Sunday, 15 September 2019

ಸಾಧಾರಣ ಕಾಲದ ಇಪ್ಪತ್ನಾಲ್ಕನೇ ವಾರ ಮಂಗಳವಾರ

ಸಾಧಾರಣ ಕಾಲದ ಇಪ್ಪತ್ನಾಲ್ಕನೇ ವಾರ ಮಂಗಳವಾರ

17/ಹಸಿರು/ಮಂಗಳ/ಐಚ್ಛಿಕ ಸ್ಮರಣೆ - ಸಂ.ರಾಬರ್ಟ್ ಬೆಲ್ಲಾಮಿನ್ (ಧರ್ಮಾ ಮತ್ತು ಧ.ಪಂ)
1ನೇ ವಾಚನ - 1 ತಿಮೊ 3: 1-13 
ಕೀರ್ತನೆ - 1೦1: 1-2, 3, 5, 6 
ಶುಭಸಂದೇಶ - ಲೂಕ 7: 11-17


1ನೇ ವಾಚನ - 1 ತಿಮೊ 3: 1-13
ಯಾರಾದರೂ ಧರ್ಮಾಧ್ಯಕ್ಷನಾಗಲು ಅಪೇಕ್ಷಿಸಿದರೆ, ಅಂಥವನು ಉತ್ತಮ ಸೇವೆಯನ್ನೇ ಬಯಸುತ್ತಾನೆಂಬುದು ನಿಜ. ಅಂಥವನು ನಿಂದಾರಹಿತನಾಗಿರಬೇಕು. ಏಕಪತ್ನಿ ಉಳ್ಳವನು, ಸ್ವಸ್ಥಬುದ್ಧಿಯುಳ್ಳವನು, ಜಿತೇಂದ್ರಿಯನು, ಗೌರವಸ್ಥನು ಮತ್ತು ಅತಿಥಿ ಸತ್ಕಾರ ಮಾಡುವವನು ಆಗಿರಬೇಕು. ಬೋಧಿಸುವುದರಲ್ಲಿ ಪ್ರವೀಣನಾಗಿರಬೇಕು. ಅವನು ಕುಡುಕನು, ಕಲಹಪ್ರಿಯನು ಮತ್ತು ಹೊಡೆದಾಡುವವನು ಆಗಿರಬಾರದು. ಶಾಂತನೂ ದಯಾವಂತನೂ ಹಣದ ವ್ಯಾಮೋಹ ಇಲ್ಲದವನೂ ಆಗಿರಬೇಕು. ತನ್ನ ಕುಟುಂಬವನ್ನು ಜವಾಬ್ದಾರಿಯುತವಾಗಿ ನಡೆಸುವವನೂ ಮಕ್ಕಳನ್ನು ಶಿಸ್ತಿನಲ್ಲಿ ಬೆಳೆಸಿ ಅವರಿಂದ ಗೌರವವನ್ನು ಪಡೆದುಕೊಳ್ಳುವವನೂ ಆಗಿರಬೇಕು. ತನ್ನ ಕುಟುಂಬವನ್ನೇ ಜವಾಬ್ದಾರಿಯುತವಾಗಿ ನಡೆಸಲು ತಿಳಿಯದವನು ದೇವರ ಸಭೆಯನ್ನು ಹೇಗೆ ತಾನೇ ಪರಿಪಾಲಿಸಿಯಾನು? ಆತನು ಹೊಸದಾಗಿ ಕ್ರೈಸ್ತಧರ್ಮವನ್ನು ಅಂಗೀಕರಿಸಿದವನಾಗಿರಬಾರದು; ಇಲ್ಲದಿದ್ದರೆ ಅಹಂಕಾರದಿಂದ ಉಬ್ಬಿಕೊಂಡು ಸೈತಾನನಂತೆಯೇ ದಂಡನೆಗೆ ಗುರಿಯಾದಾನು. ಕ್ರೈಸ್ತರಲ್ಲದವರಿಂದಲೂ ಆತನು ಒಳ್ಳೆಯವನೆನಿಸಿಕೊಂಡಿರಬೇಕು. ಹೀಗಿದ್ದರೆ ಮಾತ್ರ ನಿಂದೆಗೊಳಗಾಗದೆ ಸೈತಾನನ ಕುತಂತ್ರಗಳಿಂದ ದೂರವಿರಬಲ್ಲನು. ಸಭಾಸೇವಕರು ಸಜ್ಜನರಾಗಿರಬೇಕು. ಎರಡು ನಾಲಿಗೆಯುಳ್ಳವರೂ ಕುಡುಕರೂ ಲಾಭಕೋರರೂ ಆಗಿರಬಾರದು. ವಿಶ್ವಾಸದ ನಿಗೂಢ ರಹಸ್ಯಗಳನ್ನು ಶುದ್ಧ ಮನಸ್ಸಾಕ್ಷಿಯಿಂದ ಕಾಪಾಡಿಕೊಂಡು ಬರುವವರಾಗಿರಬೇಕು. ಇವರನ್ನು ಮೊದಲು ಪರೀಕ್ಷೆಗೊಳಪಡಿಸಬೇಕು. ಯಾವುದೇ ಕುಂದುಕೊರತೆ ಕಂಡು ಬರದಿದ್ದಲ್ಲಿ, ಇವರನ್ನು ಸಭಾಸೇವಕರನ್ನಾಗಿ ನೇಮಿಸಬಹುದು. ಅಂತೆಯೇ, ಸಭಾಸೇವಕಿಯರು ಸಜ್ಜನೆಯರಾಗಿರಬೇಕು. ಚಾಡಿಮಾತುಗಳನ್ನು ಆಡುವವರೂ ಮದ್ಯಾಸಕ್ತರೂ ಆಗಿರದೆ ಎಲ್ಲ ವಿಷಯಗಳಲ್ಲಿ ನಂಬಿಕಸ್ಥರಾಗಿರಬೇಕು. ಸಭಾಸೇವಕರು ಏಕಪತ್ನಿಯುಳ್ಳವರಾಗಿದ್ದು ತಮ್ಮ ಮಕ್ಕಳನ್ನೂ ಕುಟುಂಬವನ್ನೂ ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುವವರಾಗಿರಬೇಕು. ನಿಷ್ಠೆಯಿಂದ ಸೇವೆಸಲ್ಲಿಸುವ ಸಭಾಸೇವಕರು ಒಳ್ಳೆಯ ಸ್ಥಾನಮಾನಗಳನ್ನು ಪಡೆಯುತ್ತಾರೆ; ಕ್ರಿಸ್ತ ಯೇಸುವಿನಲ್ಲಿ ಅವರಿಗಿರುವ ವಿಶ್ವಾಸವನ್ನು ಸಾರಲು ಧೈರ್ಯಸ್ಥೈರ್ಯವನ್ನು ಪಡೆಯುತ್ತಾರೆ.

ಕೀರ್ತನೆ - 1೦1: 1-2, 3, 5, 6
1 : ಪ್ರೀತಿನೀತಿಗಳ ಕುರಿತು ಹಾಡುವೆನು / ಹೇ ಪ್ರಭೂ, ನಿನ್ನನೆ ಹಾಡಿಹೊಗಳುವೆನು//
2 : ಸನ್ಮಾರ್ಗದಲೇ ನಾ ನಡೆಯುವೆನು / ನನಗೆಂದು ನೀಡುವೆ ದರ್ಶನವನು? / ಮನೆಯೊಳಗೂ ಶುದ್ಧಹೃದಯಿ ನಾನು //
3 : ನೀಚಕಾರ್ಯಗಳನು ನಾ ವೀಕ್ಷಿಸಲಾರೆ / ಅಧರ್ಮಿಗಳ ನಡೆಯನು ನಾ ಸಹಿಸಲಾರೆ / ಅಂಥವರ ಸಹವಾಸವನು ನಾ ತಾಳಲಾರೆ //
5 : ಸಂಹರಿಸುವೆನು ನೆರೆಯವನ ಮೇಲೆ ಅಪವಾದ ಹೊರಿಸುವವನನು / ಸಹಿಸಲಾರೆ ಸೊಕ್ಕಿದಕಣ್ಣು, ಕೊಬ್ಬಿದ ಮನ ಉಳ್ಳಂಥವನನು //
6 : ಆರಿಸಿಕೊಳ್ವೆನು ನಾಡಿನ ಸಜ್ಜನರನು / ಇರಿಸಿಕೊಳ್ವೆನು ನನ್ನೊಡನೆ ವಾಸಿಸಲವರನು / ಸನ್ಮಾರ್ಗಿಯೆ ನನ್ನ ಸೇವಕನಾಗಿರುವನು //

ಶುಭಸಂದೇಶ - ಲೂಕ 7: 11-17
ಯೇಸುಸ್ವಾಮಿ ನಾಯಿನ್ ಎಂಬ ಊರಿಗೆ ಹೊರಟರು. ಅವರೊಂದಿಗೆ ಶಿಷ್ಯರೂ ಅನೇಕ ಜನರೂ ಹೊರಟರು. ಊರಬಾಗಿಲನ್ನು ಸಮೀಪಿಸಿದಾಗ, ಒಂದು ಶವಯಾತ್ರೆಯನ್ನು ಅವರು ಎದುರುಗೊಂಡರು. ಆ ಸತ್ತವನು ತನ್ನ ತಾಯಿಗೆ ಒಬ್ಬನೇ ಮಗ. ಆಕೆಯೋ ವಿಧವೆ. ಜನರ ದೊಡ್ಡ ಗುಂಪೊಂದು ಆಕೆಯೊಡನೆ ಬರುತ್ತಿತ್ತು. ಪ್ರಭು ಯೇಸು ಆಕೆಯನ್ನು ಕಂಡದ್ದೇ ಕನಿಕರಗೊಂಡು, ‘ಅಳಬೇಡ’ ಎಂದು ಹೇಳಿ, ಚಟ್ಟದ ಹತ್ತಿರಕ್ಕೆ ಬಂದು, ಅದನ್ನು ಮುಟ್ಟಿದರು. ಹೊತ್ತುಕೊಂಡು ಹೋಗುತ್ತಿದ್ದವರು ಹಾಗೆಯೇ ನಿಂತರು. ಆಗ ಯೇಸು, “ಯುವಕನೇ, ನಾನು ನಿನಗೆ ಹೇಳುತ್ತೇನೆ, ಎದ್ದೇಳು,” ಎಂದರು. ಸತ್ತವನು ಎದ್ದು ಕುಳಿತು ಮಾತನಾಡಲಾರಂಭಿಸಿದನು. ಯೇಸು ಆ ಮಗನನ್ನು ತಾಯಿಗೆ ಒಪ್ಪಿಸಿದರು. ಎಲ್ಲರೂ ಭಯಭ್ರಾಂತರಾದರು. “ಮಹಾಪ್ರವಾದಿಯೊಬ್ಬನು ನಮ್ಮಲ್ಲೇ ಉದಯಿಸಿದ್ದಾನೆ; ದೇವರು ತಮ್ಮ ಜನರನ್ನು ರಕ್ಷಿಸಲು ಬಂದಿದ್ದಾರೆ,” ಎಂದು ದೇವರನ್ನು ಕೊಂಡಾಡಿದರು. ಯೇಸುವಿನ ಈ ಸಮಾಚಾರ ಜುದೇಯ ನಾಡಿನಲ್ಲೆಲ್ಲಾ ಹಾಗೂ ಸುತ್ತಮುತ್ತಲಿನ ಪ್ರಾಂತ್ಯದಲ್ಲೆಲ್ಲಾ ಹರಡಿತು.

ಚಿಂತನೆ

ಸಂತ ರಾಬರ್ಟ್ ಬೆಲ್ಲಾರ್ಮಿನ್
(ಧರ್ಮಾಧ್ಯಕ್ಷ ಮತ್ತು ಧರ್ಮಸಭೆಯ ಪಂಡಿತ)

ಕರುಣೆಯ ಪ್ರಭು ನಮ್ಮ ಕ್ರಿಸ್ತರು, ನಾನೇ ಜೀವ, ನಾನೇ ಸತ್ಯ, ನಾನೇ ಮಾರ್ಗ ಎಂದು ನುಡಿದ ಕ್ರಿಸ್ತರು. ವಿಧವೆಯ ಮಗನನ್ನು ಜೀವಕ್ಕೆ ಎಬ್ಬಿಸುತ್ತಾರೆ. ಯೇಸುವಿಗೆ ಕೇವಲ ಕನಿಕರ ಪಡುವ ಶಕ್ತಿ ಮಾತ್ರವಲ್ಲ, ಮರಳಿ ಜೀವವನ್ನು ನೀಡುವ ಶಕ್ತಿ ಇತ್ತು. ಯಾರಾದರೂ ಶವವನ್ನು ಮುಟ್ಟಿದರೆ ಅಶುದ್ಧವಾಗುತ್ತಿದ್ದನು. ಆದರೆ ಯೇಸುವಿನ ಸ್ಪರ್ಶ ಮೃತ ಶರೀರಕ್ಕೆ ಜೀವವನ್ನು ತರುತ್ತದೆ. ಹಿಂದೆ ಎಲೀಷ ಪ್ರವಾದಿಯು ಒಬ್ಬ ತಾಯಿಯ ಮಗನನ್ನು ಜೀವಕ್ಕೆ ಎಬ್ಬಿಸಿದನು (೨ ಅರಸು ೪:೧೮, ೩೭). ಪ್ರಭು ಯೇಸು ಸಾವನ್ನು ಜಯಿಸಿ ಪುನರುತ್ಥಾನಗೊಂಡಿದ್ದಾರೆ. ಅವರಲ್ಲಿ ಭರವಸೆ ಇದ್ದರೆ ಮಾತ್ರ ನಾವು ರಕ್ಷಣೆಯನ್ನು ಹೊಂದುತ್ತೇವೆ.

No comments:

Post a Comment