Saturday, 12 October 2019

ಸಾಧಾರಣ ಕಾಲದ ಮೂವತ್ತನೇ ವಾರ ಸೋಮವಾರ

28/ಕೆಂಪು/ಸೋಮ/ಸಂತ ಸಿಮೋನ ಮತ್ತು ಯೂದ (ಪ್ರೇಷಿತರು), ಹಬ್ಬ
1ನೇ ವಾಚನ - ಎಫೆ 2: 19-22
ಕೀರ್ತನೆ - 19: 2-5
ಶುಭಸಂದೇಶ - ಲೂಕ 6: 12-19

1ನೇ ವಾಚನ - ಎಫೆ 2: 19-22
ಹೀಗಿರಲಾಗಿ, ನೀವು ಇನ್ನು ಮೇಲೆ ಪರಕೀಯರೂ ಪರದೇಶಿಗಳೂ ಆಗಿರದೆ, ದೇವಜನರೊಂದಿಗೆ ಸಹಜೀವಿಗಳು ಮತ್ತು ದೇವರ ಮನೆತನದವರು ಆಗಿದ್ದೀರಿ. ಪ್ರೇಷಿತರು ಹಾಗೂ ಪ್ರವಾದಿಗಳೂ ಹಾಕಿದ ತಳಹದಿಯ ಮೇಲೆ ನಿಮ್ಮನ್ನು ನಿರ್ಮಿಸಲಾಗಿದೆ. ಯೇಸುಕ್ರಿಸ್ತರೇ ಈ ತಳಹದಿಯ ಮುಖ್ಯ ಮೂಲೆಗಲ್ಲು. ಇಡೀ ಕಟ್ಟಡವು ಅವರನ್ನೇ ಆಧರಿಸಿ, ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ನಿಂತು, ಪ್ರಭುವಿಗೆ ಅರ್ಪಿತವಾದ ದೇವಮಂದಿರ ಆಗುತ್ತದೆ. ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿ ನೀವು ಸಹ ಇತರರೆಲ್ಲರೊಡನೆ ದೇವರ ನಿವಾಸಕ್ಕೆ ತಕ್ಕ ಮಂದಿರವಾಗಿ ಪವಿತ್ರಾತ್ಮ ಅವರಿಂದ ಕಟ್ಟಲ್ಪಡುತ್ತಿದ್ದೀರಿ.

ಕೀರ್ತನೆ - 19: 2-5
1 : ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು / ತಾರಾಮಂಡಲ ತೋರುತಿದೆ ದೇವರ ಕೈಕೃತಿಗಳನು // 
2 : ದಿನವು ಮರುದಿನಕೆ ಮಾಡುತಿದೆ ಈ ಪ್ರಕಟಣೆಯನು | ರಾತ್ರಿ ಮರುರಾತ್ರಿಗೆ ನೀಡುತಿದೆ ಈ ಪ್ರಚಾರವನು || 
3 : ಅವುಗಳಿಗೆ ಮಾತಿಲ್ಲ; ಅವುಗಳಿಗೆ ಶಬ್ದವಿಲ್ಲ / ಅವುಗಳ ಸ್ವರವಂತೂ ಕೇಳಿ ಬರುವುದಿಲ್ಲ // 
4 : ಆದರೂ ಅವುಗಳ ಧ್ವನಿರೇಖೆ ಹರಡಿದೆ ಬುವಿಯಾದ್ಯಂತ / ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ // 
5 : ನಿರ್ಮಿಸಿಹನಲ್ಲಿ ದೇವನು ಗುಡಾರವೊಂದನು ಸೂರ್ಯನಿಗೆ / ಬರುತಿಹನಾ ರವಿ ವರನಂತೆ ಧಾರಾಗೃಹದಿಂದ ಹೊರಗೆ / ಶೂರನಂತೆ, ಓಟದ ಪಥದಲ್ಲೋಡಲು ಹರುಷದೊಂದಿಗೆ //
ಶುಭಸಂದೇಶ - ಲೂಕ 6: 12-19
ಒಮ್ಮೆ ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನೇರಿದರು. ರಾತ್ರಿಯೆಲ್ಲಾ ದೇವರ ಪ್ರಾರ್ಥನೆಯಲ್ಲಿ ಕಳೆದರು. ಬೆಳಗಾದಾಗ ತಮ್ಮ ಶಿಷ್ಯರನ್ನು ಕರೆದು, ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು, ಅವರಿಗೆ ‘ಪ್ರೇಷಿತರು’ ಎಂದು ಹೆಸರಿಟ್ಟರು. ಹೀಗೆ ಆಯ್ಕೆ ಆದವರು: ಪೇತ್ರನೆಂದು ಹೆಸರು ಪಡೆದ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ, ಯಕೋಬ ಮತ್ತು ಯೊವಾನ್ನ, ಫಿಲಿಪ್ಪ ಮತ್ತು ಬಾರ್ತೊಲೊಮಾಯ, ಮತ್ತಾಯ ಮತ್ತು ತೋಮ, ಅಲ್ಫಾಯನ ಮಗ ಯಕೋಬ ಮತ್ತು ದೇಶಾಭಿಮಾನಿ ಎನಿಸಿಕೊಂಡಿದ್ದ ಸಿಮೋನ, ಯಕೋಬನ ಮಗ ಯೂದ ಮತ್ತು ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ. ಅನಂತರ ಯೇಸುಸ್ವಾಮಿ ಅವರೊಂದಿಗೆ ಬೆಟ್ಟದಿಂದ ಇಳಿದು, ಸಮತಟ್ಟಾದ ಸ್ಥಳಕ್ಕೆ ಬಂದರು. ಶಿಷ್ಯರ ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಸಮುದ್ರ ತೀರದ ಟೈರ್ ಹಾಗೂ ಸಿದೋನ್ ಪಟ್ಟಣಗಳಿಂದಲೂ ಜನಸಮೂಹ ಅಲ್ಲಿಗೆ ಬಂದಿತ್ತು. ಯೇಸುವಿನ ಬೋಧನೆಯನ್ನು ಕೇಳುವುದಕ್ಕೂ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ ಜನರು ಅಲ್ಲಿಗೆ ಬಂದು ಸೇರಿದ್ದರು. ದೆವ್ವಪೀಡಿತರು ಕೂಡ ಬಂದು ಸ್ವಸ್ಥರಾಗುತ್ತಿದ್ದರು. ಯೇಸುವಿನಿನಿಂದ ದಿವ್ಯಶಕ್ತಿ ಹರಿದು ಎಲ್ಲರನ್ನೂ ಗುಣಪಡಿಸುತ್ತಿತ್ತು. ಆದುದರಿಂದ ಅಲ್ಲಿದ್ದ ಜನರೆಲ್ಲರು ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು.
----
ಚಿಂತನೆ
ಸಂತ ಸಿಮೋನ ಮತ್ತು ಯೂದರ ಬಗ್ಗೆ ನಮಗೆ ದೊರೆತಿರುವ ಮಾಹಿತಿ ಕಡಿಮೆ. ಇಬ್ಬರ ಹೆಸರುಗಳು ಪ್ರೇಷಿತರ ಪಟ್ಟಿಯಲ್ಲಿವೆ. ಸಿಮೋನ `ಜಲಟ'(Zealot)ನಾಗಿದ್ದ. ಯೂದ ಪ್ರೇಷಿತ ಪತ್ರವೊಂದನ್ನು ಬರೆದಿದ್ದಾನೆ. ಸಿಮೋನ ಒಬ್ಬ ರಾಷ್ಟ್ರ ಪ್ರೇಮಿಯಾಗಿದ್ದ. ಜಲಟರು ರೋಮನ್ನರ ವಿರುದ್ದ ಹೋರಾಡುತ್ತಿದ್ದರು. ರೋಮನ್ನರ ಆಳ್ವಿಕೆಯನ್ನು ಉಗ್ರವಾಗಿ ಖಂಡಿಸಿದರು. ತಮ್ಮ ಯೆಹೂದಿ ಧರ್ಮ, ಸಂಪ್ರದಾಯ, ದೇವಾಲಯ ಮುಖ್ಯವಾಗಿತ್ತು. ಸರ್ವೇಶ್ವರ ಸ್ವಾಮಿ ಒಬ್ಬರೇ ಅರಸ ಎಂದು ನಂಬಿದ್ದರು. ಸಿಮೋನ್ ಎಲ್ಲಿ ಪ್ರಬೋಧನೆ ಮಾಡಿದರು, ರಕ್ತಸಾಕ್ಷಿಯಾದರು ಎಂಬ ಮಾಹಿತಿ ಇಲ್ಲ. ಕೆಲವು ಸಂಪ್ರದಾಯದ ಪ್ರಕಾರ ಕಾನಾ ಊರಿನ ಮದುವೆಯ ವರ ಈ ಸಿಮೋನ. 

ಯೂದ: ತದ್ದೇಯುಸ್ ಮತ್ತೊಂದು ಹೆಸರು. ಯೂದನೇ ತನ್ನ ಪತ್ರದಲ್ಲಿ ``ಯೇಸುಕ್ರಿಸ್ತರ ದಾಸನೂ ಯಕೋಬನ ಸಹೋದರನೂ ಆದ ಯೂದನು ಬರೆಯುವ ಪತ್ರ'' ಎಂದು ತನ್ನನ್ನು ಪರಿಚಯಿಸಿಕೊಳ್ಳುತ್ತಾನೆ. ಕೊನೆಯ ಭೋಜನದ ಸಂದರ್ಭದಲ್ಲಿ ಪ್ರಭು ನೀವು ಈ ಲೋಕಕ್ಕೆ ನಿಮ್ಮನ್ನು ಸಾಕ್ಷಾತ್ಕರಿಸಿಕೊಳ್ಳದೆ ನಮಗೆ ಮಾತ್ರ ಸಾಕ್ಷಾತ್ಕರಿಸಿಕೊಳ್ಳುತ್ತೀರಲ್ಲಾ ಏಕೆ? ಎಂದು ಕೇಳಿದವನು ಈ ಯೂದನೇ. ಹತಾಶೆಗೊಂಡ ಪ್ರಕರಣಗಳ ಪಾಲಕ ಎಂದು ಯೂದ ಪ್ರಸಿದ್ದಿ ಹೊಂದಿದ್ದಾರೆ.

No comments:

Post a Comment