Wednesday, 4 September 2019

ಸಾಧಾರಣ ಕಾಲದ ಇಪ್ಪತ್ತೆರಡನೇ ವಾರ ಶನಿವಾರ

ಸಾಧಾರಣ ಕಾಲದ ಇಪ್ಪತ್ತೆರಡನೇ ವಾರ ಶನಿವಾರ

7/ಹಸಿರು/ಶನಿ
1ನೇ ವಾಚನ - ಕೊಲೊ 1: 21-23
ಕೀರ್ತನೆ - 54: 1-2, 4, 6, 7
ಶುಭಸಂದೇಶ - ಲೂಕ: 6: 1-5

1ನೇ ವಾಚನ - ಕೊಲೊ 1: 21-23
ಹಿಂದೆ, ನೀವು ಆಚಾರ-ವಿಚಾರಗಳಲ್ಲಿ ಕೆಟ್ಟವರಾಗಿದ್ದರಿಂದ ದೇವರ ವಿರೋಧಿಗಳಾಗಿದ್ದು ಅವರಿಂದ ದೂರವಿದ್ದಿರಿ. ಈಗಲಾದರೋ ಯೇಸುಕ್ರಿಸ್ತರ ದೈಹಿಕ ಮರಣದ ಫಲವಾಗಿ ನಿಮಗೂ ದೇವರಿಗೂ ಸಂಧಾನ ನಡೆದಿದೆ. ಹೀಗೆ ದೇವರು ನಿಮ್ಮನ್ನು ತಮ್ಮ ಸನ್ನಿಧಿಗೆ ಸೇರಿಸಿಕೊಳ್ಳಲು ನೀವು ಪವಿತ್ರರೂ ನಿಷ್ಕಳಂಕರೂ ದೋಷರಹಿತರೂ ಆಗಿರುವಂತೆ ಮಾಡಿದ್ದಾರೆ. ಇನ್ನು ನೀವು ವಿಶ್ವಾಸದಲ್ಲಿ ದೃಢವಾಗಿ ಮುನ್ನಡೆಯಬೇಕು. ಶುಭಸಂದೇಶವನ್ನು ಕೇಳಿದಾಗ ನೀವು ಹೊಂದಿದ ಭರವಸೆಯನ್ನು ಕಳೆದುಕೊಳ್ಳದಂತೆ ಜಾಗರೂಕರಾಗಿರಬೇಕು. ಪೌಲನಾದ ನಾನು ಇದೇ ಶುಭಸಂದೇಶದ ಪ್ರಚಾರಕ. ಈ ಶುಭಸಂದೇಶವನ್ನು ಜಗತ್ತಿನಲ್ಲಿರುವ ಸರ್ವಸೃಷ್ಟಿಗೂ ಸಾರಲಾಗುತ್ತಿದೆ.

ಕೀರ್ತನೆ - 54: 1-2, 4, 6, 7
1 : ರಕ್ಷಿಸೆನ್ನನು ದೇವ, ನಿನ್ನ ನಾಮ ಶಕ್ತಿಯಿಂದ / ನ್ಯಾಯದೊರಕಿಸೆನಗೆ ನಿನ್ನ ಪರಾಕ್ರಮದಿಂದ //
2 : ನನ್ನ ಪ್ರಾರ್ಥನೆಯನು ಆಲಿಸಯ್ಯಾ / ನನ್ನ ಮಾತುಗಳಿಗೆ ಕಿವಿಗೊಡು ದೇವಾ //
4 : ನನಗಿದೋ ದೇವನೆ ಸಹಾಯಕನು / ಆತನೆನಗೆ ಜೀವಪೋಷಕನು //
6 : ಸರ್ವಾಪತ್ತುಗಳಿಂದ ತಪ್ಪಿಸಿದೆ ಪ್ರಭು, ನನ್ನನು / ಕಂಡಿವೆ ನನ್ನ ಕಣ್ಗಳೇ ಶತ್ರುಗೊದಗಿದ ಸೋಲನು //
7 : ಎಂತಲೆ ಸ್ವಂತ ಇಚ್ಛೆಯಿಂದ ಬಲಿಯನರ್ಪಿಸುವೆ ನಿನಗೆ / ಧನ್ಯವಾದ ಪ್ರಭು, ನಿನ್ನ ಸರ್ವೋತ್ತಮ ನಾಮಕೆ //

ಶುಭಸಂದೇಶ - ಲೂಕ: 6: 1-5
ಒಂದು ಸಬ್ಬತ್‍ದಿನ ಯೇಸುಸ್ವಾಮಿ ಗೋದಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಶಿಷ್ಯರು ಕೆಲವು ತೆನೆಗಳನ್ನು ಕಿತ್ತು ಕೈಗಳಲ್ಲಿ ಹೊಸಕಿ ತಿನ್ನಲಾರಂಭಿಸಿದರು. ಅದನ್ನು ಕಂಡ ಫರಿಸಾಯರಲ್ಲಿ ಕೆಲವರು, “ಸಬ್ಬತ್ ದಿನದಲ್ಲಿ ನಿಷಿದ್ಧವಾದುದನ್ನು ನೀವು ಮಾಡುವುದೇಕೆ?” ಎಂದು ಅವರನ್ನು ಆಕ್ಷೇಪಿಸಿದರು. ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೆ? ದಾವೀದನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತೆಗೆದುಕೊಂಡು ತಿಂದುದಲ್ಲದೆ ತನ್ನ ಸಂಗಡಿಗರಿಗೂ ಕೊಟ್ಟನು ಅಲ್ಲವೆ? ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ,” ಎಂದು ಉತ್ತರಕೊಟ್ಟರು. 

No comments:

Post a Comment