Saturday, 12 October 2019

ಸಾಧಾರಣ ಕಾಲದ ಇಪ್ಪತ್ತೆಂಟನೇ ವಾರ ಗುರುವಾರ

ಸಾಧಾರಣ ಕಾಲದ ಇಪ್ಪತ್ತೆಂಟನೇ ವಾರ ಗುರುವಾರ


17/ಕೆಂಪು/ಗುರು/ಅಂತಿಯೋಕದ ಸಂತ ಇಗ್ನೆಷಿಯಸ್,

(ಧರ್ಮಾ ಮತ್ತು ರ.ಸಾ)(ಸ್ಮರಣೆ)
1ನೇ ವಾಚನ - ರೋಮ 3:21-3೦
ಕೀರ್ತನೆ - 13೦: 1-6
ಶುಭಸಂದೇಶ - ಲೂಕ 11: 47-54

1ನೇ ವಾಚನ - ರೋಮ 3:21-3೦
ವಿಶ್ವಾಸದ ಮೂಲಕ ಸತ್ಸಂಬಂಧ ಈಗಲಾದರೋ ಧರ್ಮಶಾಸ್ತ್ರದ ನೆರವಿಲ್ಲದೆಯೇ ದೇವರಿಂದ ದೊರಕುವ ಸತ್ಸಂಬಂಧವು ಪ್ರಕಟವಾಗಿದೆ. ಇದಕ್ಕೆ ಧರ್ಮಶಾಸ್ತ್ರವೂ ಪ್ರವಾದನಾಗ್ರಂಥವೂ ಸಾಕ್ಷಿಯಾಗಿವೆ. ಯೇಸುಕ್ರಿಸ್ತರಲ್ಲಿ ವಿಶ್ವಾಸವಿಡುವುದರ ಮೂಲಕವೇ ವಿಶ್ವಾಸಿಗಳೆಲ್ಲರನ್ನೂ ದೇವರು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ. ಇದರಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ. ಮಾನವರೆಲ್ಲರೂ ಪಾಪಿಗಳೇ, ಎಲ್ಲರೂ ದೇವದತ್ತ ಮಹಿಮೆಯನ್ನು ಕಳೆದುಕೊಂಡವರೇ. ಆದರೆ ದೇವರು ಯೇಸುಕ್ರಿಸ್ತರ ಮುಖಾಂತರ ಅವರಿಗೆ ಪಾಪವಿಮೋಚನೆಯನ್ನು ದಯಪಾಲಿಸಿ, ತಮ್ಮ ಉಚಿತಾರ್ಥ ಅನುಗ್ರಹದಿಂದ ಅವರನ್ನು ತಮ್ಮ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ. ಪೂರ್ವಕಾಲದಲ್ಲಿ ಮಾನವರ ಪಾಪವನ್ನು ದಂಡಿಸದೆ ತಾಳ್ಮೆಯಿಂದಿದ್ದ ದೇವರು, ವಿಶ್ವಾಸವುಳ್ಳವರಿಗೆ ಪಾಪಕ್ಷಮೆಯನ್ನು ತರುವ ಸಲುವಾಗಿ ಯೇಸುಕ್ರಿಸ್ತರು ರಕ್ತಧಾರೆ ಎರೆಯುವಂತೆ ಮಾಡಿದರು. ತಾವು ನೀತಿಸ್ವರೂಪರೆಂದು ತೋರಿಸುವುದಕ್ಕಾಗಿ ಹೀಗೆ ಮಾಡಿದರು. ಯೇಸುಕ್ರಿಸ್ತರಲ್ಲಿ ವಿಶ್ವಾಸ ಇಡುವವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವುದಕ್ಕಾಗಿಯೂ ತಾವು ಸತ್ಯ ಸ್ವರೂಪರು ಮತ್ತು ನ್ಯಾಯವಂತರು ಎಂದು ವ್ಯಕ್ತಪಡಿಸುವ ಸಲುವಾಗಿಯೂ ಪ್ರಸ್ತುತ ಕಾಲದಲ್ಲಿ ದೇವರು ಈ ರೀತಿ ಮಾಡಿದರು. ಹೀಗಿರುಲ್ಲಿ ಮಾನವನು ಕೊಚ್ಚಿಕೊಳ್ಳುವುದಕ್ಕೆ ಆಸ್ಪದವಿದೆಯೇ? ಇಲ್ಲವೇ ಇಲ್ಲ. ಹಾಗಾದರೆ ಸತ್ಸಂಬಂಧಕ್ಕೆ ಆಧಾರವೇನು? ಸತ್ಕಾರ್ಯಗಳ ಸಾಧನೆಯೇ? ಇಲ್ಲ. ವಿಶ್ವಾಸವೇ? ಹೌದು. ಮಾನವನಿಗೆ ದೇವರೊಡನೆ ಸತ್ಸಂಬಂಧ ದೊರಕುವುದು ಧರ್ಮಶಾಸ್ತ್ರಗಳ ನೇಮನಿಯಮಗಳನ್ನು ಪಾಲಿಸುವುದರಿಂದ ಅಲ್ಲ, ವಿಶ್ವಾಸದಿಂದಲೇ ಎಂಬುದು ನಮ್ಮ ಸಿದ್ಧಾಂತ. ದೇವರು ಕೇವಲ ಯೆಹೂದ್ಯರಿಗೆ ಮಾತ್ರ ದೇವರೋ ಅಥವಾ ಇತರರಿಗೂ ದೇವರೋ? ಹೌದು, ಇತರರಿಗೂ ದೇವರೇ. ಯೆಹೂದ್ಯರನ್ನು ಅವರ ವಿಶ್ವಾಸದ ಆಧಾರದ ಮೇಲೂ ಇತರರನ್ನು ಅವರ ವಿಶ್ವಾಸದ ಮೂಲಕವೂ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವ ದೇವರು ಒಬ್ಬರೇ.

ಕೀರ್ತನೆ - 13೦: 1-6
1 : ಅಂತರಾಳದಿಂದ ಪ್ರಭು, ಮೊರೆಯಿಡುತ್ತಿರುವೆ ನಿನಗೆ 
2 : ಆಲಿಸು, ಕಿವಿಗೊಡು ಪ್ರಭೂ, ನನ್ನಾರ್ತ ವಿಜ್ಞಾಪನೆಗೆ 
3 : ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭು / ನಿನ್ನ ಮುಂದೆ ಯಾರುತಾನೆ ನಿಲ್ಲಬಲ್ಲರು ವಿಭು? 
4 : ಪಾಪವನು ಕ್ಷಮಿಸುವವನು ನೀನು / ಎಂತಲೆ ಭಯಭಕ್ತಿಗೆ ಪಾತ್ರನು 
5 : ಪ್ರಭುವಿಗಾಗಿ ಎನ್ನ ಮನ ಕಾದಿದೆ / ಆತನ ವಾಕ್ಯದಲಿ ನಂಬಿಕೆ ನನಗಿದೆ 
6 : ಸೂರ್ಯೋದಯಕ್ಕಾಗಿ ಕಾವಲುಗಾರ ಕಾದಿರುವುದಕ್ಕಿಂತ / ಆತುರದಿಂದ ಬೆಳಗಾಗುವುದನು ಎದುರು ನೋಡುವುದಕ್ಕಿಂತ / ಅತಿಯಾಗಿ ಪ್ರಭುವನು ನಿರೀಕ್ಷಿಸುತಿದೆ ಎನ್ನ ಮನ ನಿರುತ
ಶುಭಸಂದೇಶ - ಲೂಕ 11: 47-54
ನಿಮಗೆ ಧಿಕ್ಕಾರ! ನಿಮ್ಮ ಪಿತೃಗಳು ಕೊಂದು ಹಾಕಿದ ಪ್ರವಾದಿಗಳಿಗೆ ನೀವು ಅಂದದ ಗೋರಿಗಳನ್ನು ನಿರ್ಮಿಸುತ್ತೀರಿ. ನಿಮ್ಮ ಪಿತೃಗಳ ಕೃತ್ಯಗಳನ್ನು ನೀವು ಅನುಮೋದಿಸುತ್ತೀರಿ ಎಂಬುದಕ್ಕೆ ಇದೇ ಸಾಕ್ಷಿ. ಏಕೆಂದರೆ, ಪ್ರವಾದಿಗಳನ್ನು ಕೊಂದವರು ಅವರಾದರೆ, ಗೋರಿ ನಿರ್ಮಿಸುತ್ತಿರುವವರು ನೀವು. ಈ ಕಾರಣದಿಂದಲೇ ‘ದೇವರ ಜ್ಞಾನವು’ ಹೇಳಿರುವುದೇನೆಂದರೆ - ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಪ್ರೇಷಿತರನ್ನೂ ಕಳುಹಿಸುವೆನು; ಅವರಲ್ಲಿ ಕೆಲವರನ್ನು ಕೊಲೆ ಮಾಡುವರು; ಕೆಲವರನ್ನು ಚಿತ್ರಹಿಂಸೆ ಪಡಿಸುವರು. ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲ್ಗೊಂಡು, ಬಲಿಪೀಠಕ್ಕೂ ದೇವಾಲಯಕ್ಕೂ ನಡುವೆ ಹತನಾದ ಜಕರೀಯನ ರಕ್ತದವರೆಗೂ ಈ ಪೀಳಿಗೆಯವರು ಲೆಕ್ಕಕೊಡಬೇಕಾಗುವುದು.’ ಹೌದು, ಈ ಪೀಳಿಗೆಯವರೇ ಲೆಕ್ಕಕೊಡ ಬೇಕಾಗುವುದೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ! ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲ್ಗೊಂಡು, ಬಲಿಪೀಠಕ್ಕೂ ದೇವಾಲಯಕ್ಕೂ ನಡುವೆ ಹತನಾದ ಜಕರೀಯನ ರಕ್ತದವರೆಗೂ ಈ ಪೀಳಿಗೆಯವರು ಲೆಕ್ಕಕೊಡಬೇಕಾಗುವುದು.’ ಹೌದು, ಈ ಪೀಳಿಗೆಯವರೇ ಲೆಕ್ಕಕೊಡ ಬೇಕಾಗುವುದೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ! ಧರ್ಮಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ! ಜ್ಞಾನವೆಂಬ ಮಂದಿರದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವು ಒಳಕ್ಕೆ ಪ್ರವೇಶಿಸುವುದಿಲ್ಲ; ಪ್ರವೇಶಿಸಲು ಯತ್ನಿಸುವವರನ್ನೂ ತಡೆಗಟ್ಟುತ್ತೀರಿ,” ಎಂದರು. ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಅವರನ್ನು ಉಗ್ರವಾಗಿ ಪ್ರತಿಭಟಿಸಲಾರಂಭಿಸಿದರು. ಹಲವಾರು ವಿಷಯಗಳನ್ನು ಕುರಿತು ಮಾತಾಡುವಂತೆ ಕೆಣಕಿ, ಅವರ ಮಾತಿನಲ್ಲಿ ಏನಾದರೂ ತಪ್ಪು ಕಂಡು ಹಿಡಿಯಲೇಬೇಕೆಂದು ಹೊಂಚು ಹಾಕುತ್ತಿದ್ದರು.
-----


ಚಿಂತನೆ

ಯೇಸು ಧರ್ಮಶಾಸ್ತ್ರಿಗಳ ಕಪಟತನವನ್ನು ಖಂಡಿಸುತ್ತಾರೆ. ಧರ್ಮಶಾಸ್ತ್ರಿಗಳು ಪ್ರವಾದಿಗಳನ್ನು ಗೌರವಿಸುವಂತೆ, ಅಭಿಮಾನವಿರುವಂತೆ ನಟಿಸುತ್ತಿದ್ದರು. ಧರ್ಮಶಾಸ್ತ್ರಿಗಳಿಗೆ ನಿಜವಾದ ಗೌರವ, ಅಭಿಮಾನ ಇದ್ದಿದ್ದರೆ ಪ್ರವಾದಿಗಳ ಪ್ರವಾದನೆಯಲ್ಲಿ ನಂಬಿಕೆಯಿಡುತ್ತಿದ್ದರು, ಯೇಸುವನ್ನು ಒಪ್ಪಿಕೊಳ್ಳುತ್ತಿದ್ದರು. ಹಳೆಯ ಒಡಂಬಡಿಕೆಯಲ್ಲಿ ಪ್ರವಾದಿಗಳು ದೇವರ ಸಂದೇಶವನ್ನು ರವಾನಿಸುತ್ತಿದ್ದರು. ಆದರೆ ಈ ಪ್ರವಾದಿಗಳ ಕಠಿಣ, ನಿಷ್ಟೂರದ ಮಾತುಗಳನ್ನು ಕೇಳಲಾರದೇ ಅವರನ್ನು ಹಿಂಸಿಸುತ್ತಿದ್ದರು ಅಥವಾ ಕೊಂದುಹಾಕುತ್ತಿದ್ದರು. ಸಾವನ್ನಪ್ಪಿದ ಪ್ರವಾದಿಗಳ ಮೇಲೆ ಗೋರಿಗಳನ್ನು ಕಟ್ಟಿಸಿ ತಾವು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸುತ್ತಿದ್ದರು. ಅವರ ಪೂರ್ವಿಕರಂತೆ ಧರ್ಮಶಾಸ್ತ್ರಿಗಳು ಕೂಡ ಪ್ರವಾದಿಗಳಿಗೆ ಗೋರಿಗಳನ್ನು ಕಟ್ಟುತ್ತಾರೆಯೇ ಹೊರತು ಅವರ ಮಾತುಗಳನ್ನು ಆಲಿಸಿ ಅದರಂತೆ ನಡೆಯರು ಎಂದು ಯೇಸು ಖಂಡಿಸುತ್ತಿದ್ದಾರೆ.

No comments:

Post a Comment