Friday, 27 September 2019

ಸಾಧಾರಣ ಕಾಲದ ಇಪ್ಪತ್ತಾರನೇ ವಾರ ಶುಕ್ರವಾರ

ಸಾಧಾರಣ ಕಾಲದ ಇಪ್ಪತ್ತಾರನೇ ವಾರ ಶುಕ್ರವಾರ

4/ಬಿಳಿ/ಶುಕ್ರ/ಅಸಿಸ್ಸಿಯ ಸಂತ ಫ್ರಾನ್ಸಿಸ್ (ಸ್ಮರಣೆ)
1ನೇ  ವಾಚನ - ಬಾರೂ 1: 15-22
ಕೀರ್ತನೆ - 79: 1-5, 8, 9
ಶುಭಸಂದೇಶ - ಲೂಕ 1೦:  13-16


1ನೇ  ವಾಚನ - ಬಾರೂ 1: 15-22
ನೀವು ಮಾಡಬೇಕಾದ ಪಾಪನಿವೇದನೆ ಹೀಗಿರಲಿ: ನಮ್ಮ ದೇವರಾದ ಸರ್ವೇಶ್ವರ ಸತ್ಯ ಸ್ವರೂಪರು; ನಾವಾದರೋ ಇಂದು ನಾಚಿಕೆಗೀಡಾಗಿದ್ದೇವೆ. ನಾವು ಮಾತ್ರವಲ್ಲ, ಜುದೇಯದ ಜನರು, ಜೆರುಸಲೇಮಿನ ನಿವಾಸಿಗಳು, ನಮ್ಮ ಅರಸರು, ಅಧಿಪತಿಗಳು, ಪ್ರವಾದಿಗಳು, ನಮ್ಮ ಪೂರ್ವಜರು ಎಲ್ಲರೂ ಅಂತೆಯೇ ನಾಚಿಕೆಗೀಡಾಗಿದ್ದೇವೆ. ಏಕೆಂದರೆ ದೇವರ ಮುಂದೆ ನಾವು ಪಾಪಿಗಳು, ಅವರಿಗೆ ಅವಿಧೇಯರಾಗಿ ನಡೆದುಕೊಂಡಿದ್ದೇವೆ. ನಾವು ನಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡಲಿಲ್ಲ; ಅವರು ನಮಗೆ ಕೊಟ್ಟ ಆಜ್ಞೆಗಳನ್ನು ಪಾಲಿಸಲಿಲ್ಲ. ನಮ್ಮ ದೇವರಾದ ಸರ್ವೇಶ್ವರ ನಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕರೆತಂದ ದಿನದಿಂದ ಇಂದಿನವರೆಗೂ ನಾವು ಅವರಿಗೆ ಅವಿಧೇಯರಾಗಿಯೇ ನಡೆದುಕೊಂಡಿದ್ದೇವೆ. ಅವರ ಮಾತನ್ನು ಕೇಳದೆ ಉದಾಸೀನರಾಗಿದ್ದೇವೆ. ಆದುದರಿಂದಲೇ ಉಪದ್ರವಗಳು ನಮಗೆ ಅಂಟಿಕೊಂಡಿವೆ. ಹಾಲೂ ಜೇನೂ ಹರಿಯುವ ನಾಡನ್ನು ನಮಗೆ ಕೊಡುವುದಕ್ಕಾಗಿ ನಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕರೆತಂದ ನಮ್ಮ ದೇವರಾದ ಸರ್ವೇಶ್ವರಸ್ವಾಮಿ ತಮ್ಮ ದಾಸ ಮೋಶೆಯ ಮೂಲಕ ಹಾಕಿಸಿದ ಶಾಪ ನಮ್ಮನ್ನು ಇಂದಿಗೂ ಬಿಟ್ಟಿಲ್ಲ. ನಮ್ಮ ದೇವರಾದ ಸರ್ವೇಶ್ವರ ನಮ್ಮ ಬಳಿಗೆ ಕಳುಹಿಸಿದ ಪ್ರವಾದಿಗಳು ನುಡಿದ ದೈವೋಕ್ತಿಗಳನ್ನು ನಾವು ಆಲಿಸದೆ, ಅವರ ಮಾತಿಗೆ ಕಿವಿಗೊಡದೆ ಹೋದೆವು. ಮಾತ್ರವಲ್ಲ, ನಮ್ಮಲ್ಲಿ ಪ್ರತಿಯೊಬ್ಬನು ಅವನವನ ಹೃದಯ ದುಷ್ಪ್ರೇರಣೆಗೆ ಒಳಪಟ್ಟು, ಅನ್ಯದೇವತೆಗಳಿಗೆ ಪೂಜೆಮಾಡಿದ್ದಾನೆ. ನಮ್ಮ ದೇವರಾದ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನೇ ಮಾಡಿದ್ದಾನೆ.

ಕೀರ್ತನೆ - 79: 1-5, 8, 9
1 : ಹೊಕ್ಕಿದರು ದೇವಾ, ಮ್ಲೇಚ್ಫರು ನಿನ್ನ ಸ್ವಂತನಾಡನು / ಹೊಲೆ ಮಾಡಿಹರು ನಿನ್ನ ಪವಿತ್ರ ದೇವಾಲಯವನು / ಹಾಳುದಿಬ್ಬವನ್ನಾಗಿಸಿಹರು ಜೆರುಸಲೇಮ್ ನಗರವನು //
2 : ಅರ್ಪಿಸಿದರು ನಿನ್ನ ದಾಸರಾ ಶವಗಳನು ಗಗನ ಪಕ್ಷಿಗಳಿಗೆ / ಹಾಕಿದರು ನಿನ್ನ ಭಕ್ತರ ಮಾಂಸವನು ಕಾಡುಮೃಗಗಳಿಗೆ //
3 : ನೀರಂತೆ ಚೆಲ್ಲಿಹರಾ ನೆತ್ತರನು ಜೆರುಸಲೇಮ್ ಸುತ್ತಲು / ನಮ್ಮವರ ಶವಗಳನು ಹೂಳಲು ಯಾರೂ ಇಲ್ಲದಿರಲು //
4 : ನಿಂದಾಸ್ಪದರಾದೆವು ನೆರೆಹೊರೆಯ ಜನಾಂಗಗಳಿಗೆ / ಗುರಿಯಾದೆವು ಸುತ್ತಣವರ ಹಾಸ್ಯಕುಚೋದ್ಯಗಳಿಗೆ //
5 : ನಿನ್ನ ಕೋಪತಾಪ ಹೇ ಪ್ರಭೂ, ಇನ್ನೆಷ್ಟರವರೆಗೆ? / ಉರಿಯುತ್ತಿರಬೇಕೆ ಸದಾ ನಿನ್ನ ರೋಷಾಗ್ನಿಯ ಧಗೆ?//
8 : ಹೊರಿಸಬೇಡ ಪೂರ್ವಿಕರ ತಪ್ಪುಗಳನು ನಮ್ಮ ಮೇಲೆ / ಉರಿಸಂಕಟದಲ್ಲಿರುವೆವು, ತೋರೆಮಗೆ ಕರುಣೆಯನೀಗಲೆ //
9 : ದೇವಾ, ಮುಕ್ತಿದಾತ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ / ಪಾಪಗಳನು ಅಳಿಸಿ ನಮ್ಮನುದ್ಧರಿಸು ನಿನ್ನ ನಾಮದ ಪ್ರಯುಕ್ತ //

ಶುಭಸಂದೇಶ - ಲೂಕ 1೦:  13-16
“ಕೊರಾಜ್ಜಿನ್ ಪಟ್ಟಣವೇ, ನಿನಗೆ ಧಿಕ್ಕಾರ! ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ! ನಿಮ್ಮಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಬಳಿದುಕೊಂಡು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗುತ್ತಿದ್ದರು. ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಸಹನೀಯವಾಗಿರುವುದು. ಎಲೈ ಕಫೆರ್ನವುಮ್ ಪಟ್ಟಣವೇ, ನೀನು ಸ್ವರ್ಗಕ್ಕೇರುವೆ ಎಂದು ನೆನಸುತ್ತಿಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ,” ಎಂದರು ಯೇಸುಸ್ವಾಮಿ. ಅನಂತರ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ನಿಮ್ಮನ್ನು ಆಲಿಸುವವನು ನನ್ನನ್ನೇ ಆಲಿಸುತ್ತಾನೆ; ನಿಮ್ಮನ್ನು ಅಲಕ್ಷ್ಯಮಾಡುವವನು ನನ್ನನ್ನೇ ಅಲಕ್ಷ್ಯಮಾಡುತ್ತಾನೆ; ನನ್ನನ್ನು ಅಲಕ್ಷ್ಯಮಾಡುವವನಾದರೋ ನನ್ನನ್ನು ಕಳುಹಿಸಿದಾತನನ್ನೇ ಅಲಕ್ಷ್ಯ ಮಾಡುತ್ತಾನೆ,” ಎಂದರು.


ಚಿಂತನೆ

ಸ್ಮರಣೆ: ಆಸಿಸಿಯ ಸಂತ ಫ್ರಾನ್ಸಿಸ್

ಕೊರಾಜ್ಜಿನ್ ಮತ್ತು ಬೆತ್ಸಾಯಿದ (ಬೆತ್ಸಾಯಿದ ಎಂದರೆ ಮೀನುಗಾರನ ಮನೆ ಎಂದರ್ಥ) ಪಟ್ಟಣಗಳು ಯೆಹೂದ್ಯ ಪಟ್ಟಣಗಳಾಗಿದ್ದವು. ಟೈರ್ ಮತ್ತು ಸಿದೋನ್ ಪಟ್ಟಣಗಳು ಯೆಹೂದ್ಯ ಪಟ್ಟಣಗಳಾಗಿರಲಿಲ್ಲ. ಅಲ್ಲಿ ಅನ್ಯದೇವತೆಗಳ ಆರಾಧನೆ ನಡೆಯುತ್ತಿತ್ತು. (ಅಮೋಸ ೧:೯, ಯೆಶಾಯ ೨೩:೧-೮, ಯೆರೆಮಿಯಾ ೨೫:೨೨). ಕೊರಾಜ್ಜಿನ್ , ಬೆತ್ಸಾಯಿದ, ಕಫೆರ್ನವುಮ್ ಪಟ್ಟಣಗಳು ದೇವರ ವಾಕ್ಯವನ್ನು ಆಲಿಸುವ ಭಾಗ್ಯ ಪಡೆದವು ಮತ್ತು ತಮ್ಮ ಜೀವನ ಪರಿವರ್ತನೆಗೆ ಒಂದು ಸುವರ್ಣ ಅವಕಾಶ ದೊರಕಿತ್ತು. ಆದರೆ ಅವರು ತಮಗೆ ನೀಡಿದ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳದೆ `ರಕ್ಷಕ’ನನ್ನು ಮತ್ತು ಆತನ ಸ್ವರವನ್ನು ತಿರಸ್ಕರಿಸಿದರು. ಟೈರ್ ಮತ್ತು ಸಿದೋನ್ ಜನರಿಗೆ ದೇವರ ಸ್ವರ ಆಲಿಸುವ ಅವಕಾಶ ಸಿಗಲಿಲ್ಲವಾದ್ದರಿಂದ ನ್ಯಾಯ ತೀರ್ಪಿನ ದಿನ ಈ ನಗರಗಳು ದೇವರ ಕರುಣೆಯನ್ನು ಪಡೆಯುವುದು ಕ್ರೈಸ್ತರನ್ನು ಮತ್ತು ಕ್ರೈಸ್ತೇತರರನ್ನು ಬೇರೆ ಬೇರೆ ಮಾನದಂಡದಿಂದ ತೀರ್ಪಿಡಲಾಗುವುದು ಎಂದು ತಿಳಿಸುತ್ತಾರೆ ಯೇಸು. `ಹೆಚ್ಚು ಪಡೆದವನಿಂದ ಹೆಚ್ಚನ್ನು ನಿರೀಕ್ಷಿಸಲಾಗುವುದು’.

No comments:

Post a Comment