Sunday, 22 September 2019

ಸಾಧಾರಣ ಕಾಲದ ಇಪ್ಪತ್ತೈದನೇ ವಾರ ಗುರುವಾರ

ಸಾಧಾರಣ ಕಾಲದ ಇಪ್ಪತ್ತೈದನೇ ವಾರ ಗುರುವಾರ

26/ಹಸಿರು/ಗುರು/ಐಚ್ಛಿಕ ಸ್ಮರಣೆ  - ಸಂತ  ಕಾಸ್ಮನ್
1ನೇ  ವಾಚನ - ಹಗ್ಗಾ 1: 1-8
ಕೀರ್ತನೆ - 149: 1-6, 9
ಶುಭಸಂದೇಶ - ಲೂಕ 9: 7-9

1ನೇ  ವಾಚನ - ಹಗ್ಗಾ 1: 1-8
ಪರ್ಷಿಯಾದ ಚಕ್ರವರ್ತಿಯಾದ ಡೇರಿಯಸ್ ಅವನ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳ ಮೊದಲನೆಯ ದಿನದಂದು ಪ್ರವಾದಿ ಹಗ್ಗಾಯನ ಮುಖಾಂತರ ಸರ್ವೇಶ್ವರಸ್ವಾಮಿ ನೀಡಿದ ದೈವೋಕ್ತಿ: ಅದು ಶೆಯಲ್ತಿಯೇಲನ ಮಗನೂ ಜುದೇಯ ನಾಡಿನ ದೇಶಾಧಿಪತಿಯೂ ಆದ ಜೆರುಬ್ಬಾಬೆಲನನ್ನು ಮತ್ತು ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನನ್ನು ಉದ್ದೇಶಿಸಿ ಕೊಡಲಾದ ಸಂದೇಶವಾಗಿತ್ತು. ಸೇನಾಧೀಶ್ವರರಾದ ಸರ್ವೇಶ್ವರ ಇಂತೆನ್ನುತ್ತಾರೆ: “ಮಹಾದೇವಾಲಯವನ್ನು ಪುನಃ ಕಟ್ಟುವುದಕ್ಕೆ ಸಮಯ ಇನ್ನೂ ಬಂದಿಲ್ಲ ಎಂದುಕೊಳ್ಳುತ್ತಾರೆ ಈ ಜನರು.” ಆಗ ಪ್ರವಾದಿ ಹಗ್ಗಾಯನ ಮುಖಾಂತರ ಸರ್ವೇಶ್ವರ ಕೊಟ್ಟ ಸಂದೇಶವೇನೆಂದರೆ: “ನನ್ನ ಆಲಯ ಹಾಳುಬಿದ್ದಿರುವಾಗ ನೀವು ಸೊಗಸಾದ ಹಲಗೆ ಹೊದಿಸಿದ ಮನೆಗಳಲ್ಲಿ ವಾಸಿಸುವುದು ಸರಿಯೋ? ನಮಗೆ ಒದಗಿರುವ ಪರಿಸ್ಥಿತಿಯನ್ನು ಆಲೋಚಿಸಿ ನೋಡಿ. ನೀವು ಬಿತ್ತಿದ ಬೀಜ ಬಹಳ, ಪಡೆದ ಫಲ ವಿರಳ; ತಿನ್ನುತ್ತೀರಿ, ಆದರೆ ತೃಪ್ತಿಯಿಲ್ಲ; ಕುಡಿಯುತ್ತೀರಿ, ಆದರೆ ದಾಹ ನೀಗುವುದಿಲ್ಲ. ಹೊದೆಯುತ್ತೀರಿ, ಆದರೆ ಚಳಿ ಹೋಗುವುದಿಲ್ಲ. ದುಡಿಮೆಗಾರನ ದುಡ್ಡಿನ ಚೀಲ ತೂತಿನ ಚೀಲ.” ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ನಿಮಗೆ ಒದಗಿರುವ ಪರಿಸ್ಥಿತಿಯನ್ನು ಕುರಿತು ಆಲೋಚಿಸಿ ನೋಡಿ. ಮಲೆನಾಡಿಗೆ ಹೋಗಿ ಮರವನ್ನು ತಂದು ನನ್ನ ಆಲಯವನ್ನು ಕಟ್ಟಿರಿ. ಆಗ ನಾನು ಪ್ರಸನ್ನನಾಗುವೆನು. ನನ್ನ ಮಹಿಮೆಯನ್ನು ಪ್ರಕಟಿಸುವೆನು,” ಎಂದು ನುಡಿಯುತ್ತಾರೆ ಸ್ವಾಮಿ.

ಕೀರ್ತನೆ - 149: 1-6, 9
1 : ಅಲ್ಲೆಲೂಯ ! ಹಾಡಿರಿ ಪ್ರಭುವಿಗೆ ನೂತನ ಕೀರ್ತನೆಯನು / ಭಕ್ತರ ಸಭೆಯಲಿ ಸ್ತುತಿಮಾಡಿರಿ ಆತನನು 
2 : ಆನಂದಿಸಲಿ ತಮ್ಮ ಸೃಷ್ಟಿಕರ್ತನಲಿ ಇಸ್ರಯೇಲರು / ತಮ್ಮಾ ರಾಜನಿಗೆ ಜಯಕಾರ ಮಾಡಲಿ ಸಿಯೋನಿನವರು 
3 : ಆತನ ನಾಮವನು ಕೀರ್ತಿಸಲಿ ಕುಣಿತದಿಂದ / ಆತನನು ಭಜಿಸಲಿ ತಮಟೆ, ಕಿನ್ನರಿಗಳಿಂದ 
4 : ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು / ಜಯಶೀಲರನ್ನಾಗಿಸುತ್ತಾನೆ ದೀನದಲಿತರನು 
5 : ಹಿಗ್ಗಲಿ ಭಕ್ತಾದಿಗಳು ದೊರೆತ ವಿಜಯದಲಿ / ಜಯಕಾರ ಮಾಡಲಿ ತಮ್ಮ ತಮ್ಮ ಶಿಬಿರಗಳಲಿ 
6 : ಇರಲಿ ಪ್ರಭುವಿನ ಸ್ತೋತ್ರ ಅವರ ಬಾಯಲಿ / ಇರಲಿ ಇಬ್ಬಾಯಿ ಕತ್ತಿಯು ಅವರ ಕೈಯಲಿ 
9 : ವಿಧಿಸಲಿ ಅವರಿಗೆ ಲಿಖಿತಾಜ್ಞೆಯ ಶಿಕ್ಷೆಯನು / ಇದು ತರಲಿ ಭಕ್ತರೆಲ್ಲರಿಗೆ ಗೌರವವನು / ಅಲ್ಲೆಲೂಯ!

ಶುಭಸಂದೇಶ - ಲೂಕ 9: 7-9
ನಡೆಯುತ್ತಿದ್ದ ಎಲ್ಲ ಸಂಗತಿಗಳು ಸಾಮಂತ ರಾಜ ಹೆರೋದನ ಕಿವಿಗೆ ಬಿದ್ದುವು. ಅವನ ಮನಸ್ಸು ಕಳವಳಗೊಂಡಿತ್ತು. ಏಕೆಂದರೆ, ‘ಯೊವಾನ್ನನು ಮರಳಿ ಜೀವಂತನಾಗಿ ಎದ್ದಿದ್ದಾನೆ’ ಎಂದು ಕೆಲವರೂ, ‘ಎಲೀಯನು ಪುನಃ ಕಾಣಿಸಿಕೊಂಡಿದ್ದಾನೆ’, ಎಂದು ಇನ್ನು ಕೆಲವರೂ, ‘ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ,’ ಎಂದು ಮತ್ತೆ ಕೆಲವರೂ ಹೇಳುತ್ತಿದ್ದರು. ಹೆರೋದನಾದರೋ, ‘ಯೊವಾನ್ನನೇ ! ಅವನನ್ನು ನಾನೇ ಶಿರಚ್ಛೇದನ ಮಾಡಿಸಿದೆನಲ್ಲಾ; ಮತ್ತೆ ಇವನಾರು? ಇವನ ಬಗ್ಗೆ ಇಂಥಾ ವಿಷಯಗಳನ್ನೆಲ್ಲ ಕೇಳುತ್ತಾ ಇರುವೆನಲ್ಲಾ!’ ಎಂದುಕೊಂಡು, ಯೇಸುವನ್ನು ನೋಡಲು ಅವಕಾಶ ಹುಡುಕುತ್ತಿದ್ದನು.

ಚಿಂತನೆ


ಸಂತ ಕಾಸ್ಮಸ್ ಮತ್ತು ಡೇಮಿಯನ್ (ರಕ್ತ ಸಾಕ್ಷಿಗಳು)

ಯೇಸುವಿನ ಅದ್ಭುತ ಕಾರ್ಯಗಳು, ಸೂಚಕ ಕಾರ್ಯಗಳು. ಪ್ರವಾದನಾ ಕಾರ್ಯಗಳನ್ನು ಕೇಳಿದ ಹೆರೋದರಸ ಕಳವಳಗೊಳ್ಳುತ್ತಾನೆ. ಈತ ತನ್ನ ಸಹೋದರ ಫಿಲಿಪ್ಪನ ಹೆಂಡತಿಯನ್ನು ಇಟ್ಟುಕೊಂಡು, ಅದನ್ನು ವಿರೋಧಿಸಿದ ಪ್ರವಾದಿ ಸ್ನಾನಿಕ ಯೊವಾನ್ನರನ್ನು ಕೊಂದು ಹಾಕಿಸಿದ ನೀಚನಿವನು. ಯೇಸುವಿನ ಕಾರ್ಯಗಳನ್ನು ಕಂಡು ಸ್ನಾನಿಕ ಯೋವಾನ್ನನೇ ಮರಳಿ ಬಂದಿರಬಹುದೆಂದು ಭಯಪಡುತ್ತಾನೆ. ಯೇಸುವನ್ನು ನೋಡಲು ಆಶಿಸುತ್ತಾನೆ. ಯಾವಾಗ ಮನುಷ್ಯ ತಪ್ಪು ಮಾಡುತ್ತಾನೆ, ಆಗ ಆತನ ಮನಸ್ಸಿನಲ್ಲಿ ತಪ್ಪಿನ ಪ್ರಜ್ಞೆ ಯಾವಾಗಲು ಕಾಡುತ್ತಿರುತ್ತದೆ. ಆದ್ದರಿಂದ ಒಳ್ಳೆಯವರಾಗಿ ಬಾಳಬೇಕು, ಸ್ವರ್ಗವನ್ನು ಪಡೆಯಬೇಕು.

No comments:

Post a Comment