Wednesday, 30 October 2019

ಸಾಧಾರಣ ಕಾಲದ ಮೂವತ್ತೊಂದನೇ ವಾರ ಬುಧವಾರ

6/ಹಸಿರು/ಬುಧ
1ನೇ ವಾಚನ - ರೋಮ 13: 8-1೦
ಕೀರ್ತನೆ - 112: 1-2, 4-5, 9
ಶುಭಸಂದೇಶ - ಲೂಕ 14:  25-33


1ನೇ ವಾಚನ - ರೋಮ 13: 8-1೦
ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ವಿಧವಾದ ಋಣವೂ ನಿಮಗಿರಬಾರದು. ಏಕೆಂದರೆ ಪರರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನು ಪೂರ್ಣವಾಗಿ ನೆರವೇರಿಸಿದವನು. “ವ್ಯಭಿಚಾರ ಮಾಡಬೇಡ, ಕೊಲಬೇಡ, ಕಳಬೇಡ, ದುರಾಶೆ ಪಡಬೇಡ,” - ಈ ಮುಂತಾದ ಆಜ್ಞೆಗಳೆಲ್ಲವೂ “ನೀನು ನಿನ್ನನ್ನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನೂ ಪ್ರೀತಿಸು,” ಎಂಬ ಒಂದೇ ಆಜ್ಞೆಯಲ್ಲಿ ಅಡಗಿವೆ. ಪ್ರೀತಿಯು ಪರರಿಗೆ ಕೇಡು ಬಗೆಯದು. ಆದಕಾರಣ ಪ್ರೀತಿಯೇ ಧರ್ಮಶಾಸ್ತ್ರದ ಪೂರೈಕೆ.

ಕೀರ್ತನೆ - 112: 1-2, 4-5, 9
1 : ಅಲ್ಲೆಲೂಯ / ಪ್ರಭುವಿನಲಿ ಭಯಭಕ್ತಿ ಉಳ್ಳವನು ಧನ್ಯನು / ಆತನಾಜ್ಞೆಗಳಲಿ ಹಿಗ್ಗುವವನು ಭಾಗ್ಯನು // 
2 : ಬಲಿಷ್ಠವಾಗುವುದು ಜಗದೊಳು ಅವನ ಸಂತಾನ / ಸಜ್ಜನರ ಸಂತತಿ ಪಡೆವುದು ಆಶೀರ್ವಚನ // 
4 : ಸಜ್ಜನನಿಗೆ ಮೂಡುವುದು ಜ್ಯೋತಿ ಕತ್ತಲೊಳು / ನ್ಯಾಯಪ್ರಿಯನು ಆತ, ದಯಾವಂತ, ಕೃಪಾಳು // 
5 : ದಯೆತೋರಿ ಧನಸಹಾಯ ಮಾಡುವವನು ಭಾಗ್ಯವಂತ / ನ್ಯಾಯದಿಂದ ವ್ಯವಹರಿಸುವಂಥಾ ಮನುಜನು ಭಾಗ್ಯವಂತ // 
9 : ಉದಾರತೆಯಿಂದ ಕೊಡುವನು ಬಡವರಿಗೆ / ಫಲಿಸುವುದು ಅವನಾ ನೀತಿ ಸದಾಕಾಲಕೆ / ಮಹಿಮೆತರುವ ಕೋಡುಮೂಡುವುದು ಅವನಿಗೆ //

ಶುಭಸಂದೇಶ - ಲೂಕ 14:  25-33
ಜನರು ಗುಂಪುಗುಂಪಾಗಿ ಯೇಸುಸ್ವಾಮಿಯ ಸಂಗಡ ಹೋಗುತ್ತಿದ್ದರು. ಆಗ ಯೇಸು ಅವರ ಕಡೆಗೆ ತಿರುಗಿ ಹೀಗೆಂದರು: “ನನ್ನಲ್ಲಿಗೆ ಬರುವ ಯಾರೊಬ್ಬನೂ ತನ್ನ ತಂದೆ-ತಾಯಿ, ಹೆಂಡತಿ-ಮಕ್ಕಳು, ಸೋದರ-ಸೋದರಿಯರನ್ನು ಮಾತ್ರವಲ್ಲ, ತನ್ನ ಪ್ರಾಣವನ್ನು ಕೂಡ ತ್ಯಜಿಸದ ಹೊರತು, ನನ್ನ ಶಿಷ್ಯನಾಗಲಾರನು. ತನ್ನ ಶಿಲುಬೆಯನ್ನು ಹೊತ್ತು ನನ್ನ ಹಿಂದೆ ಬರದವನು ನನ್ನ ಶಿಷ್ಯನಾಗಲಾರನು. ನಿಮ್ಮಲ್ಲಿ ಒಬ್ಬನು ಒಂದು ಗೋಪುರವನ್ನು ಕಟ್ಟಲು ಇಚ್ಛಿಸಿದರೆ, ಕೆಲಸವನ್ನು ಮುಗಿಸಲು ತನ್ನಿಂದ ಸಾಧ್ಯವೇ ಎಂದು ನೋಡಲು, ಮೊದಲು ಕುಳಿತು, ಬೇಕಾಗುವ ಖರ್ಚು ವೆಚ್ಚವನ್ನು ಲೆಕ್ಕ ಹಾಕುವುದಿಲ್ಲವೇ? ಇಲ್ಲದೆ ಹೋದರೆ, ಇವನು ಅಸ್ತಿವಾರ ಹಾಕಿದ ಮೇಲೆ ಕೆಲಸ ಪೂರೈಸದೆ ಇರುವುದನ್ನು ಕಂಡು, ‘ಕಟ್ಟಲಾರಂಭಿಸಿದ; ಮುಗಿಸಲು ಇವನಿಂದಾಗಲಿಲ್ಲ!’ ಎಂದು ನೋಡುವವರೆಲ್ಲರೂ ಅವನನ್ನು ಪರಿಹಾಸ್ಯಮಾಡುವರು. ಹಾಗೆಯೇ, ಅರಸನೊಬ್ಬನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವುದಕ್ಕೆ ಮುಂಚೆ ಇಪ್ಪತ್ತು ಸಾವಿರ ಸೈನ್ಯದೊಡನೆ ಬರುವ ಶತ್ರುವನ್ನು ತನ್ನ ಹತ್ತು ಸಾವಿರ ಸೈನ್ಯದಿಂದ ಎದುರಿಸಲು ಸಾಧ್ಯವೇ ಎಂದು ಮೊದಲು ಕುಳಿತು ಆಲೋಚನೆ ಮಾಡುವುದಿಲ್ಲವೇ? ಸಾಧ್ಯವಿಲ್ಲದಿದ್ದರೆ, ಶತ್ರುರಾಜನು ದೂರದಲ್ಲಿರುವಾಗಲೇ ದೂತರನ್ನು ಕಳುಹಿಸಿ, ಸಂಧಾನಕ್ಕೆ ಷರತ್ತುಗಳೇನೆಂದು ವಿಚಾರಿಸುತ್ತಾನೆ. ಅದೇ ಮೇರೆಗೆ, ನಿಮ್ಮಲ್ಲಿ ಯಾವನು ತನಗಿರುವುದನ್ನೆಲ್ಲಾ ಪರಿತ್ಯಾಗ ಮಾಡುವುದಿಲ್ಲವೋ ಅವನು ನನ್ನ ಶಿಷ್ಯನಾಗಲಾರ.
ಚಿಂತನೆ
ತಮ್ಮ ಶಿಷ್ಯರಾಗಲು ಬಯಸುವವರು ಶಿಲುಬೆಯ ಮಾರ್ಗದಲ್ಲಿ ನಡೆಯಬೇಕೆಂದು ಯೇಸು ಕರೆ ನೀಡುತ್ತಿದ್ದಾರೆ. ಯೇಸು ತನ್ನ ಹಿಂಬಾಲಕರಿಗೆ ಎಲ್ಲೂ ಹೂವಿನ ಹಾಸಿಗೆಯನ್ನಷ್ಟೇ ಹಾಸಲಿಲ್ಲ. ಅದರೊಂದಿಗೆ ಮುಳ್ಳಿನ ಶಿಲುಬೆಯನ್ನು ಕೊಟ್ಟರು. ಸಾಮಾನ್ಯವಾಗಿ ನಾವು ದೇವರಿಂದ ಬಯಸುವುದು ವರಪ್ರಸಾದಗಳನ್ನಷ್ಟೇ ಹೊರತು, ಕಷ್ಟದ ಶಿಲುಬೆಗಳನ್ನಲ್ಲ. 

ಶ್ರಮಕ್ಕೆ, ಕಷ್ಟಗಳಿಗೆ ನಾವು ಹೆದರುತ್ತೇವೆ. ಸುಲಭವಾದ ಮಾರ್ಗಗಳಿಗಾಗಿ ಹುಡುಕಾಡುತ್ತೇವೆ. ಎಲ್ಲವೂ ನಮಗೆ ಸುಲಭವಾಗಿ ಸಿಗಬೇಕು. ಆದರೆ ಬೆವರು ಸುರಿಸಲು ಸಿದ್ಧರಿಲ್ಲ. ಸುಲಭವಾಗಿ ಹಣ ಬರಬೇಕು, ಸುಲಭವಾಗಿ ಸುಖಸಿಗಬೇಕು. ನಾವು ಮಾತ್ರ ಹುಲ್ಲು ಕಡ್ಡಿಯನ್ನು ಅಲುಗಾಡಿಸಬಾರದು. ಇಂತಹ ಬದುಕು ನಮ್ಮದಾದರೆ ಖಂಡಿತವಾಗಿ ನಾವು ಯೇಸುವಿನ ಅನುಯಾಯಿಗಳಾಗಲು ಸಾಧ್ಯವಿಲ್ಲ, ಯೇಸು ನುಡಿದಂತೆ ನಮ್ಮನ್ನೇ ನಾವು ಪರಿತ್ಯಜಿಸಿ, ನಮ್ಮ ಶಿಲುಬೆಯನ್ನು ಹೊತ್ತುಕೊಂಡು ಕ್ರಿಸ್ತನನ್ನು ಹಿಂಬಾಲಿಸಿದಾಗ ಮಾತ್ರ ಆತನ ಅನುಯಾಯಿಗಳಾಗುತ್ತೇವೆ.

No comments:

Post a Comment