Saturday, 12 October 2019

ಸಾಧಾರಣ ಕಾಲದ ಇಪ್ಪತ್ತೊಂಬತ್ತನೇ ವಾರ ಮಂಗಳವಾರ

ಸಾಧಾರಣ ಕಾಲದ ಇಪ್ಪತ್ತೊಂಬತ್ತನೇ ವಾರ ಮಂಗಳವಾರ



22/ಹಸಿರು/ಮಂಗಳ/ಐಚ್ಛಿಕ ಸ್ಮರಣೆ-ಸಂತ ಎರಡನೆ ಜಾನ್ ಪೌಲ್ (ಜಗ) 

1ನೇ ವಾಚನ - ರೋಮ 5: 12, 15, 17-21
ಕೀರ್ತನೆ - 4೦: 6-7, 9, 16
ಶುಭಸಂದೇಶ - ಲೂಕ 12: 35-38

1ನೇ ವಾಚನ - ರೋಮ 5: 12, 15, 17-21
ಒಬ್ಬ ಮನುಷ್ಯನಿಂದಲೇ ಪಾಪ, ಪಾಪದಿಂದ ಮರಣ, ಈ ಲೋಕವನ್ನು ಪ್ರವೇಶಿಸಿದವು. ಎಲ್ಲರೂ ಪಾಪ ಮಾಡಿದ್ದರಿಂದ ಮರಣವು ಎಲ್ಲರಿಗೂ ಪ್ರಾಪ್ತಿಯಾಯಿತು. ಆದರೆ ಆದಾಮನ ಪಾಪಕ್ಕೂ ದೇವರ ಅನುಗ್ರಹಕ್ಕೂ ವ್ಯತ್ಯಾಸವಿದೆ. ಒಬ್ಬ ಮನುಷ್ಯನ ಅಪರಾಧದಿಂದ ಎಲ್ಲರೂ ಮರಣಕ್ಕೊಳಗಾದರು ಎಂಬುದೇನೋ ನಿಜ. ಆದರೆ ದೇವರ ಅನುಗ್ರಹವು ಅದಕ್ಕಿಂತಲೂ ಅತ್ಯಧಿಕವಾದುದು. ಅಂತೆಯೇ, ಯೇಸುಕ್ರಿಸ್ತ ಎಂಬ ಒಬ್ಬ ಮಹಾತ್ಮನ ಅನುಗ್ರಹದಿಂದ ಲಭಿಸುವ ಉಚಿತಾರ್ಥ ವರಗಳು ಇನ್ನೂ ಅಧಿಕಾಧಿಕವಾದುವು ಎಂಬುದೂ ನಿಜ. ಒಬ್ಬ ಮನುಷ್ಯನ ಅಪರಾಧದ ಕಾರಣ, ಒಬ್ಬ ವ್ಯಕ್ತಿಯ ಮುಖಾಂತರ ಮರಣವು ಎಲ್ಲಾ ಮಾನವರ ಮೇಲೆ ದಬ್ಬಾಳಿಕೆ ನಡೆಸಿತು. ಆದರೆ, ಹೇರಳವಾದ ದೈವಾನುಗ್ರಹವನ್ನೂ ದೇವರೊಡನೆ ಸತ್ಸಂಬಂಧವೆಂಬ ಉಚಿತಾರ್ಥ ವರವನ್ನೂ ಪಡೆದವರಾದರೋ ಯೇಸುಕ್ರಿಸ್ತ ಎಂಬ ಮಹಾತ್ಮನ ಮುಖಾಂತರ ಮತ್ತಷ್ಟು ವಿಪುಲವಾಗಿ ಸಜ್ಜೀವವನ್ನು ಪಡೆದು ರಾಜ್ಯವಾಳುತ್ತಾರೆ. ಒಬ್ಬನ ಅಪರಾಧದಿಂದ ಎಲ್ಲಾ ಮಾನವರು ದಂಡನೆಯ ತೀರ್ಪಿಗೆ ಗುರಿಯಾಗುತ್ತಾರೆ. ಹಾಗೆಯೇ ಒಬ್ಬನ ಸತ್ಕಾರ್ಯದಿಂದ ಎಲ್ಲಾ ಮಾನವರು ವಿಮೋಚನೆಯನ್ನೂ ಸಜ್ಜೀವವನ್ನೂ ಪಡೆಯುತ್ತಾರೆ. ಹೇಗೆ ಒಬ್ಬ ಮನುಷ್ಯನ ಅವಿಧೇಯತೆಯಿಂದ ಎಲ್ಲರೂ ಪಾಪಿಗಳಾದರೋ, ಹಾಗೆಯೇ ಒಬ್ಬ ಮನುಷ್ಯನ ವಿಧೇಯತೆಯಿಂದ ಎಲ್ಲರೂ ದೇವರೊಡನೆ ಸತ್ಸಂಬಂಧವನ್ನು ಹೊಂದುತ್ತಾರೆ. ಧರ್ಮಶಾಸ್ತ್ರದ ಪ್ರವೇಶ ಆದಂತೆ, ಅಪರಾಧಗಳು ಹೆಚ್ಚಿದವು. ಅಪರಾಧಗಳು ಹೆಚ್ಚಿದಂತೆ ದೇವರ ಅನುಗ್ರಹವು ಹೆಚ್ಚುಹೆಚ್ಚು ಆಯಿತು. ಹೀಗೆ ಪಾಪವು ಮರಣದ ಮೂಲಕ ಆಳ್ವಿಕೆ ನಡೆಸಿದಂತೆ, ದೈವಾನುಗ್ರಹವು ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ನಮ್ಮನ್ನು ದೇವರೊಡನೆ ಸತ್ಸಂಬಂಧದಲ್ಲಿರಿಸಿ, ಅಮರಜೀವದತ್ತ ಒಯ್ದು, ಆಳ್ವಿಕೆ ನಡೆಸುತ್ತದೆ.

ಕೀರ್ತನೆ - 4೦: 6-7, 9, 16
6 : ಬೇಡವಾದವು ನಿನಗೆ ಯಜ್ಞಾರ್ಪಣೆ, ಬಲಿಕಾಣಿಕೆ | ಬಯಸಿಲ್ಲ ನೀ ಹೋಮವನೆ, ಪರಿಹಾರಕ ಬಲಿಯನೆ | ಶ್ರವಣಶಕ್ತಿಯನು ಅನುಗ್ರಹಿಸಿದೆ ನೀನು ನನಗೆ ||
7 : ನಾನೋಗೊಡುತ ಇಂತೆಂದೆ: “ಇಗೋ ನಾನೇ ಬರುತ್ತಿರುವೆ | ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? ||
9 : ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ || ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ ||
16 : ನಿನ್ನನು ಅರಸುವವರೆಲ್ಲರು ಹರ್ಷಾನಂದಗೊಳ್ಳಲಿ / ನಿನ್ನ ರಕ್ಷಣಾಪ್ರಿಯರು ಸತತ “ಪ್ರಭು ಪರಾಕ್ರಮಿ” ಎನ್ನಲಿ //

ಶುಭಸಂದೇಶ - ಲೂಕ 12: 35-38
“ನಿಮ್ಮ ನಡು ಕಟ್ಟಿರಲಿ; ನಿಮ್ಮ ದೀಪ ಉರಿಯುತ್ತಿರಲಿ. ತಟ್ಟಿದ ತಕ್ಷಣ ಯಜಮಾನನಿಗೆ ಬಾಗಿಲು ತೆರೆಯಲು ಸಿದ್ಧರಿರುವ ಸೇವಕರಂತೆ ಇರಿ. ತಮ್ಮ ಯಜಮಾನನು ಮದುವೆ ಔತಣ ಮುಗಿಸಿಕೊಂಡು ಯಾವಾಗ ಹಿಂದಿರುಗುತ್ತಾನೋ, ಎಂದು ಅವರು ಎದುರು ನೋಡುತ್ತಾ ಇರುತ್ತಾರೆ. ಯಜಮಾನನು ಬಂದು ಯಾವ ಯಾವ ಸೇವಕ ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುತ್ತಾನೋ, ಅಂಥವರು ಭಾಗ್ಯವಂತರು. ಏಕೆಂದರೆ, ಯಜಮಾನನೇ ನಡುಕಟ್ಟಿನಿಂತು, ಅವರನ್ನು ಊಟಕ್ಕೆ ಕೂರಿಸಿ, ಒಬ್ಬೊಬ್ಬನಿಗೂ ತಾನೇ ಉಪಚಾರ ಮಾಡುವನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. “ಯಜಮಾನನು ಬರುವಾಗ ನಡು ರಾತ್ರಿ ಆಗಿರಲಿ, ಮುಂಜಾವವಾಗಿರಲಿ, ಎಚ್ಚರದಿಂದ ಇರುವ ಸೇವಕರನ್ನು ಆತನು ಕಂಡರೆ ಅವರು ಭಾಗ್ಯವಂತರು.
-----
ಚಿಂತನೆ

ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ದೇವರ ಮುಂದೆ ನಿಲ್ಲಲೇಬೇಕು. ಆದರೆ ಆ ಸಮಯ ಯಾವಾಗ, ಯಾವ ರೀತಿ, ಬರುವುದೆಂದು ತಿಳಿಯರು. ಹಾಗಾಗಿ ಸದಾ ಜಾಗೃತರಾಗಿರಬೇಕು. ದೇವರು ಬರುವ ಸಮಯ ತಿಳಿಯದು ಎಂದು ನಾವು ಅದನ್ನು ಕಡೆಗಣಿಸುವಂತಿಲ್ಲ, ನಿರ್ಲಕ್ಷಿಸುವಂತಿಲ್ಲ. ದೇವರು ಬಂದಾಗ ಎಚ್ಚರವಾಗಿರುವವನು ಧನ್ಯ. ದೇವರು ಬರುವ ಗಳಿಗೆ ದೂತರಿಗಾಗಲಿ, ಪುತ್ರನೀಗಾಗಲಿ ತಿಳಿಯದು ಅದು ತಂದೆ ದೇವರಿಗೆ ಮಾತ್ರ ತಿಳಿದಿದೆ. ಹಾಗಾಗಿ ಜವಾಬ್ದಾರಿಯುತ ಜೀವನವನ್ನು ನಡೆಸಬೇಕಿದೆ. ಪ್ರಭುವಿನ ನಿರೀಕ್ಷೆಯಲ್ಲಿ ಮೂಡಬೇಕಾದ ಕೆಲಸಗಳನ್ನು ತೊರೆದು ಸೋಮಾರಿಗಳಾಗಿ ಕೂರುವಂತಿಲ್ಲ. ಪ್ರಭುವಿನ ನಿರೀಕ್ಷಿಸುವುದರ ಜೊತೆಗೆ ಒಳ್ಳೆಯ ಬದುಕನ್ನು ಜೀವಿಸುತ್ತಾ, ಮುನ್ನೆಚ್ಚರಿಕೆಯ ಅಗತ್ಯದ ಬಗ್ಗೆ ಶುಭಸಂದೇಶ ತಿಳಿಸುತ್ತದೆ.

No comments:

Post a Comment