದುದರಿಂದ ನಾವು ಕೂಡ ಸರ್ವೇಶ್ವರನಿಗೆ ಸೇವೆಸಲ್ಲಿಸುತ್ತೇವೆ. ಅವರೇ ನಮ್ಮ ದೇವರು,” ಎಂದು ಉತ್ತರಕೊಟ್ಟರು. ಆಗ ಯೆಹೋಶುವನು ಅವರಿಗೆ, “ನೀವು ಸರ್ವೇಶ್ವರನಿಗೆ ಸೇವೆಸಲ್ಲಿಸಲು ಶಕ್ತರಲ್ಲ. ಸರ್ವೇಶ್ವರಸ್ವಾಮಿ ಪರಿಶುದ್ಧರು; ತಮಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ದೇವರು; ಅವರು ನಿಮ್ಮ ಪಾಪ, ಅಪರಾಧಗಳನ್ನು ಕ್ಷಮಿಸರು. ನೀವು ಅವರನ್ನು ಬಿಟ್ಟು ಅನ್ಯದೇವತೆಗಳಿಗೆ ಸೇವೆಸಲ್ಲಿಸಿದರೆ ನಿಮಗೆ ವಿಮುಖರಾಗಿ, ಒಳಿತಿಗೆ ಬದಲಾಗಿ ಕೇಡನ್ನೇ ಬರಮಾಡಿ ನಿಮ್ಮನ್ನು ನಾಶಮಾಡಿ ಬಿಡುವರು,” ಎಂದನು. ಜನರು ಯೆಹೋಶುವನಿಗೆ, “ಇಲ್ಲ ನಾವು ಸರ್ವೇಶ್ವರಸ್ವಾಮಿಗೇ ಸೇವೆಸಲ್ಲಿಸುತ್ತೇವೆ,” ಎಂದರು. ಯೆಹೋಶುವ ಅವರಿಗೆ, “ನೀವು ಸರ್ವೇಶ್ವರನಿಗೇ ಸೇವೆಸಲ್ಲಿಸುವುದನ್ನು ಆರಿಸಿ ಕೊಂಡಿರುವುದಕ್ಕೆ ನೀವೇ ಸಾಕ್ಷಿಗಳು,” ಎನ್ನಲು ಅವರು, “ಹೌದು, ನಾವೇ ಸಾಕ್ಷಿಗಳು,” ಎಂದು ಉತ್ತರಕೊಟ್ಟರು. ಆಗ ಯೆಹೋಶುವ, “ಹಾಗಾದರೆ ನಿಮ್ಮಲ್ಲಿರುವ ಅನ್ಯದೇವತೆಗಳನ್ನು ತೊರೆದು ಬಿಟ್ಟು ಇಸ್ರಯೇಲಿನ ದೇವರಾದ ಸರ್ವೇಶ್ವರನ ಕಡೆಗೆ ನಿಮ್ಮ ಹೃನ್ಮನಗಳನ್ನು ತಿರುಗಿಸಿಕೊಳ್ಳಿ,” ಎಂದನು. ಅದಕ್ಕೆ ಜನರು, “ನಮ್ಮ ದೇವರಾದ ಸರ್ವೇಶ್ವರನಿಗೇ ಸೇವೆಸಲ್ಲಿಸುತ್ತೇವೆ. ಅವರ ಮಾತನ್ನೇ ಕೇಳುತ್ತೇವೆ,” ಎಂದರು. ಹೀಗೆ ಯೆಹೋಶುವ ಶೆಕೆಮಿನಲ್ಲಿ ಇಸ್ರಯೇಲರೊಡನೆ ಒಪ್ಪಂದ ಮಾಡಿಕೊಂಡು ಅವರಿಗೆ ವಿಧಿನಿಯಮಗಳನ್ನು ನೇಮಿಸಿದನು. ಇದು ಮಾತ್ರವಲ್ಲ, ಈ ಎಲ್ಲಾ ಮಾತುಕತೆಗಳನ್ನು ದೇವರ ಧರ್ಮಶಾಸ್ತ್ರಗ್ರಂಥದಲ್ಲಿ ಬರೆದಿಟ್ಟನು. ಒಂದು ದೊಡ್ಡ ಕಲ್ಲನ್ನು ಸರ್ವೇಶ್ವರನ ಆಲಯದ ಹತ್ತಿರದಲ್ಲೇ ಇದ್ದ ಓಕ್ ವೃಕ್ಷದ ಅಡಿಯಲ್ಲಿ ನಿಲ್ಲಿಸಿದನು. ಬಳಿಕ ಎಲ್ಲಾ ಜನರಿಗೆ, “ಇಗೋ, ನೋಡಿ ಈ ಕಲ್ಲು! ಇದು ನಿಮ್ಮ ವಿಷಯದಲ್ಲಿ ಸಾಕ್ಷಿ ಹೇಳುವುದು. ಸರ್ವೇಶ್ವರ ನಮಗೆ ಹೇಳಿದ ಎಲ್ಲ ಮಾತುಗಳನ್ನು ಇದು ಕೇಳಿದೆ. ಆದ್ದರಿಂದ ನೀವು ನಿಮ್ಮ ದೇವರಾದ ಅವರನ್ನು ಅಲ್ಲಗಳೆದದ್ದೇ ಆದರೆ ಈ ಕಲ್ಲೇ ನಿಮಗೆ ಸಾಕ್ಷಿಯಾಗಿರುವುದು,” ಎಂದು ಹೇಳಿ ಆ ಜನರನ್ನು ಅವರವರ ಸೊತ್ತಿದ್ದಲ್ಲಿಗೆ ಕಳುಹಿಸಿಬಿಟ್ಟನು. ಇದಾದ ಮೇಲೆ ಸರ್ವೇಶ್ವರನ ದಾಸನಾದ ನೂನನ ಮಗ ಯೆಹೋಶುವನು ನೂರಹತ್ತು ವರ್ಷದವನಾಗಿ ಮರಣಹೊಂದಿದ.
ಕೀರ್ತನೆ - 16: 1-2, 5, 7-8, 11
1 : ನೀಡು ದೇವಾ ರಕ್ಷಣೆಯನು / ನಾ ನಿನಗೆ ಶರಣಾಗತನು //
2 : “ನೀನೇ ನನ್ನೊಡೆಯ”ನೆಂದು ನಾ ನುಡಿದೆ / ನಿನ್ನ ಹೊರತು ನನಗಿಲ್ಲ ಒಳಿತು” ಎಂದೆ /
5 : ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ / ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ //
7 : ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ / ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ //
8 : ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ / ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ? //
11 : ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು / ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು / ನಿನ್ನ ಬಲಗೈ ನೀಡುವುದು ನಿತ್ಯ ಭಾಗ್ಯವನು //
ಶುಭಸಂದೇಶ - ಮತ್ತಾಯ 19:13-15
ಅನಂತರ ಕೆಲವರು ಚಿಕ್ಕಮಕ್ಕಳನ್ನು ಯೇಸುಸ್ವಾಮಿಯ ಬಳಿಗೆ ತಂದರು. ಅವುಗಳ ಮೇಲೆ ಕೈಯಿಟ್ಟು ಪ್ರಾರ್ಥನೆಮಾಡಬೇಕೆಂದು ಕೇಳಿಕೊಂಡರು. ಶಿಷ್ಯರು ಅವರನ್ನು ಗದರಿಸಿದರು. ಆಗ ಯೇಸು, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ; ಅವುಗಳನ್ನು ತಡೆಯಬೇಡಿ. ಸ್ವರ್ಗಸಾಮ್ರಾಜ್ಯ ಇಂಥವರದೇ,” ಎಂದರು. ತರುವಾಯ ಆ ಮಕ್ಕಳ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ಬಳಿಕ ಅಲ್ಲಿಂದ ಹೊರಟು ಹೋದರು.ಚಿಂತನೆ:
ಸಂಪ್ರದಾಯದಿಂದ ಮುಕ್ತಿ - ನಿಜವಾದ ಭಕ್ತಿ
ಕ್ರೈಸ್ತ ಕಥೋಲಿಕ ಧರ್ಮ ಅನೇಕ ಸಂಪ್ರದಾಯಗಳನ್ನೂ ಆಚರಣೆಗಳನ್ನೂ ತನ್ನ ಇತಿಹಾಸದಲ್ಲಿ ಬೆಳೆಸಿಕೊಂಡು ಬಂದಿದೆ. ಈ ಸಂಪ್ರದಾಯ , ಕಾನೂನು, ಆಚರಣೆಗಳು ಮಾನವನನ್ನು ದೇವರ ಹತ್ತಿರ ತರಲು ಮಾಡುವ ಪ್ರಯತ್ನ. ಆದರೆ ಈ ಆಚರಣೆಗಳೇ ಧರ್ಮವನ್ನೂ ಅದರ ತಿರುಳನ್ನೂ ನುಂಗುವ ಬೇಲಿಯಾಗಬಾರದು.
ಒಮ್ಮೆ ಪಾದ್ರಿಯೊಬ್ಬರು ನಿನ್ನ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರು ಎಂದು ಬೋಧಿಸಿ ಚರ್ಚಿನಿಂದ ಹೊರಬಂದರು. ಆಗ ಆ (ವಿಚಾರಣೆಯ) ಧರ್ಮಕೇಂದ್ರದ ವ್ಯಕ್ತಿಯೊಬ್ಬ ಅವರ ಕೆನ್ನೆಗೊಂದು ಭಾರಿಸಿದ. ನಂತರ ಮೌನವಾಗಿ ತಲೆಬಾಗಿ ಇನ್ನೊಂದು ಕೆನ್ನೆ ತೋರಿದರು, ಪಾದ್ರಿಗಳು, ಪ್ರಭುವಿನ ಮಾತು ಅನುಸರಿಸುತ್ತಾ. ನಂತರ ಮತ್ತೆ ಕಪಾಳ ಮೋಕ್ಷವಾಯಿತು. ಈಗ ಪಾದ್ರಿ ಎಚ್ಚೆತ್ತು ಆತನನ್ನು ಹೊಡೆಯತೊಡಗಿದರು. ಗಾಬರಿಯಾದ ಆ ವ್ಯಕ್ತಿ ಕೇಳಲು `ಯೇಸು ನಿನ್ನ ಒಂದು ಕೆನ್ನೆಗೆ ಹೊಡೆದರೆ, ನಿನ್ನ ಮತ್ತೊಂದು ಕೆನ್ನೆ ತೋರಿಸು ಎಂದರು, ಅಷ್ಟೇ, ಮುಂದೇನೂ ನುಡಿಯಲಿಲ್ಲ. ಈಗ ಹೊಡೆಯುವುದು ನನ್ನ ಸರದಿ' ಎಂದು ಮುಂದುವರೆಸಿದರು.
ಮಕ್ಕಳು ದೇವರಲ್ಲಿಗೆ ಬರುವುದಕ್ಕೆ ಸಂಪ್ರದಾಯ, ಗೊಡ್ಡು ನಂಬಿಕೆ ಅಡ್ಡ ಬಂದರೆ ಅದನ್ನು ಬಿಡು. ಇಸ್ರಯೇಲ್ ಜನರು ಹೇಗೆ ನಿಜ ದೇವರನ್ನು ಅರಿತು ಅವರನ್ನೇ ಬಯಸಿದರೋ, ಹಾಗೆಯೇ ನಾವು ಸಹ ಕೇವಲ ಕಾನೂನಿಗಾಗಿ, ಸಂಪ್ರದಾಯಕ್ಕಾಗಿಯಲ್ಲ, ಬದಲಾಗಿ ಪ್ರೀತಿಯಿಂದ ಹಾಗೂ ನಿಜವಾದ ಭಾವದಿಂದ ಮಾಡುವ ಕೆಲಸ ದೇವರನ್ನು ಒಪ್ಪುತ್ತದೆ.
ದೇವರ ಮಕ್ಕಳನ್ನು ದೇವರಿಂದ ತಡೆಯುವುದು ಪಾಪ. ದೇವರ ಸಾಮ್ರಾಜ್ಯ ಮಕ್ಕಳದು ಎಂದು ಸಾರುವ ಪ್ರಭು ಯೇಸು ಇಂದು ಮಕ್ಕಳಂತಾಗಿ-ದೇವರ ಸಾಮ್ರಾಜ್ಯ ಪಡೆಯಿರಿ ಎಂದು ಹೇಳುತ್ತಾರೆ. ಹಾದಿಯಲ್ಲಿ ಬರುವ ಎಲ್ಲಾ ಗೊಡ್ಡು ಸಂಪ್ರದಾಯ, ಮೂಢ ನಂಬಿಕೆಗಳನ್ನು ಕಿತ್ತೊಗೆಯಿರಿ.
No comments:
Post a Comment