Saturday, 12 October 2019

ಸಾಧಾರಣ ಕಾಲದ ಇಪ್ಪತ್ತೆಂಟನೇ ವಾರ ಶುಕ್ರವಾರ

ಸಾಧಾರಣ ಕಾಲದ ಇಪ್ಪತ್ತೆಂಟನೇ ವಾರ ಶುಕ್ರವಾರ


18/ಕೆಂಪು/ಶುಕ್ರ/ಸಂತ ಲೂಕ(ಶು.ಕ) ಹಬ್ಬ

1ನೇ ವಾಚನ - 2 ತಿಮೋ 4:1೦-17
ಕೀರ್ತನೆ - 145: 1೦-13, 14, 19
ಶುಭಸಂದೇಶ - ಲೂಕ 1೦: 1-9

1ನೇ ವಾಚನ - 2 ತಿಮೋ 4:1೦-17
ದೇಮನು ಇಹಲೋಕದ ಆಶಾಪಾಶಗಳಿಗೆ ಒಳಗಾಗಿ ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋಗಿದ್ದಾರೆ. ಲೂಕನು ಮಾತ್ರ ನನ್ನ ಜೊತೆಯಿದ್ದಾನೆ. ನೀನು ಬರುವಾಗ ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ. ಅವನ ಸೇವೆ ನನಗೆ ಅಗತ್ಯವಾಗಿದೆ. ತುಖಿಕನನ್ನು ನಾನು ಎಫೆಸಕ್ಕೆ ಕಳುಹಿಸಿದ್ದೇನೆ ನೀನು ಬರುವಾಗ ತ್ರೋವದಲ್ಲಿ ನಾನು ಕರ್ಪನ ಬಳಿ ಬಿಟ್ಟುಬಂದ ನನ್ನ ಮೇಲಂಗಿಯನ್ನು ತೆಗೆದುಕೊಂಡು ಬಾ. ನನ್ನ ಕೆಲವು ಪುಸ್ತಕಗಳನ್ನೂ ಮುಖ್ಯವಾಗಿ ಚರ್ಮದ ಸುರುಳಿಗಳನ್ನೂ ತಪ್ಪದೆ ತೆಗೆದುಕೊಂಡು ಬಾ. ಕಂಚುಗಾರನಾದ ಅಲೆಗ್ಸಾಂಡರನು ನನಗೆ ಬಹಳ ಕೇಡುಮಾಡಿದ್ದಾನೆ. ಪ್ರಭು ಅವನ ಕೃತ್ಯಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸುವರು. ನೀನು ಅವನ ವಿಷಯದಲ್ಲಿ ಎಚ್ಚರಿಕೆಯಿಂದಿರು. ನಮ್ಮ ಬೋಧನೆಗೆ ಅವನು ಕಟುವಾದ ವಿರೋಧಿ ಆಗಿದ್ದಾನೆ ನಾನು ಮೊದಲನೆಯ ಸಾರಿ ವಿಚಾರಣೆಗೆ ಒಳಗಾಗಿ ಪ್ರತಿವಾದಿಸುತ್ತಿದ್ದಾಗ ಯಾರೂ ನನ್ನ ಪರವಾಗಿ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ಕೈಬಿಟ್ಟರು. ದೇವರು ಅವರನ್ನು ಕ್ಷಮಿಸಲಿ ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮಿಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು.

ಕೀರ್ತನೆ - 145: 1೦-13, 14, 19
10 : ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು / ಕೊಂಡಾಡುವುದು ನಿನ್ನನು ಭಕ್ತ ಸಮೂಹವು 
11 : ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು / ವರ್ಣಿಸುವರವರು ನಿನ್ನ ಶಕ್ತಿ ಸಾಮಥ್ರ್ಯವನು 
12 : ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು / ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು 
13 : ಶಾಶ್ವತವಾದುದು ನಿನ್ನ ರಾಜ್ಯವು / ಇರುವುದೆಂದಿಗು ನಿನ್ನ ಆಳ್ವಿಕೆಯು 
14 : ನುಡಿಯಲಿ ಪ್ರಭು ಸದಾ ಪ್ರಾಮಾಣಿಕನು / ನಡೆಯಲಿ ಆತನು ಸದಾ ಪ್ರೀತಿಮಯನು 
15 : ಎತ್ತುವನಾತ ಬಿದ್ದವರನೆಲ್ಲ / ಉದ್ಧರಿಪನು ಕುಗ್ಗಿದವರನೆಲ್ಲ 16 : ಎಲ್ಲ ಜೀವಿಗಳ ಕಣ್ಣು ಪ್ರಭು, ನಾಟಿವೆ ನಿನ್ನ ಕಡೆಗೆ / ಕಾಲಕಾಲಕೆ ಕೊಡುವೆ ಆಹಾರವನು ಅವುಗಳಿಗೆ 
17 : ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು / ಎಲ್ಲರ ಕೋರಿಕೆಗಳನು ಈಡೇರಿಸುವವನು 
18 : ಪ್ರಭುವಿನ ಮಾರ್ಗ ಧರ್ಮಸಮ್ಮತ / ಆತನ ಕಾರ್ಯವೆಲ್ಲ ಪುನೀತ 
19 : ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ / ಯಥಾರ್ಥವಾಗಿ ಆತನನು ಅರಸುವವರಿಗೆ

ಶುಭಸಂದೇಶ - ಲೂಕ 1೦: 1-9
ಇದಾದ ಮೇಲೆ, ಯೇಸುಸ್ವಾಮಿ ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, “ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೊ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, ‘ಈ ಮನೆಗೆ ಶಾಂತಿ,’ ಎಂದು ಆಶೀರ್ವಾದ ಮಾಡಿ, ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. “ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. ‘ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ,’ ಎಂದು ತಿಳಿಸಿರಿ.
------

ಚಿಂತನೆ
ಲೂಕ ಗ್ರೀಕ್ ಮೂಲದವನು ಹಾಗೂ ಅನ್ಯಧರ್ಮದವ. ಅಂತಿಯೋಕ್ಯ ಅವನ ಜನನ ಸ್ಥಳ. ಲೂಕ ಮೂರನೇ ಶುಭಸಂದೇಶ ಮತ್ತು ಪ್ರೇಷಿತರ ಕಾರ್ಯಕಲಾಪಗಳ ಕತೃ. ವೃತ್ತಿಯಲ್ಲಿ ವೈದ್ಯ. ಸಂತ ಪೌಲರ ತಮ್ಮ 2ನೇ ಧರ್ಮಪ್ರಚಾರದ ಪ್ರಯಾಣದಲ್ಲಿ ಲೂಕನನ್ನು ಭೇಟಿಯಾಗುತ್ತಾರೆ. ಈ ಬೇಟಿಯ ನಂತರ ಲೂಕನು 51ರಲ್ಲಿ ಟ್ರೊವಾಸ್ ಎಂಬ ಸ್ಥಳದಲ್ಲಿ ಕ್ರೈಸ್ತಧರ್ಮವನ್ನು ಸ್ವೀಕರಿಸುತ್ತಾನೆ. ಲೂಕ ತನ್ನ ಶುಭಸಂದೇಶವನ್ನು ಅನ್ಯಜನರಿಗೆ ಗ್ರೀಕ್ ಭಾಷೆಯಲ್ಲಿ ಉತ್ತಮ ಶೈಲಿ ಮತ್ತು ಸಾಕಷ್ಟು ಐತಿಹಾಸಕ ಪುರಾವೆಗಳ ಸಾಕ್ಷ್ಯಗಳೊಂದಿಗೆ ಬರೆಯುತ್ತಾನೆ. ಲೂಕನಿಗೆ ಮಹಿಳೆಯರ, ಬಡವರ, ನಿರ್ಗತಿಕರ, ಹಾಗೂ ಶೋಷಿತರ ಮೇಲೆ ಅಪಾರ ಪ್ರೀತಿಯಿತ್ತೆಂದು ಆತನ ಬರಹಗಳ ಮೂಲಕ ತಿಳಿಯುತ್ತದೆ. ಕ್ರಿಸ್ತನ ಜನನದ ಬಗ್ಗೆ ಮಾತೆ ಮೇರಿಯ ಬಗ್ಗೆ ಸಾಕಷ್ಟು ಮಾಹಿತಿ ಲೂಕನಿಂದ ತಿಳಿಯುತ್ತೆ. ದೇವರ ಕ್ಷಮೆ ಮತ್ತು ಪ್ರೀತಿಯ ಬಗ್ಗೆ ಲೂಕನಲ್ಲಿ ಅಪಾರ ನಂಬಿಕೆಯಿತ್ತು (ಲೂಕ 15:1-32). ಲೂಕನ ಚಿತ್ರ ಒಂದು ಎತ್ತು ಮತ್ತು ಕರುವಿನ ಜೊತೆಗೂಡಿ ಇರುತ್ತದೆ. ಲೂಕ ವೈದ್ಯರುಗಳ ಪಾಲಕ.

No comments:

Post a Comment