Sunday, 22 September 2019

ಸಾಧಾರಣ ಕಾಲದ ಇಪ್ಪತ್ತೈದನೇ ವಾರ ಬುಧವಾರ

ಸಾಧಾರಣ ಕಾಲದ ಇಪ್ಪತ್ತೈದನೇ ವಾರ ಬುಧವಾರ

25/ಹಸಿರು/ಬುಧ
1ನೇ  ವಾಚನ - ಎಜ್ರ 9: 5-9
ಕೀರ್ತನೆ - ತೋಬಿ 13: 2, 4, 6-8
ಶುಭಸಂದೇಶ  -ಲೂಕ  9:  1-6

1ನೇ  ವಾಚನ - ಎಜ್ರ 9: 5-9
ಆಮೇಲೆ ದೇಹದಂಡನೆ ಮಾಡುವುದನ್ನು ಬಿಟ್ಟು, ಹರಿದ ಬಟ್ಟೆವಸ್ತ್ರಗಳಿಂದ ಕೂಡಿದವನಾಗಿಯೇ ಮೊಣಕಾಲೂರಿ, ನನ್ನ ದೇವರಾದ ಸರ್ವೇಶ್ವರನ ಕಡೆಗೆ ಕೈಗಳನ್ನೆತ್ತಿ ಹೀಗೆಂದು ಪ್ರಾರ್ಥಿಸಿದೆ: “ನನ್ನ ದೇವರೇ, ನಾನು ಮನಗುಂದಿದವನು ಆಗಿದ್ದೇನೆ; ನಿಮ್ಮ ಕಡೆಗೆ ಮುಖವನ್ನು ಎತ್ತುವುದಕ್ಕೆ ನಾಚಿಕೊಳ್ಳುತ್ತೇನೆ. ನನ್ನ ದೇವರೇ, ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿವೆ; ನಮ್ಮ ಅಪರಾಧ ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ! ನಾವು ನಮ್ಮ ಪಿತೃಗಳ ಕಾಲದಿಂದ ಇಂದಿನವರೆಗೂ ಮಹಾಪರಾಧಿಗಳೇ; ನಮ್ಮ ಪಾಪಗಳ ನಿಮಿತ್ತ ನಾವೂ ನಮ್ಮ ಅರಸರೂ ಯಾಜಕರೂ ಅನ್ಯದೇಶಗಳ ರಾಜರ ಕೈಗೆ ಸಿಕ್ಕಿಬಿದ್ದೆವು. ಈಗಿರುವಂತೆ, ಕತ್ತಿಗೂ ಸೆರೆಗೂ ಸುಲಿಗೆಗೂ ಅಪಮಾನಕ್ಕೂ ಗುರಿ ಆದೆವು ಆದರೂ ನಮ್ಮ ದೇವರಾದ ಸರ್ವೇಶ್ವರಾ, ಒಂದು ಕ್ಷಣ ನಮಗೆ ನೀವು ಪ್ರಸನ್ನರಾಗಿ, ನಮ್ಮಲ್ಲಿ ಸ್ವಲ್ಪ ಜನರನ್ನಾದರೂ ರಕ್ಷಣೆಗಾಗಿ ಉಳಿಸಿ, ತಮ್ಮ ಪರಿಶುದ್ಧ ಸ್ಥಳದಲ್ಲಿ ಮೊಳೆಯುವಂತೆ, ನಮ್ಮನ್ನು ನೆಲೆಗೊಳಿಸಿ, ನಮ್ಮ ಕಣ್ಣುಗಳನ್ನು ಬೆಳಗಿಸಿ, ನಮ್ಮ ದಾಸತ್ವದಲ್ಲಿ ನಮಗೆ ಸ್ವಲ್ಪ ಮಟ್ಟಿಗೆ ನವಜೀವವನ್ನು ಅನುಗ್ರಹಿಸಿದಿರಿ. ನಾವು ಗುಲಾಮರಾದರೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮನ್ನು ಕೈಬಿಡಲಿಲ್ಲ; ಹಾಳುಬಿದ್ದ ನಮ್ಮ ದೇವಾಲಯವನ್ನು ಪುನಃ ಕಟ್ಟಿ ಭದ್ರಪಡಿಸುವುದಕ್ಕಾಗಿ, ನಮಗೆ ನವಜೀವನ ಪ್ರಾಪ್ತವಾಗುವಂತೆ ಹಾಗು ಜುದೇಯದಲ್ಲೂ ಜೆರುಸಲೇಮಿನಲ್ಲೂ ನಮಗೆ ಅಭಯಾಶ್ರಯ ಸಿಕ್ಕುವಂತೆ, ಪರ್ಷಿಯ ರಾಜರ ಮುಂದೆ ನಮಗೆ ಕೃಪೆಯನ್ನು ಅನುಗ್ರಹಿಸಿದ್ದೀರಿ.

ಕೀರ್ತನೆ - ತೋಬಿ 13: 2, 4, 6-8
2 : ಶಿಕ್ಷಿಸುವವನೂ ಕ್ಷಮಿಸುವವನೂ ಆತನೇ ಪಾತಾಳಕ್ಕಿಳಿಸುವವನೂ ಮೇಲಕ್ಕೆತ್ತುವವನೂ ಆತನೇ ಆತನ ಕೈಯಿಂದ ತಪ್ಪಿಸಿಕೊಳ್ಳುವವನು ಯಾವನಿದ್ದಾನೆ? 
4 : ಅಲ್ಲೂ ತೋರ್ಪಡಿಸಿರುವನು ತನ್ನ ಪ್ರಭೆಯನು ಗುಣಗಾನ ಮಾಡಿರಿ, ಸರ್ವಜೀವಿಗಳ ಮುಂದೆ ಆತನನು. ಆತನೇ ನಮ್ಮ ಸರ್ವೇಶ್ವರ, ಆತನೇ ನಮ್ಮ ದೇವ ಆತನೇ ನಮ್ಮ ತಂದೆ; ಆತನೇ ನಮ್ಮ ದೇವ ಅನವರತ.
6 : ಅಭಿಮುಖರಾದರೆ ನೀವು ಪೂರ್ಣ ಹೃದಯದಿಂದ ಪೂರ್ಣಪ್ರಾಣದಿಂದ ನಡೆದರೆ ಆತನ ಸಮ್ಮುಖದಲ್ಲಿ ಸತ್ಯತೆಯಿಂದ, ಮರೆಮಾಚಿಕೊಳ್ಳನಾತ ಮುಖವನ್ನು ನಿಮ್ಮಿಂದ, ಸ್ತುತಿಸಿರಿ ಸತ್ಯಸ್ವರೂಪಿಯಾದ ಸರ್ವೇಶ್ವರನನು ಯುಗಯುಗಾಂತರಕ್ಕೂ ಆಳುವ ಅರಸನನು. ನಾನಾತನ ಭಕ್ತನು, ಗಡೀಪಾರಾದ ಈ ನಾಡಿನಲೂ ಆತನ ಶಕ್ತಿಸಾಮಥ್ರ್ಯವನು ಸಾರುವೆನು ದುಷ್ಟರ ಈ ರಾಷ್ಟ್ರದಲೂ. ಪಾಪಾತ್ಮರೇ, ಹಿಂದಿರುಗಿ ಬನ್ನಿರಿ ಆತನಿಗೆ ನ್ಯಾಯವಾದುದನ್ನೇ ಮಾಡಿರಿ ಕಟಾಕ್ಷಿಸಿಯಾನು ನಿಮಗೆ ಕೃಪೆತೋರಿ. 
7 : ನಾನಾದರೋ ಗುಣಗಾನ ಮಾಡುವೆನು ನನ್ನ ದೇವನನು, ಸಂಕೀರ್ತಿಸುವುದು ನನ್ನ ಮನ ಪರಲೋಕ ರಾಜನನು. 
8 : ದೇವರ ಮಹಿಮಾಸ್ತುತಿ ಇರಲಿ ಸರ್ವರ ಬಾಯಲಿ, ಆತನನು ಸಂಕೀರ್ತಿಸಲಿ ಜೆರುಸಲೇಮಿನಲಿ.

ಶುಭಸಂದೇಶ  -ಲೂಕ  9:  1-6
ಯೇಸುಸ್ವಾಮಿ ಹನ್ನೆರಡು ಮಂದಿ ಪ್ರೇಷಿತರನ್ನು ಒಟ್ಟಿಗೆ ಕರೆದು ಎಲ್ಲ ದೆವ್ವಗಳನ್ನು ಬಿಡಿಸಲೂ ರೋಗ ನಿವಾರಣೆಮಾಡಲೂ ಅವರಿಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟರು. ಅನಂತರ ದೇವರ ಸಾಮ್ರಾಜ್ಯವನ್ನು ಕುರಿತು ಬೋಧಿಸುವುದಕ್ಕೂ ರೋಗಿಗಳನ್ನು ಗುಣಪಡಿಸುವುದಕ್ಕೂ ಅವರನ್ನು ಕಳುಹಿಸಿದರು. ಕಳುಹಿಸುವಾಗ ಅವರಿಗೆ ಇಂತೆಂದರು, “ಪ್ರಯಾಣಕ್ಕೆಂದು ಏನನ್ನೂ ತೆಗೆದುಕೊಳ್ಳಬೇಡಿ; ದಂಡ, ಜೋಳಿಗೆ, ಬುತ್ತಿ ಅಥವಾ ಹಣ ಯಾವುದೂ ಬೇಡ. ಎರಡು ಅಂಗಿಗಳೂ ಬೇಕಾಗಿಲ್ಲ. ಯಾವ ಮನೆಯವರು ನಿಮ್ಮನ್ನು ಬರಮಾಡಿಕೊಳ್ಳುತ್ತಾರೋ ಆ ಮನೆಯಲ್ಲೇ ತಂಗಿರಿ. ಅಲ್ಲಿಂದಲೇ ಮುಂದಕ್ಕೆ ಸಾಗಿರಿ. ಯಾವ ಊರಿನವರಾದರೂ ನಿಮ್ಮನ್ನು ಸ್ವಾಗತಿಸದೆ ಹೋದಲ್ಲಿ, ನೀವು ಆ ಊರನ್ನು ಬಿಟ್ಟುಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ,” ಎಂದರು. ಪ್ರೇಷಿತರು ಹೊರಟು ಹಳ್ಳಿಹಳ್ಳಿಗೂ ಹೋಗಿ ಎಲ್ಲ ಕಡೆ ಶುಭಸಂದೇಶವನ್ನು ಬೋಧಿಸಿದರು; ರೋಗಿಗಳನ್ನು ಗುಣಪಡಿಸಿದರು.


ಚಿಂತನೆ

ಸಂತ ಸಿಯೊಲ್‍ಫ್ರಿಡ್

ಕ್ರೈಸ್ತರ ಮೊದಲ ಕರ್ತವ್ಯ ಶುಭ ಸಂದೇಶವನ್ನು ಸಾರುವುದು. ಅಂದರೆ ಕ್ರಿಸ್ತರು ಬೋಧಿಸಿದ ಸ್ವರ್ಗ ಸಾಮ್ರಾಜ್ಯವನ್ನು ಇತರರಿಗೆ ಬೋಧಿಸುವುದು. ಯೇಸುಕ್ರಿಸ್ತರು ಹನ್ನೆರಡು ಮಂದಿ ಶಿಷ್ಯರನ್ನು ಕಳುಹಿಸುತ್ತಾ ದೆವ್ವಗಳನ್ನು ಬಿಡಿಸಲು ರೋಗ ನಿವಾರಣೆ ಮಾಡಲು ಅವರಿಗೆ ಶಕ್ತಿಯನ್ನು ಅಧಿಕಾರವನ್ನು ನೀಡುತ್ತಾರೆ. ಶುಭಸಂದೇಶದ ಕಾರ್ಯದಲ್ಲಿ ಏನನ್ನು ಮಾಡಬೇಕು ಏನನ್ನು ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಾರೆ.

ಶುಭಸಂದೇಶ ಸಾರುವವನು ಏನನ್ನು ತೆಗೆದುಕೊಂಡು ಹೋಗದೆ ದೇವರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಬೇಕೆಂದು ಹೇಳುತ್ತಾರೆ. ಸಂತ ಪೌಲರಂತೆ, ಯೇಸುವಿನ ಪ್ರೇಷಿತರಂತೆ ಸದಾ ಶುಭಸಂದೇಶ ಕಾರ್ಯದಲ್ಲಿ ನಮ್ಮನ್ನೆ ತೊಡಗಿಸಿಕೊಳ್ಳಬೇಕು.

No comments:

Post a Comment