29/ಹಸಿರು/ಮಂಗಳ
1ನೇ ವಾಚನ - ರೋಮ 8: 18-25
ಕೀರ್ತನೆ - 126: 1-3, 5-6
ಶುಭಸಂದೇಶ - ಲೂಕ 13: 18-21
1ನೇ ವಾಚನ - ರೋಮ 8: 18-25
ಇಂದಿನ ಕಾಲದಲ್ಲಿ ನಾವು ಅನುಭವಿಸುತ್ತಿರುವ ಕಷ್ಟಸಂಕಟಗಳು ಮುಂದೆ ನಮಗೆ ಪ್ರತ್ಯಕ್ಷವಾಗಲಿರುವ ಮಹಿಮೆಯೊಂದಿಗೆ ಹೋಲಿಸುವುದಕ್ಕೂ ಬಾರದವುಗಳೆಂದು ನಾನು ಎಣಿಸುತ್ತೇನೆ. ದೇವರ ಮಕ್ಕಳ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೋ ಎಂದು ಸೃಷ್ಟಿ ಸಮಸ್ತವು ಬಹು ಉತ್ಸುಕತೆಯಿಂದ ಎದುರು ನೋಡುತ್ತಿದೆ. ಸರ್ವಸೃಷ್ಟಿಯು ನಿರರ್ಥಕತೆಗೆ ಒಳಗಾಯಿತು. ಇದು ಅದರ ಸ್ವಂತ ಇಚ್ಛೆಯಿಂದಲ್ಲ, ದೇವರ ಇಚ್ಛೆಯಿಂದಲೇ ಆಯಿತು. ಆದರೂ ಸೃಷ್ಟಿಗೆ ನಿರೀಕ್ಷೆಯೊಂದಿದೆ. ಅದೇನೆಂದರೆ, ಸೃಷ್ಟಿಯು ಸಹ ವಿನಾಶವಿಧಿಯಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಯುತ ಸ್ವಾತಂತ್ರ್ಯದಲ್ಲಿ ಪಾಲುಗೊಳ್ಳುತ್ತದೆ, ಎಂಬುದೇ. ಸೃಷ್ಟಿಸಮಸ್ತವು ಇಂದಿನವರೆಗೆ ನರಳುತ್ತಾ ಪ್ರಸವವೇದನೆಪಡುತ್ತಾ ಇದೆ ಎಂಬುದು ನಮಗೆ ತಿಳಿದಿದೆ. ಸೃಷ್ಟಿಮಾತ್ರವಲ್ಲ, ದೇವರ ವರದಾನಗಳಲ್ಲಿ ಪ್ರಥಮಫಲವಾಗಿ ಪವಿತ್ರಾತ್ಮ ಅವರನ್ನೇ ಪಡೆದಿರುವ ನಾವು ಸಹ ನಮ್ಮೊಳಗೇ ನರಳುತ್ತಿದ್ದೇವೆ. ದೇವರ ಮಕ್ಕಳಿಗೆ ದೊರೆಯುವ ಸೌಭಾಗ್ಯವನ್ನೂ ನಮ್ಮ ಸಂಪೂರ್ಣ ವಿಮೋಚನೆಯನ್ನೂ ನಿರೀಕ್ಷಿಸುತ್ತಿದ್ದೇವೆ. ನಾವು ಜೀವೋದ್ಧಾರ ಹೊಂದಿದ್ದರೂ ಇನ್ನೂ ನಿರೀಕ್ಷಿಸುವವರಾಗಿದ್ದೇವೆ. ನಾವು ನಿರೀಕ್ಷಿಸುವುದು ಪ್ರತ್ಯಕ್ಷವಾಗಿದ್ದರೆ ಅದನ್ನು ನಿರೀಕ್ಷೆ ಎನ್ನುವುದಿಲ್ಲ; ಪ್ರತ್ಯಕ್ಷವಾಗಿರುವುದನ್ನು ಯಾರಾದರೂ ನಿರೀಕ್ಷಿಸುವುದುಂಟೇ? ಪ್ರತ್ಯಕ್ಷವಾಗದೆ ಇರುವುದನ್ನು ನಾವು ನಿರೀಕ್ಷಿಸುವವರಾಗಿದ್ದರೆ, ಅದಕ್ಕಾಗಿ ತಾಳ್ಮೆಯಿಂದ ಕಾದುಕೊಂಡಿರುತ್ತೇವೆ.
ಕೀರ್ತನೆ - 126: 1-3, 5-6
1 : ಸೆರೆಯಿಂದೆಮ್ಮನು ಪ್ರಭು ಸಿಯೋನಿಗೆ ಮರಳಿಸಿದಾಗ / ಅದೊಂದು ಕನಸು ಕಂಡಂತಿತ್ತು ನಮಗೆ ಆವಾಗ
2 : ಉಕ್ಕಿತಾಗ ಮುಖತುಂಬ ನಗು, ಬಾಯ್ತುಂಬ ಹರ್ಷಗೀತೆ / “ಎಂಥ ಮಹತ್ಕಾರ್ಯವೆಸಗಿದನಾ ಪ್ರಭು ಇವರ ಪರತೆ” / ಇಂತೆಂದು ಆಡಿಕೊಂಡರು ತಂತಮ್ಮೊಳಗೆ ಅನ್ಯಜನತೆ
3 : ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ / ಎಂತಲೆ ನಾವಾನಂದಭರಿತರಾಗುವುದು ಉಚಿತ
4 : ಬತ್ತಿದ ನದಿಯಲಿ ನೀರು ಮರಳಿ ಉಕ್ಕಿ ಹರಿವಂತೆ / ನೀಡು ಸಿರಿ ಸೌಭಾಗ್ಯ, ಹೇ ಪ್ರಭೂ, ನಮಗೆ ಮತ್ತೆ
5 : ಅಳುತಳುತಾ ಬಿತ್ತುವವರು / ನಲಿನಲಿಯುತ್ತಾ ಕೊಯ್ಯುವರು
6 : ದುಃಖಿಸುತ್ತಾ ಬೀಜಬಿತ್ತಲು ಹೋದವನು | ಹರ್ಷಿಸುತ್ತಾ ಕೊಯ್ದು ತರುವನು ತೆನೆಗಳನು ||
ಶುಭಸಂದೇಶ - ಲೂಕ 13: 18-21
ಆಗ ಯೇಸುಸ್ವಾಮಿ, “ದೇವರ ಸಾಮ್ರಾಜ್ಯವು ಏನನ್ನು ಹೋಲುತ್ತದೆ? ಅದನ್ನು ಯಾವುದಕ್ಕೆ ಹೋಲಿಸಲಿ? ಅದು ಒಂದು ಸಾಸಿವೆ ಕಾಳಿನಂತೆ ಇದೆ. ಒಬ್ಬನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಬಿತ್ತಿದನು. ಅದು ಬೆಳೆದು ಮರವಾಯಿತು. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ರೆಂಬೆಗಳಲ್ಲಿ ಗೂಡುಕಟ್ಟಿ ವಾಸಮಾಡತೊಡಗಿದವು,” ಎಂದರು. ಪುನಃ ಯೇಸುಸ್ವಾಮಿ, “ದೇವರ ಸಾಮ್ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ, ಅದು ಹುಳಿಹಿಟ್ಟಿನಂತೆ ಇದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು,” ಎಂದರು.
----
ಚಿಂತನೆ
ಚಿಂತನೆ
ಯೇಸು ಸ್ವರ್ಗಸಾಮ್ರಾಜ್ಯದ ಆರಂಭದ ಕುರಿತು ಈ ಸಾಮತಿಯ ಮೂಲಕ ತಿಳಿಸುತ್ತಾರೆ. ಗಲಿಲೇಯ ಸರೋವರದ ಸುತ್ತಮುತ್ತ ಬೋಧನೆ, ಆತ್ಮೋದ್ದಾರದ ಕೆಲಸ ಪ್ರಾರಂಭಿಸಿದ ಯೇಸುವಿನ ಕಾರ್ಯಗಳು ಪ್ರಾರಂಭದಲ್ಲಿ ಚಿಕ್ಕದಾಗಿ ಕಂಡರೂ ಮುಂದಿನ ದಿನಗಳಲ್ಲಿ ಅದರ ವ್ಯಾಪ್ತಿ, ಗಾತ್ರ ಹೆಮ್ಮರವಾಗಿ ಬೆಳೆಯಲಿದೆ ಎನ್ನುತ್ತಾರೆ. ಸಾಸಿವೆ ಗಿಡವನ್ನು ನಾವುಕಂಡಿಲ್ಲ. ಆದರೆ ಪ್ಯಾಲೆಸ್ತೀನಿನ ಸಾಸಿವೆಗಿಡವು ಸುಮಾರು ಹತ್ತು ಹನ್ನೆರಡು ಅಡಿಗಳ ಎತ್ತರಕ್ಕೆ ಬೆಳೆಯುತ್ತಿತ್ತ. ಸಾಸಿವೆಕಾಳನ್ನು ತಿನ್ನಲೂ ನಾನಾ ರೀತಿಯ ಪಕ್ಷಿಗಳು ಬರುತ್ತಿದ್ದವು. ಈ ಸಾಮತಿಯ ಮೂಲಕ ಯೇಸು ಸ್ಥಾಪಿಸಲಿದ್ದ ಸ್ವರ್ಗ ಸಾಮ್ರಾಜ್ಯವು ಕೇವಲ ಒಂದು ವರ್ಗದ, ಜಾತಿಯವರಿಗೆ ಮೀಸಲಿಲ್ಲ. ನಾನಾ ರೀತಿಯ ಪಕ್ಷಿಗಳು ಒಂದೇ ಮರದಲ್ಲಿ ವಾಸಿಸುವಂತೆ ಎಲ್ಲಾ ವರ್ಗದವರಿಗೂ, ಧರ್ಮದವರಿಗೂ ಸೇರಿದ್ದು ಎಂದು ತಿಳಿಸಲಿಚ್ಚಿಸುತ್ತಾರೆ. ದೊಡ್ಡ ವಿಷಯಗಳು ಪ್ರಾರಂಭವಾಗುವುದು ಸಣ್ಣ ವಿಷಯಗಳಿಂದಲೇ ಪ್ಯಾಲಿಸ್ತೀನ್ ನಾಡಿನಲ್ಲಿ ಸ್ಥಾಪಿಸಿದ ಸಾಮ್ರಾಜ್ಯದ ಇಂದು ಜಗತ್ತಿನಾದ್ಯಾಂತ ಹಬ್ಬಿಕೊಂಡಿರುವುದನ್ನು ನೋಡಿದಾಗ ಈ ಸಾಮತಿಯ ಸತ್ಯ ಅರಿವಾಗುತ್ತದೆ.
No comments:
Post a Comment