Monday, 19 August 2019

ಸಾಧರಾಣ ಕಾಲದಇಪ್ಪತ್ತನೇ ವಾರ - ಶುಕ್ರವಾರ

23 ಹಸಿರು ಶುಕ್ರ ಸಾಧರಾಣ ಕಾಲದಇಪ್ಪತ್ತನೇ ವಾರ

1ನೇ ವಾಚನ ರೂತ 1: 1,3-6, 14-16, 22
ಕೀರ್ತನೆ - 146: 5-1೦
ಶುಭಸಂದೇಶ - ಮತ್ತಾಯ 22: 34-4೦
ಐಚ್ಛಿಕ ಸ್ಮರಣೆ -ಲೀಮಾದ ಸಂತ ರೋಸ್, (ಕನ್ಯೆ)


1ನೇ ವಾಚನ ರೂತ 1: 1,3-6, 14-16, 22
1 : ಇಸ್ರಯೇಲ್ ನಾಡಿನಲ್ಲಿ ನ್ಯಾಯಸ್ಥಾಪಕರು ಆಳುತ್ತಿದ್ದಾಗ, ಒಮ್ಮೆ ಕಠಿಣವಾದ ಬರಗಾಲವು ತಲೆದೋರಿತು. ಈ ಕಾರಣ ಜುದೇಯ ಪ್ರಾಂತ್ಯದ ಬೆತ್ಲೆಹೇಮ್ ಎಂಬ ಊರಿನವನೊಬ್ಬನು ತನ್ನ ಪತ್ನಿ ಮತ್ತು ಪುತ್ರರಿಬ್ಬರನ್ನು ಕರೆದುಕೊಂಡು ಮೋವಾಬ್ ಎಂಬ ನಾಡಿಗೆ ವಲಸೆ ಹೋದನು.
3 : ಇವರು ಮೋವಾಬ್ ನಾಡಿನಲ್ಲಿ ವಾಸಿಸುತ್ತಿದ್ದಾಗ ಎಲಿಮೆಲೆಕನು ಮರಣ ಹೊಂದಿದನು. ವಿಧವೆಯಾದ ನವೊಮಿ ಇಬ್ಬರು ಗಂಡು ಮಕ್ಕಳೊಡನೆ ಅಲ್ಲೇ ಉಳಿದಳು.
4 : ಹುಡುಗರು ಇಬ್ಬರೂ, ಮೋವಾಬ್ಯ ಹುಡುಗಿಯರನ್ನು ವಿವಾಹ ಆದರು. ಒಬ್ಬಳ ಹೆಸರು ಒರ್ಫಾ ಮತ್ತು ಇನ್ನೊಬ್ಬಳು ರೂತ್. ಅವರು ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ವಾಸಮಾಡಿದ ನಂತರ,
5 : ಮಹ್ಲೋನ್ ಮತ್ತು ಕಿಲ್ಯೋನ್ ಸಹ ತೀರಿ ಹೋದರು. ಹೀಗೆ ನವೊಮಿ ತನ್ನ ಪತಿಯನ್ನೂ ಇಬ್ಬರು ಪುತ್ರರನ್ನೂ ಕಳೆದುಕೊಂಡು ಒಬ್ಬಂಟಿಗಳು ಆದಳು.
6 : ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ತನ್ನ ನಾಡಿನಲ್ಲಿ ಒಳ್ಳೆಯ ಮಳೆ ಬೆಳೆಗಳಾಗಿವೆ ಎಂಬ ಸಮಾಚಾರ ಮೋವಾಬ್ ನಾಡಿನಲ್ಲಿದ್ದ ನವೊಮಿಗೆ ತಿಳಿದು ಬಂದಿತು.
14 : ಅವರು ಇದನ್ನು ಕೇಳಿ ಇನ್ನೂ ಹೆಚ್ಚಾಗಿ ಅತ್ತರು. ಅನಂತರ ಒರ್ಫಾ ಅತ್ತೆಗೆ ಮುತ್ತಿಟ್ಟು ತನ್ನ ಮನೆಗೆ ಹಿಂದಿರುಗಿ ಹೋದಳು. ರೂತಳು ಮಾತ್ರ ಅತ್ತೆಯನ್ನು ಬಿಟ್ಟುಹೋಗಲಿಲ್ಲ.
15 : ಆಗ ನವೊಮಿ ರೂತಳಿಗೆ: “ನೋಡು, ನಿನ್ನ ಓರಗತ್ತಿಯು ತನ್ನ ಜನಾಂಗದವರ ಬಳಿಗೂ ತನ್ನ ಕುಲದೇವರ ಬಳಿಗೂ ಹಿಂದಿರುಗಿ ಹೋಗಿದ್ದಾಳೆ. ನೀನೂ ಅವಳಂತೆಯೇ ಹೋಗಿಬಿಡು,” ಎಂದು ಒತ್ತಾಯಪಡಿಸಿದಳು.
16 : ಅದಕ್ಕೆ ರೂತಳು: “ನಿಮ್ಮನ್ನು ಬಿಟ್ಟು ಹೋಗುವಂತೆ ಒತ್ತಾಯಪಡಿಸಬೇಡಿ. ನೀವು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುತ್ತೇನೆ. ನೀವು ಎಲ್ಲಿ ವಾಸಿಸಿದರೂ ನಾನು ಅಲ್ಲೇ ವಾಸಿಸುತ್ತೇನೆ.
22 : ಹೀಗೆ ನವೊಮಿ ತನ್ನ ಮೋವಾಬ್ಯ ಸೊಸೆಯಾದ ರೂತಳ ಸಂಗಡ ಬೆತ್ಲೆಹೇಮಿಗೆ ಬಂದಳು. ಆಗ ಜವೆಗೋದಿಯ ಸುಗ್ಗಿ ಪ್ರಾರಂಭವಾಗಿತ್ತು.
ಕೀರ್ತನೆ - 146: 5-10
5 : ಇಸ್ರಯೇಲ ಕುಲದೇವರು ಯಾರಿಗೆ ಉದ್ಧಾರಕನೋ, ಅವನೇ ಧನ್ಯನು / ಪ್ರಭುವನು ತನ್ನ ದೇವರೆಂದು ಯಾರು ನಂಬಿಹನೋ, ಅವನೇ ಧನ್ಯನು
6 : ಭೂಮ್ಯಾಕಾಶ, ಸಾಗರ, ಚರಾಚರಗಳನು ನಿರ್ಮಿಸಿದವ ಆತನೆ / ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೆ
7 : ದೊರಕಿಸುವನು ನ್ಯಾಯ ದಲಿತರಿಗೆ / ಒದಗಿಸುವನು ಆಹಾರ ಹಸಿದವರಿಗೆ / ನೀಡುವನು ಬಿಡುಗಡೆ ಬಂಧಿತರಿಗೆ
8 : ಕಣ್ಣನ್ನೀಯುವನು ಪ್ರಭು ಕುರುಡರಿಗೆ / ಉದ್ಧಾರಕನಾ ಪ್ರಭು ಕುಗ್ಗಿದವರಿಗೆ / ಆತನ ಒಲವಿರುವುದು ಸಾಧು ಸಜ್ಜನರಿಗೆ
9 : ರಕ್ಷಿಸುವನು ಪ್ರಭು ಪರದೇಶಿಗಳನು / ಆದರಿಸುವನು ಅನಾಥರನು, ವಿಧವೆಯರನು / ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು

10 : ಪ್ರಭುವೇ ಅರಸನು ಸದಾಕಾಲಕು / ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು / ಅಲ್ಲೆಲೂಯ! //

ಶುಭಸಂದೇಶ - ಮತ್ತಾಯ 22: 34-4೦
34 : ಯೇಸುಸ್ವಾಮಿ ‘ಸದ್ದುಕಾಯ’ರನ್ನು ಸದ್ದೆತ್ತದಂತೆ ಮಾಡಿದರೆಂಬ ಸಮಾಚಾರ ಫರಿಸಾಯರಿಗೆ ಮುಟ್ಟಿತು. ಅವರು ಒಟ್ಟಾಗಿ ಸ್ವಾಮಿಯ ಬಳಿಗೆ ಬಂದರು.
35 : ಅವರಲ್ಲಿ ಒಬ್ಬ ಧರ್ಮೋಪದೇಶಕನು ಯೇಸುವನ್ನು ಪರೀಕ್ಷಿಸುವ ಸಲುವಾಗಿ, ಹೀಗೆಂದು ಪ್ರಶ್ನಿಸಿದನು:
36 : “ಬೋಧಕರೇ, ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ಆಜ್ಞೆ ಯಾವುದು?”
37 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು.’
38 : ಇದೇ ಪ್ರಮುಖ ಹಾಗೂ ಪ್ರಥಮ ಆಜ್ಞೆ.
39 : ಇದಕ್ಕೆ ಸರಿಹೊಂದುವ ಎರಡನೇ ಆಜ್ಞೆ ಯಾವುದೆಂದರೆ, ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು.
40 : ಸಮಸ್ತ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಪ್ರವಚನಕ್ಕೂ ಈ ಎರಡು ಆಜ್ಞೆಗಳೇ ಆಧಾರ,” ಎಂದರು.
ಚಿಂತನೆ
ಕ್ರಿಸ್ತರ ಪ್ರಧಾನ ಕಟ್ಟಳೆ

ಒಂದು ಕುಟುಂಬದಲ್ಲಿ ನಾವು ಒಬ್ಬ ತಂದೆ, ತಾಯಿ, ಮಕ್ಕಳಿರುವುದನ್ನು ಕಾಣುತ್ತೇವೆ. ತಂದೆಯು ಆ ಕುಟುಂಬದ ಮುಖ್ಯಸ್ಥ ಮತ್ತು ಆತನಿಗೆ ಆ ಕುಟುಂಬದ ಸದಸ್ಯರೆಲ್ಲರ ಮೇಲೆ ಅಧಿಕಾರವಿರುತ್ತದೆ. ಅವನು ತನ್ನ ಪ್ರೀತಿಯನ್ನು ಆ ಮನೆಯಲ್ಲಿರುವವರೆಲ್ಲರಲ್ಲಿ ತೋರಿಸುತ್ತಾನೆ. ಏನಾದರೊಂದು ತೊಂದರೆ ಬಂದರೆ ಅವರೆಲ್ಲರನ್ನು ರಕ್ಷಿಸುತ್ತಾನೆ ಮತ್ತು ಎಲ್ಲರನ್ನು ಸಲಹುತ್ತಾನೆ; ಯಾಕೆಂದರೆ ಅವರೆಲ್ಲರೂ ಆ ತಂದೆಗೆ ಸೇರಿದವರಾಗಿದ್ದಾರೆ.

ಅದೇ ರೀತಿ ನಾವೆಲ್ಲರೂ ದೇವರ ಮಕ್ಕಳು ಹಾಗೂ ಯೇಸುವನ್ನು ನಾವೆಲ್ಲರೂ ನಮ್ಮ ದೊಡ್ಡಣ್ಣ ಎಂತಲೂ ಕರೆಯಬಹುದು. ಅವರ ಮೂಲಕವೇ ಎಲ್ಲವೂ ಸೃಷ್ಟಿಯಾದವು. ಅವರು ಎಲ್ಲದರ ಮುಖ್ಯಸ್ಥ. ಅವರು ಸಮಸ್ತಕ್ಕೂ ಆಧಾರ. ಸ್ವರ್ಗ ಮತ್ತು ಭೂಮಿ ಎಲ್ಲವೂ ಅವರ ಅಧಿಕಾರಕ್ಕೊಳಪಟ್ಟಿದೆ. ಅವರು ಧರ್ಮಸಭೆಯ ಶಿರಸ್ಸು. ಅವರಿಲ್ಲದೆ ಧರ್ಮಸಭೆ ಇಲ್ಲ; ಯಾಕೆಂದರೆ ಅವರೇ ಧರ್ಮಸಭೆಯನ್ನು ಸ್ಥಾಪಿಸಿದವರು. ಹೇಗೆ ಒಂದು ದೇಹದಲ್ಲಿ ತಲೆಯಿಲ್ಲದೆ ಬೇರೆ ಭಾಗಗಳು ಸರಿಯಾಗಿ ಕೆಲಸ ಮಾಡುವುದಿಲ್ಲವೋ ಹಾಗೆಯೇ ತಲೆಯೆಂಬ ಯೇಸು ಇಲ್ಲದೇ ಧರ್ಮಸಭೆ ಮುನ್ನಡೆಯಲು ಸಾಧ್ಯವಿಲ್ಲ. ಅವರು ಪಾಪವನ್ನು ನಮ್ಮೆಲ್ಲರಿಗಿಂತ ಮುಂಚೆ ಜಯಿಸಿದರು. ಅವರು ಸಾವನ್ನು ಜಯಿಸಿ ಪುನರುತ್ಥಾನರಾದರು. ಆದ್ದರಿಂದಲೇ ಅವರು ಎಲ್ಲದರ ಶಿರಸ್ಸು ಈ ಪ್ರಪಂಚದಲ್ಲಿ. ಇದರಿಂದ ನಾವು ದಿನನಿತ್ಯದ ಜೀವನದಲ್ಲಿ ಬೇಕಾಗಿರುವುದನ್ನೆಲ್ಲ ಜಯಿಸಬಹುದು. ಆದ್ದರಿಂದಲೇ ಅವರು ನಮ್ಮನು ಸಲಹುತ್ತಿದ್ದಾರೆ. ನಾವು ಪಾಪ ಮಾಡಿ ದೂರ ಹೋದಾಗ ತಿರುಗಿ ಆ ಒಡಂಬಡಿಕೆಯನ್ನು ಪ್ರೀತಿಯೆಂಬ ವಸ್ತುವಿನಿಂದ ಸೇರಿಸಿದರು. ಅವರು ನಮ್ಮ ಪಾಪಗಳಿಗೋಸ್ಕರ ನಾವು ಕೊಟ್ಟಂತ ಶಿಲುಬೆಯಲ್ಲೇ ಪ್ರಾಣಗೈದರು. ಅವರು ನಮಗೋಸ್ಕರ ರಕ್ತವನ್ನು ಸುರಿಸಿ, ನಾವು ದೇವರ ಬಳಿ ತಿರುಗಿ ಬರುವಂತೆ ಮಾಡಿದರು. ಅವರ ರಕ್ತದಿಂದ ಅವರು ನಮ್ಮಲ್ಲಿ ಶಾಂತಿ ತಂದರು. ಅವರು ಶಾಂತಿಯ ದೂತರಾಗಿದ್ದಾರೆ. ಪ್ರೀತಿಯೆಂಬ ಪ್ರಮುಖ ಕಟ್ಟಳೆಯನ್ನು ನೀಡಿದ್ದಾರೆ.
ಆದ್ದರಿಂದ ಪ್ರೀತಿಯ ಸ್ನೇಹಿತರೇ , ನಾವು ಇಂದು ಆ ಯೇಸುಸ್ವಾಮಿ ನಮ್ಮೆಲ್ಲರ ಕುಟುಂಬಗಳ ಶಿರಸ್ಸೆಂದೂ, ಅವರಿಲ್ಲದೆ ನಮ್ಮ ಬಾಳು ಶೂನ್ಯವೆಂದೂ ತಿಳಿಯಬೇಕು.
ನಮ್ಮಲ್ಲಿ ಏನಾದರೂ, ತೊಂದರೆ, ತಾಪತ್ರಯ, ಅಶಾಂತಿಗಳಿದ್ದರೆ ಆ ಕ್ರಿಸ್ತರಿಗೆ ಒಪ್ಪಿಸೋಣ. ಅವರು ನಮಗೋಸ್ಕರ ಎಂತಹ ಕಷ್ಟವಾದ ಕೆಲಸವನ್ನು ಮಾಡಲೂ ಸಿದ್ಧ. ನಾವು ಈ ಪ್ರಪಂಚದಲ್ಲಿ ಬೇರೆಯವರ ಸಹಾಯವನ್ನು ಪಡೆಯಲು ಆಶಿಸುತ್ತೇವೆ. ಆದರೆ ಅವರ ಸಹಾಯ ಶಾಶ್ವತವಲ್ಲ. ಆದರೆ ಕ್ರಿಸ್ತರು ಪ್ರಾಧಾನ್ಯರು, ಶಕ್ತಿದಾಯಕರು. ಅವರು ನಮಗೆ ಸಹಾಯವನ್ನು ನಿರಾಕರಿಸುವುದಿಲ್ಲ. ಅವರನ್ನು ಅನುಕರಿಸಿ ಅವರ ಪ್ರೀತಿಯ ದೀವಿಗೆಯನ್ನು ಎಲ್ಲಡೆ ಪಸರಿಸೋಣ.

ಕ್ರಿಸ್ತರನ್ನು ನಂಬಿದರೆ ಅವರು ಎಂದಿಗೂ ಕೈಬಿಡುವುದಿಲ್ಲ

No comments:

Post a Comment