Tuesday, 6 August 2019

ಸಾಧಾರಣ ಕಾಲದ ಹದಿನೆಂಟನೇ ವಾರ ಶುಕ್ರವಾರ

ಸಾಧಾರಣ ಕಾಲದ ಹದಿನೆಂಟನೇ ವಾರ ಶುಕ್ರವಾರ

9/ಹಸಿರು/ಶುಕ್ರ/ಶಿಲುಬೆಯ  ಸಂತ ತೆರೇಸಾ  ಬೆನೆಡಿಕ್ಟಾ  ಕ.  (ರ.ಸಾ) - ಸ್ಮರಣೆ
1ನೇ ವಾಚನ - ಧರ್ಮೋ 4: 32-40
ಕೀರ್ತನೆ - 77: 12-13, 14-15, 16, 20
ಮತ್ತಾಯ:  16:  24-28

1ನೇ ವಾಚನ - ಧರ್ಮೋ 4: 32-40
“ದೇವರು ಮಾನವರನ್ನು ಸೃಷ್ಟಿಸಿ ಭೂಮಿಯ ಮೇಲಿರಿಸಿದ ದಿನ ಮೊದಲ್ಗೊಂಡು ಇಂದಿನವರೆಗೆ, ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನವರೆಗೆ, ಅಂಥ ಅದ್ಭುತಕಾರ್ಯ ನಡೆದದ್ದುಂಟೇ? ಅಂಥ ಸುದ್ದಿಯನ್ನಾದರೂ ಕೇಳಿದ್ದುಂಟೇ? ನೀವೇ ವಿಚಾರಿಸಿಕೊಳ್ಳಿ. ದೇವರು ಅಗ್ನಿಜ್ವಾಲೆಯೊಳಗಿಂದ ಮಾತಾಡಿದ ಸ್ವರ ಕೇಳಿಸಿತಲ್ಲವೆ? ಬೇರೆ ಯಾವ ಜನರಾದರು ದೇವರ ಸ್ವರ ಕೇಳಿ ಬದುಕಿದ್ದುಂಟೇ? ಬೇರೆ ಯಾವ ದೇವರು ತಾನೆ ಪರಿಶೋಧನೆ, ಪವಾಡ, ಮಹತ್ಕಾರ್ಯ, ಯುದ್ಧ, ಭುಜಪರಾಕ್ರಮ, ಶಿಕ್ಷಾಹಸ್ತ, ಭಯಂಕರಕಾರ್ಯ ಇವುಗಳನ್ನು ಪ್ರಯೋಗಿಸಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಕೈಯಿಂದ ತಪ್ಪಿಸಲು ಪ್ರಯತ್ನಿಸಿದ್ದಾರೆ? ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿಯಾದರೊ ಈಜಿಪ್ಟಿನಲ್ಲಿ ನಿಮ್ಮ ಪರವಾಗಿ, ಇದನ್ನೆಲ್ಲ ನಿಮ್ಮ ಕಣ್ಮುಂದೆಯೇ, ನಡೆಸಿದರಲ್ಲವೆ? ಸರ್ವೇಶ್ವರಸ್ವಾಮಿಯೊಬ್ಬರೇ ದೇವರು, ಬೇರೆ ದೇವರೇ ಇಲ್ಲವೆಂದು ನೀವು ಅರಿತುಕೊಳ್ಳುವುದಕ್ಕಾಗಿ ಇದನ್ನೆಲ್ಲಾ ನಿಮಗೆ ಮಾತ್ರ ತೋರಿಸಲಾಗಿದೆ. ನೀವು ಕಲಿತುಕೊಳ್ಳಬೇಕೆಂದೇ ಸರ್ವೇಶ್ವರ ಆಕಾಶದಿಂದ ತಮ್ಮ ಸ್ವರ ನಿಮಗೆ ಕೇಳಿಸುವಹಾಗೆ ಮಾಡಿದರು; ತಾವಿದ್ದ ಮಹಾ ಅಗ್ನಿಜ್ವಾಲೆಯನ್ನು ಭೂಮಿಯ ಮೇಲೆ ನೀವು ನೋಡುವಂತೆ ಮಾಡಿದರು; ಆ ಅಗ್ನಿಜ್ವಾಲೆಯ ಒಳಗಿಂದ ಅವರು ಆಡಿದ ಮಾತುಗಳನ್ನು ನೀವು ಕೇಳಿದಿರಿ. ನಿಮ್ಮ ಪಿತೃಗಳನ್ನು ಪ್ರೀತಿಸಿ, ತರುವಾಯ ಅವರ ಸಂತತಿಯಾದ ನಿಮ್ಮನ್ನೂ ಆರಿಸಿಕೊಂಡರು. ಈಗ ನಮಗೆ ತಿಳಿದಿರುವಂತೆ ನಿಮಗಿಂತ ದೊಡ್ಡವೂ ಬಲಿಷ್ಠವೂ ಆದ ಜನಾಂಗಗಳನ್ನು ಹೊರಡಿಸಿ ಅವರ ನಾಡಲ್ಲೆ ನಿಮ್ಮನ್ನು ಸೇರಿಸಿ, ಆ ನಾಡನ್ನು ನಿಮಗೇ ಸ್ವಂತ ನಾಡನ್ನಾಗಿ ಕೊಡಲು ಸಂಕಲ್ಪಿಸಿದ್ದಾರೆ. ತಾವೇ ನಿಮ್ಮೊಂದಿಗಿದ್ದು, ತಮ್ಮ ಅಪಾರ ಸಾಮಥ್ರ್ಯದಿಂದ ನಿಮ್ಮನ್ನು ಈಜಿಪ್ಟ್ ದೇಶದಿಂದ ಕರೆದುತಂದಿದ್ದಾರೆ. ನೀವು ಇದನ್ನೆಲ್ಲಾ ಆಲೋಚಿಸಿ, ಮೇಲೆ ಆಕಾಶದಲ್ಲಾಗಲಿ, ಕೆಳಗೆ ಭೂಮಿಯಲ್ಲಾಗಲಿ ಸರ್ವೇಶ್ವರಸ್ವಾಮಿ ಒಬ್ಬರೇ ದೇವರು, ಬೇರೆಯಾದ ದೇವರೂ ಇಲ್ಲವೆಂಬುದನ್ನು ಈಗ ಗ್ರಹಿಸಿಕೊಂಡು ಜ್ಞಾಪಕದಲ್ಲಿ ಇಡಬೇಕು. ನಾನು ಇಂದು ನಿಮಗೆ ತಿಳಿಸಿದ ಅವರ ಆಜ್ಞಾವಿಧಿಗಳನ್ನು ಅನುಸರಿಸಿ ನಡೆಯಿರಿ. ಆಗ ನಿಮಗೂ ನಿಮ್ಮ ಸಂತತಿಗೂ ಶುಭವುಂಟಾಗುವುದು; ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಶಾಶ್ವತವಾಗಿ ಕೊಡುವ ನಾಡಿನಲ್ಲಿ ನೀವು ದೀರ್ಘಕಾಲ ಬಾಳುವಿರಿ.”

ಕೀರ್ತನೆ - 77: 12-13, 14-15, 16, 20
12 : ಧ್ಯಾನಿಸುವೆ ನಾನಿನ್ನ ಕಾರ್ಯಗಳನೆಲ್ಲ / ಮಾಡುವೆ ಮನನ ನಿನ್ನ ಪವಾಡಗಳನೆಲ್ಲ //
13 : ನಿನ್ನ ಮಾರ್ಗ ದೇವಾ, ಪರಿಶುದ್ಧವಾದುದಯ್ಯಾ / ನಮ್ಮ ದೇವರಂತಹ ಮಹಾ ದೇವರಾರಯ್ಯಾ?//
14 : ಅದ್ಭುತಗಳನು ನಡೆಸುವಂತಹ ದೇವ ನೀನೆಮಗೆ / ತೋರ್ಪಡಿಸಿದೆ ನಿನ್ನಾ ಪರಾಕ್ರಮವನು ಜನತೆಗೆ //
15 : ನಿನ್ನ ಭುಜಬಲದಿಂದ ಯಕೋಬ, ಜೋಸೆಫ್ ವಂಶಜರನು / ಉದ್ಧಾರ ಮಾಡಿದೆ ನಿನ್ನ ಪ್ರಜೆಗಳಾಗಿಹ ಆ ಜನರನು //
16 : ಜಲರಾಶಿಗಳು ದೇವಾ, ನಿನ್ನ ಕಂಡವು / ಕಾಣುತ್ತಲೇ ನಡುಗಿ ತಳಮಳಗೊಂಡವು / ತಳದವರೆಗೂ ಅಲ್ಲಕಲ್ಲೋಲವಾದವು //
20 : ಕುರುಬನು ತನ್ನ ಕುರಿಮಂದೆಯನು ಕರೆದೊಯ್ಯುವಂತೆ / ಮೋಶೆ, ಆರೋನರಿಂದ ನಿನ್ನ ಪ್ರಜೆಗಳನು ನಡೆಸಿದೆ //

ಮತ್ತಾಯ:  16:  24-28
ಅನಂತರ ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು. ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು? ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು. ಇಲ್ಲಿರುವವರಲ್ಲಿ ಕೆಲವರು ನರಪುತ್ರನು ತನ್ನ ಸಾಮ್ರಾಜ್ಯದಲ್ಲಿ ಪ್ರತ್ಯಕ್ಷನಾಗುವುದನ್ನು ಕಾಣುವುದಕ್ಕೆ ಮುನ್ನ ಸಾವನ್ನು ಸವಿಯುವುದಿಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು.

ಚಿಂತನೆ :
ಧ್ಯಾನಿಸುವೆ ನಾ ನಿನ್ನ ಕಾರ್ಯಗಳನ್ನೆಲ್ಲ
ಮಾಡುವೆ ಮನನ ನಿನ್ನ ಪವಾಡಗಳನ್ನೆಲ್ಲ
ದೇವರು ಇಸ್ರಯೇಲ್ ಜನತೆಯನ್ನು ಬಹಳವಾಗಿ ಪ್ರೀತಿಸುತ್ತಾರೆ. ಮರಳುಗಾಡಿನಲ್ಲಿ ೪೦ವರ್ಷಗಳ ಕಾಲ ತಮ್ಮ ಜನರ ಜೊತೆಗಿದ್ದು, ಅವರನ್ನು ವಾಗ್ದಾನ ಮಾಡಿದ ಹಾಲುಜೇನಿನ ನಾಡಾದ ಕಾನಾನ್ ನಾಡಿಗೆ ನಡೆಸುತ್ತಾರೆ. ಈ ನಾಡನ್ನು ಪ್ರವೇಶಿಸುವುದಕ್ಕೆ ಮುಂಚೆ ಮೋಶೆ ತನ್ನ ಇಸ್ರಯೇಲ್ ಜನರಿಗೆ ಮನಮುಟ್ಟುವ ಸಂದೇಶ ನೀಡುತ್ತಾರೆ. ಇಲ್ಲಿ ೩ ಮುಖ್ಯಾಂಶಗಳನ್ನು ಗಮನಿಸಬಹುದು. 

೧. ದೇವರು ಇಸ್ರಯೇಲರಿಗೆ ಕಳೆದ ೪೦ ವರ್ಷಗಳಲ್ಲಿ ಮಾಡಿದ ಮಹತ್ಕಾರ್ಯಗಳನ್ನು ಮೋಶೆ ನೆನಪಿಗೆ ತರುತ್ತಾನೆ. ಈ ಕಾರಣ ಅವರು ಕೃತಜ್ಞರಾಗಿ ಬಾಳಬೇಕು. ದೇವರಿಗೆ ಪ್ರಾಮಾಣಿಕರಾಗಿ ನಡೆದುಕೊಳ್ಳಬೇಕು. 
೨. ಸರ್ವೇಶ್ವರ ಸ್ವಾಮಿಯೊಬ್ಬರನ್ನೇ ಅವರು ಆರಾಧಿಸಬೇಕು; ಅವರೊಬ್ಬರಿಗೇ ಶರಣರಾಗಿ ನಡೆದುಕೊಳ್ಳಬೇಕು. ಆಗ ಅವರ ಬಾಳು ಬೆಳಕಾಗುವುದು. ಕಾನಾನ್ ನಾಡಿನಲ್ಲಿ ಅವರ ಜೀವನ ಸುಗಮವಾಗುವುದು.
೩. ದೇವರೊಡನೆ ಮಾಡಿದ ಒಡಂಬಡಿಕೆಯ ಅರ್ಥವನ್ನು ವಿವರಿಸುತ್ತಾ, ಅದರ ನಿಬಂಧನೆಗಳನ್ನು ಪ್ರಾಮಾಣಿಕವಾಗಿ ಪರಿಪಾಲಿಸುವುದರ ಅವಶ್ಯಕತೆಯನ್ನು ಮೋಶೆ ಪರಿಚಯ ಮಾಡಿಕೊಡುತ್ತಾನೆ.

ಇಸ್ರಯೇಲರಿಗೆ ಸರ್ವೇಶ್ವರ ಸ್ವಾಮಿಯೊಬ್ಬರೇ ದೇವರು. ಮೇಲೆ ಆಕಾಶದಲ್ಲಾಗಲಿ ಕೆಳಗೆ ಭೂಮಿಯಲ್ಲಾಗಲಿ ಬೇರೆ ಯಾವ ದೇವರೂ ಅವರಿಗಿಲ್ಲ. ಸರ್ವೇಶ್ವರ ಸ್ವಾಮಿಗೇ  ಅವರ ಜೀವನದಲ್ಲಿ ಪ್ರಾಶಸ್ತ್ಯ .

ಇಂದಿನ ಶುಭಸಂದೇಶದಲ್ಲಿ, ಯೇಸುಸ್ವಾಮಿ ತಮ್ಮ ಶಿಷ್ಯರು, ಜೀವನದಲ್ಲಿ ಮೊದಲ ಪ್ರಾಶಸ್ತ್ಯ ಯಾವುದಕ್ಕೆ ನೀಡಬೇಕೆಂದು ತಿಳಿಸುತ್ತಾರೆ. ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ಎನ್ನುತ್ತಾರೆ ಯೇಸು ಸ್ವಾಮಿ. ಹೊಲಗದ್ದೆ, ಆಸ್ತಿಪಾಸ್ತಿ, ಮನೆಮಠಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿರುವ ತನಕ ನಾವು ಯೇಸುವಿನ ನಿಜ ಶಿಷ್ಯರಾಗಲಾರೆವು. ಆದರೆ ಇವೆಲ್ಲವುಗಳನ್ನು ಮೀರಿ ಯೇಸುವಿಗೆ ನಾವು ನಮ್ಮ ಜೀವನದಲ್ಲಿ ಮೊದಲ ಸ್ಥಾನ ನೀಡಿದಾಗ ಸಂಪೂರ್ಣ ಸಂತೃಪ್ತಿ ಹಾಗೂ ಜೀವನದ ಸಫಲತೆ ಲಭಿಸುತ್ತದೆ. ಬದುಕು ಸಾರ್ಥಕವಾಗುತ್ತದೆ. 

ಹಾಗಾದರೆ, ನಮ್ಮ ದೈನಂದಿನ ಕೆಲಸಕಾರ್ಯಗಳ ಮೂಲಕ, ವರದಾನ ಪ್ರತಿಭೆಗಳ ಮೂಲಕ, ನಮ್ಮ ಜೀವನವನ್ನೇ ಸಂಪೂರ್ಣವಾಗಿ ಪ್ರಭುವಿನ ಪಾದಾರವಿಂದಗಳಿಗೆ ಸಮರ್ಪಿಸಿ, ಯೇಸುವನ್ನೇ ನಮ್ಮ ಜೀವನದ ಏಕೈಕ ನಾಯಕನಾಗಿ ಸ್ವೀಕರಿಸೋಣವೇ? ಆಗ ಸಂತ ಪೌಲರ ಮಾತುಗಳಲ್ಲಿ  ನಾವು ನುಡಿಯಬಹುದು: ನಿಶ್ಚಯವಾಗಿ ನನ್ನ ಪ್ರಭು ಯೇಸುಕ್ರಿಸ್ತರನ್ನು ಅರಿಯುವುದೇ ಉತ್ಕೃಷ್ಟವಾದುದೆಂದು ಮನದಟ್ಟಾಗಿ ಇರುವುದರಿಂದ ಸಮಸ್ತವನ್ನು ವ್ಯರ್ಥವೆಂದೇ ಎಣಿಸುತ್ತೇನೆ. ಅವರನ್ನು ಲಭ್ಯವಾಗಿಸುವ ಸಲುವಾಗಿ ಎಲ್ಲವನ್ನು ತೊರೆದುಬಿಟ್ಟಿದ್ದೇನೆ. ಎಲ್ಲವನ್ನೂ ರಸವೆಂದೇ ಪರಿಗಣಿಸುತ್ತೇನೆ.

ನಾವು ಏನನ್ನು ಪ್ರೀತಿಸುತ್ತೇವೆಯೋ ಆದುರಿಂದಲೇ ರೂಪಿತಗೊಳ್ಳುತ್ತೇವೆ

-ಗಯಾಟೆ

No comments:

Post a Comment