Wednesday, 11 September 2019

ಸಾಧಾರಣ ಕಾಲದ ಇಪ್ಪತ್ನಾಲ್ಕನೇ ವಾರ ಸೋಮವಾರ

ಸಾಧಾರಣ ಕಾಲದ ಇಪ್ಪತ್ನಾಲ್ಕನೇ ವಾರ ಸೋಮವಾರ

16/ಕೆಂಪು/ಸೋಮ/ಸಂತ ಕೊರ್ನೇಲಿಯನ್, (ಜಗ) & ಸಂತ ಸಿಪ್ರಿಯನ್, (ಧರ್ಮಾ ಮತ್ತು ರ.ಸಾ) (ಸ್ಮರಣೆ)
1ನೇ ವಾಚನ - 1 ತಿಮೊ 2: 1-8
ಕೀರ್ತನೆ - 28: 2, 7-9
ಶುಭಸಂದೇಶ - ಲೂಕ 7: 1-1೦

1ನೇ ವಾಚನ - 1 ತಿಮೊ 2: 1-8
ಮೊತ್ತಮೊದಲು ಮಾನವರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆ, ಪ್ರಾರ್ಥನೆ, ಬಿನ್ನಹ ಹಾಗೂ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ. ನಾವು ದೈವಭಕ್ತಿಯುಳ್ಳವರಾಗಿ ಮತ್ತು ಗೌರವಯುತರಾಗಿ ಶಾಂತಿ ಸಮಾಧಾನದಿಂದಲೂ ನೆಮ್ಮದಿಯಿಂದಲೂ ಜೀವಿಸಲು ಅನುಕೂಲವಾಗುವಂತೆ ಅರಸರಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಬೇಕು. ಹೀಗೆ ಮಾಡುವುದು ಒಳ್ಳೆಯದು, ನಮ್ಮ ಉದ್ದಾರಕರಾದ ದೇವರಿಗೆ ಮೆಚ್ಚುಗೆಯಾದುದು. ಎಲ್ಲಾ ಮಾನವರೂ ಸತ್ಯವನ್ನರಿತು ಜೀವೋದ್ಧಾರ ಪಡೆಯಬೇಕೆಂಬುದೇ ದೈವೇಚ್ಛೆ. ದೇವರು ಒಬ್ಬರೇ; ದೇವರನ್ನೂ ಮಾನವರನ್ನೂ ಒಂದುಗೂಡಿಸುವ ಮಧ್ಯಸ್ಥರೂ ಒಬ್ಬರೇ; ಅವರೇ ಮಾನವರಾಗಿರುವ ಕ್ರಿಸ್ತಯೇಸು. ಇವರು ಎಲ್ಲರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸರ್ವರೂ ಉದ್ಧಾರವಾಗಬೇಕೆಂಬ ದೈವೇಚ್ಛೆಗೆ ಸೂಕ್ತ ಸಮಯದಲ್ಲಿ ಸಾಕ್ಷಿ ನೀಡಿದರು. ವಿಶ್ವಾಸ ಮತ್ತು ಸತ್ಯದ ಸಂದೇಶವನ್ನು ಸಾರುವುದಕ್ಕಾಗಿಯೇ ದೇವರು ನನ್ನನ್ನು ಪ್ರೇಷಿತನನ್ನಾಗಿಯೂ ಯೆಹೂದ್ಯೇತರರಿಗೆ ಬೋಧಕನನ್ನಾಗಿಯೂ ನೇಮಕಮಾಡಿದರು. ನಾನು ಹೇಳುತ್ತಿರುವುದು ಸುಳ್ಳಲ್ಲ, ಸತ್ಯಸ್ಯ ಸತ್ಯ. ಪ್ರಾರ್ಥನೆ ಮಾಡುವ ಸ್ಥಳಗಳಲ್ಲೆಲ್ಲಾ ಪುರುಷರು ಕೋಪತಾಪವಿಲ್ಲದೆ, ಕೋಲಾಹಲವಿಲ್ಲದೆ ಕರಗಳನ್ನೆತ್ತಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಬೇಕು ಎಂಬುದೇ ನನ್ನ ಅಪೇಕ್ಷೆ.

ಕೀರ್ತನೆ - 28: 2, 7-9
2 : ನಿನ್ನ ಪರಿಶುದ್ಧಾಲಯದತ್ತ ಕೈಯೆತ್ತಿ ಮುಗಿವೆನು / ಕರುಣೆಯಿಂದಾಲಿಸು ಪ್ರಭು, ನನ್ನಾರ್ತ ಮನವಿಯನು //
7 : ಪ್ರಭುವೇ ಶಕ್ತಿ, ಎನಗೆ ರಕ್ಷೆ, ಎನ್ನೆದೆಯ ನಂಬುಗೆ / ಎನ್ನ ಮನಃಪೂರ್ವಕ ಕೀರ್ತನೆ, ಆತನಿತ್ತ ನೆರವಿಗೆ //
8 : ಪ್ರಭುವೆ ತನ್ನ ಪ್ರಜೆಯ ಪ್ರಾಬಲ್ಯವು / ತನ್ನಭಿಷಿಕ್ತನಿಗೆ ಆಶ್ರಯ ದುರ್ಗವು //
9 : ರಕ್ಷಿಸು ನಿನ್ನ ಪ್ರಜೆಯನು, ಆಶೀರ್ವದಿಸು ನಿನ್ನ ಜನರನು / ಕುರಿಗಾಹಿ ನೀನಾಗಿರು ಪ್ರಭೂ, ಹೊತ್ತು ಸಾಗಿಸು ಅವರನು //

ಶುಭಸಂದೇಶ - ಲೂಕ 7: 1-1೦
ಜನರಿಗೆ ಮನಮುಟ್ಟುವಂತೆ ಬೋಧನೆ ಮಾಡಿದ ನಂತರ ಯೇಸುಸ್ವಾಮಿ ಕಫೆರ್ನವುಮ್ ಎಂಬ ಊರಿಗೆ ಬಂದರು. ಅಲ್ಲಿ ರೋಮ್ ಶತಾಧಿಪತಿಯೊಬ್ಬನ ನೆಚ್ಚಿನ ಸೇವಕನು ಕಾಯಿಲೆಯಿಂದ ಸಾಯುವುದರಲ್ಲಿದ್ದನು. ಶತಾಧಿಪತಿ ಯೇಸುವಿನ ವಿಷಯವನ್ನು ಕೇಳಿ ಅವರ ಬಳಿಗೆ ಯೆಹೂದ್ಯ ಪ್ರಮುಖರನ್ನು ಕಳುಹಿಸಿ, ತನ್ನ ಸೇವಕನನ್ನು ಗುಣಪಡಿಸಲು ಬರಬೇಕೆಂದು ಮನವಿ ಮಾಡಿಕೊಂಡನು. ಅವರು ಯೇಸುವಿನ ಬಳಿಗೆ ಬಂದು, “ಆ ಶತಾಧಿಪತಿ ನಿಮ್ಮ ಉಪಕಾರಕ್ಕೆ ಅರ್ಹನು; ನಮ್ಮ ಜನರ ಮೇಲೆ ಅವನಿಗೆ ಪ್ರೀತಿ ಇದೆ; ಅಲ್ಲದೆ ನಮ್ಮ ಪ್ರಾರ್ಥನಾಮಂದಿರವನ್ನು ಕಟ್ಟಿಸಿಕೊಟ್ಟವನೂ ಅವನೇ,” ಎಂದು ಬಹಳವಾಗಿ ವಿನಂತಿಸಿದರು. ಯೇಸು ಅವರ ಸಂಗಡವೇ ಹೊರಟರು. ಮನೆಯಿಂದ ಸ್ವಲ್ಪ ದೂರವಿರುವಾಗಲೇ, ಶತಾಧಿಪತಿ ತನ್ನ ಗೆಳೆಯರ ಮುಖಾಂತರ, “ಪ್ರಭುವೇ, ಇಷ್ಟು ಶ್ರಮ ತೆಗೆದುಕೊಳ್ಳಬೇಡಿ; ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ನಾನೇ ತಮ್ಮಲ್ಲಿಗೆ ಬರೋಣವೆಂದರೆ ಆ ಯೋಗ್ಯತೆಯೂ ನನಗಿಲ್ಲ. ತಾವು ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು; ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು ‘ಬಾ,’ ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ ‘ಹೋಗು,’ ಎಂದರೆ ಹೋಗುತ್ತಾನೆ. ಸೇವಕನಿಗೆ ‘ಇಂಥದ್ದನ್ನು ಮಾಡು,’ ಎಂದರೆ ಮಾಡುತ್ತಾನೆ.” ಎಂದು ಹೇಳಿ ಕಳುಹಿಸಿದನು. ಅವನ ಈ ಮಾತುಗಳನ್ನು ಕೇಳಿದಾಗ ಯೇಸುವಿಗೆ ಆಶ್ಚರ್ಯವಾಯಿತು. ತಮ್ಮ ಹಿಂದೆ ಬರುತ್ತಿದ್ದ ಜನರ ಗುಂಪಿನ ಕಡೆ ತಿರುಗಿನೋಡಿ, “ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ,” ಎಂದರು. ಇತ್ತ ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಕಾಯಿಲೆಬಿದ್ದಿದ್ದ ಆ ಸೇವಕನು ಸ್ವಸ್ಥನಾಗಿದ್ದುದನ್ನು ಕಂಡರು.
ಚಿಂತನೆ

ಸ್ಮರಣೆ: ಸಂತ ಕೊರ್ನೇಲಿಯಸ್ (ವಿಶ್ವಗುರು ಮತ್ತು ರಕ್ತಸಾಕ್ಷಿ) ಮತ್ತು
ಸಂತ ಸಿಪ್ರಿಯನ್ (ಧರ್ಮಾಧ್ಯಕ್ಷ ಮತ್ತು ರಕ್ತಸಾಕ್ಷಿ)

ವಿಶ್ವಾಸ ಆಧ್ಯಾತ್ಮಿಕ ಜೀವನದ ಶ್ವಾಸ. ನಮ್ಮಲ್ಲಿ ವಿಶ್ವಾಸವಿದ್ದಲ್ಲಿ ಅನೇಕ ಅದ್ಭುತಗಳನ್ನು ಕಾಣುತ್ತೇವೆ. ಕ್ರಿಸ್ತರಲ್ಲಿ ವಿಶ್ವಾಸವಿಡುವುದರಿಂದ ಮಾತ್ರ ನಮ್ಮ ರಕ್ಷಣೆ ಸಾಧ್ಯ. ಯೇಸು ಪ್ರಭು ವಿಶ್ವಾಸದ ಆಧಾರದ ಮೇಲೆ ಅನೇಕರ ರೋಗಗಳನ್ನು ಗುಣಪಡಿಸುತ್ತಾರೆ. ಈ ವಿಶ್ವಾಸದ ಆಧಾರದ ಮೇಲೆಯೇ ಅನೇಕ ಬಾರಿ ಧ್ಯಾನಕೂಟಗಳಲ್ಲಿ ಧ್ಯಾನ ಕೇಂದ್ರಗಳಲ್ಲಿ ಅನೇಕ ಅದ್ಬುತಗಳಾಗುತ್ತವೆ.
 ಇಂದಿನ ಶುಭಸಂದೇಶದಲ್ಲಿ ಶತಾಧಿಪತಿಯು ಯೇಸುವನ್ನು ನೋಡಿ ತಾವು ಒಂದೇ ಒಂದು ಮಾತನ್ನು ಆಡಿದರೆ ಸಾಕು ನನ್ನ ಸೈನಿಕ ಸ್ವಸ್ಥವಾಗುವನು ಎಂದನು. ಎಂತಹ ಅಮೋಘ ವಿಶ್ವಾಸ, ಶತಾಧಿಪತಿಯು ಅನ್ಯ ಜನಾಂಗದವನು, ಆದರೆ ಧರ್ಮನಿಷ್ಟನಾಗಿದ್ದನು. ಆತನಿಗೆ ತನ್ನ ಸೇವಕರ ಮೇಲೆ ಅಪಾರ ಪ್ರೀತಿ ಇತ್ತು. ಆದ್ದರಿಂದಲೇ ಆತ ಯೇಸುವಿನ ಬಳಿಗೆ ವಿಶ್ವಾಸದಿಂದ ಬಂದು ಸೇವಕನನ್ನು ಗುಣಪಡಿಸುವಂತೆ ಕೇಳಿಕೊಳ್ಳುತ್ತಾನೆ, ಅದ್ಭುತವನ್ನು ಕಾಣುತ್ತಾನೆ.
 ನಾವು ಪ್ರತಿನಿತ್ಯ ಬಲಿಪೂಜೆಯಲ್ಲಿ ಪರಮಪ್ರಸಾದವನ್ನು ಸ್ವೀಕರಿಸುವ ಮೊದಲು ನಮ್ಮ ವಿಶ್ವಾಸವನ್ನು ಪ್ರಕಟಿಸುತ್ತೇವೆ.

No comments:

Post a Comment