Saturday, 5 October 2019

ಸಾಧಾರಣ ಕಾಲದ ಇಪ್ಪತ್ತೇಳನೇ ಭಾನುವಾರ

ಸಾಧಾರಣ ಕಾಲದ ಇಪ್ಪತ್ತೇಳನೇ ಭಾನುವಾರ

6/ಹಸಿರು/ಭಾನು
1ನೇ ವಾಚನ - ಹಬ 1: 2-3, 2: 2-4
ಕೀರ್ತನೆ - 95: 1-2, 6-9
2ನೇ ವಾಚನ: 2 ತಿಮೋ 1: 6-8, 13-14
ಶುಭಸಂದೇಶ - ಲೂಕ 17: 5-1೦

1ನೇ ವಾಚನ - ಹಬ 1: 2-3, 2: 2-4
ನಾನೆಷ್ಟು ಕಾಲ ಸರ್ವೇಶ್ವರಾ, ಮೊರೆ ಇಡುತ್ತಿರಬೇಕು ನಿನಗೆ? ನೀನೆಷ್ಟು ಕಾಲ ಸುಮ್ಮನಿರುವೆ ಕಿವಿಗೊಡದೆ ನನಗೆ? ಹಿಂಸೆಯಾಗುತ್ತಿದೆಯೆಂದು ನಾ ಕೂಗಿದೆ; ಆದರೂ ನೀ ಸುಮ್ಮನಿರುವೆ, ರಕ್ಷಣೆ ನೀಡದೆ. ಕೇಡನ್ನು ನಾ ನೋಡುವಂತೆ ಮಾಡಿದೆಯೇಕೆ? ಕಷ್ಟವನ್ನು ನಾ ಕಾಣುವಂತೆ ಮಾಡಿದೆಯೇಕೆ? ಹಿಂಸೆಬಾಧೆಗಳು ಇವೆ ನನ್ನ ಕಣ್ಣ ಮುಂದೆ. ಇಗೋ, ಜಗಳ ನಡೆಯುತಿದೆ, ವ್ಯಾಜ್ಯವೇಳುತಿದೆ. ಆಗ ಸರ್ವೇಶ್ವರ ನನಗೆ ಕೊಟ್ಟ ಉತ್ತರ ಇದು: “ನೀನು ಕಂಡ ದರ್ಶನವನ್ನು ಬರೆ. ಓದುವವನು ಶೀಘ್ರವಾಗಿ ಓದುವಂತೆ ಹಲಗೆಗಳ ಮೇಲೆ ಅದನ್ನು ಕೆತ್ತು. ನಿಯಮಿತ ಕಾಲದಲ್ಲಿ ಆ ದರ್ಶನ ನೆರವೇರುವುದು. ಅದರ ಅಂತಿಮ ಪರಿಣಾಮ ಶೀಘ್ರದಲ್ಲಿ ಗೊತ್ತಾಗುವುದು. ತಡವಾದರೂ ಕಾದಿರು; ಮೋಸಮಾಡದು. ಅದು ಖಂಡಿತವಾಗಿ ಕೈಗೂಡುವುದು; ತಾಮಸವಾಗದು.ನೋಡು, ನೇರಮನಸ್ಕನಲ್ಲದವನು, ಉಬ್ಬಿಹೋಗಿರುವ ಆ ದುರ್ಜನನು ಉಳಿಯನು; ದೇವರೊಂದಿಗೆ ಸತ್ಸಂಬಂಧ ಹೊಂದಿರುವ ಸಜ್ಜನನು ವಿಶ್ವಾಸದಿಂದಲೇ ಬಾಳುವನು.

ಕೀರ್ತನೆ - 95: 1-2, 6-9
1 : ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ / ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ //
2 : ಆತನ ಸನ್ನಿಧಿ ಸೇರೋಣ ಕೃತಜ್ಞತಾಸ್ತುತಿಯೊಂದಿಗೆ / ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ //
6 : ಬನ್ನಿ, ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ | ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ ||
7 : ಆತನೆಮ್ಮ ದೇವರು, ನಾವು ಆತನ ಕೈಮಂದೆ | ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ ||
8 : ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ | ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ | ಮೆರಿಬಾದಲಿ, ಮಸ್ಸಾ ಮರುಭೂಮಿಯಲಿ ಅವರು ಮಾಡಿದಂತೆ
9 : ನೋಡಿದರಾದರೂ ನನ್ನ ಮಹತ್ಕಾರ್ಯಗಳನು | ಅಲ್ಲವರು ಕೆಣಕಿದರು, ಪರಿಶೋಧಿಸಿದರು ನನ್ನನು ||

2ನೇ ವಾಚನ: 2 ತಿಮೋ 1: 6-8, 13-14
ನಾನು ನಿನ್ನ ಮೇಲೆ ಹಸ್ತ ನಿಕ್ಷೇಪಮಾಡಿ ಪ್ರಾರ್ಥಿಸಿದಾಗ ನೀನು ಪಡೆದಂಥ ವರದಾನವನ್ನು ಪುನಃ ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಫಿಸುತ್ತೇನೆ. ದೇವರು ನಮಗೆ ಪ್ರದಾನಮಾಡಿರುವ ಪವಿತ್ರಾತ್ಮ ನಮ್ಮನ್ನು ಹೇಡಿಗಳನ್ನಾಗಿ ಮಾಡುವುದಿಲ್ಲ; ನಮ್ಮಲ್ಲಿ ದೈವೀಶಕ್ತಿ, ಪ್ರೀತಿ ಹಾಗೂ ಸಂಯಮಗಳು ಪ್ರವರ್ಧಿಸುವಂತೆ ಮಾಡುತ್ತಾರೆ. ಆದ್ದರಿಂದ ಕ್ರಿಸ್ತಯೇಸುವಿಗೆ ಸಾಕ್ಷಿ ಆಗಿರಲು ನಾಚಬೇಡ. ಅವರಿಗಾಗಿ ಬಂಧಿಯಾಗಿರುವ ನನ್ನ ವಿಷಯದಲ್ಲೂ ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು. ಕ್ರಿಸ್ತಯೇಸುವಿನಲ್ಲಿ ನಮ್ಮದಾಗಿರುವ ವಿಶ್ವಾಸ ಹಾಗೂ ಪ್ರೀತಿಯಲ್ಲಿ ನೀನು ನೆಲೆಗೊಂಡಿರು. ನಾನು ಬೋಧಿಸಿದ್ದನ್ನು ಆದರ್ಶವಾಗಿಟ್ಟುಕೊಂಡು ಅನುಸರಿಸು. ನಿನ್ನ ವಶಕ್ಕೆ ಕೊಡಲಾಗಿರುವ ಸದ್ಬೋಧನೆಯನ್ನು ನಮ್ಮಲ್ಲಿ ವಾಸಿಸುವ ಪವಿತ್ರಾತ್ಮರ ಸಹಾಯದಿಂದ ಸುರಕ್ಷಿತವಾಗಿಡು.

ಶುಭಸಂದೇಶ - ಲೂಕ 17: 5-1೦
“ಸ್ವಾವಿೂ, ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ,” ಎಂದು ಪ್ರೇಷಿತರು ಕೇಳಿಕೊಂಡರು. ಆಗ ಯೇಸುಸ್ವಾಮಿ, “ಸಾಸಿವೆ ಕಾಳಿನಷ್ಟು ವಿಶ್ವಾಸ ನಿಮ್ಮಲ್ಲಿದ್ದು, ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೊ,’ ಎಂದು ಆಜ್ಞಾಪಿಸಿದ್ದೇ ಆದರೆ ಅದು ನಿಮಗೆ ವಿಧೇಯವಾಗಿ ನಡೆದುಕೊಳ್ಳುವುದು. ಮಾನವರು ದೇವರ ಊಳಿಗದವರು “ನಿಮಗೆ ಒಬ್ಬ ಆಳಿದ್ದಾನೆಂದು ಭಾವಿಸೋಣ. ಅವನು ಹೊಲ ಉತ್ತೋ, ಕುರಿ ಮೇಯಿಸಿಯೋ ಮನೆಗೆ ಬರುತ್ತಾನೆ. ಬಂದಾಕ್ಷಣವೇ, ‘ಬಾ, ನನ್ನೊಂದಿಗೆ ಊಟಮಾಡು,’ ಎಂದು ನಿಮ್ಮಲ್ಲಿ ಯಾರಾದರೂ ಅವನಿಗೆ ಹೇಳುತ್ತಾರೆಯೇ? ಇಲ್ಲ. ಅದಕ್ಕೆ ಬದಲಾಗಿ ‘ಊಟ ಸಿದ್ಧಮಾಡು; ನಾನು ಊಟಮಾಡಿ ಮುಗಿಸುವ ತನಕ ನಡುಕಟ್ಟಿಕೊಂಡು ನನಗೆ ಉಪಚಾರ ಮಾಡು. ಅನಂತರ ನೀನು ಊಟ ಮಾಡುವೆಯಂತೆ,’ ಎಂದು ಹೇಳುತ್ತಾರಲ್ಲವೇ? ತಮ್ಮ ಆಜ್ಞೆಯ ಪ್ರಕಾರ ನಡೆದುಕೊಂಡ ಆಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆಯೇ? ಇಲ್ಲ. ಹಾಗೆಯೇ ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, ‘ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ,’ ಎಂದುಕೊಳ್ಳಿರಿ,” ಎಂದರು.

ಚಿಂತನೆ

ಸಂತ ಬ್ರೂನೋ (ಯಾಜಕ)
`ಸ್ವಾಮಿ, ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ’ ಎಂದು ಪ್ರೇಷಿತರು ಯೇಸುವನ್ನು ಕೇಳಿಕೊಂಡರು. ದೈವಿಕ ವಿಶ್ವಾಸ ದೀಕ್ಷಾಸ್ನಾನದಲ್ಲಿ ದೇವರು ನೀಡುವ ಕೊಡುಗೆ. ಅದನ್ನು ನಾವು ಬಳಸುತ್ತಾ, ಬೆಳೆಸುತ್ತಾ ಇರುವಾಗ ಅದು ನಮ್ಮ ಆಧ್ಯಾತ್ಮಿಕ ಸಂಗಾತಿಯಾಗುತ್ತದೆ. ದೇವರು ನೀಡುವ ಈ ಕೊಡುಗೆಗೆ ನಾವು ಸಕರಾತ್ಮಕವಾಗಿ ಪ್ರತಿಕ್ರಿಯಿಸುತ್ತಾ ಪ್ರಾರ್ಥನೆಯ ಮೂಲಕ ದೃಢಪಡಿಸಿಕೊಳ್ಳಬೇಕು. ಜೀವನವೆಂಬ ಪ್ರಯಾಣದಲ್ಲಿ ಸಾಗುತ್ತಿರುವ ನಮ್ಮ ವಿಶ್ವಾಸವು ಅನೇಕ ಬಾರಿ ಚಂಚಲಗೊಳ್ಳುವ , ಏರುಪೇರಾಗುವ ಸಾಧ್ಯತೆ ಇದೆ. ಶಿಷ್ಯರು ಪ್ರಾರ್ಥಿಸಿದಂತೆ ನಾವು ಕೂಡ ದೃಢ ವಿಶ್ವಾಸಕ್ಕಾಗಿ ಪ್ರಾರ್ಥಿಸಬೇಕಿದೆ.
ಮೂರು ರೀತಿಯಲ್ಲಿ ವಿಶ್ವಾಸವನ್ನು ಗಳಿಸಬಹುದು:
೧. ವಿಶ್ವಾಸ ಎಂದರೆ ನಂಬಿಕೆ, ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ ಚಾಲಕನ ಮೇಲಿನ ನಂಬಿಕೆ
೨. ವಿಶ್ವಾಸ ಎಂದರೆ ಪ್ರೇಷಿತರ ವಿಶ್ವಾಸ ಸಂಗ್ರಹದಲ್ಲಿ ಧರ್ಮಸಭೆಯ ಅಧಿಕೃತ ಬೋಧನೆಯನ್ನು ಅಂಗೀಕರಿಸುವುದು
೩. ವಿಶ್ವಾಸವು ನನ್ನ ಮತ್ತು ನನ್ನ ದೇವನ ನಡುವಿನ ಬಂಧ, ಸಂಬಂಧ. ನನ್ನ ಮತ್ತು ದೇವರ ಸಂಬಂಧ ಉತ್ತಮವಾಗಿದ್ದಲ್ಲಿ ಯಾವ ಕಾರ್ಯವು ಅಸಾಧ್ಯವಿಲ್ಲ ಎಂಬ ಅಂಶವನ್ನು ಯೇಸು ಇಂದು ತಿಳಿಯಪಡಿಸುತ್ತಾರೆ.

No comments:

Post a Comment