Friday, 27 September 2019

ಸಾಧಾರಣ ಕಾಲದ ಇಪ್ಪತ್ತಾರನೇ ವಾರ ಶನಿವಾರ

ಸಾಧಾರಣ ಕಾಲದ ಇಪ್ಪತ್ತಾರನೇ ವಾರ ಶನಿವಾರ

5/ಹಸಿರು/ಶನಿ
1ನೇ ವಾಚನ - ಬಾರೂ 4:  5-12, 27-29
ಕೀರ್ತನೆ - 69: 32-36
ಶುಭಸಂದೇಶ - ಲೂಕ 1೦: 17-24


1ನೇ ವಾಚನ - ಬಾರೂ 4: 5-12, 27-29
ನನ್ನ ಜನರೇ, ಧೈರ್ಯದಿಂದಿರಿ ಇಸ್ರಯೇಲಿನ ಹೆಸರನ್ನು ನೀವು ಉಳಿಸಬಲ್ಲಿರಿ. ನೀವು ಅನ್ಯರಾಷ್ಟ್ರಗಳಿಗೆ ಮಾರಲ್ಪಟ್ಟಿರುವುದು ವಿನಾಶಕ್ಕಾಗಿ ಅಲ್ಲ ನೀವು ಶತ್ರುಗಳ ವಶವಾಗಿರುವುದು ದೇವರನ್ನು ಸಿಟ್ಟಿಗೆಬ್ಬಿಸಿದ್ದರಿಂದ; ದೇವರನ್ನು ತೊರೆದು ದೆವ್ವಗಳಿಗೆ ಬಲಿಯರ್ಪಿಸಿದ್ದರಿಂದ ನಿಮ್ಮ ಸೃಷ್ಟಿಕರ್ತನ ಕೋಪವನ್ನು ಕೆರಳಿಸಿದ್ದರಿಂದ; ನಿಮ್ಮನ್ನು ಸಾಕಿಸಲಹಿದ ನಿತ್ಯದೇವರನ್ನು ಮರೆತದ್ದರಿಂದ ನಿಮ್ಮನ್ನು ಪೋಷಿಸಿದ ಮಾತೆ ಜೆರುಸಲೇಮನ್ನು ನೋಯಿಸಿದ್ದರಿಂದ. ನಿಮ್ಮ ಮೇಲೆ ಎರಗಲಿದ್ದ ದೇವಕೋಪವನ್ನು ಆಕೆ ಹೀಗೆಂದು ಬಣ್ಣಿಸಿದಳು: ‘ಸಿಯೋನಿನ ನೆರೆಹೊರೆಯಲ್ಲಿ ವಾಸಿಸಿದವರೇ ಕೇಳಿ: ದೇವರು ನನ್ನ ಮೇಲೆ ಬರಮಾಡಿದ್ದಾರೆ ಮಹಾಕಸ್ತಿ ಶಾಶ್ವತರಾದ ದೇವರು ನನ್ನ ಪುತ್ರಪುತ್ರಿಯರ ಮೇಲೆ ಬರಮಾಡಿರುವ ಗಡೀಪಾರನ್ನು ನಾನು ಅರಿತಿರುವೆ. ಮುದದಿಂದ ನಾನಿವರನ್ನು ಸಲಹಿದೆ ದುಃಖದಿಂದ ಕಣ್ಣೀರಿಡುತ್ತಾ ಕಳುಹಿಸಿಕೊಟ್ಟೆ. ನಾನೊಬ್ಬ ವಿಧವೆ, ಹಲವರಿಂದ ನಿರಾಕೃತಳು ನನ್ನನ್ನು ನೋಡಿ ಯಾರೂ ಆನಂದಿಸಬಾರದು: ದೇವರ ಧರ್ಮಶಾಸ್ತ್ರವನ್ನು ಬಿಟ್ಟು ನನ್ನ ಮಕ್ಕಳು ದೂರಸರಿದರು ಅವರ ಪಾಪಕೃತ್ಯಗಳ ನಿಮಿತ್ತ ನಾನು ಹಾಳುಬೀಳಬೇಕಾಯಿತು.  ಮಕ್ಕಳೇ, ಧೈರ್ಯದಿಂದಿರಿ, ಮೊರೆಯಿಡಿ ದೇವರಿಗೆ; ಇದನ್ನೆಲ್ಲಾ ಬರಮಾಡಿದಾತ ತಂದುಕೊಳ್ಳುವನು ನಿಮ್ಮನ್ನು ನೆನಪಿಗೆ. 28 : ದೇವರಿಗೆ ವಿಮುಖರಾಗಲು ಮನಸ್ಸು ಮಾಡಿದಿರಿ ಈಗ ಅವರಿಗೆ ಅಭಿಮುಖರಾಗಲು ಹತ್ತರಷ್ಟು ಮನಸ್ಸುಮಾಡಿರಿ. 29 : ನಿಮಗೆ ಈ ವಿಪತ್ತನ್ನು ಬರಮಡಿದಾತನು ನಿಮ್ಮ ಉದ್ಧಾರದೊಂದಿಗೆ ಶಾಶ್ವತ ಸಂತಸವನ್ನುಂಟುಮಾಡುವನು.

ಕೀರ್ತನೆ - 69: 32-36
32 : ಇದನರಿತು ದೀನದಲಿತರು ಆನಂದಗೊಳ್ಳಲಿ / ದೇವನನು ಅರಸುವವರು ಪುನಶ್ಚೇತನಗೊಳ್ಳಲಿ //
33 : ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು / ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು //
34 : ಭೂಮ್ಯಾಕಾಶಗಳು ಆತನನು ಕೊಂಡಾಡಲಿ / ಸಾಗರಗಳು, ಜಲಚರಗಳು ಆತನನು ಭಜಿಸಲಿ //
35 : ರಕ್ಷಿಸುವನು ದೇವನು ಆ ಸಿಯೋನ್ ಪಟ್ಟಣವನು / ಕಟ್ಟಿಸುವನು ಯೆಹೂದ ನಾಡಿನ ನಗರಗಳನು / ಸ್ವಂತವಾಗಿರಿಸಿಕೊಂಬರು ಆತನ ಪ್ರಜೆ ಅದನು //
36 : ಅವರ ವಂಶಜರೇ ಬಾಧ್ಯಸ್ಥರಾಗುವರದಕೆ / ದೇವರನಾಮ ಪ್ರಿಯರೇ ನಿವಾಸಿಗಳು ಅದಕೆ //

ಶುಭಸಂದೇಶ - ಲೂಕ 1೦: 17-24
ಕಳುಹಿಸಲಾಗಿದ್ದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, “ಸ್ವಾವಿೂ, ನಿಮ್ಮ ಹೆಸರಿನಲ್ಲಿ ಆಜ್ಞೆಮಾಡಿದಾಗ ದೆವ್ವಗಳು ಕೂಡ ನಮಗೆ ಅಧೀನವಾಗುತ್ತವೆ,” ಎಂದು ವರದಿ ಮಾಡಿದರು. ಅದಕ್ಕೆ ಯೇಸು, “ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ಕಂಡೆನು. ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯವುದೂ ನಿಮಗೆ ಹಾನಿಮಾಡದು. ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕ್ಕಿಂತ ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ,” ಎಂದು ಹೇಳಿದರು.  ಅದೇ ಗಳಿಗೆಯಲ್ಲಿ ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, “ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವರೇ ಹೊರತು ಮತ್ತಾರೂ ಅರಿಯರು,” ಎಂದು ಹೇಳಿದರು. ಅನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, “ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು. ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ,” ಎಂದರು.


ಚಿಂತನೆ

ಕೊವಾಲ್ಸ್‍ಕದ ಸಂತ ಮರಿಯಾ ಫಾವುಸ್ತಿನ್

ಮರಿಯ ಫೌಸ್ತಿನ್ ಹುಟ್ಟಿದ್ದು ಆಗಸ್ಟ್ ೨೫, ೧೯೦೫ರಲ್ಲಿ, ಪೋಲೆಂಡ್ ಆಕೆಯ ತವರೂರು . ಬಡಕುಟುಂಬದಲ್ಲಿ ಜನಿಸಿದ ಮರಿಯ ಫೌಸ್ತಿನ (ಮೂಲ ಹೆಸರು ಹೆಲೆನಾ) ತಂದೆ ತಾಯಿಯರಾದ ಸ್ಟಾನಿಸ್ಲಾಸ್ ಮತ್ತು ಮರಿಯಾನ್ನರಿಗೆ ಸಹಾಯ ಮಾಡುವ ಉದ್ದೇಶದಿಂದ ಮನೆ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಅಡುಗೆ ಕೆಲಸ, ಮನೆಕೆಲಸ, ತೋಟದ ಕೆಲಸದ ಮೂಲಕ ತಂದೆ ತಾಯಿಗಳಿಗೆ ನೆರವಾಗುತ್ತಾಳೆ. ಹಲವು ವರ್ಷ ಈ ಕೆಲಸಗಳನ್ನು ಮಾಡಿದ ಫೌಸ್ತಿನ ೧೯೨೫, ಆಗಸ್ಟ್ ೧ರಂದು ವಾರ್ಸಾದಲ್ಲಿದ್ದ ಕನ್ಯಾಸ್ತ್ರೀ ಮಠವನ್ನು ಸೇರುತ್ತಾರೆ. ೧೯೩೩ ಮೇ೧ರಂದು ತನ್ನ ಅಂತಿಮ ಕನ್ಯಾವ್ರತವನ್ನು ಸ್ವೀಕರಿಸುತ್ತಾರೆ.

ಅನೇಕ ಬಾರಿ ಯೇಸುವಿನ ದರ್ಶನವನ್ನು ಆಕೆ ಪಡೆಯುತ್ತಾರೆ. ದೇವರು ಕಠಿಣ ನ್ಯಾಯಾಧಿಪತಿ ಎಂಬ ಕಲ್ಪನೆ ಬಹಳ ಜನರಿಗಿದ್ದ ಆ ಕಾಲದಲ್ಲಿ ಆತ ಕರುಣಾಮಯಿ ದೇವರು ಎಂಬುದು ಫೌಸ್ತಿನ ಜಗತ್ತಿಗೆ ಸಾರುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಹು ಪ್ರಖ್ಯಾತವಾಗಿರುವ `ಕರುಣಾ ಪ್ರಾರ್ಥನೆ’ಗೆ ಮೂಲ ಕಾರಣ ಸಂತ ಫೌಸ್ತಿನ. ಪ್ರತಿದಿನ ಮಧ್ಯಾಹ್ನ ೩.೦೦ ಗಂಟೆಗೆ ಹೇಳುವ ಈ ಪ್ರಾರ್ಥನೆ ಮತ್ತು ಡಿವೈನ್ ಮರ್ಸಿಯ ಯೇಸುವಿನ ಭಾವ ಚಿತ್ರ ಬಂದದ್ದು ಸಂತ ಫೌವುಸ್ತಿನರಿಂದ.  

No comments:

Post a Comment