Wednesday, 30 October 2019

ಸಾಧಾರಣ ಕಾಲದ ಮೂವತ್ತನೇ ವಾರ ಶನಿವಾರ

2/ನೇರಳೆ/ಶನಿ/ಮೃತರಾದ ಸಕಲ ಭಕ್ತಾದಿಗಳ(ಸ್ಮರಣೆ)
1ನೇ ವಾಚನ - ಸುಜ್ಞಾನ 3:1-9
ಕೀರ್ತನೆ - 23:1-6
2ನೇ ವಾಚನ - ರೋಮ 6:3-9
ಶುಭಸಂದೇಶ - 6:37-40


1ನೇ ವಾಚನ - ಸುಜ್ಞಾನ 3:1-9
ಸಜ್ಜನರ ಆತ್ಮಗಳಿರುವುವು ದೇವರ ಕೈಯೊಳು ಅವರನ್ನು ಮುಟ್ಟದು ಮಹಾಯಾತನೆ ಯಾವುದು. ಮಂದಮತಿಯ ಕಣ್ಣಿಗೆ ಸತ್ತವರಂತೆ ಅವರು ಕಾಣಿಸಿಕೊಂಡರು ಅವರು ಗತಿಸಿ ಹೋದುದು ಅವನಿಂದ ತೊಲಗಿದ ಕೇಡಂತಿತ್ತು. ಸಜ್ಜನರಿಗಾದ ಸಾವು ಮಹಾ ವಿಪತ್ತು ಎಂದವನಿಗೆ ತೋರಿತು ಅವರಾದರೋ ಶಾಂತಿಸಮಾಧಾನದಿಂದ ನೆಮ್ಮದಿಯಾಗಿರುವರು. ಮಾನವನ ದೃಷ್ಟಿಯಲ್ಲಿ ಅವರು ಕಂಡುಬಂದರು ಶಿಕ್ಷಿಸಲ್ಪಟ್ಟವರಂತೆ ಅವರಲ್ಲಾದರೋ ತುಂಬಿತ್ತು ಅಮರತ್ವದ ನಂಬಿಕೆ ನಿರೀಕ್ಷೆ. ಅವರು ಅನುಭವಿಸಿದ ಶಿಕ್ಷೆ ಅಲ್ಪ, ಹೊಂದುವ ಸೌಭಾಗ್ಯ ಅಪಾರ ಶೋಧಿಸಿದ ತರುವಾಯ ದೇವರಿಗೆ ಅವರು ಕಂಡುಬಂದರು ಯೋಗ್ಯಾರ್ಹ. ಶೋಧಿಸಿದರವರನು ಪುಟಕ್ಕಿಟ್ಟ ಚಿನ್ನದಂತೆ ಅಂಗೀಕೃತರಾದರು ಪೂರ್ಣ ದಹನಬಲಿಯಂತೆ. ಪ್ರಕಾಶಿಸುವರು ದೇವರನು ಸಂದರ್ಶಿಸುವ ಕಾಲದಲಿ ಹೊಳೆಯುವರು ಒಣಹುಲ್ಲಿನೊಳಗಿನ ಕಿಡಿಗಳೋಪಾದಿ. ನ್ಯಾಯತೀರಿಸುವರವರು ಜನಾಂಗಗಳಿಗೆ ದೊರೆತನ ಮಾಡುವರವರು ಜನಗಳ ಮೇಲೆ ದೇವರ ಪ್ರಜೆಗಳಾಗಿರುವರು ಸದಾಕಾಲಕೆ. ಸತ್ಯವನು ಅರಿವರು ದೇವರಲಿ ಭರವಸೆಯಿಡುವವರು ಅವರೊಂದಿಗೆ ಪ್ರೀತಿಯಿಂದ ಬಾಳುವರು ನಂಬಿಗಸ್ತರು. ದೇವರಿಂದ ಆಯ್ಕೆಯಾದವರಿಗಿರುವುದು ಕೃಪಾನುಗ್ರಹವು ದೇವರೇ ಕಾಪಾಡುವರು ಸಜ್ಜನರನು. 

ಕೀರ್ತನೆ - 23:1-6
1 : ಪ್ರಭು ಕುರಿಗಾಹಿಯಾಗಿರಲು ನನಗೆ / ಕುಂದುಕೊರತೆಗಳೆಲ್ಲಿಯವು ಎನಗೆ? //
2 : ಹಸಿರುಗಾವಲುಗಳಲೆನ್ನ ತಂಗಿಸುವನು / ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು //
3 : ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ | ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ ||
4 : ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ | ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ | ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ ||
5 : ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು | ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವೆ ಪಾನಪಾತ್ರೆಯನು ||
6 : ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ / ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ //

2ನೇ ವಾಚನ - ರೋಮ 6:3-9
ಕ್ರಿಸ್ತಯೇಸುವಿನವರಾಗಲು ದೀಕ್ಷಾಸ್ನಾನ ಹೊಂದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಾಸ್ನಾನ ಪಡೆದೆವು ಎಂಬುದು ನಿಮಗೆ ತಿಳಿಯದೆ? ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವು ಸಹ ಹೊಸ ಜೀವವನ್ನು ಹೊಂದಿ ಬಾಳುತ್ತೇವೆ. ಅವರು ಮರಣ ಹೊಂದಿದಂತೆ ನಾವೂ ಅವರೊಂದಿಗೆ ಐಕ್ಯವಾಗಿ ಮರಣವನ್ನು ಹೊಂದುತ್ತೇವೆ. ಅಂತೆಯೇ, ಅವರು ಪುನರುತ್ಥಾನ ಆದಂತೆ ನಾವೂ ಅವರೊಡನೆ ಐಕ್ಯವಾಗಿ ಪುನರುತ್ಥಾನ ಹೊಂದುತ್ತೇವೆ. ನಮಗೆ ತಿಳಿದಿರುವಂತೆ ಪಾಪಾಧೀನವಾದ ನಮ್ಮ ಸ್ವಭಾವವು ನಾಶವಾಗುವಂತೆಯೂ ಇನ್ನು ಮುಂದೆ ನಾವು ಪಾಪಕ್ಕೆ ದಾಸರಾಗಿರದಂತೆಯೂ ಯೇಸುಕ್ರಿಸ್ತರೊಡನೆ ನಮ್ಮ ಹಳೆಯ ಸ್ವಭಾವವನ್ನು ಶಿಲುಬೆಗೆ ಜಡಿಯಲಾಗಿದೆ. ಹೀಗೆ ಸತ್ತವನು ಪಾಪಬಂಧದಿಂದ ಬಿಡುಗಡೆ ಹೊಂದಿದವನು. ಕ್ರಿಸ್ತ ಯೇಸುವಿನೊಂದಿಗೆ ನಾವು ಮರಣ ಹೊಂದಿದ್ದರೆ ಅವರೊಡನೆ ನಾವೂ ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ. ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಲಾಯಿತು ಎಂಬುದನ್ನು ನಾವು ಬಲ್ಲೆವು. ಆದ್ದರಿಂದ ಅವರು ಇನ್ನು ಎಂದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವೂ ಇಲ್ಲ.

ಶುಭಸಂದೇಶ -ಯೊವಾನ್ನ 6:37-40
ಪಿತನು ನನಗೆಂದು ಕೊಟ್ಟಿರುವ ಪ್ರತಿಯೊಬ್ಬನೂ ನನ್ನಲ್ಲಿಗೆ ಬರುತ್ತಾನೆ. ನನ್ನಲ್ಲಿಗೆ ಬರುವವನನ್ನು ನಾನೆಂದಿಗೂ ತಳ್ಳಿಬಿಡುವುದಿಲ್ಲ. ನಾನು ಸ್ವರ್ಗದಿಂದ ಇಳಿದು ಬಂದುದು ನನ್ನ ಇಚ್ಛೆಯಂತೆ ನಡೆಯುವುದಕ್ಕಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತದಂತೆ ನಡೆಯುವುದಕ್ಕೆ. ಅವರ ಚಿತ್ತವೇನೆಂದರೆ: ಅವರು ನನಗೆ ಕೊಟ್ಟವರಲ್ಲಿ ಒಬ್ಬನನ್ನೂ ಕಳೆದುಕೊಳ್ಳದೆ ಅಂತಿಮ ದಿನದಂದು ಅವರೆಲ್ಲರನ್ನೂ ನಾನು ಜೀವಕ್ಕೆ ಎಬ್ಬಿಸಬೇಕು. ಪುತ್ರನನ್ನು ಕಂಡು ಆತನಲ್ಲಿ ವಿಶ್ವಾಸ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ನನ್ನ ಪಿತನ ಸಂಕಲ್ಪ. ಅಂಥವನನ್ನು ಅಂತಿಮ ದಿನದಂದು ನಾನು ಜೀವಕ್ಕೆ ಎಬ್ಬಿಸುತ್ತೇನೆ,” ಎಂದು ನುಡಿದರು.
ಚಿಂತನೆ
ಮರಣ ಬದುಕಿಗಿಂತ ವಿಸ್ಮಯ, ಆ ವಿಸ್ಮಯವನ್ನು ಹಂಚಿಕೊಳ್ಳುವುದು ಸ್ವಲ್ಪ ಕಷ್ಟ, ಮರಣದ ಬಗ್ಗೆ ಮಾತಾಡಲು ಅನೇಕರು ಹಿಂಜರಿಯುತ್ತಾರೆ. ಕೆಲವರಿಗೆ ಅದು ಅಪಶಕುನ, ಮತ್ತೆ ಕೆಲವರಿಗೆ ಅದು ಬಂದಾಗ ನೋಡಿಕೊಳ್ಳೋಣ ಎಂಬ ಉಪೇಕ್ಷೆ. ಸಾವಿನ ಬಗೆಗಿನ ಚರ್ಚೆಯನ್ನು ಮುಂದೂಡಿದಾಕ್ಷಣ ಸಾವು ಮುಂದೂಡಲ್ಪಡುವುದಿಲ್ಲ. ಹುಟ್ಟು ಉಚಿತ, ಸಾವು ಖಚಿತ. ಬಹುಶಃ ಎಲ್ಲಾ ಧರ್ಮಗಳೂ ಸಾವಿನ ನಂತರದ ಒಂದು ಬದುಕಿನಲ್ಲಿ ನಂಬಿಕೆ ಇಟ್ಟಿದೆ. ಹಿಂದೂ ಧರ್ಮ ಪುನರ್ಜನ್ಮದಲ್ಲಿ ನಂಬಿಕೆಯಿಟ್ಟರೆ, ಕ್ರೈಸ್ತ ಧರ್ಮ ನಿತ್ಯಜೀವನದಲ್ಲಿ ಪುನರುತ್ಥಾನದಲ್ಲಿ ನಂಬಿಕೆ ತಳೆದಿದೆ. ಕ್ರಿಸ್ತ ಸಾವಿನ ನಂತರ ಪುನರುತ್ಥಾನರಾದರು ಎಂಬ ನಂಬಿಕೆಯೇ ಇದರ ತಳಹದಿ. ಹಾಗಾಗಿ ನಮಗೂ ಪುನರುತ್ಥಾನವಿದೆ ಆದಾಮನಿಂದ ಪಡೆದ ಭೌತಿಕ ದೇಹ ನಶಿಸಿ, ಕ್ರಿಸ್ತನಿಂದ ಪಡೆದ ಆಧ್ಯಾತ್ಮಿಕ ದೇಹವನ್ನು ನಾವು ಪಡೆಯುತ್ತೇವೆ (೧ ಕೊರಿಂಥ ೧೫). ಜನನ ಮರಣ ಮತ್ತು ನಡುವೆ ಇರುವುದೇ ಜೀವನ. ಈ ಜೀವನದ ಮೇಲೆ ಮುಂದಿನ ಬದುಕು ಅವಲಂಬಿತವಾಗಿದೆ. ನಾವು ಸತ್ತರೆ ತಿರುಗಿ ಬರುವುದಿಲ್ಲ ಎಂಬುದು ಖಚಿತವಾದ್ದರಿಂದ ಮೌಲ್ಯಧಾರಿತ ಬದುಕನ್ನು ಜೀವಿಸುತ್ತ, ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನೆರೆವೇರಿಸೋಣ.

No comments:

Post a Comment