Monday, 19 August 2019

ಸಾಧರಾಣ ಕಾಲದ ಇಪ್ಪತ್ತನೇ ವಾರ - ಬುಧವಾರ

21 ಬಿಳಿ   ಬುಧ   ಸಂತ ಹತ್ತನೇ ಭಕ್ತನಾಥರು  (ಜಗ) (ಸ್ಮರಣೆ)      
1ನೇ  ವಾಚನ  -  ನ್ಯಾಯ        96-15  
ಕೀರ್ತನೆ  -  211-23-45-6           

ಶುಭಸಂದೇಶ - ಮತ್ತಾಯ 2೦: 1-16      

1ನೇ  ವಾಚನ  -  ನ್ಯಾಯ        9:  6-15  
6 : ತರುವಾಯ ಎಲ್ಲಾ ಶೆಕೆಮಿನವರೂ ಹಾಗು ಮಿಲ್ಲೋ ಕೋಟೆಯವರೂ ಶೆಕೆಮಿನ ಬಳಿಯಲ್ಲಿ ಸ್ಮಾರಕ ಸ್ತಂಭವಿರುವ ಓಕ್‍ಮರದ ಹತ್ತಿರ ಕೂಡಿ ಬಂದು ಅಬೀಮೆಲೆಕನನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರು.
7 : : “ಶೆಕೆಮಿನ ಜನರೇ, ನನ್ನ ಮಾತಿಗೆ ಕಿವಿಗೊಡಿ; ಆಗ ದೇವರೂ ನಿಮ್ಮ ಮೊರೆಗೆ ಕಿವಿಗೊಡುವರುಯೋತಾಮನ ಸಾಮತಿ ಯೋತಾಮನು ಇದನ್ನು ಕೇಳಿ, ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತು ಗಟ್ಟಿಯಾದ ಧ್ವನಿಯಿಂದ ಹೀಗೆಂದನು:
8 : “ಒಮ್ಮೆ ಮರಗಳು ತಮಗೆ ಒಬ್ಬ ಅರಸನನ್ನು ಅಭಿಷೇಕಿಸಬೇಕೆಂದು ಹೊರಟು ಓಲಿವ್ ಮರದ ಬಳಿಗೆ ಬಂದು, ‘ನೀನು ನಮಗೆ ಅರಸನಾಗು,’ ಎಂದವು.
9 : ಅದು ಅವುಗಳಿಗೆ, ‘ನನ್ನಲ್ಲಿರುವ ಎಣ್ಣೆಯಿಂದ ದೇವತೆಗಳೂ ಮಾನವರೂ ಘನತೆ ಗೌರವಗಳನ್ನು ಪಡೆಯುತ್ತಾರೆ. ಇದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?’ ಎಂದಿತು.
10 : “ಬಳಿಕ ಆ ಮರಗಳು ಅಂಜೂರದ ಗಿಡದ ಬಳಿಗೆ ಹೋಗಿ ಅದಕ್ಕೆ, ‘ನೀನು ಬಂದು ನಮ್ಮ ಅರಸನಾಗು,’ ಎಂದವು.
11 : ಅದು, ‘ನಾನು ನನ್ನ ಶ್ರೇಷ್ಠವಾದ ಸಿಹಿಹಣ್ಣು ಕೊಡುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?’ ಎಂದಿತು.
12 : “ಅನಂತರ ಆ ಮರಗಳು ದ್ರಾಕ್ಷಾಬಳ್ಳಿಯ ಬಳಿಗೆ ಹೋಗಿ, ‘ನೀನು ಬಂದು ನಮ್ಮ ಅರಸನಾಗು,’ ಎಂದವು.
13 : ಅದಕ್ಕೆ ಆ ಬಳ್ಳಿ, ‘ನಾನು ನನ್ನ ರಸದಿಂದ ದೇವತೆಗಳಿಗೂ ಮಾನವರಿಗೂ ಆನಂದ ತರುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?’ ಎಂದಿತು.
14 : “ಕಡೆಗೆ ಆ ಮರಗಳು ಮುಳ್ಳು ಪೊದೆಯ ಬಳಿಗೆ ಹೋಗಿ, ‘ನೀನು ಬಂದು ನಮ್ಮ ಅರಸನಾಗು,’ ಎಂದವು.
15 : ಅದಕ್ಕೆ ಆ ಪೊದೆ, ‘ನೀವು ನಿಜವಾದ ಮನಸ್ಸಿನಿಂದ ನನಗೆ ರಾಜ್ಯಾಭಿಷೇಕ ಮಾಡಬೇಕೆಂದಿರುವುದಾದರೆ, ಬನ್ನಿ, ಬಂದು ನನ್ನ ನೆರಳಲ್ಲಿ ಆಶ್ರಯಿಸಿಕೊಳ್ಳಿ; ಇಲ್ಲವಾದರೆ ನನ್ನಿಂದ ಬೆಂಕಿಹೊರಟು ಲೆಬನೋನಿನ ದೇವದಾರುವೃಕ್ಷಗಳನ್ನು ಸುಟ್ಟುಬಿಡುವುದು,’ ಎಂದುಬಿಟ್ಟಿತು.

ಕೀರ್ತನೆ  -  21:  1-2,  3-4,  5-6  
ಅರಸಗೆ ಹರ್ಷವಾಯಿತು ಪ್ರಭು, ನೀ ತೋರಿದ ಪರಾಕ್ರಮಕ್ಕಾಗಿ  
1 : ಅರಸಗೆ ಹರ್ಷವಾಯಿತು ಪ್ರಭು, ನೀ ತೋರಿದ ಪರಾಕ್ರಮಕ್ಕಾಗಿ / ಪರಮಾನಂದಗೊಂಡನವನು, ನೀನಿತ್ತ ವಿಜಯೋತ್ಸವಕ್ಕಾಗಿ //
2 : ಆತನ ಮನದಾಸೆಯನು ನೀ ಪೂರೈಸಿದೆ / ಆತನಧರ ಬಯಕೆಯನು ಅನುಗ್ರಹಿಸಿದೆ //
3 : ನೀನಾತನನು ಸ್ವಾಗತಿಸಿದೆ ಶುಭಾಶಯ ದೊಂದಿಗೆ / ಚಿನ್ನದ ಕಿರೀಟವನು ಮುಡಿಸಿದೆ ಆತನ ಶಿರಸ್ಸಿಗೆ //
4 : ಕೋರಿದನಾತನು ಜೀವಮಾನಕಾಲವನು / ನೀನಿತ್ತೆ ಯುಗಯುಗಾಂತರ ದಾಯುಷ್ಯವನು //
5 : ನಿನ್ನ ನೆರವಿಂದೇರಿತು ಆತನ ಘನತೆ / ಶೋಭೆ, ಪ್ರಭಾವಗಳ ನೀನವನಿಗಿತ್ತೆ //
6 : ಅಮರ ಭಾಗ್ಯಗಳನು ನೀನನುಗ್ರಹಿಸಿದೆ / ಶ್ರೀಸನ್ನಿಧಿಯಲಾತನನು ತೋಷಗೊಳಿಸಿದೆ //
7 : ಅರಸನಿಗಿದೆ ಭರವಸೆ ಪ್ರಭುವಿನಲಿ / ಅವನಚಲನು, ಪರಾತ್ಪರನ ಕೃಪೆಯಲಿ //

ಶುಭಸಂದೇಶ - ಮತ್ತಾಯ 2೦1-16 
1 : “ಸ್ವರ್ಗ ಸಾಮ್ರಾಜ್ಯವು ಹೀಗಿದೆ: ಒಬ್ಬ ಯಜಮಾನನಿಗೆ ಒಂದು ದ್ರಾಕ್ಷಿ ತೋಟವಿತ್ತು. ಅದರಲ್ಲಿ ಕೆಲಸ ಮಾಡುವುದಕ್ಕೆ ಕೂಲಿಗಾರರನ್ನು ಗೊತ್ತುಮಾಡಲು ಅವನು ಬೆಳಗಿನ ಜಾವದಲ್ಲೇ ಹೊರಟ.
2 : ಆಳಿಗೆ ಒಂದು ಬೆಳ್ಳಿ ನಾಣ್ಯದಂತೆ ದಿನಕೂಲಿಯನ್ನು ಮಾತಾಡಿ ತೋಟಕ್ಕೆ ಕಳುಹಿಸಿದ.
3 : ಸುಮಾರು ಬೆಳಿಗ್ಗೆ ಒಂಭತ್ತು ಗಂಟೆಗೆ ಅವನು ಪುನಃ ಸಂತೆಬೀದಿಯ ಕಡೆ ಹೋದ. ಕೆಲಸವಿಲ್ಲದೆ ಸುಮ್ಮನೆ ನಿಂತುಕೊಂಡಿದ್ದ ಕೆಲವು ಕೂಲಿಗಾರರನ್ನು ಅಲ್ಲಿ ಕಂಡ.
4 : ’ನೀವೂ ನನ್ನ ದ್ರಾಕ್ಷಿತೋಟಕ್ಕೆ ಹೋಗಿರಿ; ನ್ಯಾಯವಾದ ಕೂಲಿಯನ್ನು ನಿಮಗೆ ಕೊಡುತ್ತೇನೆ,’ ಎಂದ. ಅವರೂ ಹೋದರು.
5 : ಬಳಿಕ ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಹೋಗಿ ಇನ್ನೂ ಕೆಲವರನ್ನು ಕೆಲಸಕ್ಕೆ ಕಳುಹಿಸಿದ.
6 : ಐದು ಗಂಟೆಗೆ ಹೋದಾಗಲೂ ಬೇರೆ ಕೆಲವರು ಅಲ್ಲಿ ನಿಂತಿರುವುದನ್ನು ಕಂಡು, ‘ದಿನವಿಡೀ ಕೆಲಸ ಮಾಡದೆ ಸುಮ್ಮನೆ ಇಲ್ಲಿ ನಿಂತಿದ್ದೀರಲ್ಲಾ, ಏಕೆ?’ ಎಂದು ಕೇಳಿದ.
7 : ಅದಕ್ಕೆ ಅವರು, ‘ನಮ್ಮನ್ನು ಯಾರೂ ಕೂಲಿಗೆ ಕರೆಯಲಿಲ್ಲ,’ ಎಂದರು. ‘ಹಾಗಾದರೆ ನೀವೂ ಕೂಡ ನನ್ನ ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸಮಾಡಿ,’ ಎಂದು ಹೇಳಿ ಅವರನ್ನೂ ಕಳುಹಿಸಿದ.
8 : “ಸಂಜೆಯಾಯಿತು. ತೋಟದ ಯಜಮಾನ ತನ್ನ ಮೇಸ್ತ್ರಿಗೆ, ‘ಕೂಲಿಯಾಳುಗಳನ್ನು ಕರೆದು, ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿಕೊಡು,’ ಎಂದ.
9 : ಅದರಂತೆ ಐದು ಗಂಟೆಗೆ ಗೊತ್ತುಮಾಡಿದವರು ಬಂದಾಗ ಒಬ್ಬೊಬ್ಬನಿಗೆ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.
10 : ಮೊತ್ತಮೊದಲು ಗೊತ್ತುಮಾಡಿದವರು ತಮ್ಮ ಸರದಿ ಬಂದಾಗ, ತಮಗೆ ಹೆಚ್ಚು ಸಿಗುವುದೆಂದು ಭಾವಿಸಿದರು. ಆದರೆ ಅವರಿಗೂ ಒಂದೊಂದೇ ಬೆಳ್ಳಿನಾಣ್ಯ ದೊರಕಿತು.
11 : ಅದನ್ನು ತೆಗೆದುಕೊಂಡಾಗ ಅವರು ದಣಿಯ ವಿರುದ್ಧ ಗೊಣಗಲಾರಂಭಿಸಿದರು.
12 : ‘ಕಡೇ ಹೊತ್ತಿನಲ್ಲಿ ಬಂದ ಇವರು ಒಂದೇ ಒಂದು ಗಂಟೆ ಕೆಲಸಮಾಡಿದ್ದಾರೆ; ಬಿಸಿಲಲ್ಲಿ ಬೆಂದು, ದಿನವೆಲ್ಲಾ ದುಡಿದ ನಮ್ಮನ್ನು ಇವರಿಗೆ ಸರಿಸಮ ಮಾಡಿದ್ದೀರಲ್ಲಾ!’ ಎಂದರು.
13 : ಅದಕ್ಕೆ ಯಜಮಾನ ಅವರಲ್ಲಿ ಒಬ್ಬನಿಗೆ, ‘ಅಯ್ಯಾ, ನಿನಗೆ ನಾನು ಅನ್ಯಾಯ ಮಾಡಿಲ್ಲ. ದಿನಕ್ಕೊಂದು ಬೆಳ್ಳಿನಾಣ್ಯದಂತೆ ನೀನು ನನ್ನೊಡನೆ ಒಪ್ಪಂದ ಮಾಡಿಕೊಳ್ಳಲಿಲ್ಲವೆ?
14 : ನಿನ್ನ ಕೂಲಿ ಏನೋ ಅದನ್ನು ತೆಗೆದುಕೊಂಡು ಹೋಗು. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ.
15 : ನನ್ನದನ್ನು ನನ್ನಿಷ್ಟಾನುಸಾರ ಕೊಡುವ ಹಕ್ಕು ನನಗಿಲ್ಲವೆ? ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?’ ಎಂದ.
16 : ಹೀಗೆ, ಕಡೆಯವರು ಮೊದಲಿನವರಾಗುವರು; ಮೊದಲಿನವರು ಕಡೆಯವರಾಗುವರು,” ಎಂದು ಯೇಸು ಬೋಧಿಸಿದರು.

ಚಿಂತನೆ
ಉದಾರ ಮನದ ಮಾಲಿಕ

ಜನರೆಲ್ಲರಿಗೂ ಪರಮಾನಂದವನ್ನು ತರುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ ಇಂದೇ ದಾವೀದನ ಊರಿನಲ್ಲಿ ನಿಮಗೋಸ್ಕರ ಉದ್ಧಾರಕ ಜನಿಸಿದ್ದಾರೆ. ಅವರೇ ಪ್ರಭುಕ್ರಿಸ್ತ; ಈ ಮಾತುಗಳಿಂದ ದೇವದೂತರು ದೇವರ ಉದಾರತೆಯನ್ನು ವಿಶ್ವಕ್ಕೆ ಸಾರಿದರು. ಆದರೆ ಎಷ್ಟು ಮಂದಿ ಈ ಶುಭಸಂದೇಶಕ್ಕೆ ಕಿವಿಗೊಟ್ಟು, ಇದರಿಂದ ಪ್ರಭಾವಿತರಾಗಿ ಲೋಕೋದ್ಧಾರಕರಾದ ಪ್ರಭು ಯೇಸು ಕ್ರಿಸ್ತರ ಬಳಿ ಸಾಗಿದರು? ಈ ಪ್ರಶ್ನೆಗೆ ಉತ್ತರವು ಸುಲಭ ಸಾಧ್ಯವಲ್ಲ. ಈ ಇಪ್ಪತ್ತು ಶತಮಾನಗಳಲ್ಲಿ ಕೋಟ್ಯಾನುಕೋಟಿ ಮಂದಿ ಶುಭಸಂದೇಶವನ್ನು ಆಲಿಸಿ, ಧ್ಯಾನಿಸಿ, ವಿಶ್ವಾಸಿಸಿ, ಪ್ರಭು ಯೇಸುಕ್ರಿಸ್ತರನ್ನು ಅನುಸರಿಸಿದ್ದಾರೆ. ಇಂದು ಕೋಟ್ಯಾನುಕೋಟಿ ಮಂದಿಯು ಸಹ ಅನುಸರಿಸುತ್ತಾ ಇದ್ದಾರೆ. ಆದರೆ ಈ ಶುಭಸಂದೇಶವು ವಿಶ್ವದಲ್ಲಿ ಮಾರ್ದನಿಗೊಳ್ಳುತ್ತಲೇ ಇರಬೇಕು. ಏಕೆಂದರೆ ಈ ಶುಭ ಸಂದೇಶವನ್ನು ಪಡೆಯದೆ ಇರುವವರು ಇಂದು ಅನೇಕರು ಇದ್ದಾರೆ. ಅವರಿಗೆ ಈ ಭಾಗ್ಯ ದೊರೆಯುವಂತಾಗಬೇಕು. ಹೌದು ಪ್ರಿಯ ಕ್ರೈಸ್ತ ಬಾಂಧವರೇ, ಪ್ರಭು ಯೇಸುಕ್ರಿಸ್ತರ ಆಜ್ಞೆಯನ್ನು ಶಿರಸ್ಸಾವಹಿಸಿ ಅವರ ಪ್ರೇಷಿತರು ಹಾಗೂ ಶಿಷ್ಯರು ಸುತ್ತಮುತ್ತಲಿನ ಊರುಗಳನ್ನೆಲ್ಲಾ ಸಂಚರಿಸಿ ಶುಭಸಂದೇಶವನ್ನು ಪ್ರಸಾರ ಮಾಡಿದರು. ತಮ್ಮ ಆದರ್ಶಮಯ ಕ್ರೈಸ್ತ ಜೀವನದಿಂದ , ಪ್ರೀತಿಮಯ ಸೇವೆಯಿಂದ ಹಾಗೂ ಸತ್ಯ, ನೀತಿ, ಪ್ರಾಮಾಣಿಕತೆಯ ನಡವಳಿಕೆಯಿಂದ ಸಾವಿರಾರು ಮಂದಿಗೆ ದೇವರ ಔದಾರ್‍ಯದ ಪರಿಚಯವನ್ನು ನೀಡಿದರು. ದೇವರು ಉದಾರವಾಗಿ ತಮ್ಮ ಏಕೈಕ ಮಗನನ್ನೇ ಸಮರ್ಪಿಸಿದರು.
ನಮ್ಮ ಜೀವನದಲ್ಲಿ ಕಾಣುತ್ತೇವೆ ಕೆಲವರು ಈ ಶುಭಸಂದೇಶವನ್ನು ಕೇಳಿದ್ದಾರಾದರೂ ಅವರ ಮೇಲೆ ಇದು ಯಾವ ಪರಿಣಾಮವನ್ನು ಬೀರದೆ ಹೋಗಿರಬಹುದು. ಅಂತವರ ಗಮನ ಈ ಶುಭಸಂದೇಶದೆಡೆಗೆ ಸೆಳೆಯಬೇಕು. ಇನ್ನು ಕೆಲವರು ಈ ಶುಭಸಂದೇಶವನ್ನು ತಿರಸ್ಕರಿಸಬಹುದು. ಅಂತವರು ಪರಿವರ್ತನೆ ಹೊಂದುವಂತಾಗಬೇಕಾದದ್ದು ಸ್ನಾನದೀಕ್ಷೆಯನ್ನು ಸ್ವೀಕರಿಸಿದ ಪ್ರತಿಯೊಬ್ಬ ಕ್ರೈಸ್ತನ ಕರ್ತವ್ಯವಾಗಿದೆ. ನಮ್ಮ ಪ್ರಾರ್ಥನೆ, ತ್ಯಾಗ, ನಡೆ ಹಾಗೂ ನುಡಿಯಿಂದ ನಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಉಚಿತವಾಗಿ ಪಡೆದಿರುವುದನ್ನು ಉಚಿತವಾಗಿ ನೀಡಲು ನಾವು ಸದಾ ಸಿದ್ಧರಿರಬೇಕು.
ಅಂತೆಯೇ ಪ್ರಭು ಯೇಸುಕ್ರಿಸ್ತರ ಆದರ್ಶಮಯ ಜೀವನವನ್ನು ನಮ್ಮ ಮುಂದಿಟ್ಟು ಅವರ ಶುಭಸಂದೇಶವನ್ನು ಯೋಗ್ಯವಾದ ರೀತಿಯಲ್ಲಿ ಪ್ರಪಂಚದ ಎಲ್ಲೆಡೆಗಳಲ್ಲಿಯೂ ನಾವು ಸಾರಲು ಬೇಕಾಗಿರುವ ಶಕ್ತಿ, ಧೈರ್ಯ, ಆಶೀರ್ವಾದವನ್ನು ಇಂದಿನ ದಿವ್ಯ ಬಲಿಪೂಜೆಯಲ್ಲಿ ಕೇಳಿಕೊಳ್ಳೋಣ. 
----

ಸಂತ ಹತ್ತನೇ ಭಕ್ತನಾಥರು  (ಜಗ) (ಸ್ಮರಣೆ)    

ಹತ್ತನೇ ಭಕ್ತಿನಾಥರು ಜೂನ್ 2, 1835ರಂದು ಇಟಲಿಯ ಒಂದು ಬಡ ಕುಟುಂಬದಲ್ಲಿ ಜನಿಸಿದರು. ಇವರು ಶ್ರದ್ಧೆ ಮತ್ತು ಪ್ರಾಮಾಣಿಕ ಬದುಕಿಗೆ ಉತ್ತಮ ಉದಾಹರಣೆ. ತಂದೆ ತಾಯಿಗೆ ಹತ್ತು ಮಕ್ಕಳು, ಹತ್ತರಲ್ಲಿ ಎರಡನೇಯ ಮಗುವಾಗಿ ಹುಟ್ಟಿದ ಬಡ  ಕುಟುಂಬದ ಬಾಲಕ ತನ್ನ ಶ್ರದ್ಧೆ, ಪ್ರಾಮಾಣಿಕತೆ, ವಿಶ್ವಾಸದಿಂದ ದರ್ಮಸಭೆಯ 250ನೇ ಇಸವಿ ಸೆಪ್ಟಂಬರ್ 18ರಂದು ಗುರುದೀಕ್ಷೆ ಪಡೆಯುತ್ತಾರೆ. 1884ರಲ್ಲಿ  ಮಾಂತುವಾ ಪ್ರದೇಶದ ಧರ್ಮಾಧಕ್ಷರಾಗುತ್ತಾರೆ. ವ್ಯಾಟಿಕನ್‍ನಲ್ಲಿ  ಶ್ರೀಮಂತ ಕುಲಿನರು, ಪ್ರಭಾವಿಗಳು ಜಗದ್ಗುರುಗಳಾಗುವುದು ಸುಲಭ. ಆದರೆ ಬಡತನ ಪ್ರಾಮಾಣಿಕತೆಯಿರುವವರು  ಜಗದ್ಗುರುಗಳಾಗುವುದು ಧರ್ಮಶ್ರದ್ಧೆಯಿಂದ ಎಂಬುವುದು ಹತ್ತನೇ ಭಕ್ತಿನಾಥರ ಬದುಕಲ್ಲಿ ಸಾಭೀತಾದ ಸಂಗತಿ. ಬಡವರ, ನಿರ್ಗತಿಕರ ಮೇಲೆ ಅಪಾರ ಪ್ರೀತಿಯಿಟ್ಟಿದ್ದ ಜಗದ್ಗುರುಗಳು ತಮ್ಮ ಅಂತಿಮ ಉಯಿಲಿನಲ್ಲಿ ಈ ರೀತಿ ಬರೆಯುತ್ತಾರೆ " ನಾನು ಹುಟ್ಟಿದ್ದು ಬಡವನಾಗಿ, ಬದುಕಿದ್ದು ಬಡವನಾಗಿ, ಬಡವನಾಗಿಯೇ ಸಾಯಲು ಬಯಸುತ್ತೇನೆ."

No comments:

Post a Comment