Sunday, 6 October 2019

ಸಾಧಾರಣ ಕಾಲದ ಇಪ್ಪತ್ತೇಳನೇ ವಾರ ಸೋಮವಾರ

ಸಾಧಾರಣ ಕಾಲದ ಇಪ್ಪತ್ತೇಳನೇ ವಾರ ಸೋಮವಾರ 

7/ಬಿಳಿ/ಸೋಮ/ಜಪಮಾಲೆ ರಾಣಿಯ (ಸ್ಮರಣೆ)
1ನೇ  ವಾಚನ - ಪ್ರೇ.ಕಾ 1: 12-14
ಕೀರ್ತನೆ - ಲೂಕ: 1: 47-55
ಶುಭಸಂದೇಶ - ಲೂಕ 1:  26-38

1ನೇ  ವಾಚನ - ಪ್ರೇ.ಕಾ 1: 12-14
ಮತ್ತೀಯನ ಆಯ್ಕೆ ಅನಂತರ ಪ್ರೇಷಿತರು ಓಲಿವ್ ತೋಪಿನ ಗುಡ್ಡದಿಂದ ಸುಮಾರು ಒಂದು ಕಿಲೊವಿೂಟರು ದೂರದಲ್ಲಿರುವ ಜೆರುಸಲೇಮಿಗೆ ಹಿಂದಿರುಗಿದರು. ಅವರು ಯಾರಾರೆಂದರೆ: ಪೇತ್ರ, ಯೊವಾನ್ನ, ಯಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತಲೊಮಾಯ, ಮತ್ತಾಯ, ಅಲ್ಫಾಯನ ಮಗ ಯಕೋಬ, ದೇಶಾಭಿಮಾನಿ ಆದ ಸಿಮೋನ ಮತ್ತು ಯಕೋಬನ ಮಗ ಯೂದ. ಇವರೆಲ್ಲರು ಪಟ್ಟಣವನ್ನು ಸೇರಿದ್ದೇ, ಮೇಲ್ಮಾಳಿಗೆಯಲ್ಲಿದ್ದ ತಮ್ಮ ಕೊಠಡಿಗೆ ಹೋದರು. ಅಲ್ಲಿ ಅವರು ಒಮ್ಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗುತ್ತಿದ್ದರು. ಕೆಲವು ಮಹಿಳೆಯರೂ ಯೇಸುವಿನ ತಾಯಿ ಮರಿಯಳೂ ಯೇಸುವಿನ ಸಹೋದರರೂ ಅವರೊಡನೆ ಇದ್ದರು.

ಕೀರ್ತನೆ - ಲೂಕ: 1: 47-55
45 : ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು.” ಮರಿಯಳ ಸ್ತುತಿಗೀತೆ
46 : ಆಗ ಹೀಗೆಂದು ಮರಿಯಳು ಹೊಗಳಿದಳು:
47 : “ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ ! ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ !!
48 : ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ ! ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವ ಜನಾಂಗ !!
49 : ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ ! ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ !!
50 : ಆತನಲ್ಲಿ ಭಯಭಕ್ತಿಯುಳ್ಳವರಿಗೆ ! ಆತನ ಪ್ರೀತಿ ತಲತಲಾಂತರದವರೆಗೆ !!
51 : ಗರ್ವಹೃದಯಿಗಳನಾತ ಚದರಿಸಿರುವನು ! ಪ್ರದರ್ಶಿಸಿರುವನು ತನ್ನ ಬಾಹುಬಲವನು !!
52 : ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು ! ಏರಿಸಿರುವನು ಉನ್ನತಿಗೆ ದೀನದಲಿತರನು !!
53 : ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ ! ಹೊರದೂಡಿರುವನು ಸಿರಿವಂತರನು ಬರೀಗೈಯಲಿ !!
54 : ನೆರವಾದನು ತನ್ನ ದಾಸ ಇಸ್ರಯೇಲನಿಗೆ ! ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ !!
55 : ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ ! ಅವನ ಸಂತತಿಗೆ, ಯುಗಯುಗಾಂತರದವರೆಗೆ !!

ಶುಭಸಂದೇಶ - ಲೂಕ 1:  26-38
ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!” ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, “ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ‘ಯೇಸು’ ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು. ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು,” ಎಂದನು. ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು ‘ದೇವರ ಪುತ್ರ’ ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ,” ಎಂದನು. ಆಗ ಮರಿಯಳು, “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.


ಚಿಂತನೆ
ಸ್ಮರಣೆ: ಜಪ ಮಾಲೆ ರಾಣಿಯ ಹಬ್ಬ

`Rosary’ ಪದದ ಅರ್ಥ `Crown of Roses’  ಗುಲಾಬಿಯ ಮುಕುಟ ಅಥವಾ ಕಿರೀಟ ಎಂದರ್ಥ. ಪ್ರತಿಯೊಂದು ಬಾರಿ ಒಂದು ನಮೋಮರಿಯ ಪ್ರಾರ್ಥನೆಯನ್ನು ಹೇಳಿದಾಗ ಒಂದು ಸುಂದರವಾದ ಗುಲಾಬಿ ಹೂವನ್ನು ನೀಡಿದಂತೆ. ಒಂದು ಪರಿಪೂರ್ಣ ಜಪಮಾಲೆ ಮಾಡಿದರೆ ಮಾತೆ ಮರಿಯಾಳಿಗೆ ಒಂದು ಗುಲಾಬಿಯ ಕಿರೀಟವನ್ನು ತೊಡಿಸಿದಂತೆ. ಜಪಮಾಲೆ ಒಂದು ಪರಿಪೂರ್ಣ ಪ್ರಾರ್ಥನೆ. ಜಪಸರ ಪ್ರಾರ್ಥನೆಯಲ್ಲಿ ರಕ್ಷಣೆಯ ಹಾದಿಯನ್ನು ಮೆಲುಕು ಹಾಕುತ್ತೇವೆ.ಯೇಸುವಿನ ಜೀವನದ ಬಗ್ಗೆ ಪ್ರಮುಖ ಹಂತ, ಘಟನೆಗಳನ್ನು ಸ್ಮರಿಸಿ ಪ್ರಾರ್ಥಿಸುತ್ತೇವೆ. ಜಪಸರ ಹೇಳುವುದರ ಮೂಲಕ ಮಾತೆಯನ್ನು ನಮಗಾಗಿ ಪ್ರಾರ್ಥಿಸಿ ಎಂದು ಬಿನ್ನಹಿಸುತ್ತೇವೆ. ಮಾತೆ ಮರಿಯಳು ನಮ್ಮ ಪ್ರಾರ್ಥನೆಯನ್ನು , ಕೋರಿಕೆಯನ್ನು ಈಡೇರಿಸುವ ತಾಯಿಯಾಗಿದ್ದಾಳೆ. ಸದ್ಯದ ಜಪಸರದ ವ್ಯವಸ್ಥಿತ ರಚನೆಯ ಫಲವು ಸಂತ ಡೊಮಿನಿಕ್‍ರವರಿಗೆ ಸಲ್ಲುತ್ತದೆ. `ಶುಭಸಂದೇಶಗಳ ಒಟ್ಟು ಸಾರವೇ ಜಪಸರ, ಜಪಸರ ಸ್ವರ್ಗದ ದಾರಿ’ ಎಂದು ಸಂತ ಬೊನೆವೆಂಚರರು ನುಡಿದಿದ್ದಾರೆ. ಜಪಸರದ ಮೂಲಕ ಮರಿಯಮ್ಮನವರು ಸುಜ್ಞಾನವನ್ನು ಕಲಿಸಿಕೊಡುವ ಸದ್ಬೋಧಕಿಯಾಗಿದ್ದಾರೆ.

No comments:

Post a Comment