3೦/ಹಸಿರು/ಬುಧ
1ನೇ ವಾಚನ - ರೋಮ 8:26-3೦
ಕೀರ್ತನೆ - 13;3-6
ಶುಭಸಂದೇಶ - ಲೂಕ 13: 22-3೦
1ನೇ ವಾಚನ - ರೋಮ 8:26-3೦
ಅಂತೆಯೇ ಪವಿತ್ರಾತ್ಮರು ಸಹ ನಮ್ಮ ದೌರ್ಬಲ್ಯದಲ್ಲಿ ನೆರವು ನೀಡುತ್ತಾರೆ. ಹೇಗೆ ಪ್ರಾರ್ಥಿಸಬೇಕು, ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದನ್ನು ನಾವು ತಿಳಿಯದವರು. ಪವಿತ್ರಾತ್ಮರೇ ಮಾತಿಗೆಟುಕದ ರೀತಿಯಲ್ಲಿ ಆತ್ಮಧ್ವನಿಯಿಂದ ನಮ್ಮ ಪರವಾಗಿ ದೇವರಲ್ಲಿ ವಿಜ್ಞಾಪಿಸುತ್ತಾರೆ. ಅಂತರಂಗಗಳನ್ನು ಈಕ್ಷಿಸುವ ದೇವರು ಪವಿತ್ರಾತ್ಮರ ಇಂಗಿತವೇನೆಂದು ಬಲ್ಲರು. ಏಕೆಂದರೆ, ದೇವರ ಚಿತ್ತದ ಪ್ರಕಾರವೇ ಪವಿತ್ರಾತ್ಮರು ದೇವಜನರಿಗಾಗಿ ಬಿನ್ನವಿಸುತ್ತಾರೆ. ದೇವರನ್ನು ಪ್ರೀತಿಸುವವರಿಗೂ ದೇವರ ಸಂಕಲ್ಪದ ಮೇರೆಗೆ ಕರೆಹೊಂದಿದವರಿಗೂ ಸಕಲವೂ ಹಿತಕರವಾಗಿ ಪರಿಣಮಿಸುವುದು. ಇದನ್ನು ನಾವು ಚೆನ್ನಾಗಿ ಅರಿತಿದ್ದೇವೆ. ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡರೋ ಅವರನ್ನು ತಮ್ಮ ಪುತ್ರನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದರು. ಹೀಗೆ ಅನೇಕ ಸಹೋದರರಲ್ಲಿ ತಮ್ಮ ಪುತ್ರನೇ ಜೇಷ್ಠನಾಗಿರಬೇಕೆಂಬುದು ದೇವರ ನಿರ್ಧಾರವಾಗಿದೆ. ಹೀಗೆ ಯಾರನ್ನು ಮೊದಲೇ ನೇಮಿಸಿದ್ದರೋ ಅವರನ್ನು ಕರೆದಿದ್ದಾರೆ. ಯಾರನ್ನು ಕರೆದಿದ್ದಾರೋ ಅವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೆ. ಯಾರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೋ ಅವರನ್ನು ಮಹಿಮಾಪದವಿಗೆ ಸೇರಿಸಿಕೊಂಡಿದ್ದಾರೆ.
ಕೀರ್ತನೆ - 13;3-6
3 : ಹೇ ಪ್ರಭು, ಹೇ ದೇವ, ಎನ್ನ ವೀಕ್ಷಿಸಿ ಸದುತ್ತರ ಪಾಲಿಸು / ಮರಣನಿದ್ರೆ ಬಾರದಂತೆ ನನ್ನ ನೇತ್ರಗಳನು ಬೆಳಗಿಸು //
4 : ತಾನು ಜಯಗಳಿಸಿದೆನೆಂದು ಶತ್ರು ಹೇಳಿ ಕೊಳ್ಳದಿರಲಿ / ನಾನು ಜಾರಿ ಬಿದ್ದೆನೆಂದು ವೈರಿ ಹಿರಿಹಿಗ್ಗದಿರಲಿ //
5 : ನಿನ್ನಚಲ ಪ್ರೀತಿಯಲ್ಲಿದೆ ನನಗಿದೆ ವಿಶ್ವಾಸ / ನಿನ್ನ ರಕ್ಷಣೆ ತಂದಿದೆ ನನ್ನ ಮನಕೆ ಹರುಷ /
6 : ಪ್ರಭು ಮಾಡಿದ ಮಹೋಪಕಾರಗಳಿಗಾಗಿ / ಹಾಡುವೆ ಗೀತವನು ಮನಃಪೂರ್ವಕವಾಗಿ //
ಶುಭಸಂದೇಶ - ಲೂಕ 13: 22-3೦
ಯೇಸುಸ್ವಾಮಿ ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಉಪದೇಶಮಾಡಿಕೊಂಡು ಜೆರುಸಲೇಮಿನತ್ತ ಪ್ರಯಾಣಮಾಡುತ್ತಿದ್ದರು. ಆಗ ಒಬ್ಬನು, “ಸ್ವಾವಿೂ, ಜೀವೋದ್ಧಾರ ಹೊಂದುವವರು ಕೆಲವರು ಮಾತ್ರವೊ?” ಎಂದು ವಿಚಾರಿಸಿದನು. ಆಗ ಯೇಸು ಜನರಿಗೆ, “ಇಕ್ಕಟ್ಟಾದ ಬಾಗಿಲಿನಿಂದಲೇ ಒಳಹೋಗಲು ಸರ್ವಪ್ರಯತ್ನಮಾಡಿ. ಏಕೆಂದರೆ, ಅನೇಕರು ಒಳಕ್ಕೆ ಹೋಗಲು ಖಂಡಿತವಾಗಿ ಪ್ರಯತ್ನಿಸುವರು; ಆದರೆ ಅದು ಅವರಿಂದಾಗದು. ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗಡೆ ನಿಲ್ಲಬೇಕಾಗುವುದು. ಬಾಗಿಲನ್ನು ತಟ್ಟುತ್ತಾ, ‘ಸ್ವಾವಿೂ, ನಮಗೆ ಬಾಗಿಲು ತೆರೆಯಿರಿ,’ ಎಂದು ನೀವು ಕೇಳುವಿರಿ. ಅದಕ್ಕೆ ಅವನು, ‘ನೀವು ಎಲ್ಲಿಯವರೋ ನಾನು ಅರಿಯೆ’ ಎನ್ನುವನು. ಆಗ ನೀವು, ‘ನಿಮ್ಮೊಂದಿಗೆ ನಾವು ಊಟಮಾಡಿದ್ದೇವೆ, ಪಾನಮಾಡಿದ್ದೇವೆ; ನೀವು ನಮ್ಮ ಬೀದಿಗಳಲ್ಲಿ ಉಪದೇಶಮಾಡಿದ್ದೀರಿ,’ ಎಂದು ಹೇಳಲಾರಂಭಿಸುವಿರಿ. ಆದರೆ ಅವನು ಪುನಃ, ‘ನೀವು ಎಲ್ಲಿಯವರೋ ನಾನರಿಯೆ. ಅಕ್ರಮಿಗಳೇ, ಎಲ್ಲರೂ ನನ್ನಿಂದ ತೊಲಗಿರಿ,’ ಎಂದು ಸ್ಪಷ್ಟವಾಗಿ ನುಡಿಯುವನು. ಅಬ್ರಹಾಮ, ಇಸಾಕ, ಯಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ಸಾಮ್ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ನೋಡುವಾಗ ನಿಮಗಾಗುವ ಗೋಳಾಟವೇನು! ಹಲ್ಲುಕಡಿತವೇನು!! ಚತುರ್ದಿಕ್ಕುಗಳಿಂದಲೂ ಜನರು ಬಂದು, ದೇವರ ಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು. “ಇಗೋ, ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಿಗರಲ್ಲಿ ಕೆಲವರು ಕಡೆಯವರಾಗುವರು,” ಎಂದರು.
----
ಚಿಂತನೆ
ಚಿಂತನೆ
ಜೀವನವು ಒಂದು ನಿರಂತರ ಹೋರಾಟವಾಗಿದೆ. ಒಳ್ಳೆಯ ಜೀವನವನ್ನು ಬದುಕ ಬೇಕಾದರೆ ಪ್ರಯತ್ನ ಮತ್ತು ಪರಿಶ್ರಮ ಬೇಕು. ನಮ್ಮ ಆಧ್ಯಾತ್ಮಿಕ ಪಯಣದಲ್ಲಿ ಎಲ್ಲಿದ್ದೇವೆ? ಯಾವ ದಿಕ್ಕಿನಲ್ಲಿ ಬದುಕು ಸಾಗಿದೆ ಎಂಬುದು ಮುಖ್ಯ. ಇಲ್ಲಿ ಯಾರು ಪೂರ್ಣಗೊಂಡಿಲ್ಲ, ಪರಿಪೂರ್ಣಗೊಳ್ಳುದರಲ್ಲಿ ಇದೆ ಜೀವನ. ಪರಿಪೂರ್ಣರಾಗಬೇಕಾದರೆ, ಜೀವೋದ್ದಾರ ಹೊಂದಬೇಕಾದರೆ ಇಕ್ಕಟ್ಟಾದ ಬಾಗಿಲಿನಿಂದ ಪ್ರವೇಶಿಸಲು ಕರೆನೀಡುತ್ತಾರೆ. ಸಾಧಿಸುವ ಇಚ್ಛೆ ಮತ್ತು ಶ್ರಮವಿದ್ದರೆ ಏನು ಬೇಕಾದರೂ ಸಾಧಿಸಬಹುದು. ತ್ಯಾಗ, ಪರಿಶ್ರಮದಿಂದ ಮೇಲೆ ಬಂದವರು ಅನೇಕರಿದ್ದಾರೆ. ಅದೇ ರೀತಿಯಲ್ಲಿ ಸ್ವರ್ಗ ಸಾಮ್ರಾಜ್ಯ ಬೇಕಾದರೆ ಸೋಮಾರಿತನದಿಂದ ಮೇಲೆದ್ದು ಯೇಸುವಿನ ಆದರ್ಶಗಳನ್ನು ಮೈಗೂಡಿಕೊಂಡರೆ ಮಾತ್ರ ಸಾಧ್ಯ. ಯೇಸುವಿನ ಆದರ್ಶ ಮತ್ತು ತತ್ವಗಳು ಕಿರಿದಾದ ದಾರಿಯಂತೆ ಅಲ್ಲಿ ಕಷ್ಟ, ತ್ಯಾಗ, ಶ್ರಮ ಇದೆ. ಕೇವಲ ದೀಕ್ಷಾಸ್ನಾನದಿಂದ, ಕ್ರೈಸ್ತ ಹೆಸರಿನಿಂದ ಸ್ವರ್ಗಕ್ಕೆ ಪ್ರವೇಶಸಾಧ್ಯವಿಲ್ಲ. ಯೇಸುವನ್ನು ಹಿಂಬಾಲಿಸುವ, ಅವರ ಚಿತ್ತದ ಪ್ರಕಾರ ಜೀವಿಸುವ ಎಲ್ಲರೂ ಸ್ವರ್ಗದ ಆನಂದ ಪಡೆಯುವರು.
No comments:
Post a Comment