Saturday, 12 October 2019

ಸಾಧಾರಣ ಕಾಲದ ಇಪ್ಪತ್ತೊಂಬತ್ತನೇ ವಾರ ಗುರುವಾರ

24/ಹಸಿರು/ಗುರು
1ನೇ ವಾಚನ - ರೋಮ 6: 19-23 
ಕೀರ್ತನೆ - 1: 1-4, 6
ಶುಭಸಂದೇಶ - ಲೂಕ 12: 49-53

1ನೇ ವಾಚನ - ರೋಮ 6: 19-23 
ಇದನ್ನು ಅರ್ಥಮಾಡಿಕೊಳ್ಳಲು ನೀವು ಅಶಕ್ತರಾಗಿರುವುದರಿಂದ ನಾನು ಹೀಗೆ ಸಾಮಾನ್ಯ ರೀತಿಯಲ್ಲಿ ಮಾತನಾಡುತ್ತಿದ್ದೇನೆ. ಹಿಂದೊಮ್ಮೆ ನೀವು ನಿಮ್ಮ ಇಂದ್ರಿಯಗಳನ್ನು ಹೆಚ್ಚುಹೆಚ್ಚಾಗಿ ಅಶ್ಲೀಲತೆಗೂ ಅಕ್ರಮಕ್ಕೂ ಗುಲಾಮರನ್ನಾಗಿಸಿದಿರಿ; ಈಗಲಾದರೋ ಪರಿಶುದ್ಧತೆಗೂ ಸತ್ಸಂಬಂಧಕ್ಕೂ ನಿಮ್ಮ ಇಂದ್ರಿಯಗಳನ್ನು ಅಧೀನರಾಗಿಸಿರಿ. ನೀವು ಪಾಪಕ್ಕೆ ಗುಲಾಮರಾಗಿದ್ದಾಗ ದೇವಸಂಬಂಧಕ್ಕೆ ಒಳಗಾಗಿರಲಿಲ್ಲ. ಯಾವ ಕೃತ್ಯಗಳ ವಿಷಯದಲ್ಲಿ ಈಗ ನೀವು ನಾಚಿಕೆಪಡುತ್ತೀರೋ ಅವುಗಳನ್ನು ನೀವು ಹಿಂದೆ ಮಾಡುತ್ತಾ ಬಂದಿರಿ. ಅವುಗಳಿಂದ ನಿಮಗೆ ದೊರೆತ ಪ್ರತಿಫಲವಾದರೂ ಏನು? ಮೃತ್ಯುವೇ ಅವುಗಳ ಅಂತ್ಯ ಫಲ. ಆದರೆ ನೀವು ಪಾಪದಿಂದ ಬಿಡುಗಡೆ ಹೊಂದಿರುವಿರಿ. ದೇವರಿಗೆ ದಾಸರಾಗಿರುವಿರಿ. ಇದರಿಂದ ನಿಮಗೆ ಸಿಕ್ಕಿರುವ ಪ್ರತಿಫಲ ಪರಿಶುದ್ಧ ಜೀವನ; ಅಂತಿಮವಾಗಿ ಅಮರ ಜೀವನ. ಮರಣವೇ ಪಾಪದ ವೇತನ; ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ಇರುವ ನಿತ್ಯಜೀವವೇ ದೇವರ ಉಚಿತ ವರದಾನ.

ಕೀರ್ತನೆ - 1: 1-4, 6
1 : ದುರ್ಜನರ ಆಲೋಚನೆಯಂತೆ ನಡೆಯದೆ / ಪಾಪಾತ್ಮರ ಪಥದಲಿ ಕಾಲೂರದೆ / ಧರ್ಮನಿಂದಕರ ಕೂಟದಲಿ ಕೂರದೆ //
2 : ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು/ ಹಗಲಿರುಳೆನ್ನದೆ ಅದನೆ ಧ್ಯಾನಿಸು ತಿರುವವನಾರೋ - ಅವನೇ ಧನ್ಯನು //
3 : ನದಿಯ ಬದಿಯಲೇ ಬೆಳೆದಿಹ ಮರದಂತೆ / ಸಕಾಲಕೆ ಫಲವೀವ ವೃಕ್ಷದಂತೆ / ಎಲೆಬಾಡದೆ ಪಸಿರಿರುವ ತರುವಂತೆ / ಸಿಗುವುದು ಅವನ ಕಾರ್ಯಗಳಿಗೆ ಸಫಲತೆ //
4 : ದುರುಳರಾದರೊ ತೂರಿ ಹೋಗುವರು / ಬಿರುಗಾಳಿಗೆ ತರಗೆಲೆಯಾಗುವರು //
5 : ಎಂದೇ ನಿಲ್ಲಲಾರರು ದುರುಳರು ನ್ಯಾಯಸ್ಥಾನದಲಿ / ಸದಸ್ಯರಾಗರು ಪಾಪಿಗಳು ಸಜ್ಜನರ ಸಂಘದಲಿ //
6 : ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ / ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ //

ಶುಭಸಂದೇಶ - ಲೂಕ 12: 49-53
“ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ. ಆದರೆ ನಾನು ಪಡೆಯಬೇಕಾದ ಶ್ರಮಾಸ್ನಾನ ಒಂದುಂಟು. ಅದು ಈಡೇರುವ ತನಕ ನನಗೆ ನೆಮ್ಮದಿಯಿಲ್ಲ. ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ಭಾವಿಸುತ್ತೀರೋ? ಇಲ್ಲ. ಭಿನ್ನಭೇದಗಳನ್ನು ಉಂಟುಮಾಡಲು ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ. ಹೇಗೆಂದರೆ, ಒಂದೇ ಮನೆಯಲ್ಲಿರುವ ಐವರಲ್ಲಿ, ಇಂದಿನಿಂದ ಇಬ್ಬರಿಗೆ ವಿರುದ್ಧ ಮೂವರು, ಮೂವರಿಗೆ ವಿರುದ್ಧ ಇಬ್ಬರು ವಿಭಾಗವಾಗುವರು. ಮಗನಿಗೆ ವಿರುದ್ದವಾಗಿ ತಂದೆ, ಮಗಳಿಗೆ ವಿರುದ್ಧವಾಗಿ ತಾಯಿ, ಸೊಸೆಗೆ ವಿರುದ್ಧವಾಗಿ ಅತ್ತೆ, ಪರಸ್ಪರ ವಿರೋಧವಾಗಿ ವಿಂಗಡಿಸಿ ಹೋಗುವರು,” ಎಂದರು. 
------
ಚಿಂತನೆ
ಪ್ರೀತಿ, ಶಾಂತಿ, ಕ್ಷಮೆ, ಕರುಣೆಯ ಪ್ರತೀಕ ಯೇಸು. `ಶಾಂತಿ ನಿಮ್ಮೊಡನೆ ಇರಲಿ' ಪ್ರಭು ಕ್ರಿಸ್ತರು ಪುನರುತ್ಥಾನದ ನಂತರ ನೀಡಿದ ಸಂದೇಶ. ತಮ್ಮ ಜೀವನದಲ್ಲಿ ಶಾಂತಿಯನ್ನು ಪ್ರತಿಪಾದಿಸಿ ಹಿಂಸೆಯನ್ನು ವಿರೋಧಿಸಿದ ಕ್ರಿಸ್ತ, ಇಂದಿನ ಶುಭಸಂದೇಶದಲ್ಲಿ ತಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು, ಭಿನ್ನಬೇಧಗಳನ್ನು ಉಂಟುಮಾಡಲು ಎನ್ನುತ್ತಾರೆ. ಕ್ರಿಸ್ತನ ತತ್ವಗಳು, ಆದರ್ಶಗಳು, ಬೋಧನೆಯು ಯೆಹೂದ್ಯ ಸಮಾಜವನ್ನು ಗೊಂದಲಕ್ಕೀಡುಮಾಡಿತ್ತು. ಧಾರ್ಮಿಕ ನಾಯಕರ ಮತ್ತು ಜನಸಾಮಾನ್ಯರ ನಡುವೆ ಭಿನ್ನಭಿಪ್ರಾಯ ಮೂಡಿಸಿತು. ಯಾವುದೇ ಬದಲಾವಣೆಯನ್ನು ಶಾಂತಿಯಿಂದ ತರಲು ಕಷ್ಟ. ಶಾಂತಿಗೆ ಪ್ರಯತ್ನಪಟ್ಟಷ್ಟು ಯುದ್ಧ-ಹಿಂಸೆ ನಡೆಯುತ್ತಲೇ ಇವೆ. ಅಂತರಂಗದ ಬದಲಾವಣೆ, ಕ್ಷಮೆ ಮತ್ತು ಪ್ರೀತಿಯಿಂದ ಮಾತ್ರ ಶಾಂತಿಯ ಸ್ಥಾಪನೆ ಸಾಧ್ಯ.

No comments:

Post a Comment