Sunday, 10 November 2019

ಸಾಧಾರಣ ಕಾಲದ ಮೂವತ್ತೆರಡನೇ ವಾರ ಸೋಮವಾರ


11/ಬಿಳಿ/ಸೋಮ/ಟೂರ್‍ಸನ ಸಂತ ಮಾರ್ಟಿನ್ ಧರ್ಮಾ (ಸ್ಮರಣೆ)
1ನೇ ವಾಚನ - ಸುಜ್ಞಾ: 1: 1-7
ಕೀರ್ತನೆ - 139: 1-1೦
ಶುಭಸಂದೇಶ - ಲೂಕ 17: 1-6


1ನೇ ವಾಚನ - ಸುಜ್ಞಾ: 1: 1-7
ಪೊಡವಿಯ ಪಾಲಕರೇ, ನ್ಯಾಯ ನೀತಿಯನ್ನು ಪ್ರೀತಿಸಿರಿ ಯಥಾರ್ಥಚಿತ್ತರಾಗಿ ಸರ್ವೇಶ್ವರನನ್ನು ಧ್ಯಾನಿಸಿರಿ ನಿಷ್ಕಪಟ ಮನಸ್ಸಿನಿಂದ ಆತನನ್ನು ಅರಸಿರಿ. ಸರ್ವೇಶ್ವರನು ದರ್ಶನವೀಯುವುದು ತನ್ನಲ್ಲಿ ಅಪನಂಬಿಕೆ ಪಡದವರಿಗೆ ಸರ್ವೇಶ್ವರನನ್ನು ಅರಿತುಕೊಂಡವರು ಅವರನ್ನು ಗುರಿಪಡಿಸರು ಪರೀಕ್ಷೆಗೆ. ದುರಾಲೋಚನೆಗಳು ಮಾನವನನ್ನು ದೂರಮಾಡುತ್ತವೆ ದೇವರಿಂದ ದೇವರನ್ನು ಪರೀಕ್ಷಿಸಲೆತ್ನಿಸುವವನನ್ನು ಹುಚ್ಚನನ್ನಾಗಿಸುತ್ತದೆ ಆತನ ಶಕ್ತಿ ಸಾಮಥ್ರ್ಯ. ಸುಜ್ಞಾನ ಪ್ರವೇಶಿಸದು ಕಪಟಾತ್ಮವನ್ನು ಪಾಪಾಧೀನವಾದ ಹೃದಯದಲ್ಲಿ ಅದು ತಂಗದು. ಸುಶಿಕ್ಷಿತವಾದಾ ನಿರ್ಮಲ ಆತ್ಮ ಮೋಸದೆಡೆ ನಿಲ್ಲದು ಅವಿವೇಕ ಆಲೋಚನೆಗಳಿಂದದು ಓಡಿಹೋಗುವುದು ಅನ್ಯಾಯವು ಸಮೀಪಿಸಿದಾಗ ಅದು ಅಸಹ್ಯಪಡುವುದು. ಸುಜ್ಞಾನವೆಂಬುದು ಮಾನವನನ್ನು ಸ್ನೇಹಿಸುವ ಚೈತನ್ಯವು ಆದರೆ ದೇವದೂಷಣೆ ಆಡುವವರನ್ನು ಅದು ದಂಡಿಸದೆ ಬಿಡದು. ಏಕೆಂದರೆ ಅಂತರಾಲೋಚನೆಗಳಿಗೆ ದೇವರೇ ಸಾಕ್ಷಿ ಆತ ಹೃದಯಗಳನ್ನೂ ವೀಕ್ಷಿಸುತ್ತಾನೆ ಗಮನಿಸಿ ನಾಲಿಗೆ ಆಡುವುದನ್ನು ಅರ್ಥಮಾಡಿಕೊಳ್ಳುತ್ತಾನೆ ಚೆನ್ನಾಗಿ. ಸರ್ವೇಶ್ವರನ ಚೈತನ್ಯ ವಿಶ್ವವನ್ನು ತುಂಬಿದೆ ಸಮಸ್ತವನ್ನು ಒಟ್ಟಿಗೆ ಹಿಡಿದಿರುವ ಅದಕ್ಕೆ ಪ್ರತಿಯೊಂದೂ ತಿಳಿದಿದೆ.

ಕೀರ್ತನೆ - 139: 1-1೦
1 : ಪ್ರಭು, ಪರಿಶೋಧಿಸಿರುವೆ ನೀ ನನ್ನನು / ಅರಿತುಕೊಂಡಿರುವೆ ಅಂತರಂಗವನು
2 : ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ / ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ
3 : ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ / ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ
4 : ಪ್ರಭು, ನಾ ಮಾತೆತ್ತುವುದಕ್ಕೆ ಮುಂಚಿತವಾಗಿ / ತಿಳಿದುಹೋಗಿದೆ ಎಲ್ಲ ನಿನಗೆ ಪೂರ್ತಿಯಾಗಿ
5 : ನನ್ನ ಹಿಂದೆಯೂ ಮುಂದೆಯೂ ನೀನಿರುವೆ / ಅಭಯ ಹಸ್ತವನು ನನ್ನ ಮೇಲಿರಿಸಿರುವೆ
6 : ನನ್ನ ಕುರಿತು ನಿನಗಿರುವ ಅರಿವು ಅಗಾಧ / ನನ್ನ ಬುದ್ಧಿಗದು ಸಿಲುಕದಷ್ಟು ಉನ್ನತ
7 : ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ ತಪ್ಪಿಸಿಕೊಳ್ಳಲು? / ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ ಮರೆಯಾಗಲು?
8 : ಆಕಾಶಕೆ ನಾನೇರಿದರೂ ನೀನಿರುವೆ ಅಲ್ಲಿ / ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ
9 : ನಾನರುಣನ ರೆಕ್ಕೆಗಳನೇರಿ ಹಾರಿದರೂ / ಸಮುದ್ರ ಕಟ್ಟಕಡೆಗಳಲಿ ನಾ ಸೇರಿದರೂ
10 : ಅಲ್ಲೂ ನನ್ನ ನಡೆಸುವುದು ನಿನ್ನ ಕೈ / ನನ್ನ ಹಿಡಿದಿರುವುದು ನಿನ್ನ ಬಲಗೈ

ಶುಭಸಂದೇಶ - ಲೂಕ 17: 1-6
ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ಪಾಪಪ್ರಚೋದನೆಗಳು ಬಂದೇ ಬರುತ್ತವೆ. ಆದರೆ ಅವು ಯಾರಿಂದ ಬರುತ್ತವೋ ಅವನಿಗೆ ಧಿಕ್ಕಾರ! ಅಂಥವನು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಕ್ಕೆ ಕಾರಣನಾಗುವುದಕ್ಕಿಂತ, ಬೀಸುವ ಕಲ್ಲನ್ನು ಕುತ್ತಿಗೆಗೆ ಬಿಗಿಸಿಕೊಂಡು ಸಮುದ್ರದಲ್ಲಿ ದಬ್ಬಿಸಿಕೊಳ್ಳುವುದೇ ಲೇಸು. ನೀವಾದರೋ ಎಚ್ಚರಿಕೆಯಿಂದಿರಿ! “ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಖಂಡಿಸು; ಪಶ್ಚಾತ್ತಾಪಪಟ್ಟರೆ ಕ್ಷಮಿಸಿಬಿಡು. ಅವನು ದಿನಕ್ಕೆ ಏಳುಸಾರಿ ನಿನಗೆ ವಿರುದ್ಧ ತಪ್ಪುಮಾಡಿ ಪ್ರತಿಯೊಂದು ಸಾರಿಯೂ ಪಶ್ಚಾತ್ತಾಪಪಟ್ಟು ನಿನ್ನ ಬಳಿಗೆ ಬಂದು, ‘ಕ್ಷಮಿಸು,’ ಎಂದು ಕೇಳಿಕೊಂಡರೆ ನೀನು ಅವನನ್ನು ಕ್ಷಮಿಸಲೇಬೇಕು,” ಎಂದರು. “ಸ್ವಾವಿೂ, ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ,” ಎಂದು ಪ್ರೇಷಿತರು ಕೇಳಿಕೊಂಡರು. ಆಗ ಯೇಸುಸ್ವಾಮಿ, “ಸಾಸಿವೆ ಕಾಳಿನಷ್ಟು ವಿಶ್ವಾಸ ನಿಮ್ಮಲ್ಲಿದ್ದು, ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೊ,’ ಎಂದು ಆಜ್ಞಾಪಿಸಿದ್ದೇ ಆದರೆ ಅದು ನಿಮಗೆ ವಿಧೇಯವಾಗಿ ನಡೆದುಕೊಳ್ಳುವುದು.

ಚಿಂತನೆ
ರೋಗವು ಸಾಂಕ್ರಾಮಿಕವಾಗಿರುತ್ತದೆ. ಆದರೆ ಆರೋಗ್ಯವು ಸಾಂಕ್ರಾಮಿಕವಾಗಿರುವುದಿಲ್ಲ. ರೋಗವನ್ನು ದೂರ ಓಡಿಸಬೇಕಾಗುತ್ತದೆ, ಆರೋಗ್ಯವನ್ನು ಸಮೀಪಕ್ಕೆ ಕರೆದುಕೊಳ್ಳಬೇಕಾಗುತ್ತದೆ. ಕೆಟ್ಟ ಸಹವಾಸ ಸುಲಭವಾಗಿ ಸಿಕ್ಕುವಂತೆ ಒಳ್ಳೆಯ ಸಹವಾಸ ಸುಲಭವಾಗಿ ಸಿಕ್ಕವುದಿಲ್ಲ. ಕೆಟ್ಟ ಚಟಗಳನ್ನು ರೂಢಿಸಿಕೊಳ್ಳುವುದು ಸುಲಭ. ಒಂದು ಬಿಳಿಯ ಪಾರಿವಾಳ ಕಾಗೆಗಳ ಸಹವಾಸ ಮಾಡಿದರೆ ಅವರ ಗರಿಗಳು ಬಿಳಿಯಾಗಿಯೇ ಉಳಿಯಬಹುದು, ಆದರೆ ಹೃದಯ ಕಪ್ಪಾಗಬಹುದು. ಮನುಷ್ಯನು ತನಗಿಂತ ಉತ್ತಮವಾದವರೊಂದಿಗೆ ಇರಲು ಪ್ರಯತ್ನಿಸಬೇಕು. 

ಹುಟ್ಟಿನಿಂದಲೇ ಯಾರು ಕೆಟ್ಟವರಾಗಿ, ಅಪರಾಧಿಗಳಾಗಿ ಹುಟ್ಟುವುದಿಲ್ಲ. ಕುಟುಂಬ, ಪರಿಸರ, ಸ್ನೇಹಿತರು, ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತಾರೆ. ಪರರನ್ನು ತಪ್ಪುದಾರಿಗೆ ಎಳೆಯುವುದರ ಬದಲು ಆದರ್ಶವಾಗಬೇಕೆಂದು ಯೇಸು ಬಯಸುತ್ತಾರೆ.

No comments:

Post a Comment