4/ಬಿಳಿ/ಸೋಮ/ಸಂತ ಚಾರ್ಲ್ಸ್ ಬೊರೊಮಿಯೊ(ಧರ್ಮಾ) (ಸ್ಮರಣೆ)
1ನೇ ವಾಚನ - ರೋಮ 11:29-36
ಕೀರ್ತನೆ - 69: 29-3೦, 32-33, 35-36
ಶುಭಸಂದೇಶ - ಲೂಕ 14: 12-14
1ನೇ ವಾಚನ - ರೋಮ 11:29-36
ಕೀರ್ತನೆ - 69: 29-3೦, 32-33, 35-36
ಶುಭಸಂದೇಶ - ಲೂಕ 14: 12-14
1ನೇ ವಾಚನ - ರೋಮ 11:29-36
ದೇವರು ತಾವೇ ನೀಡುವ ವರಗಳನ್ನಾಗಲಿ, ಕೊಡುವ ಕರೆಯನ್ನಾಗಲಿ ಹಿಂತೆಗೆದುಕೊಳ್ಳುವವರಲ್ಲ. ಇಸ್ರಯೇಲರಲ್ಲದ ನೀವು ಹಿಂದೊಮ್ಮೆ ದೇವರಿಗೆ ಅವಿಧೇಯರಾಗಿದ್ದಿರಿ. ಆದರೆ ಈಗ ಇಸ್ರಯೇಲರ ಅವಿಧೇಯತೆಯ ನಿಮಿತ್ತ ದೇವರ ದಯೆಯನ್ನು ಹೊಂದಿದ್ದೀರಿ. ಅದೇ ಪ್ರಕಾರ ಅವರು ಈಗ ಅವಿಧೇಯರಾಗಿದ್ದರೂ ನೀವು ಹೊಂದಿದ ಕರುಣೆಯ ನಿಮಿತ್ತ ಅವರೂ ಕರುಣೆಯನ್ನು ಹೊಂದುವರು. ಏಕೆಂದರೆ, ಸರ್ವರೂ ತಮ್ಮ ಕರುಣೆಯನ್ನು ಸವಿಯುವಂತೆ ದೇವರು ಎಲ್ಲರನ್ನು ಅವಿಧೇಯತೆ ಎಂಬ ಬಂಧನಕ್ಕೆ ಒಳಪಡಿಸಿದ್ದಾರೆ. ದೇವರ ಸಿರಿಸಂಪತ್ತು, ಜ್ಞಾನವಿಜ್ಞಾನ ಎಷ್ಟು ಅಗಾಧ! ಪರಿಶೋಧನೆಗೂ ನಿಲುಕದ ಅವರ ನಿರ್ಣಯ ಎಷ್ಟು ಅಗಮ್ಯ! ಅವರ ನಿಯೋಜನೆಗಳು ಗ್ರಹಿಕೆಗೂ ಎಷ್ಟು ಅಸಾಧ್ಯ! “ಪ್ರಭುವಿನ ಮನಸ್ಸನು ಅರಿತವರಾರು? ಅವರಿಗೆ ಉಪದೇಶಿಸುವವರಾರು? ಮೊದಲೇ ಅವರ ಬಳಿ ಕೊಟ್ಟಿಟ್ಟವರಾರು? ಹೀಗೆ ಅವರಿಂದ ಪ್ರತಿಫಲ ಪಡೆದವರಾರು? ಸಮಸ್ತವೂ ಉಂಟಾಗುವುದು ಅವರಿಂದಲೇ; ಮುಂದುವರಿಯುವುದೂ ಅವರ ಮುಖಾಂತರವೇ; ಇರುವುದೂ ಅವರಿಗೋಸ್ಕರವೇ. ಆ ಪ್ರಭುವಿಗೆ ಯುಗಯುಗಾಂತರಕ್ಕೂ ಸ್ತುತಿಸ್ತೋತ್ರ ಸಲ್ಲಲಿ. ಆಮೆನ್.
ಕೀರ್ತನೆ - 69: 29-3೦, 32-33, 35-36
29 : ದೇವಾ, ನಾ ನೊಂದುಬೆಂದಿಹೆನಯ್ಯಾ / ಉದ್ಧರಿಸಿ ನನ್ನನು ಕಾಪಾಡಯ್ಯಾ //
30 : ದೇವಾ, ನಾ ನೊಂದುಬೆಂದಿಹೆನಯ್ಯಾ / ಉದ್ಧರಿಸಿ ನನ್ನನು ಕಾಪಾಡಯ್ಯಾ //
31 : ಸ್ವಾಮಿ ದೇವನಿಗಿದುವೇ ಸುಪ್ರೀತ / ಕೊಂಬುಗೊರಸುಳ್ಳ ಗೂಳಿಬಲಿಗಿಂತ //
32 : ಇದನರಿತು ದೀನದಲಿತರು ಆನಂದಗೊಳ್ಳಲಿ / ದೇವನನು ಅರಸುವವರು ಪುನಶ್ಚೇತನಗೊಳ್ಳಲಿ //
33 : ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು / ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು //
34 : ಭೂಮ್ಯಾಕಾಶಗಳು ಆತನನು ಕೊಂಡಾಡಲಿ / ಸಾಗರಗಳು, ಜಲಚರಗಳು ಆತನನು ಭಜಿಸಲಿ //
35 : ರಕ್ಷಿಸುವನು ದೇವನು ಆ ಸಿಯೋನ್ ಪಟ್ಟಣವನು / ಕಟ್ಟಿಸುವನು ಯೆಹೂದ ನಾಡಿನ ನಗರಗಳನು / ಸ್ವಂತವಾಗಿರಿಸಿಕೊಂಬರು ಆತನ ಪ್ರಜೆ ಅದನು //
36 : ಅವರ ವಂಶಜರೇ ಬಾಧ್ಯಸ್ಥರಾಗುವರದಕೆ / ದೇವರನಾಮ ಪ್ರಿಯರೇ ನಿವಾಸಿಗಳು ಅದಕೆ //
ಶುಭಸಂದೇಶ - ಲೂಕ 14: 12-14
ಅನಂತರ ತಮ್ಮನ್ನು ಊಟಕ್ಕೆ ಆಮಂತ್ರಿಸಿದವನನ್ನು ನೋಡಿ ಯೇಸುಸ್ವಾಮಿ, “ನೀನು ಊಟ ಅಥವಾ ಔತಣವನ್ನು ಏರ್ಪಡಿಸುವಾಗ ನಿನ್ನ ಸ್ನೇಹಿತರನ್ನಾಗಲಿ, ಸೋದರರನ್ನಾಗಲಿ, ಬಂಧು ಬಳಗದವರನ್ನಾಗಲಿ, ಧನಿಕರಾದ ನೆರೆಯವರನ್ನಾಗಲಿ ಕರೆಯಬೇಡ. ಏಕೆಂದರೆ, ಅವರು ನಿನ್ನನ್ನು ಪ್ರತಿಯಾಗಿ ಕರೆದು ಮುಯ್ಯಿ ತೀರಿಸಿಬಿಡಬಹುದು. ಆದ್ದರಿಂದ ಔತಣವನ್ನು ಏರ್ಪಡಿಸುವಾಗ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆ; ಆಗ ನೀನು ಧನ್ಯನಾಗುವೆ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ಸತ್ಪುರುಷರು ಪುನರುತ್ಥಾನ ಹೊಂದುವಾಗ ದೇವರೇ ನಿನಗೆ ಸಲ್ಲಬೇಕಾದುದನ್ನು ಸಲ್ಲಿಸುವರು,” ಎಂದರು.
ಚಿಂತನೆ
ಚಿಂತನೆ
ನಮ್ಮ ಮನೆಗಳಲ್ಲಿ ನಡೆಯುವ ಸಮಾರಂಭಗಳಿಗೆ ನಾವು ಆಮಂತ್ರಿಸುವುದು ನೆಂಟರನ್ನು, ಬಂದುಗಳನ್ನು, ಸ್ನೇಹಿತರನ್ನು. ಇವರ್‍ಯಾರು ಅವರಿಗೆ ತಿನ್ನಲು ಊಟದ ಕೊರತೆಯಿದೆ ಎಂದು ಬರುವುದಿಲ್ಲ. ಕೆಲವರು ತಮ್ಮ ಪ್ರೀತಿ, ಸ್ನೇಹದ ನಿಮಿತ್ತ ಬಂದುಗಳನ್ನು ಆಹ್ವಾನಿಸಿದರೆ, ಅನೇಕರು ತಮ್ಮ ಪ್ರತಿಷ್ಠೆಗಾಗಿ, ದೊಡ್ಡಸ್ಥನವನ್ನು ಪ್ರದರ್ಶಿಸಲು ಕರೆಯುವುದುಂಟು. ಯೇಸು ಹೇಳುವ ಹಾಗೆ ದರಿದ್ರರು, ಅಂಗವಿಕಲರು, ಕುಂಟರು, ಕುರುಡರನ್ನು ಊಟಕ್ಕೆ ಕರೆಯುವವರು ಬೆರಳೆಣಿಕೆಯಷ್ಟು ಮಾತ್ರ. ನಮ್ಮ ಸಭೆ ಸಮಾರಂಭಗಳ ನೈಜ ಉದ್ದೇಶವೇನೆಂಬುದನ್ನು ಮನಗಾಣಬೇಕಿದೆ.
ಯೇಸು ಇಂದಿನ ಸಾಮತಿಯ ಮೂಲಕ ಶ್ರೀಮಂತರಿಗೆ ಬಡವರ ಮೇಲಿದ್ದ ತಾತ್ಸಾರವನ್ನು ಖಂಡಿಸುತ್ತಿದ್ದಾರೆ. ಯೇಸುವಿನ ಕಾಲದ ಶ್ರೀಮಂತರು ಬಡವರನ್ನು ತುಚ್ಛವಾಗಿ ಕಾಣುತ್ತಿದ್ದರು. ಯೇಸುವಿನ ಹಿಂಬಾಲಕರಲ್ಲಿ, ಪ್ರೇಷಿತರಲ್ಲಿ ಅನೇಕರು ಬಡವರಾಗಿದ್ದರು, ಬಡವರೊಂದಿಗೆ ಉತ್ತಮ ಒಡನಾಟವಿತ್ತು. ಇಂದು ನಮ್ಮ ಸ್ನೇಹಿತರು ಯಾರು? ಯಾರೊಂದಿಗೆ ನಮ್ಮ ಒಡನಾಟ? ಶ್ರೀಮಂತರೊಂದಿಗೋ ಅಥವಾ ಬಡವರೊಂದಿಗೋ?
No comments:
Post a Comment