Sunday, 15 September 2019

ಸಾಧಾರಣ ಕಾಲದ ಇಪ್ಪತ್ನಾಲ್ಕನೇ ವಾರ ಬುಧವಾರ

ಸಾಧಾರಣ ಕಾಲದ ಇಪ್ಪತ್ನಾಲ್ಕನೇ  ವಾರ ಬುಧವಾರ

18/ಹಸಿರು/ಬುಧ
1ನೇ ವಾಚನ - 1 ತಿಮೊ 3: 14-16 
ಕೀರ್ತನೆ - 111: 1-2, 3-4, 5-6 
ಶುಭಸಂದೇಶ - ಲೂಕ 7: 31-35

1ನೇ ವಾಚನ - 1 ತಿಮೊ 3: 14-16
ನಾನು ನಿನ್ನ ಬಳಿಗೆ ಬೇಗನೆ ಬರುವೆನೆಂಬ ನಿರೀಕ್ಷೆಯಿಂದಲೇ ಈ ಪತ್ರವನ್ನು ಬರೆಯುತ್ತಿದ್ದೇನೆ. ಒಂದು ವೇಳೆ ನಾನು ಬರುವುದು ತಡವಾದರೆ, ದೇವರ ಮಂದಿರದಲ್ಲಿ ಅಂದರೆ, ಜೀವಸ್ವರೂಪಿಯಾದ ದೇವರ ಸಭೆಯಲ್ಲಿ, ಹೇಗೆ ನಡೆದುಕೊಳ್ಳಬೇಕು ಎಂಬುದು ನಿನಗೆ ತಿಳಿಯಲೆಂದು ಇದನ್ನು ಬರೆದಿದ್ದೇನೆ. ಸಭೆಯು ಸತ್ಯಕ್ಕೆ ಸ್ತಂಭವೂ ಅಸ್ತಿವಾರವೂ ಆಗಿದೆ. ನಿಜವಾಗಿಯೂ ನಮ್ಮ ಧರ್ಮದ ನಿಗೂಢಾರ್ಥ ಶ್ರೇಷ್ಠವಾದದ್ದು ಎಂಬುದು ನಿಸ್ಸಂದೇಹವಾದ ವಿಷಯ. “ನರಮಾನವ ರೂಪದಲ್ಲಿ ಪ್ರತ್ಯಕ್ಷನಾಗಿ ದೇವರಿಗೆ ಪ್ರಿಯನೆಂದು ಪವಿತ್ರಾತ್ಮನಿಂದ ಪ್ರಕಟಿತನಾಗಿ ದೇವದೂತರಿಗೆ ಪ್ರದರ್ಶಿತವಾಗಿ ಅನ್ಯಜನರಿಗೆ ಪ್ರಬೋಧಿತನಾಗಿ ಜಗದಲ್ಲೆಲ್ಲೂ ವಿಶ್ವಾಸಪಡೆದವನಾಗಿ ಸ್ವರ್ಗಕ್ಕೇರಿದಾತ ಮಹಿಮಾನ್ವಿತ ಯೇಸುಕ್ರಿಸ್ತ.

ಕೀರ್ತನೆ - 111: 1-2, 3-4, 5-6
1 : ಅಲ್ಲೆಲೂಯ / ಸಜ್ಜನರ ಸಂಘದೊಳು, ಸಭಾಸದಸ್ಯರೊಳು ಕೂಡಿ / ಹೊಗಳುವೆ ಪ್ರಭುವನು ಮನಃ ಪೂರ್ವಕವಾಗಿ ಹಾಡಿ //
2 : ಮಹತ್ತಾದವು ಪ್ರಭುವಿನಾ ಕಾರ್ಯಗಳು / ಕೊಂಡಾಡುವರು ಅವುಗಳನು ಭಕ್ತಾದಿಗಳು //
3 : ಘನತೆ ಗೌರವವುಳ್ಳವು ಆತನ ಎಲ್ಲ ಕಾರ್ಯ / ನಿಲ್ಲುವುದು ಆತನ ನ್ಯಾಯನೀತಿಯು ನಿತ್ಯ //
4 : ಆತನ ಅದ್ಭುತಕಾರ್ಯ ಸ್ಮರಣೀಯ / ಕರುಣಾವಂತ ಪ್ರಭು, ಪ್ರೀತಿಯನು //
5 : ಆಹಾರವನೀಯುವನು ಭಯಭಕ್ತಿಯುಳ್ಳವರಿಗೆ / ತನ್ನೊಡಂಬಡಿಕೆಯ ಚಿರ ನೆನಪಿರುವುದು ಆತನಿಗೆ //
6 : ತನ್ನ ಪ್ರಜೆಗಿತ್ತಿಹನು ಅನ್ಯಜನರ ಸೊತ್ತನು / ತೋರ್ಪಡಿಸಿಹನು ಈ ಪರಿ ತನ್ನ ಸಾಮಥ್ರ್ಯವನು //

ಶುಭಸಂದೇಶ - ಲೂಕ 7: 31-35
ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, “ಈ ಕಾಲದ ಜನರನ್ನು ಯಾರಿಗೆ ಹೋಲಿಸಲಿ? ಇವರು ಯಾರನ್ನು ಹೋಲುತ್ತಾರೆ? ಪೇಟೆಬೀದಿಯಲ್ಲಿ ಕುಳಿತು, ‘ನಾವು ಕೊಳಲನೂದಲು ನೀವು ಕುಣಿದಾಡಲಿಲ್ಲ; ನಾವು ಶೋಕಗೀತೆಗಳ ಹಾಡಲು ನೀವು ಕಣ್ಣೀರಿಡಲಿಲ್ಲ’ ಎಂದು ಒಬ್ಬರಿಗೊಬ್ಬರು ಕೂಗಾಡುವ ಮಕ್ಕಳನ್ನು ಹೋಲುತ್ತಾರೆ. ಸ್ನಾನಿಕ ಯೊವಾನ್ನನು ಬಂದಾಗ ಅನ್ನ ಆಹಾರವನ್ನು ಸೇವಿಸಲಿಲ್ಲ, ದ್ರಾಕ್ಷಾರಸವನ್ನು ಮುಟ್ಟಲಿಲ್ಲ; ನೀವು, ‘ಅವನಿಗೆ ದೆವ್ವ ಹಿಡಿದಿದೆ,’ ಎಂದು ಹೇಳಿದಿರಿ; ನರಪುತ್ರನು ಬಂದಾಗ ಅನ್ನ ಪಾನೀಯಗಳನ್ನು ಸೇವಿಸಿದನು; ನೀವು, ‘ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಹಾಗೂ ಪಾಪಿಷ್ಠರ ಗೆಳೆಯ, ಎನ್ನುತ್ತೀರಿ. ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದನ್ನು ಅಂಗೀಕರಿಸುವ ಎಲ್ಲರೂ ಸಮರ್ಥಿಸುತ್ತಾರೆ,” ಎಂದರು.

ಚಿಂತನೆ
ಕುಪ್ಪೆರಿನೋದ ಸಂತ ಜೋಸೆಫ್

ಮನುಷ್ಯರನ್ನು ಅರ್ಥಮಾಡಿಕೊಳ್ಳುವುದೇ ಒಂದು ಕಷ್ಟದ ಕೆಲಸ. ಮನುಷ್ಯನಿಗೆ ಮಾನವೀಯತೆ ಬಹಳ ಮುಖ್ಯ. ಆತ ಸಂದರ್ಭಕ್ಕೆ ತಕ್ಕಂತೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಬೇಕು. ಯಾವಾಗ ಮಾನವನ ಭಾವನೆ ಸಾಯುತ್ತದೆಯೋ ಅಥವಾ ಸಂದರ್ಭಕ್ಕೆ ತಕ್ಕಂತೆ ಪ್ರತಿಕ್ರಿಯಿಸುವುದಿಲ್ಲವೋ ಆಗ ಅವರಿಗೆ ಮತಿಭ್ರಮಣೆಯಾಗುತ್ತದೆ ತಮಗಿಷ್ಟಬಂದಂತೆ ವರ್ತಿಸುತ್ತಾರೆ.
ಸ್ನಾನಿಕ ಯೋವಾನ್ನ ಹಾಗೂ ಯೇಸುವಿನ ಬೋಧನೆಗೆ ಅಷ್ಟೊಂದು ಸಕರಾತ್ಮಕ ಪ್ರತಿಕ್ರಿಯೇ ದೊರಕದಿರಲು ಕಾರಣವೇನು? ಏಕೆಂದರೆ ಸ್ನಾನಿಕ ಯೋವಾನ್ನ ಹಾಗೂ ಯೇಸು ತಂದಿದ್ದ ಶುಭಸಂದೇಶಕ್ಕೆ ಅವರ ಕಿವಿಗಳು ಮುಚ್ಚಿದ್ದವು. ಕಿವಿಯಿದ್ದು ಅವರು ಕಿವುಡರಾಗಿದ್ದರು. ತಮ್ಮ ಸ್ವಾರ್ಥ ಹಾಗೂ ಆಧ್ಯಾತ್ಮಿಕ ಕುರುಡುತನದಿಂದಾಗಿ ಸ್ನಾನಿಕ ಯೋವಾನ್ನನು ಅನುಸರಿಸುತ್ತಿದ್ದ ತಪಶ್ಚರ್ಯವನ್ನು ದೆವ್ವ ಪ್ರೇರಿತ ಎಂದು ಆತನಿಗೆ ದೆವ್ವ ಹಿಡಿದಿದೆ ಎಂದು ಕರೆದರು. ಯೇಸುವನ್ನು ಕುಡುಕ ಎಂದರು ಆದ್ದರಿಂದ ಯೇಸು ಈ ಜನರನ್ನು ತಿಳುವಳಿಕೆ ಇಲ್ಲದ ಮಕ್ಕಳಿಗೆ ಹೋಲಿಸುತ್ತಾರೆ.



No comments:

Post a Comment