Wednesday, 4 September 2019

ಸಾಧಾರಣ ಕಾಲದ ಇಪ್ಪತ್ತೆರಡನೇ ವಾರ ಶುಕ್ರವಾರ

ಸಾಧಾರಣ ಕಾಲದ ಇಪ್ಪತ್ತೆರಡನೇ ವಾರ ಶುಕ್ರವಾರ

6/ಹಸಿರು/ಶುಕ್ರ 
1ನೇ ವಾಚನ - ಕೊಲೊ 1:15-2೦.
ಕೀರ್ತನೆ - 1೦೦: 2-5.
ಶುಭಸಂದೇಶ - ಲೂಕ 5: 33-39

1ನೇ ವಾಚನ - ಕೊಲೊ 1:15-2೦
ಅದೃಶ್ಯ ದೇವನ ಸದೃಶ್ಯರೂಪನು ಕ್ರಿಸ್ತ, ಸೃಷ್ಟಿಗೆಲ್ಲ ಜೇಷ್ಠಪುತ್ರನಾತ. ಇರಲಿ ಇಹದಲಿ, ಇರಲಿ ಪರದಲಿ, ಅಶರೀರ ಒಡೆಯರಾಗಲಿ, ಒಡೆತನವಾಗಲಿ, ಅಧಿಕಾರಿಗಳಾಗಲಿ, ಆಧಿಪತ್ಯವಾಗಿರಲಿ, ಆದುದೆಲ್ಲವೂ ಆತನಲಿ, ಆತನಿಂದ, ಆತನಿಗಾಗಿ. ಎಲ್ಲಕ್ಕೂ ಮೊದಲೇ ಇರುವನಾತ, ಸಮಸ್ತಕ್ಕೂ ಆಧಾರಭೂತ. ಸಭೆಯೆಂಬ ಶರೀರಕ್ಕೆ ಶಿರಸ್ಸಾತ, ಆದಿಸಂಭೂತ, ಆಗಲೆಲ್ಲದರಲೂ ಅಗ್ರಸ್ಥ, ಸತ್ತವರಿಂದ ಮೊದಲೆದ್ದು ಬಂದನಾತ.  ಆ ಸುತನಲ್ಲೇ ಇರಿಸಲು ನಿರ್ಧರಿಸಿದನು ಪಿತದೇವ ತನ್ನ ಸರ್ವ ಸಂಪೂರ್ಣತೆಯನು. ಶಿಲುಬೆಯಿಂದಾತ ಹರಿಸಿದ ರಕುತದಿಂದ ಆಗುತಲಿದೆ ಶಾಂತಿಸಮಾಧಾನ, ನಡೆದಿದೆ ದೇವರೊಡನೆ ಸಂಧಾನ, ಇಹಪರಗಳೆಲ್ಲಕ್ಕೂ ಆತನ ಮುಖೇನ.
ಕೀರ್ತನೆ - 1೦೦: 2-5.
1 : ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ / 
2 : ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ / 
ಹಾಡುತ, ಪಾಡುತ, ಬನ್ನಿ ಆತನ ಸನ್ನಿಧಿಗೆ // 
3 : ಪ್ರಭುವೇ ದೇವರೆಂಬುದನು ಮರೆತುಬಿಡಬೇಡಿ ನೀವು / ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು / ಆತನ ಜನ, ಆತನೆ ಮೇಯಿಸುವ ಕುರಿಗಳು, ನಾವು // 
4 : ಆತನ ಗೃಹದ್ವಾರವನು ಪ್ರವೇಶಿಸಿ ಧನ್ಯವಾದದೊಂದಿಗೆ | ಆತನ ಆವರಣದಲಿ ನಿಲ್ಲಿರಿ ಸ್ತುತಿಸ್ತೋತ್ರಗಳೊಂದಿಗೆ | ಆತನ ನಾಮವನು ಕೊಂಡಾಡಿ ಉಪಕಾರಸ್ಮರಣೆಯೊಂದಿಗೆ || 
5 : ಹೌದು, ಪ್ರಭುವೆನಿತೋ ಒಳ್ಳೆಯವನು / ಇರುವುದಾತನ ಪ್ರೀತಿ ಯುಗಯುಗಕು / ಆತನ ಸತ್ಯತೆ ತಲತಲಾಂತರಕು //
ಶುಭಸಂದೇಶ - ಲೂಕ 5: 33-39
“ಯೊವಾನ್ನನ ಶಿಷ್ಯರು ಪದೇ ಪದೇ ಉಪವಾಸವಿದ್ದು ಪ್ರಾರ್ಥನೆ ಮಾಡುತ್ತಾರೆ. ಅದರಂತೆಯೇ, ಫರಿಸಾಯರ ಶಿಷ್ಯರೂ ಮಾಡುತ್ತಾರೆ. ನಿನ್ನ ಶಿಷ್ಯರಾದರೋ ತಿಂದು ಕುಡಿಯುವುದರಲ್ಲಿಯೇ ಇದ್ದಾರೆ,” ಎಂದು ಕೆಲವರು ಮೂದಲಿಸಿದರು. ಅದಕ್ಕೆ ಯೇಸು, “ಮದುವಣಿಗನು ಜೊತೆಯಲ್ಲಿರುವಾಗ ಮದುವೆಯ ಅತಿಥಿಗಳನ್ನು ಉಪವಾಸವಿರಿಸಲಾದೀತೆ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು. ಆ ದಿನಗಳು ಬಂದಾಗ ಅವರು ಉಪವಾಸಮಾಡುವರು,” ಎಂದು ಉತ್ತರಕೊಟ್ಟರು. ಮತ್ತೆ ಅವರಿಗೆ ಯೇಸು ಈ ಸಾಮತಿಯನ್ನು ಹೇಳಿದರು: “ಹಳೆಯ ಅಂಗಿಗೆ ತೇಪೆ ಹಾಕಲು ಹೊಸ ಅಂಗಿಯಿಂದ ತುಂಡನ್ನು ಯಾರೂ ಹರಿಯುವುದಿಲ್ಲ. ಹಾಗೆ ಮಾಡಿದ್ದೇ ಆದರೆ ಹೊಸದೂ ಹರುಕಲಾಗಿ, ಹಳೆಯದೂ ಹೊಸ ತೇಪೆಗೆ ಹೊಂದಿಕೆಯಾಗದೆ ಹೋಗುತ್ತದೆ. ಅಂತೆಯೇ, ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ಯಾರೂ ತುಂಬಿಡುವುದಿಲ್ಲ. ತುಂಬಿ ಇಟ್ಟರೆ, ಹೊಸ ಮದ್ಯವು ಬುದ್ದಲಿಗಳನ್ನು ಬಿರಿಯುತ್ತದೆ; ಮದ್ಯ ಚೆಲ್ಲಿ ಹೋಗುತ್ತದೆ; ಬುದ್ದಲಿಗಳೂ ಹಾಳಾಗುತ್ತವೆ. ಆದುದರಿಂದ ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡಬೇಕು. ಹಳೇ ಮದ್ಯ ಕುಡಿದವನಿಗೆ ಹೊಸದು ರುಚಿಸುವುದಿಲ್ಲ. ಅವನು ಹಳೆಯದೇ ಶ್ರೇಷ್ಠವೆನ್ನುತ್ತಾನೆ,” ಎಂದರು.

ಚಿಂತನೆ

ಇಂದಿನ ಶುಭ ಸಂದೇಶದಲ್ಲಿ ಫರಿಸಾಯರು ಉಪವಾಸದ ಬಗ್ಗೆ ತಮ್ಮ ನಿಲುವು ಏನು ಎಂದು ಪ್ರಶ್ನಿಸಿದರು. ಅವರು ಅವರ ಶಿಷ್ಯರು ಮತ್ತು ಯೊವಾನ್ನನ ಶಿಷ್ಯರು ಮಾಡುತ್ತಿದ್ದ ಉಪವಾಸವನ್ನು ಯೇಸುವಿನ ಶಿಷ್ಯರು ಮಾಡುತ್ತಿದ್ದ ಉಪವಾಸದೊಂದಿಗೆ ಹೋಲಿಸಿದರು. ಆಗ ಯೇಸು ಅವರು ಉಪವಾಸ ಮಾಡುತ್ತಾ ಕಾಯುತ್ತಿದ್ದ ಮೆಸ್ಸಿಯ ಯೇಸುವೇ ಆಗಿದ್ದಾರೆ. ಅವರೇ ಜನರ ಮಧ್ಯದಲ್ಲಿ ಇದ್ದಾರೆ. ಆದುದರಿಂದ ಉಪವಾಸ ಮಾಡುವ ಅಗತ್ಯವಿಲ್ಲ. ಜನರು ಕಾಯುತ್ತಿದ್ದ ಮದುವಣಗ ಯೇಸುವೇ ಎಂದು ಫರಿಸಾಯರಿಗೆ ತಿಳಿಸಲು ಪ್ರಯತ್ನಿಸುತ್ತಾರೆ. ಬುದ್ದಲಿ ಮತ್ತು ಮಧ್ಯದ ಸಾಮಾತಿಯನ್ನು ಹೇಳುವುದರ ಮೂಲಕ ಹೊಸ ದೃಷ್ಟಿಕೋನವನ್ನು, ನವೀನ ಆಲೋಚನೆಗಳನ್ನು ಹೊಂದಬೇಕೆಂದು ತಿಳಿಸಿದರು. ಹೊಸ ಬೋಧನೆಯ ಹೊಸ ಮಧ್ಯವನ್ನು ನಾವು ಪವಿತ್ರಾತ್ಮರಿಂದ ನವೀಕರಿಸಲ್ಪಟ್ಟ ನಮ್ಮ ಹೊಸ ಮನಸ್ಸಿನಲ್ಲಿ ತುಂಬಿಸಬೇಕೆಂದು ಬಯಸುತ್ತಾರೆ. ಯೇಸುವಿನ ಬೋಧನೆಯನ್ನು ತಿಳಿದು ಸೃಜನಾತ್ಮಕವಾಗಿ ಅನ್ವಯಿಸಿ ಹೊಸ ಜೀವನ ಜೀವಿಸುವುದು ಕ್ರೈಸ್ತರ ಕರ್ತವ್ಯವಾಗಿದೆ.


No comments:

Post a Comment