7/ಹಸಿರು/ಗುರು
1ನೇ ವಾಚನ - ರೋಮ 14: 7-12
ಕೀರ್ತನೆ - 27: 1, 4, 13-14
ಶುಭಸಂದೇಶ - ಲೂಕ 15: 1-1೦
1ನೇ ವಾಚನ - ರೋಮ 14: 7-12
ಕೀರ್ತನೆ - 27: 1, 4, 13-14
ಶುಭಸಂದೇಶ - ಲೂಕ 15: 1-1೦
1ನೇ ವಾಚನ - ರೋಮ 14: 7-12
ನಮ್ಮಲ್ಲಿ ಯಾರೂ ತನಗಾಗಿಯೇ ಬದುಕುವುದಿಲ್ಲ; ತನಗಾಗಿಯೇ ಸಾಯುವುದಿಲ್ಲ. ನಾವು ಬದುಕಿದರೂ ಪ್ರಭುವಿಗಾಗಿಯೇ; ಸತ್ತರೂ ಅವರಿಗಾಗಿಯೇ. ನಾವು ಬದುಕಿದರೂ ಸತ್ತರೂ ಪ್ರಭುವಿಗೆ ಸೇರಿದವರು. ಏಕೆಂದರೆ, ಸತ್ತವರಿಗೂ ಬದುಕುವವರಿಗೂ ಪ್ರಭುವಾಗಬೇಕೆಂಬ ಉದ್ದೇಶದಿಂದಲೇ ಕ್ರಿಸ್ತಯೇಸು ಸತ್ತು ಜೀವಂತರಾದದ್ದು. ಹೀಗಿರುವಲ್ಲಿ ಸಸ್ಯಾಹಾರಿಯೇ, ನೀನು ನಿನ್ನ ಸಹೋದರನನ್ನು ದೋಷಿಯೆಂದು ತೀರ್ಪಿಡುವುದೇಕೆ? ಮಾಂಸಾಹಾರಿಯೇ, ನಿನ್ನ ಸಹೋದರನನ್ನು ಹೀನೈಸುವುದೇಕೆ? ನಾವೆಲ್ಲರೂ ದೇವರ ನ್ಯಾಯಸ್ಥಾನದ ಮುಂದೆ ನಿಲ್ಲಬೇಕಲ್ಲವೆ? ಪವಿತ್ರ ಗ್ರಂಥದಲ್ಲಿ: “ಎಲ್ಲರೂ ನನಗೆ ಸಾಷ್ಟಾಂಗವೆರಗುವರು ಎಲ್ಲರೂ ನನ್ನನ್ನು ದೇವರೆಂದು ನಿವೇದಿಸುವರು ಇದಕ್ಕೆ ಜೀವಸ್ವರೂಪನಾದ ನಾನೇ ಸಾಕ್ಷಿ,” ಎಂದು ಸರ್ವೇಶ್ವರ ಸ್ವಾಮಿ ಹೇಳಿದ್ದಾರೆ.ನಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕವನ್ನು ಒಪ್ಪಿಸಬೇಕು.
ಕೀರ್ತನೆ - 27: 1, 4, 13-14
1 : ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ / ನಾನಾರಿಗೂ ಅಳುಕೆನು // ನನ್ನ ಬಾಳಿಗಾಧಾರ ಪ್ರಭುವೆ / ನಾನಾರಿಗೂ ಅಂಜೆನು //
2 : ಕೇಡು ಮಾಡಬಂದರೆನಗೆ ಕೊಲೆಗಡುಕರು / ಎಡವಿಬಿದ್ದರು, ತಾವೇ ಅಳಿದುಹೋದರು //
3 : ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು / ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು //
4 : ನಾನೊಂದನು ಕೋರಿದೆ ಪ್ರಭುವಿನಿಂದ / ನಾನದನ್ನೇ ನಿರೀಕ್ಷಿಸಿದೆ ಆತನಿಂದ : / ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ / ನಾ ತಲ್ಲೀನನಾಗಬೇಕು ಅಲ್ಲಾತನ- ಪ್ರಸನ್ನತೆಯಲಿ //
5 : ಕೇಡುಕಾಲದಲ್ಲಿ ಅವಿತಿಸಿಡುವನು ನನ್ನನ್ನು ತನ್ನ ಗುಡಾರದಲಿ / ಇರಿಸುವನು ಮರೆಯಾಗಿ ಗರ್ಭಗುಡಿಯಲಿ, ಸುರಕ್ಷಿತ ಶಿಖರದಲಿ //
6 : ಸುತ್ತಲು ನೆರೆದಿಹ ಶತ್ರುಗಳ ನಡುವೆ ತಲೆಯೆತ್ತಿ ನಡೆವೆನು / ದೇವಾಲಯದೊಳು ಜಯಜಯ ಘೋಷ ದೊಡನೆ ಬಲಿಗಳನರ್ಪಿಸುವೆನು / ಪ್ರಭುವಿಗೆ ಹಾಡುವೆನು, ವಾದ್ಯ ನುಡಿಸುತ ಕೊಂಡಾಡುವೆನು //
7 : ಪ್ರಭೂ, ನಿನಗೆ ಮೊರೆಯಿಡುವೆನು / ಕರುಣಿಸೆನಗೆ ಸದುತ್ತರವನು //
8 : “ಅರಸೆನ್ನ ಮುಖದರುಶನವನು”, ಎಂದೆ ನೀನು / “ಅರಸುವೆನು ಅದನೆ”, ಎಂದು ಮರುನುಡಿದೆ ನಾನು //
9 : ವಿಮುಖನಾಗಬೇಡ ಪ್ರಭು, ಕೋಪದಿಂದೆನ್ನ ತಳ್ಳಬೇಡಯ್ಯಾ / ರಕ್ಷಕದೇವಾ, ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ //
10 : ಹೆತ್ತವರು ತೊರೆದುಬಿಟ್ಟರೇನು / ಕರ್ತನು ಪೊರೆಯದಿರನು ನನ್ನನು //
11 : ಬೋಧಿಸೆನಗೆ ಪ್ರಭು, ನಿನ್ನ ಮಾರ್ಗವನು / ಶತ್ರುರಹಿತ ಹಾದಿಯಲಿ ನಡೆಸು ಎನ್ನನು //
12 : ತಳ್ಳಬೇಡೆನ್ನನು ವೈರಿಗಳ ವಶಕ್ಕೆ / ಸುಳ್ಳುಸಾಕ್ಷಿಗಳು, ಕ್ರೂರಿಗಳವರೆನಗೆ //
13 : ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು / ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು //
14 : ಪ್ರಭುವನು ಎದುರುನೋಡುತ್ತಿರು ಮನವೇ / ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ //
ಶುಭಸಂದೇಶ - ಲೂಕ 15: 1-1೦
ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, “ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,” ಎಂದು ಗೊಣಗಿದರು. ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: “ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳು ಇವೆ ಎನ್ನೋಣ. ಅವುಗಳಲ್ಲಿ ಒಂದು ಕುರಿ ಕಾಣದೆ ಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಭತ್ತೊಂಭತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆ ಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ? ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ; ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. ‘ಕಳೆದು ಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾನೆ, ಅಲ್ಲವೆ? “ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಭತ್ತೊಂಭತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕ್ಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. “ಅಂತೆಯೇ, ಮನೆಯಾಕೆಯೊಬ್ಬಳು ತನ್ನ ಬಳಿಯಿದ್ದ ಹತ್ತು ನಾಣ್ಯಗಳಲ್ಲಿ ಒಂದನ್ನು ಕಳೆದುಕೊಂಡಳು ಎನ್ನೋಣ. ಆಗ ಅವಳೇನು ಮಾಡುತ್ತಾಳೆ? ದೀಪ ಹಚ್ಚಿ ಮನೆಯನ್ನು ಗುಡಿಸಿ, ಕಳೆದು ಹೋದ ನಾಣ್ಯ ಸಿಕ್ಕುವವರೆಗೂ ಚೆನ್ನಾಗಿ ಹುಡುಕಾಡುತ್ತಾಳೆ, ಅಲ್ಲವೇ? ಅದು ಸಿಕ್ಕಿದಾಗ ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, ‘ಕಳೆದುಹೋದ ನಾಣ್ಯ ಸಿಕ್ಕಿಬಿಟ್ಟಿತು. ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾಳಲ್ಲವೆ? “ಅದೇ ಮೇರೆಗೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರಿಗೆ ಸಂತೋಷ ಉಂಟಾಗುತ್ತದೆಂಬುದು ನಿಶ್ಚಯ,” ಎಂದರು.
ಚಿಂತನೆ
ಚಿಂತನೆ
ಯೆಹೂದ್ಯ ಮುಖಂಡರು ಕಟ್ಟುನಿಟ್ಟಾಗಿ ಧಾರ್ಮಿಕ ಆಚರಣೆಗಳನ್ನು ಪಾಲಿಸುತ್ತಿದ್ದರು. ಯೆಹೂದ್ಯ ಧಾರ್ಮಿಕ ಮುಖಂಡರು ದೇವಾಲಯಕ್ಕೆ ಸನಿಹವಾಗಿದ್ದರೂ ಅವರ ಹೃದಯಗಳು ಮಾತ್ರ ದೇವರಿಂದ ಬಹುದೂರವಿದ್ದವು. ಯೆಹೂದ್ಯರು, ಧಾರ್ಮಿಕ ಆಚರಣೆಗಳನ್ನು ಪಾಲಿಸದವರನ್ನು ಪಾಪಿಗಳು ಎಂದು ಪರಿಗಣಿಸಿ ಅವರನ್ನು ಬಹಿಷ್ಕೃತರಂತೆ ನೋಡುತ್ತಿದ್ದರು. ಅವರೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದರು. ಆದರೆ ಯೇಸು ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು, ಅರ್ಥಹೀನ ಆಚರಣೆಗಳಿಗಿಂತ ಕ್ಷಮೆ, ಕರುಣೆ, ಪ್ರೀತಿ ಮುಖ್ಯ ಎಂದು ತಿಳಿಸಿದರು.
ನಾವು ಪರರ ಮೇಲೆ ಕರುಣೆತೋರದ ಹೊರತು ನಾವು ದೇವರ ಕೃಪೆಗೆ, ಕರುಣೆಗೆ ಒಳಗಾಗಲಾರೆವು. ಇನ್ನೊಬ್ಬರನ್ನು ಬೊಟ್ಟು ಮಾಡಿ ತೋರಿಸಿ `ಆತ ಪಾಪಿ, ಕೆಳವರ್ಗದವನು, ಅನ್ಯಧರ್ಮೀಯ ಆತ ನರಕಕ್ಕೆ ಮೀಸಲು' ಎಂದು ಘೋಷಿಸಿ ಪರೋಕ್ಷವಾಗಿ ತಾನು ಸ್ವರ್ಗಕ್ಕೆ ಹೋಗುತ್ತೇನೆ ಅಂದುಕೊಂಡಿದ್ದ ಯೆಹೂದ್ಯ ಧಾರ್ಮಿಕ ಮುಖಂಡರಿಗೆ ಕ್ರಿಸ್ತ ಕರುಣೆಯ ಸಾಮತಿಯ ಮೂಲಕ ಪಾಠ ಕಲಿಸುತ್ತಿದ್ದಾರೆ.
No comments:
Post a Comment