25/ಹಸಿರು/ಶುಕ್ರ
1ನೇ ವಾಚನ - ರೋಮ 7:18-25
ಕೀರ್ತನೆ - 119: 66, 68, 76-77, 93-94
ಶುಭಸಂದೇಶ - ಲೂಕ 12: 54-59
1ನೇ ವಾಚನ - ರೋಮ 7:18-25
ನನ್ನಲ್ಲಿ, ಅಂದರೆ ನನ್ನ ಶಾರೀರಕ ಸ್ವಭಾವದಲ್ಲಿ ಒಳ್ಳೆಯತನವೆಂಬುದೇನೂ ನೆಲೆಗೊಂಡಿಲ್ಲ. ಇದು ನನಗೆ ಗೊತ್ತು. ಏಕೆಂದರೆ, ಒಳಿತನ್ನು ಮಾಡಬೇಕೆಂಬ ಮನಸ್ಸು ನನಗಿದ್ದರೂ ಅದನ್ನು ಮಾಡಲು ನನ್ನಿಂದ ಆಗುತ್ತಿಲ್ಲ. ನಾನು ಬಯಸುವ ಒಳ್ಳೆಯದನ್ನು ಮಾಡದೆ, ನಾನು ಬಯಸದ ಕೆಟ್ಟದ್ದನ್ನೇ ಮಾಡುವವನಾಗಿದ್ದೇನೆ. ನಾನು ಬಯಸದೆ ಇರುವುದನ್ನೇ ಮಾಡಿದರೆ ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು. ನಾನು ಒಳಿತನ್ನು ಮಾಡಬಯಸಿದರೂ ಕೇಡು ನನ್ನ ಕೈಬಿಡುತ್ತಿಲ್ಲ. ಇದೇ ಒಂದು ನಿಯಮವಾಗಿ ನನ್ನಲ್ಲಿ ಕಂಡುಬರುತ್ತದೆ. ನನ್ನ ಅಂತರಂಗದಲ್ಲಿ ದೈವನಿಯಮವನ್ನು ಕುರಿತು ಆನಂದಿಸುತ್ತೇನೆ. ನನ್ನ ಇಂದ್ರಿಯಗಳಲ್ಲಿಯಾದರೋ ಬೇರೊಂದು ನಿಯಮವನ್ನು ಕಾಣುತ್ತೇನೆ. ಇದು ನನ್ನ ಅಂತರಂಗ ನಿಯಮಕ್ಕೆ ತದ್ವಿರುದ್ಧವಾಗಿ ಕಾದಾಡುತ್ತದೆ; ನನ್ನ ಇಂದ್ರಿಯಗಳಲ್ಲಿ ನೆಲೆಗೊಂಡಿರುವ ಪಾಪನಿಯಮಕ್ಕೆ ನನ್ನನ್ನು ಕೈದಿಯನ್ನಾಗಿಸುತ್ತದೆ. ಅಯ್ಯೋ, ನಾನೆಂಥ ನಿರ್ಭಾಗ್ಯನು! ಸಾವಿನ ದವಡೆಗೆ ಸಿಕ್ಕಿರುವ ಈ ಶರೀರದಿಂದ ನನ್ನನ್ನು ಬಿಡಿಸುವವರು ಯಾರು? ದೇವರೇ; ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ಅವರಿಗೆ ಕೃತಜ್ಞತೆ ಸಲ್ಲಲಿ ! ನನ್ನಷ್ಟಕ್ಕೆ ನಾನೇ ದೇವರ ನಿಯಮವನ್ನು ಮನಃಪೂರ್ವಕವಾಗಿ ಪಾಲಿಸಲು ಬಯಸುತ್ತೇನೆ. ನನ್ನ ಈ ದೇಹದಲ್ಲಾದರೋ ಪಾಪದ ನಿಯಮಕ್ಕೆ ಬದ್ಧನಾಗಿದ್ದೇನೆ.
ಕೀರ್ತನೆ - 119: 66, 68, 76-77, 93-94
66 : ಸುಜ್ಞಾನ ವಿವೇಕಗಳನು ಕಲಿಸೆನಗೆ / ನಿನ್ನಾಜ್ಞೆಗಳಲಿ ನನಗಿದೆ ನಂಬಿಕೆ //
68 : ಒಳ್ಳೆಯವ, ಒಳ್ಳೆಯದ ಗೈಕೊಳ್ಳುವ ನೀನು | ಬೋಧಿಸೆನಗೆ ನಿನ್ನಾ ನಿಬಂಧನೆಗಳನು ||
76 : ನಿನ್ನ ದಾಸನಿಗೆ ನೀನು ನುಡಿದ ಪ್ರಕಾರ / ಸಾಂತ್ವನ ನೀಡಲಿ ಎನಗೆ ನಿನ್ನಚಲ ಒಲವರ
77 : ನಾ ಬದುಕುವಂತೆ ತೋರೆನಗೆ ನಿನ್ನ ದಯ / ನಿನ್ನ ಧರ್ಮಶಾಸ್ತ್ರ ನನಗೆ ಪರಮಪ್ರಿಯ
93 : ಮರೆಯೆ ನಾನೆಂದಿಗೂ ನಿನ್ನ ನಿಯಮಗಳನು / ಅವುಗಳಿಂದಲೇ ನನಗಿತ್ತೆ ನವಜೀವನವನು
94 : ಉದ್ಧರಿಸೆನ್ನನು, ನಾನು ನಿನ್ನವನು / ನಿನ್ನ ನಿಯಮಗಳಲೇ ಆಸಕ್ತನು
ಶುಭಸಂದೇಶ - ಲೂಕ 12: 54-59
ಇದೂ ಅಲ್ಲದೆ ಯೇಸುಸ್ವಾಮಿ ಜನ ಸಮೂಹವನ್ನು ನೋಡಿ, “ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೇ, ‘ಭಾರಿ ಮಳೆ ಬರುತ್ತದೆ’ ಎನ್ನುತ್ತೀರಿ; ಹಾಗೆಯೇ ಆಗುತ್ತದೆ. ದಕ್ಷಿಣ ದಿಕ್ಕಿನ ಗಾಳಿ ಬೀಸಿದಾಗ ಉರಿಬಿಸಿಲು ಎನ್ನುತ್ತೀರಿ; ಅಂತೆಯೇ ಇರುತ್ತದೆ. ಆಷಾಡಭೂತಿಗಳೇ, ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಸರಿಯಾಗಿ ಅರಿತುಕೊಳ್ಳಬಲ್ಲಿರಿ; ಆದರೆ ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲಾರಿರಾ? “ನ್ಯಾಯನಿರ್ಣಯವನ್ನು ನಿಮ್ಮಲ್ಲಿಯೇ ನೀವು ಏಕೆ ಮಾಡಿಕೊಳ್ಳಬಾರದು? ನೀನು ನ್ಯಾಯಾಧಿಪತಿಯ ಬಳಿಗೆ ಹೋಗಬೇಕಾಗಿ ಬಂದಲ್ಲಿ, ದಾರಿಯಲ್ಲೇ ನಿನ್ನ ವಿರೋಧಿಯೊಡನೆ ವ್ಯಾಜ್ಯ ತೀರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಮುಂದೆ ಎಳೆದೊಯ್ಯಬಹುದು; ನ್ಯಾಯಾಧಿಪತಿ ನಿನ್ನನ್ನು ಸೆರೆಯ ಅಧಿಕಾರಿಯ ಕೈಗೊಪ್ಪಿಸಬಹುದು. ಸೆರೆ ಅಧಿಕಾರಿ ನಿನ್ನನ್ನು ಸೆರೆಮನೆಯಲ್ಲಿ ಹಾಕಬಹುದು. ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಕಡೇ ಕಾಸನ್ನೂ ಬಿಡದೆ ಎಲ್ಲವನ್ನೂ ಸಲ್ಲಿಸಬೇಕಾಗುವುದೆಂಬುದು ನಿಶ್ಚಯ,” ಎಂದರು.
-----
ಚಿಂತನೆ
ಚಿಂತನೆ
ಈ ಆಧುನಿಕ ಜಗತಿನಲ್ಲಿ ಮಾನವ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದಿದ್ದಾನೆ. ತನ್ನ ಬುದ್ದಿ ಶಕ್ತಿಯಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಘಟನೆಗಳನ್ನು ತಾನು ಕೂತಲ್ಲಿಯೇ ಮೊಬೈಲ್, ಟಿ.ವಿ, ಅಂರ್ತಜಾಲದ ಮೂಲಕ ತಿಳಿದುಕೊಳ್ಳಬಲ್ಲ. ಪ್ರಾಪಂಚಿಕ ವಿಷಯಗಳಲ್ಲಿರುವಷ್ಟು ಜ್ಞಾನ ಆಧ್ಯಾತ್ಮಿಕತೆಯಲಿಲ್ಲ. ಯೇಸುವಿನ ಕಾಲದಲ್ಲೂ ಜನರು ಲೌಕಿಕ ವಿಷಯಗಳಲ್ಲಿ ತುಂಬಾ ಪ್ರಾವೀಣ್ಯತೆಯಿಂದ ಇದ್ದರು. ಮೋಡದ ಚಲನೆಯಿಂದ, ಗಾಳಿಯ ವೇಗದಿಂದ ಮಳೆಯಾಗುತ್ತದೋ ಇಲ್ಲವೋ ಎಂದು ಭವಿಷ್ಯ ನುಡಿಯುತ್ತಿದ್ದರು. ಆದರೆ ಯೇಸುವನ್ನು ರಕ್ಷಕನೆಂದು ಗುರುತಿಸಲು ವಿಫಲರಾದರು. ಹಳೇಯ ಒಡಂಬಡಿಕೆಯು `ರಕ್ಷಕ'ನ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದರೂ ಅವರು ಗುರತಿಸಲಿಲ್ಲ. 400 ವರ್ಷಗಳಿಂದ ರಕ್ಷಕನ ನಿರೀಕ್ಷೆಯಲ್ಲಿದ್ದರೂ ರಕ್ಷಕನು ತಮ್ಮ ಮಧ್ಯೆ ನಡೆದಾಡುವಾಗ ಆತನನ್ನು ಗುರುತಿಸಲು ವಿಫಲರಾದರು. ಎಲ್ಲರೂ ದೇವರ ಸೃಷ್ಟಿಗಳು, ಸಹೋದರ ಸಹೋದರಿಯರಲ್ಲಿ ದೇವರನ್ನು ಗುರುತಿಸಬೇಕಿದೆ.
No comments:
Post a Comment