Wednesday, 30 October 2019

ಸಾಧಾರಣ ಕಾಲದ ಮೂವತ್ತನೇ ವಾರ ಶುಕ್ರವಾರ

1/ಬಿಳಿ/ಶುಕ್ರ/ಸಕಲ ಸಂತರ ಮಹೋತ್ಸವ, ಕರ್ನಾಟಕ ರಾಜ್ಯೋತ್ಸವ
1ನೇ ವಾಚನ - ಪ್ರಕಟಣೆ 7: 2-4, 9-14
ಕೀರ್ತನೆ - 24: 1-6
2ನೇ ವಾಚನ - 1 ಯೋವಾನ 3:1-3
ಶುಭಸಂದೇಶ - ಮತ್ತಾಯ 5: 1-12


1ನೇ ವಾಚನ - ಪ್ರಕಟಣೆ 7: 2-4, 9-14
ಆಗ ಪೂರ್ವದಿಕ್ಕಿನಿಂದ ಮತ್ತೊಬ್ಬ ದೇವದೂತನು ಏರಿಬಂದನು. ಅವನು ಜೀವಸ್ವರೂಪಿಯಾದ ದೇವರ ಮುದ್ರೆಯನ್ನು ಕೈಯಲ್ಲಿ ಹಿಡಿದಿದ್ದನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನು ಮಾಡುವ ಅಧಿಕಾರವನ್ನು ಪಡೆದಿದ್ದ ನಾಲ್ಕು ಮಂದಿ ದೇವದೂತರಿಗೆ: “ನಮ್ಮ ದೇವರ ದಾಸರಿಗೆ ಹಣೆಯ ಮೇಲೆ ನಾವು ಮುದ್ರೆಯೊತ್ತುವ ತನಕ ಭೂಮಿಗಾಗಲಿ, ಸಮುದ್ರಕ್ಕಾಗಲಿ, ಇಲ್ಲವೇ ಮರಗಳಿಗಾಗಲಿ ಕೇಡನ್ನು ಮಾಡಬೇಡಿ,” ಎಂದು ಗಟ್ಟಿಯಾಗಿ ಕೂಗಿ ಹೇಳಿದನು. ಮುದ್ರೆಯೊತ್ತಿಸಿಕೊಂಡವರ ಸಂಖ್ಯೆ ನನಗೆ ಕೇಳಿಬಂತು. ಇಸ್ರಯೇಲರು ಪ್ರತಿಯೊಂದು ಕುಲದಲ್ಲಿ ಮುದ್ರೆಯೊತ್ತಿಸಿಕೊಂಡವರು ಒಂದು ಲಕ್ಷದ ನಲವತ್ತ ನಾಲ್ಕು ಸಾವಿರ ಮಂದಿ. ಇದಾದ ಬಳಿಕ ನಾನು ಇನ್ನೊಂದು ದಿವ್ಯದರ್ಶನವನ್ನು ಕಂಡೆ: ಯಾರಿಂದಲೂ ಎಣಿಸಲಾಗದಷ್ಟು ಒಂದು ದೊಡ್ಡ ಜನಸಮೂಹವು ನೆರೆದಿತ್ತು. ಅವರು ಎಲ್ಲಾ ದೇಶ, ಭಾಷೆ, ಕುಲ, ಗೋತ್ರಗಳಿಂದ ಬಂದವರಾಗಿದ್ದರು. ಶ್ವೇತಾಂಬರರಾಗಿ ಸಿಂಹಾಸನದ ಮತ್ತು ಯಜ್ಞದ ಕುರಿಮರಿಯಾದಾತನ ಸಾನ್ನಿಧ್ಯದಲ್ಲಿ ನಿಂತಿದ್ದರು. ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದಿದ್ದರು. ಅವರು ಗಟ್ಟಿಯಾದ ಧ್ವನಿಯಿಂದ: “ಸಿಂಹಾಸನಾರೂಢರಾದ ದೇವರಿಂದ, ಬಲಿಯರ್ಪಿತರಾದ ಯಜ್ಞದ ಕುರಿಮರಿಯಿಂದ ಲಭಿಸುತ್ತದೆಮಗೆ ಜೀವೋದ್ಧಾರ,” ಎಂದು ಹಾಡಿದರು. ಆಗ ಸಭಾಪ್ರಮುಖರ ಮತ್ತು ನಾಲ್ಕು ಜೀವಿಗಳ ಸಮೇತ ದೇವದೂತರೆಲ್ಲರೂ ಸಿಂಹಾಸನದ ಸುತ್ತಲೂ ನಿಂತಿದ್ದರು. ಅವರೆಲ್ಲರೂ ಸಿಂಹಾಸನದ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ, “ಆಮೆನ್, ಸ್ತುತಿಸ್ತೋತ್ರವೂ ಘನಮಾನವೂ ಜ್ಞಾನವೂ ಧನ್ಯವಾದವೂ ಶಕ್ತಿಯೂ ಪರಾಕ್ರಮವೂ ಸಲ್ಲಲಿ ಯುಗಯುಗಾಂತರಕ್ಕೂ ಆಮೆನ್,” ಎಂದು ಹಾಡುತ್ತಾ ದೇವರನ್ನು ಆರಾಧಿಸಿದರು. ಸಭಾಪ್ರಮುಖರಲ್ಲಿ ಒಬ್ಬನು, “ಶ್ವೇತಾಂಬರರಾದ ಇವರೆಲ್ಲರೂ ಯಾರು? ಎಲ್ಲಿಂದ ಬಂದರು?” ಎಂದು ನನ್ನನ್ನು ಪ್ರಶ್ನಿಸಿದನು. ಅದಕ್ಕೆ ನಾನು, “ಸ್ವಾವಿೂ ನೀವೇ ಬಲ್ಲಿರಿ”, ಎಂದು ಉತ್ತರಕೊಟ್ಟೆ. ಆಗ ಆತನು ನನಗೆ ಹೀಗೆಂದನು: “ಇವರು ಆ ಭೀಕರ ಹಿಂಸೆ ಬಾಧೆಯನ್ನು ಅನುಭವಿಸಿ ಬಂದವರು. ತಮ್ಮ ನಿಲುವಂಗಿಗಳನ್ನು ಯಜ್ಞದ ಕುರಿಮರಿಯ ರಕ್ತದಿಂದ ತೊಳೆದು ಬಿಳುಪಾಗಿಸಿಕೊಂಡಿದ್ದಾರೆ.

ಕೀರ್ತನೆ - 24:1-6
1 : ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ / ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ // 
2 : ಕಡಲನು ತಳಪಾಯವನಾಗಿಸಿದವನು ಆತನೆ / ಜಲರಾಶಿ ನಡುವೆ ಅದನು ಸ್ಥಿರಗೊಳಿಸಿದವನಾತನೆ // 
3 : ಪ್ರಭುವಿನ ಶಿಖರವನು ಏರಬಲ್ಲವನಾರು? / ಆ ನಿವಾಸದಲಿ ನಿಲ್ಲಲು ಯೋಗ್ಯನಾರು? // 
4 : ಅಂಥವನಿರಬೇಕು ಶುದ್ಧ ಹಸ್ತನು, ಸುಮನಸ್ಕನು / ಅನಾಚಾರಕೆ, ಅಪಮಾಣಿಕತೆಗೆ ಒಲಿಯನವನು // 
5 : ಲಭಿಸುವುದಾತನಿಗೆ ಶುಭ ಪ್ರಭುವಿನಿಂದ / ನೀತಿಯ ಸತ್ಫಲ ರಕ್ಷಕ ದೇವನಿಂದ // 
6 : ಇಂಥವರೆ ದೇವರ ದರ್ಶನಾಭ್ಯರ್ಥಿಗಳು / ಇಂಥವರೆ ಯಕೋಬ ದೇವನ ಭಕ್ತಾದಿಗಳು //

2ನೇ ವಾಚನ -1 ಯೋವಾನ 3:1-3
ನಾವು ದೇವರ ಮಕ್ಕಳು ಎನಿಸಿಕೊಂಡಿರಬೇಕಾದರೆ ಪಿತನು ನಮ್ಮನ್ನು ಎಷ್ಟಾಗಿ ಪ್ರೀತಿಸುತ್ತಾರೆಂಬುದನ್ನು ಗಮನಿಸಿರಿ. ನಿಜಕ್ಕೂ ನಾವು ದೇವರ ಮಕ್ಕಳೇ. ಲೋಕವು ಅವರನ್ನು ಅರಿತುಕೊಳ್ಳಲಿಲ್ಲವಾದ ಕಾರಣ ನಾವು ಎಂಥವರೆಂದು ಅದು ಅರಿತಿಲ್ಲ. ಪ್ರಿಯರೇ, ನಾವೀಗ ದೇವರ ಮಕ್ಕಳು. ಮುಂದೆ ನಾವು ಎಂಥವರಾಗುತ್ತೇವೆ ಎಂಬುದು ಇನ್ನೂ ವಿಷದವಾಗಿಲ್ಲ. ಆದರೆ ಕ್ರಿಸ್ತಯೇಸು ಪ್ರತ್ಯಕ್ಷವಾಗುವಾಗ ನಾವೂ ಅವರಂತೆಯೇ ಇರುತ್ತೇವೆಂದು ಬಲ್ಲೆವು. ಏಕೆಂದರೆ, ಅವರನ್ನು ನಾವು ಅವರ ಯಥಾರ್ಥ ರೂಪದಲ್ಲೇ ಕಾಣುತ್ತೇವೆ. ಕ್ರಿಸ್ತಯೇಸುವಿನಲ್ಲಿ ನಂಬಿಕೆ ನಿರೀಕ್ಷೆಯನ್ನಿಟ್ಟಿರುವ ಪ್ರತಿಯೊಬ್ಬನೂ ಅವರು ಶುದ್ಧರಾಗಿರುವಂತೆಯೇ ತನ್ನನ್ನು ಶುದ್ಧವಾಗಿಟ್ಟುಕೊಳ್ಳುತ್ತಾನೆ.
ಶುಭಸಂದೇಶ - ಮತ್ತಾಯ 5: 1-12
ಜನರ ದೊಡ್ಡ ಗುಂಪನ್ನು ಕಂಡು ಯೇಸುಸ್ವಾಮಿ ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡರು. ಅವರ ಶಿಷ್ಯರು ಸುತ್ತಲೂ ನೆರೆದರು. ಆಗ ಯೇಸು ಇಂತೆಂದು ಪ್ರಬೋಧಿಸಿದರು "ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು. ದುಃಖಿಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು. ವಿನಯಶೀಲರು ಭಾಗ್ಯವಂತರು; ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು. ನ್ಯಾಯನೀತಿಗಾಗಿ ಹಸಿದು ಹಾತೊರೆಯು ವವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು. ದಯಾವಂತರು ಭಾಗ್ಯವಂತರು; ದೇವರ ದಯೆ ಅವರಿಗೆ ದೊರಕುವುದು. ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು. ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು. ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು." "ನನ್ನ ಶಿಷ್ಯರು ನೀವಾದ್ದರಿಂದ ಜನರು ನಿಮ್ಮನ್ನು ಧಿಕ್ಕರಿಸುವರು, ಹಿಂಸಿಸುವರು, ಅನ್ಯಾಯವಾಗಿ ಇಲ್ಲಸಲ್ಲದ್ದನ್ನು ನಿಮ್ಮ ಮೇಲೆ ಹೊರಿಸುವರು; ಆಗ ನೀವು ಭಾಗ್ಯವಂತರು. ಅದಕ್ಕಾಗಿ ಹರ್ಷಿಸಿ ಆನಂದಪಡಿ; ಏಕೆಂದರೆ ಸ್ವರ್ಗದಲ್ಲಿ ನಿಮಗೆ ಸಿಗುವ ಪ್ರತಿಫಲ ಹಿರಿದು. ನಿಮಗಿಂತ ಮೊದಲಿದ್ದ ಪ್ರವಾದಿಗಳನ್ನೂ ಜನರು ಹೀಗೆಯೇ ಚಿತ್ರಹಿಂಸೆಗೆ ಒಳಪಡಿಸಿದರು."
ಚಿಂತನೆ
ಇಂದು ಧರ್ಮಸಭೆ ಸಕಲ ಸಂತರ ಹಬ್ಬವನ್ನು ಆಚರಿಸುತ್ತಿದೆ. ಸಾಮಾನ್ಯ ಮನುಷ್ಯರಾಗಿ ಜನಿಸಿ, ಅಸಾಧಾರಣ ಬದುಕಿನ ಮೂಲಕ ಕ್ರಿಸ್ತನ ಪ್ರೀತಿಗೆ ಪಾತ್ರರಾದವರು ಈ ಸಂತರು. ಧರ್ಮಸಭೆ ಅಧಿಕೃತವಾಗಿ ಸುಮಾರು ೧೦೦೦೦ ಸಂತ ಭಕ್ತರನ್ನು ಗುರುತಿಸಿ ಗೌರವಿಸುತ್ತದೆ. ಆದರೆ ಗುರುತಿಸದ ಅನಾಮಧೇಯ ಸಂತ ಭಕ್ತರು ಅಸಂಖ್ಯಾತರಿದ್ದಾರೆ. ಅವರೆಲ್ಲರನ್ನೂ ಸ್ಮರಿಸಿ ಗೌರವಿಸುವ ದಿನವೇ ಸಕಲ ಸಂತರ ಹಬ್ಬ. ಈ ಅನಾಮಧೇಯ ಸಂತರ ಪಟ್ಟಿಯಲ್ಲಿ ಮೃತಹೊಂದಿದ ನಮ್ಮ ಅಜ್ಜ-ಅಜ್ಜಿಯರು, ಸಂಬಂಧಿಕರು, ಸ್ನೇಹಿತರೂ ಇರಬಹುದೆಂಬ ವಿಷಯ ಸಂತೋಷಕರ ಸಂತರ ಬಾಳು ನಮಗೆ ಮಾದರಿ ಮತ್ತು ಆದರ್ಶವಾಗಬೇಕಿದೆ. ನಾವು ಕೂಡ ಆ ಸೌಭಾಗ್ಯಕ್ಕೆ ಪಾತ್ರರಾಗಬಹುದು ಎಂದು ಈ ಹಬ್ಬ ನಮ್ಮನ್ನು ನೆನಪಿಸುತ್ತದೆ. ನವೆಂಬರ್ ತಿಂಗಳು ಕರ್ನಾಟಕದ ಪಾಲಿಗೆ ನಾಡಹಬ್ಬದ ಸಂಭ್ರಮವನ್ನು ತಂದುಕೊಡುತ್ತದೆ. ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ನಾಡು, ನುಡಿ, ಸಂಸ್ಕೃತಿಯ ಉಳಿವಿಗೆ, ಏಳಿಗೆಗೆ ಶ್ರಮಿಸಬೇಕಿದೆ. ಇಲ್ಲಿರುವ ಎಲ್ಲರೂ ಕನ್ನಡಿಗರೇ ಎಂಬ ಮನೋಭಾವ ಮೂಡುವಂತಾಗಲಿ.

No comments:

Post a Comment