Thursday, 19 September 2019

ಸಾಧಾರಣ ಕಾಲದ ಇಪ್ಪತ್ತೈದನೇ ಭಾನುವಾರ

ಸಾಧಾರಣ ಕಾಲದ ಇಪ್ಪತ್ತೈದನೇ ಭಾನುವಾರ

22/ಹಸಿರು/ಭಾನು
1ನೇ ವಾಚನ ಆಮೋಸ 8: 4-7
ಕೀರ್ತನೆ - 113: 1-2, 4-8
2ನೇ  ವಾಚನ - 1 ತಿಮೋ 2: 1-8
ಶುಭಸಂದೇಶ - ಲೂಕ 16: 1-13

1ನೇ ವಾಚನ ಆಮೋಸ 8: 4-7
ದಿಕ್ಕಿಲ್ಲದವರನ್ನು ತುಳಿದುಬಿಡುವವರೇ, ನಾಡಿನ ಬಡವರನ್ನು ನಿರ್ಮೂಲ ಮಾಡುವವರೇ, ಕೇಳಿ, “ದವಸಧಾನ್ಯಗಳನ್ನು ಮಾರಬೇಕಲ್ಲ, ಈ ಅಮಾವಾಸ್ಯೆ ತೀರುವುದು ಯಾವಾಗ? ಗೋದಿಯ ವ್ಯಾಪಾರ ಮಾಡಬೇಕಾಗಿದೆ. ಸಬ್ಬತ್ ದಿನ ಕಳೆಯುವುದು ಯಾವಾಗ? ಕೊಳಗವನ್ನು ಕಿರಿದು ಮಾಡೋಣ, ತೊಲವನ್ನು ಹಿರಿದು ಮಾಡೋಣ, ಕಳ್ಳತಕ್ಕಡಿಯನ್ನು ಬಳಸೋಣ: ಬಡವರನ್ನು ಬೆಳ್ಳಿಗೆ, ದಿಕ್ಕಿಲ್ಲದವನನ್ನು ಒಂದು ಜೊತೆ ಕೆರಕ್ಕೆ ಕೊಂಡುಕೊಳ್ಳೋಣ; ಗೋದಿಯ ನುಚ್ಚುನುಸಿಯನ್ನೂ ಬಿಡದಂತೆ ಮಾರಿಬಿಡೋಣ,” ಎಂದುಕೊಳ್ಳುತ್ತೀರಿ, ಅಲ್ಲವೆ? ಯಕೋಬನ ಮಹಿಮಾನ್ವಿತ ಸರ್ವೇಶ್ವರ ಆಣೆಯಿಟ್ಟು ಹೇಳುವುದೇನೆಂದರೆ; “ಖಂಡಿತವಾಗಿ ಅವರ ದುಷ್ಕøತ್ಯಗಳಲ್ಲಿ ಯಾವುದನ್ನೂ ಎಂದಿಗೂ ನಾನು ಮರೆಯಲಾರೆ.

ಕೀರ್ತನೆ - 113: 1-2, 4-8
1 : ಅಲ್ಲೆಲೂಯ / ಪ್ರಭುವಿನ ದಾಸರೇ, ಸ್ತುತಿಮಾಡಿ / ಪ್ರಭುವಿನ ನಾಮಸ್ತುತಿಯನು ಮಾಡಿ //
2 : ಪ್ರಭುವಿನ ಸಿರಿನಾಮವು ಪೂಜ್ಯ / ಇಂದಿಗೂ ಎಂದೆಂದಿಗೂ ಪೂಜ್ಯ //
4 : ಸಕಲ ಜಾತಿಜನಾಂಗಗಳಲಿ ಪ್ರಭು ಶ್ರೇಷ್ಠ / ಆತನ ಮಹಿಮೆ ಗಗನಕ್ಕಿಂತಲೂ ಉತ್ಕøಷ್ಟ //
5 : ನಮ್ಮ ಪ್ರಭು ದೇವನಂತೆ ಯಾರು ಸಮರ್ಥ /
6 : ಇಹಪರಗಳನು ವೀಕ್ಷಿಸಲಾತ ಶಕ್ತ //
7 : ದೀನರನು ಎಬ್ಬಿಸುವನು ಧೂಳಿನಿಂದ / ಬಡವರನು ಎತ್ತುವನು ತಿಪ್ಪೆಯಿಂದ //
8 : ಕೂರಿಸುವನಾತ ಅವರನು ಅಧಿಪತಿಗಳ ನಡುವೆ / ತನ್ನ ಪ್ರಜೆಯನಾಳುವಾ ಅಧಿಪತಿಗಳ ನಡುವೆ //

2ನೇ  ವಾಚನ - 1 ತಿಮೋ 2: 1-8
ಮೊತ್ತಮೊದಲು ಮಾನವರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆ, ಪ್ರಾರ್ಥನೆ, ಬಿನ್ನಹ ಹಾಗೂ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ. ನಾವು ದೈವಭಕ್ತಿಯುಳ್ಳವರಾಗಿ ಮತ್ತು ಗೌರವಯುತರಾಗಿ ಶಾಂತಿ ಸಮಾಧಾನದಿಂದಲೂ ನೆಮ್ಮದಿಯಿಂದಲೂ ಜೀವಿಸಲು ಅನುಕೂಲವಾಗುವಂತೆ ಅರಸರಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಬೇಕು. ಹೀಗೆ ಮಾಡುವುದು ಒಳ್ಳೆಯದು, ನಮ್ಮ ಉದ್ದಾರಕರಾದ ದೇವರಿಗೆ ಮೆಚ್ಚುಗೆಯಾದುದು. ಎಲ್ಲಾ ಮಾನವರೂ ಸತ್ಯವನ್ನರಿತು ಜೀವೋದ್ಧಾರ ಪಡೆಯಬೇಕೆಂಬುದೇ ದೈವೇಚ್ಛೆ. ದೇವರು ಒಬ್ಬರೇ; ದೇವರನ್ನೂ ಮಾನವರನ್ನೂ ಒಂದುಗೂಡಿಸುವ ಮಧ್ಯಸ್ಥರೂ ಒಬ್ಬರೇ; ಅವರೇ ಮಾನವರಾಗಿರುವ ಕ್ರಿಸ್ತಯೇಸು. ಇವರು ಎಲ್ಲರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸರ್ವರೂ ಉದ್ಧಾರವಾಗಬೇಕೆಂಬ ದೈವೇಚ್ಛೆಗೆ ಸೂಕ್ತ ಸಮಯದಲ್ಲಿ ಸಾಕ್ಷಿ ನೀಡಿದರು. ವಿಶ್ವಾಸ ಮತ್ತು ಸತ್ಯದ ಸಂದೇಶವನ್ನು ಸಾರುವುದಕ್ಕಾಗಿಯೇ ದೇವರು ನನ್ನನ್ನು ಪ್ರೇಷಿತನನ್ನಾಗಿಯೂ ಯೆಹೂದ್ಯೇತರರಿಗೆ ಬೋಧಕನನ್ನಾಗಿಯೂ ನೇಮಕಮಾಡಿದರು. ನಾನು ಹೇಳುತ್ತಿರುವುದು ಸುಳ್ಳಲ್ಲ, ಸತ್ಯಸ್ಯ ಸತ್ಯ. ಪ್ರಾರ್ಥನೆ ಮಾಡುವ ಸ್ಥಳಗಳಲ್ಲೆಲ್ಲಾ ಪುರುಷರು ಕೋಪತಾಪವಿಲ್ಲದೆ, ಕೋಲಾಹಲವಿಲ್ಲದೆ ಕರಗಳನ್ನೆತ್ತಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಬೇಕು ಎಂಬುದೇ ನನ್ನ ಅಪೇಕ್ಷೆ.

ಶುಭಸಂದೇಶ - ಲೂಕ 16: 1-13 
ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ ಇಂತೆಂದರು: “ಒಬ್ಬ ಧನಿಕನಿದ್ದ. ಅವನ ವ್ಯವಹಾರವನ್ನು ನೋಡಿಕೊಳ್ಳಲು ಒಬ್ಬ ಮೇಸ್ತ್ರಿಯಿದ್ದ. ಇವನು ಧನಿಕನ ಆಸ್ತಿಯನ್ನು ಹಾಳುಮಾಡುತ್ತಿದ್ದಾನೆಂದು ದೂರು ಬಂದಿತು. ಧನಿಕನು ಅವನನ್ನು ಕರೆದು, ‘ಏನಿದು, ನಿನ್ನ ವಿಷಯವಾಗಿ ನಾನು ಹೀಗೆಲ್ಲ ಕೇಳುತ್ತಾ ಇದ್ದೇನೆ? ನಿನ್ನ ಕೆಲಸದ ಲೆಕ್ಕಾಚಾರವನ್ನು ಒಪ್ಪಿಸಿಬಿಡು. ಇನ್ನು ನೀನು ಮೇಸ್ತ್ರಿ ಆಗಿರಲು ಆಗದು,’ ಎಂದ. ಆಗ ಮೇಸ್ತ್ರಿ, ‘ಈಗ ಏನು ಮಾಡಲಿ? ಯಜಮಾನನು ನನ್ನನ್ನು ಕೆಲಸದಿಂದ ತೆಗೆದು ಬಿಡುತ್ತಾನಲ್ಲಾ; ಅಗೆಯಲು ಶಕ್ತಿ ಸಾಲದು; ಭಿಕ್ಷೆ ಬೇಡಲು ನನಗೆ ನಾಚಿಕೆ,’ ಎಂದು ಚಿಂತಾಕ್ರಾಂತನಾದ. ಮರುಕ್ಷಣ, ‘ಸರಿ, ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ ಜನರು ನನ್ನನ್ನು ತಮ್ಮ ಮನೆಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ಈಗ ಗೊತ್ತಾಯಿತು,’ ಎಂದುಕೊಂಡ. ಯಜಮಾನನ ಸಾಲಗಾರರನ್ನು ಒಬ್ಬೊಬ್ಬರನ್ನಾಗಿ ಬರಮಾಡಿಕೊಂಡು, ‘ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲ ಎಷ್ಟು?’ ಎಂದು ಮೊದಲನೆಯವನನ್ನು ಕೇಳಿದ. ಅವನು, ‘ನೂರು ಬುದ್ದಲಿ ಎಣ್ಣೆ,’ ಎಂದ. ಅದಕ್ಕೆ ಮೇಸ್ತ್ರಿ, ‘ಇಗೋ, ನಿನ್ನ ಪತ್ರ, ಕುಳಿತುಕೊಂಡು “ಐವತ್ತು” ಎಂದು ಬೇಗನೆ ಬರೆ,’ ಎಂದ. ಬಳಿಕ ಇನ್ನೊಬ್ಬನನ್ನು ಕರೆದು, ‘ನೀನೆಷ್ಟು ಸಾಲ ತೀರಿಸಬೇಕು?’ ಎಂದು ಕೇಳಿದ. ಅವನು ‘ನೂರು ಖಂಡುಗ ಗೋದಿ’ ಎಂದಾಗ ‘ಇಗೋ ನಿನ್ನ ಪತ್ರ, “ಎಂಬತ್ತು” ಎಂದು ಬರೆ’, ಎಂದ. “ಈ ಅಪ್ರಾಮಾಣಿಕ ಮೇಸ್ತ್ರಿ ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಸಿಸಿದ. ಏಕೆಂದರೆ, ತಮ್ಮ ತಮ್ಮ ವ್ಯವಹಾರಗಳಲ್ಲಿ ಲೌಕಿಕ ಜನರು ಬೆಳಕಿನ ರಾಜ್ಯದ ಜನರಿಗಿಂತ ಜಾಣರು. ನಾನು ಹೇಳುವುದನ್ನು ಗಮನಿಸಿರಿ; ಲೌಕಿಕ ಆಸ್ತಿಪಾಸ್ತಿಯಿಂದ ಗೆಳೆಯರನ್ನು ಗಳಿಸಿಕೊಳ್ಳಿರಿ. ಅದು ವ್ಯಯವಾಗಿ ಹೋದಾಗ ನಿಮ್ಮನ್ನು ಅಮರ ನಿವಾಸಕ್ಕೆ ಸ್ವಾಗತಿಸಲಾಗುವುದು. ಸಣ್ಣ ವಿಷಯಗಳಲ್ಲಿ ಪ್ರಾಮಾಣಿಕನಾಗಿ ನಡೆದುಕೊಳ್ಳುವವನು ದೊಡ್ಡ ವಿಷಯಗಳಲ್ಲೂ ಪ್ರಾಮಾಣಿಕನಾಗಿ ನಡೆದುಕೊಳ್ಳುತ್ತಾನೆ. ಸಣ್ಣ ವಿಷಯಗಳಲ್ಲಿ ದ್ರೋಹ ಮಾಡುವವನು ದೊಡ್ಡ ವಿಷಯಗಳಲ್ಲೂ ದ್ರೋಹ ಮಾಡುತ್ತಾನೆ. ಲೌಕಿಕ ಆಸ್ತಿಪಾಸ್ತಿಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮನ್ನು ನಂಬಿ ನೈಜ ಸಂಪತ್ತನ್ನು ನಿಮ್ಮ ವಶಕ್ಕೆ ಕೊಡುವವರಾರು? ಇನ್ನೊಬ್ಬರಿಗೆ ಸೇರಿದ ವಸ್ತುಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮ ಸ್ವಂತಕ್ಕೆ ಏನನ್ನಾದರೂ ಕೊಡುವವರಾರು? “ಯಾವನೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾಗದು; ಅವನು ಒಬ್ಬನನ್ನು ದ್ವೇಷಿಸಿ, ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು,” ಎಂದರು.


ಚಿಂತನೆ
ಸಂತ ಮೌರಿಸ್ ಮತ್ತು ಸಂಗಡಿಗರು

ನಮ್ಮ ಗುರಿ ಸ್ವರ್ಗ ಸಾಮ್ರಾಜ್ಯವನ್ನು ಗಳಿಸುವುದಾಗಿದೆ. ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ವಿವಿಧ ರೀತಿಯ ಗುರಿಗಳನ್ನು ಆಸೆ-ಅಭಿಲಾಷೆಗಳನ್ನು ಹೊಂದಿರುತ್ತಾನೆ. ಅವಕ್ಕೋಸ್ಕರ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ದುಡಿಯುತ್ತಾನೆ. ಆ ಗುರಿಯನ್ನು ಸಾಧಿಸಿದಾಗ ಬಹಳ ತೃಪ್ತಿಯ ಜೀವನ ನಡೆಸುತ್ತಾನೆ.
ಇಂದಿನ ಆರಾಧನೆಯ ಎಲ್ಲಾ ವಾಚನಗಳನ್ನು ಕ್ರೈಸ್ತೀಯ ಜೀವನದ ಗುರಿಯ ಬಗ್ಗೆ ಪರೀಕ್ಷೆ ಮಾಡಲು ನಮ್ಮನ್ನು ಆಹ್ವಾನಿಸುತ್ತವೆ. ಈ ಗುರಿಯೇ ಪ್ರಭುವಾಗ್ಧಾನಿಸಿರುವ ಸ್ವರ್ಗ. ಇದನ್ನು ಗಳಿಸಲು ಬಹಳ ಶ್ರಮಪಟ್ಟು ದುಡಿಯಬೇಕಾಗಿಲ್ಲ ಬದಲಾಗಿ ಇಷ್ಟಪಟ್ಟು ಪ್ರಭುವಿನ ಮಾತಿನಂತೆ ಜೀವಿಸಬೇಕಾಗಿದೆ.
ಇಂದಿನ ಮೊದಲನೆಯ ವಾಚನದಲ್ಲಿ ನ್ಯಾಯ ನೀತಿಗೆ ಹೆಸರು ವಾಸಿಯಾದ ಪ್ರವಾದಿ ಆಮೋಸನು, ಮೋಸ ಮಾಡುವವರನ್ನು, ಬಡವರಿಗೆ ಶೋಷಣೆ ಮಾಡುವವರನ್ನು ಖಂಡಿಸುತ್ತಾನೆ, ಶ್ರೀಮಂತರನ್ನು ಟೀಕಿಸುತ್ತಾನೆ. ಶುಭಸಂದೇಶದಲ್ಲಿ ಕಂಡುಬರುವ ಮೇಸ್ತ್ರಿಯು ತನ್ನ ಧನಿಕನನ್ನು ಮೋಸಗೊಳಿಸಿ, ತನ್ನ ಭವಿಷ್ಯದ ಬಗ್ಗೆ ಮುಂದಾಲೋಚನೆ ಮಾಡಿ ಸಾಲಗಾರರಿಗೆ ತನ್ನ ಪಾಲನ್ನು ನೀಡಿ ಸಹಾಯಮಾಡುತ್ತಾನೆ. ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾನೆ.
ನಮ್ಮ ಜೀವನವು ಹಣ-ಧನಕ್ಕಿಂತ ಎಷ್ಟೋ ಮೇಲಾಗಿದೆ. ವಜ್ರ ವೈಡೂರ್ಯಗಳಿಗಿಂತ ಬೆಲೆಬಾಳುವಂತಹದ್ದು. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆ ಮಾಡಲಾಗದು (ಲೂಕ ೧೬:೧೩) ನಾವು ಬಾಳೋಣ ಇತರರನ್ನು ಬಾಳಲು ಬಿಡೋಣ.

No comments:

Post a Comment