Thursday, 19 September 2019

ಸಾಧಾರಣ ಕಾಲದ ಇಪ್ಪತ್ನಾಲ್ಕನೇ ವಾರ ಶುಕ್ರವಾರ

ಸಾಧಾರಣ ಕಾಲದ ಇಪ್ಪತ್ನಾಲ್ಕನೇ ವಾರ ಶುಕ್ರವಾರ

2೦/ಕೆಂಪು/ಶುಕ್ರ/ಸಂತ ಆಂಡ್ರ್ಯೂ ಕಿಮ್- ಟೆಗಾನ್,(ಯಾ) ಮತ್ತು ಪಾಲ್   ಚೋಂಗ್ ಹ-ಸಾಂಗ್ ಮತ್ತು  ಸಂಗಡಿಗಳು, (ರ.ಸಾ),(ಸ್ಮರಣೆ)
1ನೇ ವಾಚನ - 1ತಿಮೋ 6: 2-12
ಕೀರ್ತನೆ 49: 5-6, 8-9, 16, 19
ಶುಭಸಂದೇಶ - ಲೂಕ 8: 1-3

1ನೇ ವಾಚನ - 1ತಿಮೋ 6: 2-12
ಒಂದು ವೇಳೆ ಯಜಮಾನರು ಕ್ರೈಸ್ತವಿಶ್ವಾಸಿಗಳಾಗಿದ್ದರೆ ತಮ್ಮ ಯಜಮಾನರು ಸಹೋದರ ವರ್ಗದವರು ಎಂದು ಉದಾಸೀನ ಮಾಡಬಾರದು. ಬದಲಿಗೆ ಹೆಚ್ಚಿನ ಉತ್ಸಾಹದಿಂದ ಸೇವೆ ಸಲ್ಲಿಸಬೇಕು. ಏಕೆಂದರೆ, ಅವರ ಸೇವೆಯ ಪ್ರಯೋಜನವನ್ನು ಪಡೆಯುತ್ತಿರುವ ಯಜಮಾನರು, ಕ್ರೈಸ್ತ ವಿಶ್ವಾಸಿಗಳೂ ಪ್ರೀತಿಗೆ ಪಾತ್ರರಾದವರು. ಈ ವಿಷಯಗಳ ಬಗ್ಗೆ ಆಜ್ಞಾಪೂರ್ವಕವಾಗಿ ಬೋಧಿಸು. ಯಾರಾದರೂ ನಮ್ಮ ಧಾರ್ಮಿಕ ಉಪದೇಶವನ್ನು ಅನುಸರಿಸದೆ, ಪ್ರಭು ಯೇಸುಕ್ರಿಸ್ತರ ನೈಜ ಬೋಧನೆಯನ್ನು ಒಪ್ಪಿಕೊಳ್ಳದೆ ಭಿನ್ನ ಬೋಧನೆಯನ್ನು ಮಾಡುವುದಾದರೆ, ಅಂಥವನು ಅಹಂಭಾವಿ ಹಾಗೂ ಅಜ್ಞಾನಿಯೇ ಸರಿ. ಅಂಥವನಿಗೆ ಒಣ ವಾಗ್ವಾದಗಳಲ್ಲಿ ಮತ್ತು ಬರಡು ಮಾತುಗಳಲ್ಲಿ ಬಲು ಹಂಬಲ. ಇವುಗಳು ಅಸೂಯೆ, ಕಲಹ, ದೂಷಣೆ, ಅನುಮಾನ ಮತ್ತು ಕಚ್ಚಾಟಗಳಿಗೆ ಎಡೆಕೊಡುತ್ತವೆ. ಮತಿಗೆಟ್ಟ ಅಂಥವರಲ್ಲಿ ಸತ್ಯವೆಂಬುದು ಇರದು. ಧಾರ್ಮಿಕ ಸೇವೆಯು ಧನಗಳಿಕೆಯ ಸಾಧನವೆಂದೇ ಇವರ ನಂಬಿಕೆ. ಇರುವುದರಲ್ಲೇ ಸಂತೃಪ್ತನಾಗಿರುವವನು ಭಕ್ತಿಯಲ್ಲಿ ನಿಜಕ್ಕೂ ಶ್ರೀಮಂತನಾಗಿರುತ್ತಾನೆ. ಹುಟ್ಟಿದಾಗ ನಾವು ಈ ಲೋಕಕ್ಕೆ ಏನನ್ನೂ ತರಲಿಲ್ಲ; ಸಾಯುವಾಗ ಏನನ್ನೂ ಕೊಂಡು ಒಯ್ಯುವುದಿಲ್ಲ. ನಮಗೆ ಊಟ, ಬಟ್ಟೆ ಇದ್ದರೆ ಅಷ್ಟೇ ಸಾಕು. ಐಶ್ವರ್ಯವಂತರಾಗಬೇಕೆಂದು ಆಶಿಸುವವರು ಅನೇಕ ಪ್ರಲೋಭನೆಗಳಿಗೆ ಒಳಗಾಗುತ್ತಾರೆ. ನಿರರ್ಥಕವೂ ಹಾನಿಕರವೂ ಆದ ಆಶಾಪಾಶಗಳಲ್ಲಿ ಸಿಕ್ಕಿಬೀಳುತ್ತಾರೆ. ಇಂಥ ದುರಾಶೆಗಳು ಮನುಷ್ಯರನ್ನು ಕೇಡಿಗೂ ವಿನಾಶಕ್ಕೂ ಒಯ್ಯುತ್ತವೆ. ಹಣದ ವ್ಯಾಮೋಹವೇ ಎಲ್ಲಾ ಕೇಡುಗಳಿಗೂ ಮೂಲ. ಹಣದ ವ್ಯಾಮೋಹದಿಂದಲೇ ಹಲವರು ವಿಶ್ವಾಸದಿಂದ ದೂರ ಸರಿದು, ತಮ್ಮ ಹೃದಯಗಳನ್ನು ಹಲತರದ ತಿವಿತಗಳಿಗೆ ಗುರಿ ಮಾಡುತ್ತಾರೆ. ದೇವರ ಭಕ್ತನಾದ ನೀನು ಈ ಎಲ್ಲಾ ಕೇಡುಗಳಿಂದ ದೂರವಿರು. ದೇವರೊಡನೆ ಸತ್ಸಂಬಂಧ, ಭಕ್ತಿ, ವಿಶ್ವಾಸ, ಪ್ರೀತಿ, ಸ್ಥಿರಚಿತ್ತ, ಸಾತ್ವಿಕತೆ - ಇವೇ ಮೊದಲಾದ ಸದ್ಗುಣಗಳನ್ನು ಸಂಪಾದಿಸಲು ಪ್ರಯತ್ನಿಸು. ನಿತ್ಯಜೀವವೆಂಬ ಬಹುಮಾನವನ್ನು ಗಳಿಸಲು ವಿಶ್ವಾಸವೆಂಬ ಪಂದ್ಯದಲ್ಲಿ ಉತ್ತಮ ಓಟಗಾರನಾಗಿ ಓಡು. ಇದಕ್ಕಾಗಿಯೇ ದೇವರು ನಿನ್ನನ್ನು ಆರಿಸಿಕೊಂಡರೆಂಬುದನ್ನು ಮರೆಯಬೇಡ. ಈ ಗುರಿಯನ್ನು ಮುಂದಿಟ್ಟುಕೊಂಡೇ ನೀನು ಅನೇಕರ ಮುಂದೆ ವಿಶ್ವಾಸಪ್ರಮಾಣ ಮಾಡಿರುವೆ.

ಕೀರ್ತನೆ 49: 5-6, 8-9, 16, 19
5 : ಆಪತ್ಕಾಲದಲಿ ನಾನೇಕೆ ಭಯಪಡಬೇಕು?/ ದ್ವೇಷಿಗಳ ದಾಳಿಗೆ ನಾನೇಕೆ ಹೆದರಬೇಕು?// 
6 : ಅವರ ಭರವಸೆ ಸಿರಿಸಂಪತ್ತಿನಲಿ / ಅವರ ಹಿರಿಮೆ ಅಧಿಕಾಸ್ತಿಪಾಸ್ತಿಯಲಿ // 
8 : ಪ್ರಾಣಕೆ ತೆರಬೇಕಾದ ಈಡು ಅಮೂಲ್ಯ / ಅದಕೆ ಸಾಕಷ್ಟು ತೆರಲು ಯಾರಿಗೂ ಅಸಾಧ್ಯ // 
9 : ಸಮಾಧಿಗಿಳಿಯದೆ ಸದಾ ಬಾಳುವ ಬಯಕೆ / ಮಾನವ ಶಕ್ತಿಗೆ ವಿೂರಿದುದು ಆ ಗಳಿಕೆ / 
16 : ಒಬ್ಬನು ಧನಿಕನಾದಾಗ ನೀ ಕಳವಳಗೊಳ್ಳಬೇಡ / ಅವನ ಮನೆಯ ಸೊಬಗನು ಕಂಡು ನಿರಾಶೆಗೊಳ್ಳಬೇಡ // 
17 : ಸಾಯುವಾಗ ಏನನೂ ಕೊಂಡು ಹೋಗುವುದಿಲ್ಲ / ಘನತೆ ಅವನ ಬೆನ್ನು ಹತ್ತಿ ಹೋಗುವಂತಿಲ್ಲ // 
18 : ಸಿರಿಬಂದಾಗ ಕೊರತೆಯಿರದು ಹೊಗಳಿಕೆಗೆ / ಆತ್ಮಸ್ತುತಿ, ಮುಖಸ್ತುತಿ, ಇವುಗಳ ಮೆರೆತಕೆ // 
19 : ಸೇರದಿರನಾತ ಪಿತೃಗಳಧೋಗತಿಯನು / ಅವಿವೇಕಿ ಕಾಣನು ಎಂದಿಗೂ ಪರಂಜ್ಯೋತಿಯನು //

ಶುಭಸಂದೇಶ - ಲೂಕ 8: 1-3
ತರುವಾಯ ಯೇಸುಸ್ವಾಮಿ ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಸಾರುತ್ತಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚಾರ ಮಾಡಿದರು. ಹನ್ನೆರಡು ಮಂದಿ ಶಿಷ್ಯರೂ ಅವರೊಡನೆ ಇದ್ದರು. ದೆವ್ವಗಳ ಕಾಟದಿಂದಲೂ ರೋಗರುಜಿನಗಳಿಂದಲೂ ಬಿಡುಗಡೆ ಹೊಂದಿದ್ದ ಕೆಲವು ಮಹಿಳೆಯರು ಅವರ ಜೊತೆಯಲ್ಲಿದ್ದರು. ಅವರಾರೆಂದರೆ: ಏಳು ದೆವ್ವಗಳಿಂದ ವಿಮುಕ್ತಳಾಗಿದ್ದ ಮಗ್ದಲದ ಮರಿಯಳು, ಹೆರೋದನ ಅರಮನೆಯ ಮೇಲ್ವಿಚಾರಕನಾಗಿದ್ದ ಕೂಜನ ಪತ್ನಿ ಯೊವಾನ್ನಳು, ಅಲ್ಲದೆ ಸುಸಾನ್ನಳು, ಮತ್ತಿತರ ಅನೇಕರು. ಇವರು ತಮ್ಮ ಆಸ್ತಿಪಾಸ್ತಿಯನ್ನು ವೆಚ್ಚಮಾಡಿ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರಮಾಡುತ್ತಿದ್ದರು.


ಚಿಂತನೆ
ಸಂತ ಆಂಡ್ರ್ಯೂ ಕಿಮ್ ಟೆ-ಗಾನ್ (ಯಾಜಕ)
ಪಾವ್ಲ್ ಚೋಂಗ್ ಹ-ಸಾಂಗ್ ಹಾಗೂ ಸಂಗಡಿಗರು (ರಕ್ತಸಾಕ್ಷಿಗಳು)

ದೇವರ ರಕ್ಷಣಾ ಚರಿತ್ರೆಯಲ್ಲಿ ಮಹಿಳೆಯರ ಪಾತ್ರ ಬಹಳಷ್ಟಿದೆ. ಮಹಿಳೆಯರು ಮೃದು ಸ್ವಭಾವದವರು ಎಲ್ಲಿಯಾದರೂ ಪ್ರಾರ್ಥನಾ ಕೂಟವಿದ್ದರೆ, ಬಲಿಪೂಜೆ ಇದ್ದರೆ ಹೆಚ್ಚಾಗಿ ಸೇರುವವರೇ ಮಹಿಳೆಯರು.

ಯೇಸುಸ್ವಾಮಿಗೂ ಕೂಡ ಅನೇಕ ಮಹಿಳೆಯರು ಸಹಾಯಮಾಡುತ್ತಿದ್ದರು. ಅನೇಕ ಮಹಿಳೆಯರು ತಮ್ಮಲ್ಲಿದ್ದ ಶ್ರೀಮಂತಿಕೆ ಮತ್ತು ಸಂಪತ್ತಿನಿಂದ  ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರ ಮಾಡುತ್ತಿದ್ದರು. ಮಹಿಳೆಯರಲ್ಲಿ ಮಾತೃ ಹೃದಯವಿರುವುದರಿಂದ ದೇವರ ಕೆಲಸಕಾರ್ಯಗಳಲ್ಲಿ ತಮ್ಮನ್ನೇ ತೊಡಗಿಸಿಕೊಳ್ಳುತ್ತಾರೆ. ಇಂಥ ಮಹಿಳೆಯರನ್ನ ಗೌರವಿಸಿ ಅವರಿಗೆ ಸ್ಥಾನಮಾನ ಕಲ್ಪಿಸಿದ್ದಲ್ಲಿ ಧರ್ಮಸಭೆ ಇನ್ನಷ್ಟು ಮುನ್ನಡೆ ಮತ್ತು ಸೇವಾ ಕಾರ್ಯ ಸಾಧಿಸುವುದರಲ್ಲಿ ಸಂಶಯವಿಲ್ಲ.

No comments:

Post a Comment