Monday, 19 August 2019

ಸಾಧರಣ ಕಾಲದ ಇಪ್ಪತ್ತನೆಯ ವಾರ - ಗುರುವಾರ

22/ ಬಿಳಿ/   ಗುರು /ಇಹಪರಗಳ ರಾಣಿಪರಿಶುದ್ಧ ಕನ್ಯಾಮರಿಯಮ್ಮ (ಸ್ಮರಣೆ)
1ನೇ ವಾಚನ - ನ್ಯಾಯಸ್ಥಾಪಕರು 11:29-39  (ಯೆಶಾಯ 9: 2-7)
ಕೀರ್ತನೆ - 40:5, 7-8, 8-9,10   (113: 1-8)

ಶುಭಸಂದೇಶ -  ಮತ್ತಾಯ 22:1-14   (ಲೂಕ 1: 26-38)
1ನೇ ವಾಚನ - ನ್ಯಾಯಸ್ಥಾಪಕರು 11:29-39

29 : ಆಗ ಸರ್ವೇಶ್ವರನ ಆತ್ಮ ಯೆಪ್ತಾಹನ ಮೇಲೆ ಬಂದಿತು. ಅವನು ಗಿಲ್ಯಾದ್‍ಪ್ರಾಂತ್ಯ, ಮನಸ್ಸೆಯ ನಾಡು, ಇವುಗಳಲ್ಲಿ ಸಂಚರಿಸಿ ಮತ್ತೆ ಗಿಲ್ಯಾದಿನ ಮಿಚ್ಫೆಗೆ ಬಂದು ಅಲ್ಲಿಂದ ಅಮ್ಮೋನಿಯರ ಮೇಲೆ ಯುದ್ಧಕ್ಕೆ ಹೋದನು.
30 : ಇದಲ್ಲದೆ ಅವನು ಸರ್ವೇಶ್ವರಸ್ವಾಮಿಗೆ, “ತಾವು ಅಮ್ಮೋನಿಯರನ್ನು ನನ್ನ ಕೈಗೆ ಒಪ್ಪಿಸುವುದಾದರೆ
31 : ನಾನು ಸುರಕ್ಷಿತವಾಗಿ ಹಿಂದಿರುಗುವಾಗ ನನ್ನ ಮನೆಯ ಬಾಗಿಲಿನಿಂದ ನನ್ನನ್ನು ಎದುರುಗೊಳ್ಳಲು ಮೊದಲು ಬರುವಂಥ ಪ್ರಾಣಿ ತಮಗೆ ವಿೂಸಲು ಎಂದೂ ಅದನ್ನು ತಮಗೆ ದಹನಬಲಿದಾನ ಮಾಡುವೆನು” ಎಂದೂ ಹರಕೆಮಾಡಿದನು.
32 : ಯೆಪ್ತಾಹನು ನದಿಯನ್ನು ದಾಟಿ ಅಮ್ಮೋನಿಯರಿಗೆ ವಿರುದ್ಧ ಯುದ್ಧಕ್ಕೆ ಹೋಗಲು ಅವರನ್ನು ಸರ್ವೇಶ್ವರ ಅವನ ಕೈಗೆ ಒಪ್ಪಿಸಿದರು.
33 : ಅವನು ಅವರನ್ನು ಸೋಲಿಸಿ ಅರೋಯೇರಿನಿಂದ ಮಿನ್ನೀತಿನ ದಾರಿಯವರೆಗೂ ಅಬೇಲ್ ಕೆರಾವಿೂಮಿನವರೆಗೂ ಇಪ್ಪತ್ತು ಪಟ್ಟಣಗಳನ್ನು ಹಾಳು ಮಾಡಿದನು. ಹೀಗೆ ದೊಡ್ಡ ಜಯವಾಗಿ, ಅಮ್ಮೋನಿಯರು ಇಸ್ರಯೇಲರಿಗೆ ಶರಣಾದರು.
34 : ಯೆಪ್ತಾಯನ ಮಿಚ್ಫೆಯಲ್ಲಿದ್ದ ತನ್ನ ಮನೆಯನ್ನು ಸವಿೂಪಿಸಿದಾಗ ಅವನ ಮಗಳು ದಮ್ಮಡಿ ಬಡಿಯುತ್ತಾ ನಾಟ್ಯವಾಡುತ್ತಾ ಅವನನ್ನು ಎದುರುಗೊಳ್ಳುವುದಕ್ಕಾಗಿ ಬಂದಳು. ಆಕೆ ಅವನ ಒಬ್ಬಳೇ ಮಗಳು. ಆಕೆಯ ಹೊರತು ಅವನಿಗೆ ಬೇರೆ ಗಂಡುಹೆಣ್ಣು ಮಕ್ಕಳೇ ಇರಲಿಲ್ಲ.
35 : ಆಕೆಯನ್ನು ಕಾಣುತ್ತಲೆ ಅವನು ದುಃಖತಾಳಲು ಆಗದೆ ಬಟ್ಟೆಯನ್ನು ಹರಿದುಕೊಂಡು, “ಅಯ್ಯೋ ನನ್ನ ಮಗಳೇ, ನೀನು ನನ್ನನ್ನು ಎಂಥಾ ಯಾತನೆಗೆ ಈಡುಮಾಡಿದೆ; ನನಗೆ ಮಹಾ ಸಂಕಟವನ್ನುಂಟುಮಾಡಿದೆ! ನಾನು ಬಾಯಾರೆ ಸರ್ವೇಶ್ವರನಿಗೆ ಹರಕೆಮಾಡಿದ್ದೇನೆ; ಅದಕ್ಕೆ ಹಿಂದೆಗೆಯಲಾಗದು,” ಎಂದು ಕೂಗಿಕೊಂಡನು.
36 : ಆಕೆ ಅವನಿಗೆ, “ಅಪ್ಪಾ, ನೀನು ಬಾಯಾರೆ ಸರ್ವೇಶ್ವರನಿಗೆ ಹರಕೆ ಮಾಡಿದ ಮೇಲೆ ಅವರು ನಿನ್ನ ಶತ್ರುಗಳಾದ ಅಮ್ಮೋನಿಯರಿಗೆ ಮುಯ್ಯಿತೀರಿಸಿದ್ದಾರೆ. ಆದ್ದರಿಂದ ನಿನ್ನ ಬಾಯಿಂದ ಬಂದದ್ದನ್ನೇ ನೆರವೇರಿಸು,” ಎಂದಳು.
37 : ಆಕೆ ಪುನಃ ತನ್ನ ತಂದೆಗೆ, “ನನ್ನ ಬಿನ್ನಹವನ್ನು ಆಲಿಸು; ಎರಡು ತಿಂಗಳುಗಳವರೆಗೆ ನನ್ನನ್ನು ಬಿಡು. ನಾನು ನನ್ನ ಗೆಳತಿಯರೊಡನೆ ಗುಡ್ಡ ಪ್ರದೇಶಗಳಿಗೆ ಹೋಗಿ ನನ್ನ ಕನ್ಯಾವಸ್ಥೆಗಾಗಿ ಗೋಳಾಡುವೆನು,” ಎಂದಳು. ಅವನು, “ಎರಡು ತಿಂಗಳ ತನಕ ಹೋಗಿ ಬಾ,” ಎಂದು ಹೇಳಿ ಕಳುಹಿಸಿದನು.
38 : ಆಕೆ ಸಖಿಯರ ಸಹಿತ ಗುಡ್ಡ ಪ್ರದೇಶಗಳಿಗೆ ಹೋಗಿ ತನ್ನ ಕನ್ಯಾವಸ್ಥೆಗಾಗಿ ಗೋಳಾಡಿದಳು.
39 : ಎರಡು ತಿಂಗಳು ಕಳೆದ ನಂತರ ಆಕೆ ಮರಳಿ ತಂದೆಯ ಹತ್ತಿರ ಬಂದಳು. ಅವನು ತನ್ನ ಹರಕೆಯನ್ನು ತೀರಿಸಿದನು. ಆಕೆ ಕನ್ಯೆಯಾಗಿಯೇ ಸತ್ತಳು.

ಕೀರ್ತನೆ - 40:5, 7-8, 8-9,10
ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ
5 : ಪ್ರಭು, ಎನ್ನ ದೇವ, ನಿನಗೆ ಸಮಾನತೆ ಎಲ್ಲಿಯದು | ನೀನೆಸಗಿದ ಪವಾಡ ಪ್ರಯೋಜನಗಳೆನಿತು | ಅಗಣಿತವಾದವುಗಳ ವಿವರ ಅಸದಳವಾದುದು ||
6 : ಬೇಡವಾದವು ನಿನಗೆ ಯಜ್ಞಾರ್ಪಣೆ, ಬಲಿಕಾಣಿಕೆ | ಬಯಸಿಲ್ಲ ನೀ ಹೋಮವನೆ, ಪರಿಹಾರಕ ಬಲಿಯನೆ | ಶ್ರವಣಶಕ್ತಿಯನು ಅನುಗ್ರಹಿಸಿದೆ ನೀನು ನನಗೆ ||
7 : ನಾನೋಗೊಡುತ ಇಂತೆಂದೆ: “ಇಗೋ ನಾನೇ ಬರುತ್ತಿರುವೆ | ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? ||
8 : ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ | ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ”||
9 : ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ || ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ ||
10 : ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು | ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು | ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು ||

ಶುಭಸಂದೇಶ -  ಮತ್ತಾಯ 22:1-14 
1 : ಯೇಸುಸ್ವಾಮಿ ಮತ್ತೆ ಅವರೊಡನೆ ಸಾಮತಿಗಳಲ್ಲೇ ಮಾತನಾಡಿದರು: “ಸ್ವರ್ಗಸಾಮ್ರಾಜ್ಯ ಇಂತಿದೆ;
2 : ರಾಜನೊಬ್ಬ ತನ್ನ ಕುಮಾರನ ವಿವಾಹ ಮಹೋತ್ಸವವನ್ನು ಏರ್ಪಡಿಸಿದ.
3 : ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ.
4 : ಪುನಃ ಬೇರೆ ಸೇವಕರನ್ನು ಅಟ್ಟಿದ. ‘ಔತಣ ಸಿದ್ಧವಾಗಿದೆ. ಕೊಬ್ಬಿನ ಮಾಂಸದ ಅಡಿಗೆಯನ್ನು ಮಾಡಿಸಿದ್ದೇನೆ. ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ’ ಎಂದು ಆಹ್ವಾನಿತರಿಗೆ ತಿಳಿಸುವಂತೆ ಹೇಳಿ ಕಳುಹಿಸಿದ.
5 : ಆದರೂ ಆಹ್ವಾನಿತರು ಅಲಕ್ಷ್ಯ ಮಾಡಿದರು. ಒಬ್ಬ ತೋಟಕ್ಕೆ ಹೊರಟುಬಿಟ್ಟ, ಇನ್ನೊಬ್ಬ ವ್ಯಾಪಾರಕ್ಕೆ ಹೊರಟು ಹೋದ.
6 : ಉಳಿದವರು, ಕರೆಯಲು ಬಂದ ಆಳುಗಳನ್ನೇ ನಿಂದಿಸಿ, ಬಡಿದು, ಕೊಂದು ಹಾಕಿದರು.
7 : ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ. ಅವರ ಊರನ್ನು ಸುಟ್ಟುಹಾಕಿಸಿದ.
8 : ಅನಂತರ ತನ್ನ ಸೇವಕರಿಗೆ, ‘ವಿವಾಹ ಮಹೋತ್ಸವವೇನೋ ಸಿದ್ಧವಾಗಿದೆ; ಆಹ್ವಾನಿತರೋ ಅಯೋಗ್ಯರು.
9 : ನೀವು ಹೆದ್ದಾರಿಗಳಿಗೆ ಹೋಗಿ ಕಂಡ ಕಂಡವರನ್ನೆಲ್ಲಾ ಉತ್ಸವಕ್ಕೆ ಕರೆಯಿರಿ’ ಎಂದ.
10 : ಅಂತೆಯೇ ಅವರು ಹೋಗಿ ಯೋಗ್ಯರು, ಅಯೋಗ್ಯರೆನ್ನದೆ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುತಂದರು. ವಿವಾಹ ಮಂಟಪ ಅತಿಥಿಗಳಿಂದ ತುಂಬಿಹೋಯಿತು.
11 : “ಆಮೇಲೆ ರಾಜನು ಅತಿಥಿಗಳನ್ನು ನೋಡಲು ಬಂದ. ಅಲ್ಲಿ ವಿವಾಹಕ್ಕೆ ತಕ್ಕ ವಸ್ತ್ರವನ್ನು ಧರಿಸದೆ ಬಂದಿದ್ದ ಒಬ್ಬನನ್ನು ಕಂಡ.
12 : ‘ಏನಯ್ಯ, ಸಮಾರಂಭಕ್ಕೆ ತಕ್ಕ ಉಡುಪಿಲ್ಲದೆ ಒಳಗೆ ಹೇಗೆ ಬಂದೆ?’ ಎಂದು ಅವನನ್ನು ಕೇಳಿದ. ಅದಕ್ಕೆ ಅವನು ಮೌನತಳೆದ.
13 : ಆಗ ರಾಜನು ಪರಿಚಾರಕರಿಗೆ, ‘ಇವನ ಕೈಕಾಲುಗಳನ್ನು ಕಟ್ಟಿ ಹೊರಗಿನ ಕತ್ತಲೆಗೆ ದಬ್ಬಿರಿ; ಅಲ್ಲಿರುವವರೊಡನೆ ಹಲ್ಲುಕಡಿದು ಗೋಳಾಡಲಿ,’ ಎಂದು ಹೇಳಿದ.
14 : “ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ,” ಎಂದರು ಸ್ವಾಮಿ.    
ಚಿಂತನೆ
ಆಹ್ವಾನಿತರೆಲ್ಲರೂ ಅರ್ಹರಲ್ಲ
ಈ ಆಧುನಿಕ ಪ್ರಪಂಚದಲ್ಲಿ ಜನರು ಚಿಂತೆಗಳಿಂದ ಹಾಗೂ ತೊಂದರೆಗಳಿಂದ ತಮ್ಮ ಬಾಳನ್ನು ಸಾಗಿಸುತ್ತಿದ್ದಾರೆ. ಆದ್ದರಿಂದಲೇ ಅವರು ಬೇರೆಯವರ ಮೇಲೆ ಹೊಂದಿಕೊಂಡಿರುತ್ತಾರೆ. ಕೆಲವು ಸಮಯ ಅವರು ಬೇರೆಯವರಿಂದ ಮೋಸಕ್ಕೊಳಗಾಗುತ್ತಿದ್ದಾರೆ. ಎಷ್ಟೋ ಜನ ತಮ್ಮ ಜೀವನದಲ್ಲಿ ಒಂದು ತೃಪ್ತಿ ಕಾಣದೆ ತಿರುಗಾಡುತ್ತಿದ್ದಾರೆ. ಆದರೆ ಈ ಎಲ್ಲ ಅಮಿಷಗಳಿಂದ ನಮಗೆ ಬಿಡುಗಡೆಯಿದೆಯೇ| ನಾವು ಎಂದಾದರೂ ಸುಖ ಸಂತೋಷವನ್ನು ಕಾಣಲು ಸಾಧ್ಯವೇ? ಯೇಸುಕ್ರಿಸ್ತರು ನಮ್ಮ ಬಾಳಿನಲ್ಲಿದ್ದರೆ ಎಲ್ಲವೂ ಸಾಧ್ಯ.
ಇಂದಿನ ಶುಭಸಂದೇಶದಲ್ಲಿ ನಾವು ಆಹ್ವಾನಿತರು ಅಲಕ್ಷಿಸುವುದನ್ನು ನೋಡಿದ್ದೇವೆ. ಪೇತ್ರನು ಒಂದು ಘಟನೆಯಿಂದ ತಾನು ಅರ್ಹನಲ್ಲ ಎಂದು ತಿಳಿದುಕೊಂಡು ಪಾಪಗಳನ್ನು ಒಪ್ಪಿಕೊಂಡು ಆ ಯೇಸುವಿಗೆ ಮರ್‍ಯಾದೆ ಗೌರವಗಳನ್ನು ಸಲ್ಲಿಸುತ್ತಾನೆ. ಆಗ ಅವನಿಗೆ ಯೇಸುಸ್ವಾಮಿಯು ಒಬ್ಬ ಶಕ್ತಿದಾಯಕ ಮತ್ತು ಪವಿತ್ರರು ಎಂದು ತಿಳಿಯುತ್ತದೆ. ಆದ್ದರಿಂದಲೇ ಪೇತ್ರನು ಸ್ವಾಮಿ, ನಾನು ಪಾಪಾತ್ಮ, ನನ್ನಿಂದ ದೂರವಿರಿ ಎಂದು ಹೇಳುತ್ತಾನೆ. ಆದರೆ ಯೇಸು ಅವರನ್ನು ಅಗಲಿ ಬಿಡಲಿಲ್ಲ. ಬದಲಿಗೆ ತನ್ನನ್ನು ಹಿಂಬಾಲಿಸುವಂತೆ ಹೇಳುತ್ತಾರೆ. ಇಂದಿನ ಶುಭಸಂದೇಶದಲ್ಲಿ ಹೀಗೆ ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ ಎಂದರು ಯೇಸು.
ಆದ್ದರಿಂದ ಪ್ರೀತಿಯ ಸ್ನೇಹಿತರೇ, ನಮ್ಮಲ್ಲಿ ಯಾವುದಾದರೂ ಕಷ್ಟ ಸಂಕಟಗಳಿದ್ದರೆ ಆ ಯೇಸುವಿನಲ್ಲಿ ಪೂರ್ಣ ಮನಸ್ಸಿನಿಂದ ಒಪ್ಪಿಸೋಣ. ಅವರು ನಮಗೆ ರಕ್ಷಣೆ ಮತ್ತು ಮಾರ್ಗದರ್ಶನವನ್ನು ಕೊಡುತ್ತಾರೆ. ಹಾಗೆಯೇ ಅವರು ತಮ್ಮ ಶುಭವಾರ್ತೆಯನ್ನು ಪರರಿಗೆ ಸಾರಲು ಆರಿಸಿಕೊಳ್ಳುತ್ತಾರೆ. ಅದಕ್ಕೆ ನಾವು ತಯಾರಿದ್ದೇವೆಯೇ?

ಯಾರು ತನ್ನ ಪಾಪಗಳನ್ನು ಒಪ್ಪಿಕೊಳ್ಳುತ್ತಾನೋ ಅವನು ಜೀವನದಲ್ಲಿ ಗಣ್ಯವ್ಯಕ್ತಿ ಎನಿಸಿಕೊಳ್ಳುತ್ತಾನೆ
----------
ಇಹಪರಗಳ ರಾಣಿಪರಿಶುದ್ಧ ಕನ್ಯಾಮರಿಯಮ್ಮ (ಸ್ಮರಣೆ)
"ಇಗೋ ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ, ಆತನು ಮಹಾ ಪುರುಷನಾಗುವನು. ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗ ನೀಡುವರು" (ಲೂಕ ೧:೩೨-೩೩). ಮೇಲಿನ ಸಾಲುಗಳು ಯೇಸು  ದಾವೀದರಸನ ಮನೆತನಕ್ಕೆ ಸೇರಿದ್ದವರು ಎಂದು ಸೂಚಿಸುತ್ತದೆ. ಹಾಗಾಗಿ ಮಾತೆ ಮರಿಯಳು  ಈ ವಿಶಿಷ್ಟ ಸೌಭಾಗ್ಯ ಪಡೆದುಕೊಂಡರು. ಸಂತ ಅಥನಾಸಿಯರ ಪ್ರಕಾರ ಮಗನು  ಅರಸನಾಗಿದ್ದರೆ ಆ ಮಗನನ್ನು ಹೆತ್ತ ತಾಯಿಯೂ ರಾಣಿ ಆಗಿರುತ್ತಾಳೆ. "ದಿವ್ಯವಾಣಿಗೆ ತಾಯಿಯಾಗುವ ಸಮ್ಮತಿಯನ್ನು ಬಹಿರಂಗಪಡಿಸಿದ ಆ ಕ್ಷಣದಿಂದಲೇ ಮರಿಯಳು ಪ್ರಪಂಚದ ಮತ್ತು ಸೃಷ್ಟಿಯ ರಾಣಿಯಾದಳು" ಎಂದು ಸಂತ ಬೆರ್ನಾರ್ಡಿನ್ ತಿಳಿಸುತ್ತಾರೆ.

No comments:

Post a Comment