Wednesday, 30 October 2019

ಸಾಧಾರಣ ಕಾಲದ ಮೂವತ್ತೊಂದನೇ ಭಾನುವಾರ

3/ಹಸಿರು/ಭಾನು 
1ನೇ ವಾಚನ - ಸುಜ್ಞಾನ 11:22-12: 2
ಕೀರ್ತನೆ - 145: 1-2, 8-11, 13-15
2ನೇ ವಾಚನ - 2ಥೆಸ 1: 11-2: 2 
ಶುಭಸಂದೇಶ - ಲೂಕ 19: 1-1೦


1ನೇ ವಾಚನ - ಸುಜ್ಞಾನ 11:22-12: 2
ನಿಮ್ಮ ದೃಷ್ಟಿಯಲಿ ಇಡೀ ವಿಶ್ವವು ತಕ್ಕಡಿಯಲ್ಲಿನ ಒಂದು ಅಣುವಿನಂತೆ ಮುಂಜಾನೆ ನೆಲಕ್ಕೆ ಬೀಳುವ ಮಂಜಿನ ಒಂದು ಹನಿಯಂತೆ. ಏನು ಮಾಡಲೂ ನಿಮಗೆ ಶಕ್ತಿಯಿದೆ, ಆದರೂ ಎಲ್ಲರಿಗೂ ಕರುಣೆ ತೋರುತ್ತೀರಿ. ಜನರು ನಿಮಗೆ ಅಭಿಮುಖರಾಗಲೆಂದೆ, ಅವರ ಪಾಪಗಳನು ಕಂಡರೂ ಕಾಣದಂತಿದ್ದೀರಿ. ಪ್ರೀತಿಸುತ್ತೀರಿ ಸೃಷ್ಟಿಯನೆಲ್ಲಾ ನೀವುಂಟು ಮಾಡಿದ್ದನು ಹೇಸುವುದಿಲ್ಲ ಹೇಸುತ್ತಿದ್ದರೆ ಉಂಟುಮಾಡುತ್ತಿರಲಿಲ್ಲ. ನಿಮ್ಮ ಚಿತ್ತ ಇದ್ದಹೊರತು, ಯಾವುದು ಬಾಳೀತು? ನಿಮ್ಮ ಕರೆ ಇಲ್ಲದಿದ್ದರೆ, ಉದ್ದುದು ಹೇಗೆ ಉಳಿದೀತು? ಹೇ ಸರ್ವೇಶ್ವರಾ, ಜೀವಾತ್ಮಗಳ ಪ್ರಿಯನೇ, ಎಲ್ಲವೂ ನಿಮ್ಮವಾದುದರಿಂದ, ಎಲ್ಲಕ್ಕೂ ಇದೆ ನಿಮ್ಮ ರಕ್ಷಣೆ.  ಅಮರವಾದ ನಿಮ್ಮ ಚೈತನ್ಯವು ಇರುವುದು ಪ್ರತಿಯೊಂದರಲ್ಲೂ. ಎಂದೇ ಸನ್ಮಾರ್ಗದಿಂದ ತಪ್ಪಿಹೋದವರನು ಸ್ವಲ್ಪಸ್ವಲ್ಪವಾಗಿ ತಿದ್ದುತ್ತೀರಿ ಮಾಡಿದ ಅಪರಾಧಗಳನು ನೆನಪಿಗೆ ತಂದುಕೊಟ್ಟು ಎಚ್ಚರಿಸುತ್ತೀರಿ. ಸರ್ವೇಶ್ವರಾ, ದುಷ್ಟತನ ಬಿಟ್ಟು ನಿಮ್ಮನ್ನವರು ನಂಬಲೆಂದೇ ಹೀಗೆ ಮಾಡುತ್ತೀರಿ. 

ಕೀರ್ತನೆ - 145: 1-2, 8-11, 13-15
1 : ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ / ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ
2 : ಹೊಗಳುವೆನು ನಾ ದಿನದಿನವೂ ನಿನ್ನನು / ಭಜಿಸುವೆನೆಂದೆಂದಿಗೂ ನಿನ್ನ ಹೆಸರನು
8 : ಪ್ರಭು ದಯಾನಿಧಿ, ಕೃಪಾಸಾಗರನು / ಸಹನಶೀಲನು, ಪ್ರೀತಿಪೂರ್ಣನು
9 : ಪ್ರಭುವಿನ ಕರುಣೆ ಎಲ್ಲರ ಮೇಲೆ / ಆತನ ಕೃಪೆಯು ಸೃಷ್ಟಿಯ ಮೇಲೆ
10 : ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು / ಕೊಂಡಾಡುವುದು ನಿನ್ನನು ಭಕ್ತ ಸಮೂಹವು
11 : ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು / ವರ್ಣಿಸುವರವರು ನಿನ್ನ ಶಕ್ತಿ ಸಾಮಥ್ರ್ಯವನು
13 : ಶಾಶ್ವತವಾದುದು ನಿನ್ನ ರಾಜ್ಯವು / ಇರುವುದೆಂದಿಗು ನಿನ್ನ ಆಳ್ವಿಕೆಯು
14 : ನುಡಿಯಲಿ ಪ್ರಭು ಸದಾ ಪ್ರಾಮಾಣಿಕನು / ನಡೆಯಲಿ ಆತನು ಸದಾ ಪ್ರೀತಿಮಯನು
15 : ಎತ್ತುವನಾತ ಬಿದ್ದವರನೆಲ್ಲ / ಉದ್ಧರಿಪನು ಕುಗ್ಗಿದವರನೆಲ್ಲ

2ನೇ ವಾಚನ - 2ಥೆಸ 1: 11-2: 2 
ಇದಕ್ಕಾಗಿ ನಿಮಗೋಸ್ಕರ ನಾವು ಸದಾ ಪ್ರಾರ್ಥಿಸುತ್ತೇವೆ. ದೇವರೇ ನೀಡಿರುವ ಕರೆಗೆ ನೀವು ಯೋಗ್ಯರಾಗಿ ಬಾಳುವಂತಾಗಲಿ; ದೇವರ ಮಹಿಮಾಶಕ್ತಿಯಿಂದ ನಿಮ್ಮ ಶುಭಾಕಾಂಕ್ಷೆಗಳು ಮತ್ತು ವಿಶ್ವಾಸಪ್ರೇರಿತ ಕಾರ್ಯಗಳು ಪೂರ್ಣವಾಗಲಿ. ಹೀಗೆ ನಿಮ್ಮ ಮುಖಾಂತರ ಪ್ರಭು ಯೇಸುವಿನ ನಾಮಕ್ಕೂ ಮತ್ತು ಅವರಲ್ಲಿ ನಿಮಗೂ ಮಹಿಮೆಯುಂಟಾಗಲಿ. ನಮ್ಮ ದೇವರ ಹಾಗೂ ಪ್ರಭು ಯೇಸುಕ್ರಿಸ್ತರ ಅನುಗ್ರಹದಿಂದ ಇದು ನೆರವೇರಲಿ. ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಪುನರಾಗಮನವನ್ನು ಮತ್ತು ನಾವು ಅವರ ಸನ್ನಿಧಿಯಲ್ಲಿ ಒಂದಾಗಿ ಸೇರುವ ವಿಷಯವನ್ನು ಕುರಿತು ನಿಮ್ಮಲ್ಲಿ ನಾವು ವಿನಂತಿಸುವುದೇನೆಂದರೆ; ಪ್ರಭುವಿನ ದಿನವು ಬಂದೇಬಿಟ್ಟಿತೆಂದು ಪ್ರವಾದನೆಯಿಂದಾಗಲಿ, ಪ್ರವಚನದಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ತಿಳಿದು ಬಂದಿದೆಯೆಂದು ಯಾರಾದರೂ ಹೇಳಿದರೆ, ಒಮ್ಮೆಗೇ ನೀವು ತಬ್ಬಿಬ್ಬಾಗಿ, ತಳಮಳಗೊಳ್ಳದಿರಿ.

ಶುಭಸಂದೇಶ - ಲೂಕ 19: 1-1೦
ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಪ್ರವೇಶೀಸಿ ಅದರ ಬೀದಿಗಳಲ್ಲಿ ಹಾದು ಹೋಗುತ್ತಿದ್ದರು. ಅಲ್ಲಿ ಜಕ್ಕಾಯ ಎಂಬವನಿದ್ದನು. ಅವನು ಸುಂಕವಸೂಲಿಯವರ ಮುಖಂಡ ಹಾಗೂ ಧನಾಢ್ಯ. ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡ ವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ.
ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು. ಯೇಸು ಆ ಸ್ಥಳಕ್ಕೆ ಬಂದು, ತಲೆಯೆತ್ತಿ ನೋಡಿ, “ಜಕ್ಕಾಯಾ, ಒಡನೆ ಇಳಿದು ಬಾ; ಈ ದಿನ ನಿನ್ನ ಮನೆಯಲ್ಲಿ ನಾನು ತಂಗಬೇಕು,” ಎಂದರು. ಜಕ್ಕಾಯನು ತಕ್ಷಣವೇ ಇಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. ಇದನ್ನು ನೋಡಿದವರೆಲ್ಲರು, “ಯೇಸು ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ?” ಎಂದು ಗೊಣಗುಟ್ಟಿದರು. ಜಕ್ಕಾಯನು ನೆರೆದಿದ್ದ ಜನರ ಮುಂದೆ ಎದ್ದುನಿಂತು ಯೇಸುವಿಗೆ, “ಪ್ರಭುವೇ, ನನ್ನ ಆಸ್ತಿಪಾಸ್ತಿಯಲ್ಲಿ ಅರ್ಧಭಾಗವನ್ನು ಬಡಬಗ್ಗರಿಗೆ ಕೊಟ್ಟುಬಿಡುತ್ತೇನೆ. ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದುಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ,” ಎಂದನು. ಆಗ ಯೇಸು, “ಇಂದು ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೆ? ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ,” ಎಂದು ಹೇಳಿದರು.
ಚಿಂತನೆ
ದೈವೀಕ ಗುಣಗಳಲ್ಲಿ ಅತ್ಯಂತ ಆಪ್ತವಾದ, ಮನುಷ್ಯ ತೀರಾ ಬಯಸುವ ಗುಣವೆಂದರೆ ದೇವರು ಕರುಣಾಮಯಿ ಎಂಬುದು. ದೇವರಿಂದ ಹರಿಯುವ ಕರುಣೆ ಮಾನವ ಬದುಕನ್ನು ರಕ್ಷಿಸುತ್ತದೆ, ಸಂತೃಪ್ತಿ ನೀಡುತ್ತದೆ. ಅವನ ಎಲ್ಲಾ ಬಲಹೀನತೆಗಳ ನಡುವೆಯೂ ದೇವರ ಕರುಣೆ ಅವನನ್ನು ರಕ್ಷಿಸುತ್ತದೆ. ಯೇಸು ತಮ್ಮ ಬೋಧನೆಯ ಪ್ರತಿಮಾತಿನಲ್ಲೂ ದೇವರ ಕರುಣೆ, ಪ್ರೀತಿ, ಕ್ಷಮೆಯನ್ನು ಪ್ರಕಟಿಸುತ್ತಾರೆ. 

`ಜಕ್ಕಾಯ' ಎಂದರೆ `ನಿರ್ಮಲ ಹೃದಯ' ಅಥವಾ `ನಿಷ್ಟಾವಂತ' ಎಂದು ಅರ್ಥ. ಜಕ್ಕಾಯನು ಸುಂಕ ವಸೂಲಿಗಾರರ ಮೇಲ್ವಿಚಾರಕನಾಗಿದ್ದ. ಯೇಸುವಿನ ಕಾಲದಲ್ಲಿ ಇಸ್ರಯೇಲರು ರೋಮನರ ಆಳ್ವಿಕೆಯಲ್ಲಿದ್ದರು. ಸುಂಕವಸೂಲಿಗಾರರು ನಿಗದಿಪಡಿಸಿಗಿಂತ ಹೆಚ್ಚಾಗಿ ಸುಂಕ ವಸೂಲಿಮಾಡುತ್ತಿದ್ದರು. ಇಸ್ರಯೇಲರು ರೋಮನ್ನರ ಸುಂಕಪದ್ಧತಿಯನ್ನು ಖಂಡಿಸಿದ್ದರು. ಹಾಗಾಗಿ ಸುಂಕದವರನ್ನು ಪಾಪಿಗಳೆಂದು ಪರಿಗಣಿಸಿದ್ದರು. ಜಕ್ಕಾಯನು ಅನ್ಯಾಯದಿಂದ ಗಳಿಸಿದ ಹಣದಿಂದ ಶ್ರೀಮಂತನಾಗಿದ್ದ. ಅವನಲ್ಲಿ ಎಷ್ಟೇ ಹಣ, ಸಂಪತ್ತಿದ್ದರೂ ಅವನ ಮನದಲ್ಲಿ ಏನೋ ಕೊರತೆಯಿತ್ತು, ಅತೃಪ್ತಿಯಿತ್ತು. ಯೇಸುವಿನ ಬಗ್ಗೆ ಅರಿತಿದ್ದ ಜಕ್ಕಾಯ ಯೇಸುವನ್ನು ಕಾಣಲು ಹಂಬಲಿಸಿದ. ಅತಿಥಿಯಾಗಿ ಬಂದ ಕ್ರಿಸ್ತನನ್ನು ಸ್ವೀಕರಿಸಿದ, ಮನಪರಿವರ್ತನೆಯಾದ ಯೇಸು ಆತನ ಜೀವನವನ್ನು ಪ್ರವೇಶಿಸಿದ ನಂತರ ಹೊಸ ಮನುಷ್ಯನಾದ. ಜಕ್ಕಾಯನ ಮನೆಗೆ ಪ್ರವೇಶಿಸಿದ ಕ್ರಿಸ್ತ ನಮ್ಮ ಮನ, ಮನೆಗಳನ್ನು ಪ್ರವೇಶಿಸಲಿ.

No comments:

Post a Comment