27/ ಹಸಿರು/ಭಾನು
1ನೇ ವಾಚನ - ಸಿರಾ 35: 12-14, 16-19
ಕೀರ್ತನೆ - 34: 1-2, 16-19
2ನೇ ವಾಚನ - 2 ತಿಮೋ 4:6-9,16-18
ಶುಭಸಂದೇಶ - ಲೂಕ 18: 9-14
1ನೇ ವಾಚನ - ಸಿರಾ 35: 12-14, 16-19
ದೈವನೀತಿ ಲಂಚದೋಪಾದಿ ಕಾಣಿಕೆ ತರಬೇಡ, ಆತನು ಅವುಗಳನ್ನು ಅಂಗೀಕರಿಸುವುದಿಲ್ಲ ಅಕ್ರಮವಾದ ಬಲಿಯ ಮೇಲೆ ಮನಸ್ಸಿಡಬೇಡ, ಆತ ನ್ಯಾಯಾಧೀಶ, ಆತನಲ್ಲಿ ಮುಖದಾಕ್ಷಿಣ್ಯವಿಲ್ಲ. ಬಡವನ ವಿರೋಧವಾಗಿ ಯಾರನ್ನೂ ಅಂಗೀಕರಿಸನಾತ ಅನ್ಯಾಯಕ್ಕೀಡಾದವನ ಮೊರೆಯನು ಆಲಿಸುವನಾತ. ತಿರಸ್ಕರಿಸನಾತ ಯಾವ ದಿಕ್ಕುದೆಸೆಯಿಲ್ಲದವರ ವಿನಂತಿಯನು ತನ್ನ ಸ್ಥಿತಿಯನು ತೋಡಿಕೊಳ್ಳುವ ವಿಧವೆಯನು. ದೇವರ ಸುಚಿತ್ತದಂತೆ ಸೇವೆ ಮಾಡುವವನು ಅಂಗೀಕೃತನಾಗುವನು ಇಂಥವನ ಪ್ರಾರ್ಥನೆ ಮುಟ್ಟುವುದು ಗಗನಮಂಡಲವನು. ಮೇಘಮಂಡಲವನು ದಾಟುವುದು ದೀನನ ಪ್ರಾರ್ಥನೆ ಅವನಿಗೆ ಉಪಶಮನವೇ ಇರದು ಅದು ದೇವರ ಸನ್ನಿಧೀ ಸೇರುವವರೆಗೆ. ಅವನು ಅಲ್ಲಿಂದ ಏಳುವುದಿಲ್ಲ ಮಹೋನ್ನತನು ಸದುತ್ತರ ಕೊಡುವವರೆಗೆ ಆತ ಉತ್ತರ ಕೊಡುವುದು ನ್ಯಾಯತೀರಿಸಿದ ನಂತರವೆ.
ಕೀರ್ತನೆ - 34: 1-2, 16-19
1 : ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು / ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು //
2 : ಪ್ರಭುವಿನಲ್ಲಿದೆ ನನ್ನ ಮನದಭಿಮಾನ / ದೀನರಿದನು ಕೇಳಿ, ಪಡೆಯಲಿ ಸುಮ್ಮಾನ //
16 : ದುರ್ಜನರಿಗಾದರೋ ಪ್ರಭು ವಿಮುಖನು / ಅವರ ಹೆಸರನು ಧರೆಯಿಂದ ಅಳಿಸುವನು //
17 : ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ / ನೆರವೀವನವರ ಕಷ್ಟನಿವಾರಣೆಗೆ //
18 : ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ / ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ //
19 : ಸಜ್ಜನನಿಗೊದಗುವ ಸಂಕಟಗಳು ವಿಪರೀತ / ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ //
2ನೇ ವಾಚನ - 2 ತಿಮೋ 4:6-9,16-18
ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿಬಂದಿದೆ ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ. ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ. ಅದನ್ನು ನೀತಿವಂತ ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗೂ ಕೊಡುವರು. ನನ್ನ ಬಳಿಗೆ ಸಾಧ್ಯವಾದಷ್ಟು ಬೇಗನೆ ಬರುವುದಕ್ಕೆ ಪ್ರಯತ್ನಿಸು. ನಾನು ಮೊದಲನೆಯ ಸಾರಿ ವಿಚಾರಣೆಗೆ ಒಳಗಾಗಿ ಪ್ರತಿವಾದಿಸುತ್ತಿದ್ದಾಗ ಯಾರೂ ನನ್ನ ಪರವಾಗಿ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ಕೈಬಿಟ್ಟರು. ದೇವರು ಅವರನ್ನು ಕ್ಷಮಿಸಲಿ ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮಿಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು. ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲಿ. ಆಮೆನ್.
ಶುಭಸಂದೇಶ - ಲೂಕ 18: 9-14
ಕೆಲವರು ತಾವೇ ಸತ್ಪುರುಷರು ಎಂದುಕೊಂಡು ಇತರರನ್ನು ತುಚ್ಛವಾಗಿ ಕಾಣುತ್ತಿದ್ದರು. ಅಂಥವರನ್ನು ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: “ಒಮ್ಮೆ, ಇಬ್ಬರು ಪ್ರಾರ್ಥನೆಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕವಸೂಲಿಯವನು. ಫರಿಸಾಯನು ಮುಂದೆ ನಿಂತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆಮಾಡಿದ: ‘ಓ ದೇವರೇ, ನಾನು ಇತರರ ಹಾಗೆ ಅಲ್ಲ. ಅವರೋ ಕೊಳ್ಳೆಗಾರರು, ಅನ್ಯಾಯಗಾರರು, ವ್ಯಭಿಚಾರಿಗಳು. ನಾನು ಈ ಸುಂಕದವನಂತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. ನಾನಾದರೋ ವಾರಕ್ಕೆ ಎರಡು ದಿನ ಉಪವಾಸವ್ರತವನ್ನು ಕೈಗೊಳ್ಳುತ್ತೇನೆ; ನನ್ನ ಆದಾಯದಲ್ಲಿ ಹತ್ತನೆಯ ಒಂದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ. “ಸುಂಕವಸೂಲಿಯವನಾದರೋ ದೂರದಲ್ಲೇ ನಿಂತು, ತಲೆಯನ್ನೂ ಮೇಲಕ್ಕೆ ಎತ್ತದೆ, ‘ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ,’ ಎನ್ನುತ್ತಾ ಎದೆಬಡಿದುಕೊಂಡ. “ದೇವರ ದೃಷ್ಟಿಯಲ್ಲಿ ಪಾಪಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕ ವಸೂಲಿಯವನು, ಆ ಫರಿಸಾಯನಲ್ಲ, ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
-----
ಚಿಂತನೆ
ಚಿಂತನೆ
ಆತ್ಮಸ್ತುತಿ ಹಾಗೂ ಪರನಿಂದೆಗಳಂಥ ಅನಿಷ್ಟಗಳು ಬೇರೆ ಯಾವುವೂ ಇಲ್ಲ. ತನ್ನನ್ನೇ ತಾನು ಪ್ರೀತಿಸುವ ಮನುಷ್ಯನು ಯಾರ ವೈರಿಯೂ ಅಲ್ಲ, ಅವನು ತನ್ನ ವೈರಿಯೇ ಆಗಿರುತ್ತಾನೆ. ತನ್ನದೆಲ್ಲವೂ ಸರಿಯೆನ್ನುವ ಮನುಷ್ಯನು ತನ್ನ ತಪ್ಪುಗಳಿಗೇ ಅಂಟಿಕೊಂಡಿರುತ್ತಾನೆ. ಅವರಿಗೆ ತನ್ನ ಡೊಂಕುಗಳೆಲ್ಲವೂ ನೇರವೆಂಬಂತೆ ಕಾಣುತ್ತವೆ. ಅವನು ತನ್ನ ತಪ್ಪು ವಿಚಾರಗಳೇ ಸರಿಯೆಂದು ಸಾಧಿಸುತ್ತ ಪರಿಹಾಸ್ಯದ ವಸ್ತುವಾಗುತ್ತಾನೆ. ಪ್ರತಿಯೊಬ್ಬರಲ್ಲು ಆತ್ಮಸ್ತುತಿ ಇರಬೇಕು. ಆದರೆ, ಅದು ಒಂದು ಪರಿಮಿತಿಯೊಳಗೆ ಇರಬೇಕು, ಅದು ಅತಿಯಾಗಬಾರದು. ಅತಿಯಾದರೆ ಅಮೃತಕೂಡ ವಿಷವೆನಿಸುತ್ತದೆ.
ದೇವಾಲಯಕ್ಕೆ ಹೋದ ಫರಿಸಾಯನು ಪ್ರಾರ್ಥಿಸಲು ಮರೆತ ಹಾಗೂ ತನ್ನ ಬಗ್ಗೆ ದೇವರಿಗೆ ವರದಿ ಒಪ್ಪಿಸಲು ಪ್ರಾರಂಭಿಸಿದ. ತನ್ನ ಆತ್ಮಸ್ತುತಿ ಮಾಡುತ್ತಾ ಸುಂಕವಸೂಲಿಯವನನ್ನು ಖಂಡಿಸಿದ. ಈ ಪರಿಸಾಯ ಒಬ್ಬ ಸ್ವಾರ್ಥಿ, ಕಪಟಿಯಾಗಿದ್ದ. ಕಾನೂನು ಪರಿಪಾಲನೆಯೇ ಧರ್ಮವೆಂದುಕೊಂಡಿದ್ದ. ಆದರೆ ದೇವರು ಆತನ ಪ್ರಾರ್ಥನೆಯನ್ನು ಸ್ವೀಕರಿಸಲಿಲ್ಲ. ಬದಲಾಗಿ ದೇವರ ಸನ್ನಿಧಿಯಲ್ಲಿ ತನ್ನ ಪಾಪಗಳನ್ನು ಒಪ್ಪಿಕೊಂಡು ದೀನತೆಯನ್ನು ಮೆರೆದ ಸುಂಕದವನ ಪ್ರಾರ್ಥನೆ ದೇವರಿಗೆ ಮೆಚ್ಚುಗೆಯಾಯಿತು. ದೇವಾಲಯಕ್ಕೆ ಹೋಗುವ ಉದ್ದೇಶ ಮತ್ತು ನಮ್ಮ ಪ್ರಾರ್ಥನೆಯ ವಿಷಯ, ಹೂರಣದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
No comments:
Post a Comment