Sunday, 22 September 2019

ಸಾಧಾರಣ ಕಾಲದ ಇಪ್ಪತ್ತಾರನೇ ಭಾನುವಾರ

ಸಾಧಾರಣ ಕಾಲದ ಇಪ್ಪತ್ತಾರನೇ ಭಾನುವಾರ

29/ ಹಸಿರು/ಭಾನು
1ನೇ ವಾಚನ - ಆಮೋ 6: 1, 4-7
ಕೀರ್ತನೆ  -  146:  6-1೦
2ನೇ  ವಾಚನ - 1 ತಿಮೊ 6: 11-16
ಶುಭಸಂದೇಶ - ಲೂಕ  16:19-31

1ನೇ ವಾಚನ - ಆಮೋ 6: 1, 4-7
ಇಸ್ರಯೇಲಿನ ಜನರು ನಿಮ್ಮ ಸಹಾಯಕೋರಿ ನಿಮ್ಮನ್ನು ಹುಡುಕಿಕೊಂಡು ಬರುವಷ್ಟು ಪ್ರತಿಭಾವಂತರಾಗಿರುವವರೇ, ನಿಮಗೆ ಧಿಕ್ಕಾರ! ಕಲ್ನೆ ಪಟ್ಟಣಕ್ಕೆ ಹೋಗಿ ನೋಡಿ. ಅಲ್ಲಿಂದ ಪ್ರಖ್ಯಾತ ಪಟ್ಟಣವಾದ ಹಮಾತಿಗೆ ನಡೆಯಿರಿ. ಹಮಾತಿನಿಂದ ಫಿಲಿಷ್ಟಿಯರ ಊರಾದ ಗಾತ್ ನಗರಕ್ಕೆ ಇಳಿದುಹೋಗಿರಿ. ಅವು ನಿಮ್ಮ ರಾಜ್ಯಗಳಿಗಿಂತ ದೊಡ್ಡವೋ? ಅವುಗಳ ಪ್ರಾಂತ್ಯ ನಿಮ್ಮ ಪ್ರಾಂತ್ಯಕ್ಕಿಂತ ಹಿರಿದೋ? ಆ ದುರ್ದಿನದಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಮುಖಂಡರೇ, ಮತ್ತಷ್ಟು ಶೀಘ್ರವಾಗಿ ಹಿಂಸಾಕ್ರಮಣವನ್ನು ಬರಮಾಡಿಕೊಳ್ಳುತ್ತೀರಿ. ದಂತದ ಮಂಚಗಳ ಮೇಲೆ ಮಲಗುವ ಜನರೇ, ನಿಮಗೆ ಧಿಕ್ಕಾರ! ಸುಖಾಸನಗಳಲ್ಲೂ ಸುಪ್ಪತ್ತಿಗೆಯ ಮೇಲೂ ಹಾಯಾಗಿ ಒರಗಿಕೊಂಡಿರುವವರೇ, ನಿಮಗೆ ಧಿಕ್ಕಾರ! ಮಂದೆಯ ಕುರಿಮರಿಗಳನ್ನು, ಕೊಟ್ಟಿಗೆಯ ಕರುಗಳನ್ನು ಕೊಂದು ತಿನ್ನುವವರೇ, ನಿಮಗೆ ಧಿಕ್ಕಾರ! ವೀಣೆಯನ್ನು ನುಡಿಸುತ್ತಾ ಮನಸ್ಸು ಬಂದಂತೆ ಹಾಡುವವರೇ, ದಾವೀದನಂತೆ ಹೊಸ ವಾದ್ಯಸಂಗೀತಗಳನ್ನು ರಚಿಸುವವರೇ, ನಿಮಗೆ ಧಿಕ್ಕಾರ! ಬೋಗುಣಿಬಟ್ಟಲುಗಳಲ್ಲಿ ದ್ರಾಕ್ಷಾರಸವನ್ನು ಕುಡಿಯುವವರೇ, ಅತ್ಯುತ್ತಮ ಸುಗಂಧ ತೈಲಗಳನ್ನು ಲೇಪಿಸಿಕೊಳ್ಳುವವರೇ, ನಿಮಗೆ ಧಿಕ್ಕಾರ! ಏಕೆಂದರೆ ನೀವು ಜೋಸೆಫನ ವಂಶದವರ ವಿನಾಶದ ಬಗ್ಗೆ ನಿಶ್ಚಿಂತರಾಗಿದ್ದೀರಿ. ಆದುದರಿಂದ ಗಡೀಪಾರಾಗುವವರಲ್ಲಿ ನೀವೇ ಮೊದಲಿಗರಾಗುವಿರಿ. ಆಗ ನಿಮ್ಮ ಸುಖಾಸನಗಳು ಮತ್ತು ಆಮೋದ ಪ್ರಮೋದಗಳು ಗತಿಸಿ ಹೋಗುವುವು.

ಕೀರ್ತನೆ  -  146:  6-1೦
6 : ಭೂಮ್ಯಾಕಾಶ, ಸಾಗರ, ಚರಾಚರಗಳನು ನಿರ್ಮಿಸಿದವ ಆತನೆ / ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೆ 7 : ದೊರಕಿಸುವನು ನ್ಯಾಯ ದಲಿತರಿಗೆ / ಒದಗಿಸುವನು ಆಹಾರ ಹಸಿದವರಿಗೆ / ನೀಡುವನು ಬಿಡುಗಡೆ ಬಂಧಿತರಿಗೆ 
8 : ಕಣ್ಣನ್ನೀಯುವನು ಪ್ರಭು ಕುರುಡರಿಗೆ / ಉದ್ಧಾರಕನಾ ಪ್ರಭು ಕುಗ್ಗಿದವರಿಗೆ / ಆತನ ಒಲವಿರುವುದು ಸಾಧು ಸಜ್ಜನರಿಗೆ 
9 : ರಕ್ಷಿಸುವನು ಪ್ರಭು ಪರದೇಶಿಗಳನು / ಆದರಿಸುವನು ಅನಾಥರನು, ವಿಧವೆಯರನು / ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು 
10 : ಪ್ರಭುವೇ ಅರಸನು ಸದಾಕಾಲಕು / ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು / ಅಲ್ಲೆಲೂಯ! //
2ನೇ  ವಾಚನ - 1 ತಿಮೊ 6: 11-16
ದೇವರ ಭಕ್ತನಾದ ನೀನು ಈ ಎಲ್ಲಾ ಕೇಡುಗಳಿಂದ ದೂರವಿರು. ದೇವರೊಡನೆ ಸತ್ಸಂಬಂಧ, ಭಕ್ತಿ, ವಿಶ್ವಾಸ, ಪ್ರೀತಿ, ಸ್ಥಿರಚಿತ್ತ, ಸಾತ್ವಿಕತೆ - ಇವೇ ಮೊದಲಾದ ಸದ್ಗುಣಗಳನ್ನು ಸಂಪಾದಿಸಲು ಪ್ರಯತ್ನಿಸು. ನಿತ್ಯಜೀವವೆಂಬ ಬಹುಮಾನವನ್ನು ಗಳಿಸಲು ವಿಶ್ವಾಸವೆಂಬ ಪಂದ್ಯದಲ್ಲಿ ಉತ್ತಮ ಓಟಗಾರನಾಗಿ ಓಡು. ಇದಕ್ಕಾಗಿಯೇ ದೇವರು ನಿನ್ನನ್ನು ಆರಿಸಿಕೊಂಡರೆಂಬುದನ್ನು ಮರೆಯಬೇಡ. ಈ ಗುರಿಯನ್ನು ಮುಂದಿಟ್ಟುಕೊಂಡೇ ನೀನು ಅನೇಕರ ಮುಂದೆ ವಿಶ್ವಾಸಪ್ರಮಾಣ ಮಾಡಿರುವೆ. ಸಕಲ ಸೃಷ್ಟಿಗೂ ಜೀವದಾತರಾದ ದೇವರ ಸನ್ನಿಧಿಯಲ್ಲಿ ಪೊಂತಿಯ ಪಿಲಾತನ ಮುಂದೆ ಸೂಕ್ತ ಸಾಕ್ಷಿ ನೀಡಿದ ಪ್ರಭು ಯೇಸುವಿನ ಸನ್ನಿಧಿಯಲ್ಲಿ ನಾನು ಆಜ್ಞಾಪಿಸುವುದೇನೆಂದರೆ: ನಮ್ಮ ಪ್ರಭು ಯೇಸುಕ್ರಿಸ್ತರು ಪ್ರತ್ಯಕ್ಷರಾಗುವ ತನಕ ಯಾವ ದೋಷಾರೋಪಣೆಗೂ ಎಡೆಗೊಡದೆ ಈ ಕಟ್ಟಳೆಗಳೆಲ್ಲವನ್ನೂ ಪ್ರಾಮಾಣಿಕತೆಯಿಂದ ಅನುಸರಿಸು: ಸೂಕ್ತಕಾಲದಲ್ಲಿ ಕ್ರಿಸ್ತಯೇಸುವನು ಪ್ರತ್ಯಕ್ಷಪಡಿಸುವನು ಪರಮ ದೇವನು. ಆ ದೇವನು ಪರಮಾನಂದನು ಏಕಾಧಿಪತಿ, ರಾಜಾಧಿರಾಜನು ಒಡೆಯರಿಗೆಲ್ಲಾ ಒಡೆಯನು, ಅಮರನು ಅಗಮ್ಯ ಜ್ಯೋತಿಯಲ್ಲಿ ವಾಸಿಸುವವನು. ಆತನನು ಕಂಡವರಾರೂ ಇಲ್ಲ ಕಾಣಬಲ್ಲವರಾರೂ ಇಲ್ಲ. ಆತನೊಬ್ಬನಿಗೆ ಮಹಿಮೆಯೂ ಗೌರವವೂ ಪ್ರಭುತ್ವವೂ ಸಲ್ಲಲಿ ಎಂದೆಂದಿಗೂ, ಆಮೆನ್.

ಶುಭಸಂದೇಶ - ಲೂಕ  16:19-31
“ಒಬ್ಬ ಧನಿಕನಿದ್ದ. ಬೆಲೆಬಾಳುವ ಉಡುಗೆ-ತೊಡುಗೆಗಳನ್ನೂ ನಯವಾದ ನಾರುಮಡಿಗಳನ್ನೂ ಧರಿಸಿಕೊಂಡು ದಿನನಿತ್ಯವೂ ಸುಖಭೋಗಗಳಲ್ಲಿ ಮೈಮರೆಯುತ್ತಿದ್ದ. ಅವನ ಮನೆಯ ಬಾಗಿಲಲ್ಲೇ ಲಾಜರನೆಂಬ ಒಬ್ಬ ಭಿಕಾರಿ ಬಿದ್ದಿರುತ್ತಿದ್ದ. ಅವನ ಮೈಯೆಲ್ಲಾ ಹುಣ್ಣು. ಧನಿಕನು ತಿಂದು ಬಿಸಾಡಿದ ಎಂಜಲಿನಿಂದ ಹಸಿವು ನೀಗಿಸಿಕೊಳ್ಳಲು ಅವನು ಹಂಬಲಿಸುತ್ತಿದ್ದ. ಅಷ್ಟುಮಾತ್ರವಲ್ಲ, ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. “ಒಂದು ದಿನ ಆ ಭಿಕಾರಿ ಸತ್ತುಹೋದ. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಸ್ವರ್ಗಸೌಭಾಗ್ಯದಲ್ಲಿದ್ದ ಅಬ್ರಹಾಮನ ಪಕ್ಕದಲ್ಲೇ ಕೂರಿಸಿದರು. ಧನಿಕನು ಕೂಡ ಸತ್ತುಹೋದ. ಅವನ ಶವಸಂಸ್ಕಾರವೂ ಮುಗಿಯಿತು. ಪಾತಾಳದಲ್ಲಿ ಯಾತನೆಪಡುತ್ತಾ ಅವನು ಕಣ್ಣೆತ್ತಿ ನೋಡಿದಾಗ, ದೂರದಲ್ಲಿ ಅಬ್ರಹಾಮನನ್ನೂ ಅವನ ಪಕ್ಕದಲ್ಲೇ ಕುಳಿತಿದ್ದ ಲಾಜರನನ್ನೂ ಕಂಡ. ‘ಓ ಪಿತಾಮಹ ಅಬ್ರಹಾಮ, ನನ್ನ ಮೇಲೆ ಕನಿಕರವಿಡು. ಈ ಅಗ್ನಿಜ್ವಾಲೆಯಲ್ಲಿ ಬಾಧೆಪಡುತ್ತಿದ್ದೇನೆ; ಲಾಜರನು ತನ್ನ ತುದಿ ಬೆರಳನ್ನು ತಣ್ಣೀರಿನಲ್ಲಿ ಅದ್ದಿ, ನನ್ನ ನಾಲಗೆಗೆ ತಂಪನ್ನುಂಟುಮಾಡುವಂತೆ ಅವನನ್ನು ಇಲ್ಲಿಗೆ ಕಳುಹಿಸಿಕೊಡು’ ಎಂದು ದನಿಯೆತ್ತಿ ಮೊರೆಯಿಟ್ಟ. ಅದಕ್ಕೆ ಅಬ್ರಹಾಮನು, ‘ಮಗನೇ, ಜೀವಮಾನದಲ್ಲಿ ಬೇಕಾದಷ್ಟು ಸುಖಸಂಪತ್ತನ್ನು ನೀನು ಅನುಭವಿಸಿದೆ; ಲಾಜರನಾದರೋ ದುಃಖ ದಾರಿದ್ರ್ಯವನ್ನು ಅನುಭವಿಸಿದ ಎಂಬುದನ್ನು ನೆನಪಿಗೆ ತಂದುಕೊ. ಆದರೆ ಈಗ ಅವನು ಇಲ್ಲಿ ಸುಖಪಡುತ್ತಿದ್ದಾನೆ; ನೀನು ಅಲ್ಲಿ ಸಂಕಟಪಡುತ್ತಿರುವೆ. ಅಷ್ಟೇ ಮಾತ್ರವಲ್ಲ, ನಮಗೂ ನಿಮಗೂ ನಡುವೆ ಅಗಾಧ ಪ್ರಪಾತವು ಚಾಚಿದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಬರಬೇಕೆಂದಿದ್ದರೂ ಬರಲಾಗದು; ಆ ಕಡೆಯಿಂದ ನಮ್ಮ ಬಳಿಗೆ ದಾಟಿಬರಲೂ ಸಾಧ್ಯವಿಲ್ಲ,’ ಎಂದ. ಆಗ ಆ ಧನಿಕ, ‘ಪಿತಾಮಹ ಅಬ್ರಹಾಮ, ಲಾಜರನನ್ನು ನನ್ನ ತಂದೆಯ ಮನೆಗಾದರೂ ಕಳುಹಿಸು. ನನಗೆ ಐವರು ಸೋದರರಿದ್ದಾರೆ; ಅವರೂ ಈ ಯಾತನಾಸ್ಥಳಕ್ಕೆ ಬಾರದಂತೆ ಇವನು ಹೋಗಿ ಎಚ್ಚರಿಕೆಕೊಡಲಿ,’ ಎಂದು ಬೇಡಿಕೊಂಡ. ಅದಕ್ಕೆ ಅಬ್ರಹಾಮನು, ‘ಅವರಿಗೆ ಎಚ್ಚರಿಕೆ ಕೊಡಲು ಮೋಶೆ ಮತ್ತು ಪ್ರವಾದಿಗಳ ಗ್ರಂಥಗಳಿವೆ. ಅವುಗಳಿಗೆ ಕಿವಿಗೊಡಲಿ,’ ಎಂದು ಉತ್ತರಕೊಟ್ಟ. ‘ಇಲ್ಲ, ಪಿತಾಮಹ ಅಬ್ರಹಾಮ, ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಾಪಕ್ಕೆ ವಿಮುಖರಾಗುವರು,’ ಎಂದು ಧನಿಕನು ಮತ್ತೆ ಕೇಳಿಕೊಂಡ. ಅದಕ್ಕೆ ಅಬ್ರಹಾಮನು, ‘ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆ, ಸತ್ತವನು ಜೀವಂತನಾಗಿ ಎದ್ದುಬಂದರೂ ಅವರು ನಂಬುವುದಿಲ್ಲ,’ ಎಂದ.”

ಚಿಂತನೆ

ಸಂತ ಮಿಖಾಯೇಲ್ , ಗಾಬ್ರಿಯೇಲ್, ರಫಾಯೇಲ್ (ಪ್ರಧಾನ ದೂತರು)

ನಮ್ಮಲ್ಲಿರುವುದೆಲ್ಲವು ದೇವರ ಕೊಡುಗೆಯಾಗಿದೆ. ನಮ್ಮ ಹಣ ಶ್ರೀಮಂತಿಕೆ ಬಂಧು-ಬಳಗ, ಸಂಪತ್ತು, ಐಶ್ವರ್ಯ ಇದೆಲ್ಲವು ದೇವರ ಭಿಕ್ಷೆಯಾಗಿದೆ. ಬಡತನ ವೆಂಬುದು ದೇವರು ಮಾಡಿರುವ ಸ್ಥಿತಿಯಲ್ಲ ಬದಲಾಗಿ ಮಾನವನೇ ನಿರ್ಮಿಸಿರುವ ಸ್ಥಿತಿಯಾಗಿದೆ. ಅದನ್ನು ಹೋಗಲಾಡಿಸಿ ಇರುವುದನ್ನು ಹಂಚಿಕೊಂಡು ಎಲ್ಲರೂ ಸುಖ ಸಂತೊಷ ತೃಪ್ತಿಯಿಂದ ಜೀವಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂದಿನ ಆರಾಧನಾ ವಿಧಿಯು ನಮ್ಮ ನೆರೆಹೊರೆಯವರೊಂದಿಗೆ ಹೇಗೆ ಹಂಚಿಕೊಂಡು ಬಾಳಬೇಕು ಹೇಗೆ ಬೇರೆಯವರ ಅಗತ್ಯತೆಗೆ ಸ್ಪಂದಿಸಬೇಕೆಂದು ತಿಳಿಸುತ್ತದೆ.
ಮೊದಲನೇಯ ವಾಚನದಲ್ಲಿ ಪ್ರವಾದಿ ಆಮೋಸ ಶ್ರೀಮಂತರನ್ನು ಅವರ ಸಂತೋಷವನ್ನು ಖಂಡಿಸುತ್ತಾನೆ. ಏಕೆಂದರೆ ಅವರು ಬಡವರ ದೀನರ, ಕಷ್ಟಪಡುವವರ ಬಗ್ಗೆ ಚಿಂತಿಸದೇ ಕೇವಲ ತಮ್ಮ ಸಂತೋಷದಲ್ಲಿ ಮುಗ್ನರಾಗಿರುತ್ತಾರೆ. ಆದ್ದರಿಂದ ಅವರನ್ನು ಖಂಡಿಸುತ್ತಾನೆ, ಗಡಿಪಾರಾಗುವವರಲ್ಲಿ ಅವರೇ ಮೊದಲಿಗರಾಗುವರೆಂದು ಪ್ರವಾದಿಸುತ್ತಾನೆ.
ಇಂದಿನ ಶುಭಸಂದೇಶದಲ್ಲಿ ಯೇಸು ಬಡ ಲಾಜರ ಮತ್ತು ಶ್ರೀಮಂತನ ಸಾಮತಿಯನ್ನು ಹೇಳುತ್ತಾರೆ. ಶ್ರೀಮಂತಿಕೆಯನ್ನು ಹೊಂದಿರುವುದು ತಪ್ಪಲ್ಲ ಬದಲಾಗಿ ಆತ ಲಾಜರನ ಅಗತ್ಯತೆಗಳಿಗೆ ಹೊಟ್ಟೆಹಸಿವಿಗೆ, ಆತನ ಭಾವನೆಗಳಿಗೆ ಸ್ಪಂದಿಸಲಿಲ್ಲ ಇದು ಪಾಪ. ಆ ಶ್ರೀಮಂತ ಲಾಜರನನ್ನು ಹಿಂಸಿಸಲಿಲ್ಲ, ತನ್ನ ಮನೆಯ ವಠಾರದಿಂದ ಓಡಿಸಲಿಲ್ಲ ಹಾಗಾದರೆ ಆತ ಮಾಡಿದ ತಪ್ಪಾದರೂ ಏನು? ಆತ ಕುಷ್ಠರೋಗಿ ಲಾಜರನು ಒಬ್ಬ ಮನುಷ್ಯ ಆತನಿಗೂ ಹಸಿವಾಗುತ್ತದೆ ಎಂಬುದನ್ನು ಮರೆತ. ಆತ ಲಾಜರನನ್ನು ನಾಯಿಗಳಿಗಿಂತಲೂ ಕೀಳಾಗಿ ನಡೆಸಿಕೊಂಡ ಇದು ಪಾಪ.
ನಾವು ಇತರರ ಅಗತ್ಯತೆಗಳಿಗೆ ಸ್ಪಂದಿಸದೇ ಹೋದರೆ ಇತರರ ಕಷ್ಟದಲ್ಲಿ ಪಾಲೂದಾರರಾಗದೇ ಹೋದರೆ ಕೇವಲ ನಮ್ಮ ಶ್ರೀಮಂತಿಕೆಯಲ್ಲಿ , ಸಂತೋಷದಲ್ಲಿ ಮುಳುಗಿಹೋದರೆ ಆ ಶ್ರೀಮಂತನಿಗೆ ಆದಂತೆ ನಮಗೂ ನರಕ ಕಟ್ಟಿಟ್ಟ ಬುತ್ತಿಯಾಗುತ್ತದೆ. ಇಂದು ಪ್ರಧಾನ ದೇವದೂತರ ಹಬ್ಬವನ್ನು ಆಚರಿಸುತ್ತಿದ್ದೇವೆ. ಅವರಂತೆ ಯಾವಾಗಲು ದೇವರ ಪರವಹಿಸೋಣ, ದೇವರ ಕಾರ್ಯಗಳನ್ನು ಮಾಡೋಣ.

No comments:

Post a Comment