Wednesday, 7 August 2019

ಸಾಧಾರಣ ಕಾಲದ ಹತ್ತೊಂಬತ್ತನೇ ಭಾನುವಾರ

ಸಾಧಾರಣ ಕಾಲದ ಹತ್ತೊಂಬತ್ತನೇ ಭಾನುವಾರ

11/ಹಸಿರು/ಭಾನು/ಸಂತ  ಕ್ಲಾರ  ಸ್ಮರಣೆ 
1ನೇ  ವಾಚನ  -  ಜ್ಞಾನ  18:  6-9
ಕೀರ್ತನೆ - 33: 1, 12, 18-2೦, 22
2ನೇ ವಾಚನ - ಹಿಬ್ರಿ 11: 1-2, 8-19
ಶುಭಸಂದೇಶ  -  ಲೂಕ  12:  32-48

1ನೇ  ವಾಚನ  -  ಜ್ಞಾನ  18:  6-9
ಆ ರಾತ್ರಿಯ ಘಟನೆಗಳನು ನಮ್ಮ ಪೂರ್ವಜರಿಗೆ ಮೊದಲೇ ತಿಳಿಸಲಾಗಿತ್ತು ಎಂದೇ ಅವರು ನಂಬಿದ್ದ ವಾಗ್ದಾನಗಳಿಂದ ಧೈರ್ಯತಂದುಕೊಂಡರು. ಹೀಗೆ ಶತ್ರುಗಳ ಅಳಿವನು, ಸಜ್ಜನರ ಉದ್ಧಾರವನು ನಿಮ್ಮ ಜನರು ನಿರೀಕ್ಷಿಸಿದ್ದರು. ಯಾವ ಸಾಧನಗಳಿಂದ ಶತ್ರುಗಳಿಗೆ ನೀವು ಮುಯ್ಯಿ ತೀರಿಸಿದಿರೋ ಅವುಗಳಿಂದಲೇ ನಮ್ಮನ್ನು ತಮ್ಮ ಬಳಿಗೆ ಕರೆದು ಗೌರವಿಸಿದಿರಿ. ಸಜ್ಜನರ ಸ್ವಂತ ಕುವರರು ಬಲಿಯನ್ನರ್ಪಿಸಿದರು ರಹಸ್ಯವಾಗಿ ದೇವನಿಯಮದ ನಿಬಂಧನೆಗಳನು ಅಂಗೀಕರಿಸಿದರು ಒಮ್ಮನಸ್ಸಾಗಿ. ಅಂತೆಯೇ ಹೆತ್ತವರು ತಾವು ದೇವಜನರೆಂದು ಒಪ್ಪಿಕೊಂಡರು ಸುಖ-ಸಂಕಟಗಳಲ್ಲಿ ಭಾಗಿಗಳೆಂದು ಹಾಡಿದರು ಪೂರ್ವಜರ ಸ್ತುತಿಗೀತೆಯನು.

ಕೀರ್ತನೆ - 33: 1, 12, 18-2೦, 22
ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ
1 : ಸಜ್ಜನರೇ, ಮಾಡಿರಿ ಪ್ರಭುವಿನ ಗುಣಗಾನ / ನೀತಿವಂತರೇ, ಆತನ ಸ್ತುತಿ ನಿಮಗೆ ಸುಗುಣ //
12 : ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ / ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ //
18 : ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು / ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು //
19 : ತಪ್ಪಿಸುವನವನು ಪ್ರಾಣವನು ಮರಣದಿಂದ / ಉಳಿಸುವನು ಜೀವವನು ಕ್ಷಾಮಡಾಮರದಿಂದ //
20 : ಕಾದಿದೆ ಎನ್ನ ಮನ ಪ್ರಭುವಿಗಾಗಿ / ಆತನಿಹನು ಎನಗೆ ಗುರಾಣಿಯಾಗಿ //
22 : ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ / ಕಾದಿಹೆವು ಇದೋ ನಿನ್ನ ನಂಬಿ ಭರವಸದಿ //

2ನೇ ವಾಚನ - ಹಿಬ್ರಿ 11: 1-2, 8-19
ವಿಶ್ವಾಸವೆಂಬುದು ನಾವು ನಿರೀಕ್ಷಿಸುವಂಥವುಗಳು ನಮಗೆ ದೊರಕುತ್ತವೆ ಎಂಬ ದೃಢನಂಬಿಕೆ ಹಾಗು ಕಣ್ಣಿಗೆ ಕಾಣದಂಥವುಗಳು ನಿಶ್ಚಯವಾದವು ಎಂಬ ನಿಲುವು ಆಗಿದೆ. ನಮ್ಮ ಪೂರ್ವಜರು ದೈವಸಮ್ಮತಿಯನ್ನು ಪಡೆದದ್ದು ವಿಶ್ವಾಸದಿಂದಲೇ. ಅಬ್ರಹಾಮನು ದೇವರ ಕರೆಗೆ ಓಗೊಡುವುದಕ್ಕೂ ವಿಶ್ವಾಸವೇ ಕಾರಣವಾಗಿತ್ತು. ಆತನು ಆ ಕರೆಗನುಸಾರವಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ನಾಡಿಗೆ ಹೊರಟನು. ತಾನು ಸೇರಬೇಕಾಗಿದ್ದ ಸ್ಥಳ ಯಾವುದೆಂದು ತಿಳಿಯದಿದ್ದರೂ ಸ್ವದೇಶವನ್ನು ಬಿಟ್ಟು ತೆರಳಿದನು. ದೇವರು ವಾಗ್ದಾನ ಮಾಡಿದ ನಾಡಿಗೆ ಬಂದಾಗಲೂ ಆತನು ಅದೇ ವಿಶ್ವಾಸದ ನಿಮಿತ್ತ ಒಬ್ಬ ಅನ್ಯದೇಶೀಯನಂತೆ ಬಾಳಿದನು. ಡೇರೆಗಳಲ್ಲಿದ್ದುಕೊಂಡು ಒಬ್ಬ ಪ್ರವಾಸಿಗನಂತೆ ಜೀವಿಸಿದನು. ಅದೇ ವಾಗ್ದಾನಕ್ಕೆ ಸಹಬಾಧ್ಯಸ್ಥರಾದ ಇಸಾಕನೂ ಯಕೋಬನೂ ಅವನಂತೆಯೇ ಡೇರೆಗಳಲ್ಲಿ ವಾಸಿಸಿದರು. ಏಕೆಂದರೆ, ಶಾಶ್ವತವಾದ ಅಸ್ತಿವಾರವುಳ್ಳ ಅಂದರೆ, ದೇವರೇ ನಿಯೋಜಿಸಿ ನಿರ್ಮಿಸಿದ ನಗರವನ್ನು ಆತನು ಎದುರು ನೋಡುತ್ತಿದ್ದನು. ಇದಲ್ಲದೆ, ಪ್ರಾಯ ಮೀರಿದ ಸಾರಳು ಕೂಡ ವಿಶ್ವಾಸದ ಮೂಲಕವಾಗಿಯೇ ಗರ್ಭವತಿ ಆಗುವ ಶಕ್ತಿಯನ್ನು ಪಡೆದಳು; ವಾಗ್ದಾನಮಾಡಿದ ದೇವರು ನಂಬಿಗಸ್ಥರು ಎಂಬ ಭರವಸೆ ಆಕೆಗಿತ್ತು. ಹೀಗೆ ಮೃತಪ್ರಾಯನಾಗಿದ್ದ ಒಬ್ಬ ವ್ಯಕ್ತಿ ಆಕಾಶದ ನಕ್ಷತ್ರಗಳಂತೆಯೂ ಕಡಲ ತೀರದ ಮರಳಿನಂತೆಯೂ ಅಸಂಖ್ಯಾತವಾದ ಸಂತತಿಗೆ ತಂದೆಯಾದನು. ಇವರೆಲ್ಲರೂ ವಿಶ್ವಾಸವುಳ್ಳವರಾಗಿಯೇ ಮೃತರಾದರು. ದೇವರು ವಾಗ್ದಾನ ಮಾಡಿದವುಗಳನ್ನು ಪಡೆಯದಿದ್ದರೂ ಅವುಗಳನ್ನು ದೂರದಿಂದಲೇ ನೋಡಿ ಸ್ವಾಗತಿಸಿ ಸಂತೋಷಪಟ್ಟರು; ತಾವು ಜಗತ್ತಿನಲ್ಲಿ ಕೇವಲ ಪರದೇಶಿಗಳೂ ಪ್ರವಾಸಿಗರೂ ಎಂಬುದನ್ನು ಒಪ್ಪಿಕೊಂಡರು. ಹೀಗೆ ಒಪ್ಪಿಕೊಳ್ಳುವವರೇ ಸ್ವದೇಶವನ್ನು ಅರಸುವವರು ಎಂಬುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. ತಾವು ಬಿಟ್ಟುಬಂದ ನಾಡಿನ ಮೇಲೆ ಅವರು ಮನಸ್ಸಿಡಲಿಲ್ಲ, ಹಾಗಿದ್ದಿದ್ದರೆ, ಮರಳಿ ಅಲ್ಲಿಗೆ ಹೋಗುವುದಕ್ಕೆ ಅವರಿಗೆ ಅವಕಾಶ ಯಾವಾಗಲೂ ಇರುತ್ತಿತ್ತು. ಆದರೆ, ಅವರು ಬಯಸಿದ್ದು ಶ್ರೇಷ್ಠವಾದ ನಾಡನ್ನು, ಅಂದರೆ ಸ್ವರ್ಗವನ್ನು. ಆದ್ದರಿಂದಲೇ ದೇವರು, “ಅವರ ದೇವರು”, ಎಂದು ಕರೆಸಿಕೊಳ್ಳಲು ಅವಮಾನಪಡಲಿಲ್ಲ. ಅದಕ್ಕೆ ಬದಲು, ಅವರಿಗಾಗಿ ಒಂದು ನಗರವನ್ನು ಸಜ್ಜುಗೊಳಿಸಿದ್ದಾರೆ. ವಿಶ್ವಾಸವಿದ್ದುದರಿಂದಲೇ ಅಬ್ರಹಾಮನು ತಾನು ಪರಿಶೋಧಿತನಾದಾಗ ಇಸಾಕನನ್ನು ಬಲಿಯಾಗಿ ಅರ್ಪಿಸಲು ಮುಂದೆ ಬಂದನು. “ಇಸಾಕನಿಂದ ಹುಟ್ಟುವವರು ನಿನ್ನ ಸಂತತಿ ಎನಿಸಿಕೊಳ್ಳುವರು,” ಎಂಬ ವಾಗ್ದಾನವನ್ನು ಪಡೆದಿದ್ದರೂ ಅಬ್ರಹಾಮನು ತನ್ನ ಆ ಏಕಮಾತ್ರ ಪುತ್ರನನ್ನು ಬಲಿಕೊಡಲು ಹಿಂಜರಿಯಲಿಲ್ಲ. ಏಕೆಂದರೆ, ಸತ್ತವರನ್ನು ದೇವರು ಜೀವಕ್ಕೆ ಎಬ್ಬಿಸಬಲ್ಲರು ಎಂಬುದನ್ನು ಅಬ್ರಹಾಮನು ತಿಳಿದಿದ್ದನು. ಅಂತೆಯೇ, ತನ್ನ ಮಗನನ್ನು ಸಾವಿನಿಂದ ಮರಳಿ ಪಡೆದನು. ಮುಂಬರಲಿರುವ ಘಟನೆಗೆ ಇದೊಂದು ಮುನ್ಸೂಚನೆಯಾಗಿತ್ತು. 

ಶುಭಸಂದೇಶ  -  ಲೂಕ  12:  32-48
“ಪುಟ್ಟಮಂದೆಯೇ, ಭಯಪಡಬೇಡ. ನಿನ್ನ ತಂದೆ ತಮ್ಮ ಸಾಮ್ರಾಜ್ಯವನ್ನು ನಿನಗೆ ನೀಡಲು ಇಷ್ಟಪಟ್ಟಿದ್ದಾರೆ. ನಿಮ್ಮ ಆಸ್ತಿಪಾಸ್ತಿಗಳನ್ನು ಮಾರಿ, ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ; ಲಯವಾಗದ ಸಂಪತ್ತನ್ನು ಸ್ವರ್ಗದಲ್ಲಿ ಶೇಖರಿಸಿಟ್ಟುಕೊಳ್ಳಿರಿ. ಅಲ್ಲಿ ಅದು ಕಳ್ಳನಿಗೆ ದಕ್ಕುವಂತಿಲ್ಲ; ನುಸಿಹಿಡಿದು ನಾಶವಾಗುವಂತಿಲ್ಲ. ನಿಮ್ಮ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿಮ್ಮ ಹೃದಯ. ಸದಾ ಸಿದ್ಧರಾಗಿರಿ. “ನಿಮ್ಮ ನಡು ಕಟ್ಟಿರಲಿ; ನಿಮ್ಮ ದೀಪ ಉರಿಯುತ್ತಿರಲಿ. ತಟ್ಟಿದ ತಕ್ಷಣ ಯಜಮಾನನಿಗೆ ಬಾಗಿಲು ತೆರೆಯಲು ಸಿದ್ಧರಿರುವ ಸೇವಕರಂತೆ ಇರಿ. ತಮ್ಮ ಯಜಮಾನನು ಮದುವೆ ಔತಣ ಮುಗಿಸಿಕೊಂಡು ಯಾವಾಗ ಹಿಂದಿರುಗುತ್ತಾನೋ, ಎಂದು ಅವರು ಎದುರು ನೋಡುತ್ತಾ ಇರುತ್ತಾರೆ. ಯಜಮಾನನು ಬಂದು ಯಾವ ಯಾವ ಸೇವಕ ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುತ್ತಾನೋ, ಅಂಥವರು ಭಾಗ್ಯವಂತರು. ಏಕೆಂದರೆ, ಯಜಮಾನನೇ ನಡುಕಟ್ಟಿನಿಂತು, ಅವರನ್ನು ಊಟಕ್ಕೆ ಕೂರಿಸಿ, ಒಬ್ಬೊಬ್ಬನಿಗೂ ತಾನೇ ಉಪಚಾರ ಮಾಡುವನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. “ಯಜಮಾನನು ಬರುವಾಗ ನಡು ರಾತ್ರಿ ಆಗಿರಲಿ, ಮುಂಜಾವವಾಗಿರಲಿ, ಎಚ್ಚರದಿಂದ ಇರುವ ಸೇವಕರನ್ನು ಆತನು ಕಂಡರೆ ಅವರು ಭಾಗ್ಯವಂತರು. ಕಳ್ಳನು ಬರುವ ಗಳಿಗೆಯು ಮನೆಯ ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ. ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು,” ಎಂದರು. ಆಗ ಪೇತ್ರನು, “ಪ್ರಭೂ, ನೀವು ಹೇಳಿದ ಈ ಸಾಮತಿ ನಮಗೆ ಮಾತ್ರ ಅನ್ವಯಿಸುತ್ತದೋ ಅಥವಾ ಎಲ್ಲರಿಗೋ?” ಎಂದು ಕೇಳಿದನು. ಅದಕ್ಕೆ ಪ್ರಭು ಹೀಗೆಂದರು: “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ. ಯಜಮಾನನು ಮನೆಗೆ ಹಿಂದಿರುಗಿ ಬಂದಾಗ ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು. ಅಂಥವನನ್ನು ಯಜಮಾನನು ತನ್ನ ಎಲ್ಲ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ. “ಆದರೆ ಆ ಸೇವಕನು ತನ್ನಲ್ಲೇ, ‘ನನ್ನ ಯಜಮಾನ ಬಹಳ ತಡಮಾಡಿ ಬರುತ್ತಾನೆ’, ಎಂದುಕೊಂಡು ಗಂಡಾಳು ಹೆಣ್ಣಾಳು ಎನ್ನದೆ ಹೊಡೆಯುವುದಕ್ಕೂ ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ಚಿತ್ರಹಿಂಸೆಗೂ ವಿಶ್ವಾಸವಿಹೀನರ ದುರ್ಗತಿಗೂ ಗುರಿಮಾಡುವನು. “ಸೇವಕನು ಯಜಮಾನನ ಇಷ್ಟಾರ್ಥವನ್ನು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಇದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. ಅರಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು.

ಚಿಂತನೆ : (ಕೃಪೆ : ಬೈಬಲ್ ಡೈರಿ)
ಇಂದಿನ ಶುಭಸಂದೇಶದಲ್ಲಿ ನಶಿಸದ ಸಂಪತ್ತನ್ನು ಶೇಖರಣೆಮಾಡಲು ಕರೆನೀಡುತ್ತಾರೆ. ದೇವರು ಶ್ರೀಮಂತಿಕೆಯನ್ನು ಖಂಡಿಸುತ್ತಿಲ್ಲ. ಶ್ರೀಮಂತಿಕೆಯು ಮನುಷ್ಯನ ಉಪಯೋಗಕ್ಕೆ ಇರುವ ಒಂದು ಸಾಧನ. ಅದು ಅವನ ದೇವರಾಗಬಾರದು, ಜೀವನ ಗುರಿಯಾಗಬಾರದು. ದೇವರು, ಬಡವರಿಗೆ ಬಡತನ್ವನ್ನು, ಶ್ರೀಮಂತರಿಗೆ ಶ್ರೀಮಂತಿಕೆಯನ್ನು ಕೊಟ್ಟು ಪರೀಕ್ಷಿಸುತ್ತಾರೆಂದು ಹೇಳುತ್ತಾರೆ. ಶ್ರೀಮಂತಿಕೆಯು ಜಂಭವನ್ನು, ತಿರಸ್ಕಾರವನ್ನು, ದುರಹಂಕಾರವನ್ನು ಬಹು ಸುಲಭವಾಗಿ ಕಲಿಸಿಕೊಡುತ್ತದೆ. ಅದು ಮನುಷ್ಯನಿಗೆ ಅಂಟಿಕೊಳ್ಳುವ ಅನಿಷ್ಟಗಳಾಗಿವೆ.  ಶ್ರೀಮಂತರು ಕಾಯಿಲೆ ಬಿದ್ದಾಗಲೇ ಮನುಷ್ಯನು ಬದುಕುವುದಕ್ಕೆ ಹಣವೊಂದೇ ಮುಖ್ಯವಲ್ಲ, ಕರುಣೆ ಆರೈಕೆ, ಪ್ರೀತಿ ಅರೊಗ್ಯ ಇವು ಹೆಚ್ಚು ಮುಖ್ಯ ಎನಿಸುತ್ತದೆ. 
ಹಾಗಾಗಿ ಯೇಸು ನಮ್ಮ ಸಂಪತ್ತನ್ನು ಸ್ವರ್ಗದಲ್ಲಿ ಶೇಖರಿಸಲು ಕರೆ ನೀಡುತ್ತಾರೆ. ಇಹಲೋಕದ ಸಂಪತ್ತು ನಮ್ಮನ್ನು ದೇವರಿಂದ ದೂರ ಕರೆದೊಯ್ಯಬಹುದು, ಕೆಲವೊಮ್ಮೆ ಸಂಪತ್ತಿಗೆ ನಾವು ಗುಲಾಮರಾಗಬಹುದು. ಸತ್ಕಾರ್ಯಗಳನ್ನು ಮಾಡುವುದರ ಮೂಲಕ ದೇವರ ರಾಜ್ಯದಲ್ಲಿ ನಿಧಿ ಶೀಖರಿಸಲು ಆಹ್ವಾನಿಸುತ್ತಾರೆ. ಅಂತಿಮ ತೀರ್ಪಿನ ದಿನ  ದೇವರು ನಮ್ಮ ಇಹದ ಸಂಪತ್ತಿನ ಮೇಲೆ ನಮಗೆ ತೀರ್ಪನ್ನು ನೀಡುವುದಿಲ್ಲ. ಬದಲಾಗಿ ನಮ್ಮ ಪಾಪ- ಪುಣ್ಯದ ಅಧಾರದ ಮೇಲೆ ನಮ್ಮ ಶ್ರೀಮಂತಿಕೆಯು ಇನ್ನೊಬ್ಬರ ಕಷ್ಟದ ನಿವಾರಣೆಗೆ, ಅವರ ಅಭಿವೃದ್ಧಿಗೆ ಉಪಯೋಗವಾಗಬೇಕೆಂದು ಯೇಸು ಬಯಸುತ್ತಾರೆ.



No comments:

Post a Comment