ಸಾಧಾರಣ ಕಾಲದ ಇಪ್ಪತ್ತೊಂಬತ್ತನೇ ವಾರ ಬುಧವಾರ
23/ಹಸಿರು/ಬುಧ
1ನೇ ವಾಚನ - ರೋಮ 6: 12-18
ಕೀರ್ತನೆ - 123: 1-8
ಶುಭಸಂದೇಶ - ಲೂಕ 12: 39-48
1ನೇ ವಾಚನ - ರೋಮ 6: 12-18
ಆದ್ದರಿಂದ ದೈಹಿಕ ದುರಿಚ್ಛೆಗಳಿಗೆ ದಾಸರಾಗಿ ನೀವು ನಡೆಯದಂತೆ, ನಿಮ್ಮ ನಶ್ವರ ಶರೀರಗಳ ಮೇಲೆ ಪಾಪವು ತನ್ನ ದಬ್ಬಾಳಿಕೆಯನ್ನು ಇನ್ನೆಂದಿಗೂ ನಡೆಸದಿರಲಿ. ನಿಮ್ಮ ದೇಹದ ಯಾವುದೇ ಅಂಗವು ದುಷ್ಕøತ್ಯವನ್ನೆಸಗುವ ಸಾಧನವಾಗುವಂತೆ ಪಾಪದ ಕಾರ್ಯಕ್ಕೆ ಅದನ್ನು ಒಪ್ಪಿಸದಿರಿ. ಬದಲಾಗಿ ಸತ್ತು ಜೀವಕ್ಕೆ ಬಂದವರಂತೆ ದೇವರಿಗೆ ನಿಮ್ಮನ್ನೇ ಸಮರ್ಪಿಸಿಕೊಳ್ಳಿರಿ; ನಿಮ್ಮ ಅಂಗಗಳನ್ನು ಸತ್ಕಾರ್ಯ ಸಾಧನೆಗಳನ್ನಾಗಿ ದೇವರಿಗೆ ಒಪ್ಪಿಸಿಕೊಡಿರಿ. ಏಕೆಂದರೆ ಪಾಪವು ಇನ್ನೆಂದಿಗೂ ನಿಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗದು; ನೀವಿನ್ನು ಧರ್ಮಶಾಸ್ತ್ರಕ್ಕೆ ಅಧೀನರಲ್ಲ. ದೈವಾನುಗ್ರಹಕ್ಕೆ ಮಾತ್ರ ಅಧೀನರು. ಹಾಗಾದರೆ ಏನು ಹೇಳೋಣ? ಧರ್ಮಶಾಸ್ತ್ರಕ್ಕೆ ಅಧೀನರಾಗಿರದೆ ದೈವಾನುಗ್ರಹಕ್ಕೆ ಅಧೀನರಾಗಿರುವ ನಾವು ಪಾಪಮಾಡುತ್ತಲೇ ಜೀವಿಸೋಣವೆ? ಸರ್ವಥಾ ಇಲ್ಲ. ಯಾರ ಕೈ ಕೆಳಗೆ ಗುಲಾಮರಾಗಿರಲು ನಿಮ್ಮನ್ನೇ ಒಪ್ಪಿಸಿಕೊಳ್ಳುತ್ತೀರೋ ಅವರಿಗೆ ನೀವು ಶರಣಾಗುತ್ತೀರಿ. ನೀವು ಪಾಪಕ್ಕೆ ಗುಲಾಮರಾದರೆ ಮರಣವೇ ನಿಮಗೆ ಗತಿ; ದೇವರಿಗೆ ಶರಣಾದರೆ ಸತ್ಸಂಬಂಧವೇ ಅದರ ಸತ್ಪರಿಣಾಮ. ದೇವರಿಗೆ ಸ್ತುತಿಸ್ತೋತ್ರ ಸಲ್ಲಲಿ. ಏಕೆಂದರೆ, ಹಿಂದೊಮ್ಮೆ ನೀವು ಪಾಪಕ್ಕೆ ಗುಲಾಮರಾಗಿದ್ದರೂ ನಿಮಗೆ ಕಲಿಸಿದ ಬೋಧನೆಯನ್ನು ನೀವು ಮನಃಪೂರ್ವಕವಾಗಿ ಅಂಗೀಕರಿಸಿ ವಿಧೇಯರಾದಿರಿ; ಪಾಪಬಂಧನದಿಂದ ಬಿಡುಗಡೆ ಹೊಂದಿ ದೇವ ಸಂಬಂಧಕ್ಕೆ ಒಳಗಾದಿರಿ.
ಕೀರ್ತನೆ - 123: 1-8
1 : ಪ್ರಭು ನಮ್ಮ ಪರ ಇಲ್ಲದಿದ್ದರೆ ಏನಾಗುತ್ತಿತ್ತು?/ ಇಸ್ರಯೇಲರೇ ಹೇಳಲಿ ಆ ದುರ್ಗತಿಯನ್ನು ಕುರಿತು
2 : ಪ್ರಭು ನಮ್ಮ ಪರ ಇಲ್ಲದಿದ್ದರೆ ಏನಾಗುತ್ತಿತ್ತು?/ ಜನರೆಮಗೆ ವಿರುದ್ಧ ಎದ್ದಾಗ ಏನಾಗುತ್ತಿತ್ತು?
3 : ಉರಿಗೊಳ್ಳುತಿದ್ದರು ಕಡುಗೋಪದಿಂದ ಖಂಡಿತ / ನುಂಗಿಬಿಡುತ್ತಿದ್ದರು ನಮ್ಮನ್ನು ಜೀವಸಹಿತ
4 : ಕೊಚ್ಚಿಬಿಡುತ್ತಿತ್ತು ನಮ್ಮನ್ನು ಹುಚ್ಚು ಪ್ರವಾಹ / ಬಡಿದುಬಿಡುತ್ತಿತ್ತು ನಮ್ಮನ್ನು ರಭಸದಿಂದ ಪೂರ /
5 : ಮುಳುಗಿಸಿಬಿಡುತ್ತಿತ್ತು ನಮ್ಮನ್ನು ಮಹಾಪ್ರಳಯ
6 : ತುತ್ತಾಗಿಸಲಿಲ್ಲ ನಮ್ಮನ್ನು ಶತ್ರುಗಳ ಬಾಯಿಗೆ / ಕೃತಜ್ಞತಾಪೂರ್ವಕ ಸ್ತೋತ್ರ ಇಗೋ ಪ್ರಭುವಿಗೆ
7 : ಬೇಟೆಬಲೆಯಿಂದ ಪಾರಾದ ಪಕ್ಷಿಯಂತಾದೆವು / ಹರಿದುಹೋಯಿತಿದೊ ಬಲೆಯು, ಹಾರಿಹೋದೆವು ನಾವು
8 : ನಮಗುದ್ಧಾರ ಪ್ರಭುವಿನ ನಾಮದಲಿ / ಭೂಮ್ಯಾಕಾಶವನು ಸೃಜಿಸಿದಾತನಲಿ //
ಶುಭಸಂದೇಶ - ಲೂಕ 12: 39-48
ಕಳ್ಳನು ಬರುವ ಗಳಿಗೆಯು ಮನೆಯ ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ. ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು,” ಎಂದರು. ಆಗ ಪೇತ್ರನು, “ಪ್ರಭೂ, ನೀವು ಹೇಳಿದ ಈ ಸಾಮತಿ ನಮಗೆ ಮಾತ್ರ ಅನ್ವಯಿಸುತ್ತದೋ ಅಥವಾ ಎಲ್ಲರಿಗೋ?” ಎಂದು ಕೇಳಿದನು. ಅದಕ್ಕೆ ಪ್ರಭು ಹೀಗೆಂದರು: “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ. ಯಜಮಾನನು ಮನೆಗೆ ಹಿಂದಿರುಗಿ ಬಂದಾಗ ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು. ಅಂಥವನನ್ನು ಯಜಮಾನನು ತನ್ನ ಎಲ್ಲ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ. “ಆದರೆ ಆ ಸೇವಕನು ತನ್ನಲ್ಲೇ, ‘ನನ್ನ ಯಜಮಾನ ಬಹಳ ತಡಮಾಡಿ ಬರುತ್ತಾನೆ’, ಎಂದುಕೊಂಡು ಗಂಡಾಳು ಹೆಣ್ಣಾಳು ಎನ್ನದೆ ಹೊಡೆಯುವುದಕ್ಕೂ ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ. ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ಚಿತ್ರಹಿಂಸೆಗೂ ವಿಶ್ವಾಸವಿಹೀನರ ದುರ್ಗತಿಗೂ ಗುರಿಮಾಡುವನು. “ಸೇವಕನು ಯಜಮಾನನ ಇಷ್ಟಾರ್ಥವನ್ನು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಇದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. ಅರಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು.
-----
ಚಿಂತನೆ
ಸ್ವರ್ಗ ಸಾಮ್ರಾಜ್ಯದ ಆಗಮನದ ಬಗ್ಗೆ ಯೇಸು ಮಾತನಾಡುವಾಗಲೆಲ್ಲಾ ಅದಕ್ಕೆ ಯಾವ ರೀತಿಯ ಬದ್ಧತೆ ಬೇಕು ಎಂದು ಹೇಳುತ್ತಲೇ, `ನಿರಂತರವಾಗಿ ಎಚ್ಚರವಾಗಿರಿ' ಎಂಬ ಮಾತನ್ನು ಮತ್ತೆ ಮತ್ತೆ ಹೇಳುತ್ತಲೇ ಇರುತ್ತಾರೆ. ಈ ಸ್ವರ್ಗ ಸಾಮ್ರಾಜ್ಯಕ್ಕೆ ಯೋಗ್ಯರಾಗಬೇಕಾದರೆ ಲೌಕಿಕತೆಯ ನಶ್ವರತೆ ಅರಿಯಬೇಕು. ಲೌಕಿಕ ಜಗತ್ತಿನೊಂದಿಗೆ ನಂಟನ್ನು ಕಳೆದುಕೊಳ್ಳುವುದಷ್ಟೇ ಮುಖ್ಯವಲ್ಲ, ದೇವರ ಸಾಮ್ರಾಜ್ಯಕ್ಕೆ ಹತ್ತಿರವಾಗುವುದೂ ಮುಖ್ಯ. ಜನನ ಮತ್ತು ಮರಣದ ನಡುವಿರುವ ಈ ಜೀನವದಲ್ಲಿ ನಿರಂತರ ಎಚ್ಚರಿಕೆಯಿಂದ, ಜವಾಬ್ದಾರಿಯುತವಾಗಿ ಬದುಕಬೇಕು. ದೇವರ ಕರೆ ಯಾವಾಗ ಬರಬಹುದೋ ತಿಳಿದಿಲ್ಲ. ಆದ್ದರಿಂದ ನಿರಂತರ ಎಚ್ಚರಿಕೆ ಅಗತ್ಯ.
No comments:
Post a Comment