Sunday, 10 November 2019

ಸಾಧಾರಣ ಕಾಲದ ಮೂವತ್ತೆರಡನೇ ವಾರ ಮಂಗಳವಾರ


12/ಕೆಂಪು/ಮಂಗಳ/ಸಂತ ಜೋಸೆಫಾತ್, (ಧರ್ಮಾ ಮತ್ತು ರ.ಸಾ)
1ನೇ ವಾಚನ - ಸುಜ್ಞಾನ. 2:23-3: 9
ಕೀರ್ತನೆ - 34: 1-2, 16-19
ಶುಭಸಂದೇಶ - ಲೂಕ 17: 7-1೦


1ನೇ ವಾಚನ - ಸುಜ್ಞಾನ. 2:23-3: 9
ದೇವರು ಮಾನವನನ್ನು ಸೃಷ್ಟಿಸಿದ್ದು ಅಮರತ್ವಕ್ಕಾಗಿ ಅವನನ್ನು ರಚಿಸಿದ್ದು ತಮ್ಮ ಸ್ವರೂಪಕ್ಕನುಗುಣವಾಗಿ. ಸೈತಾನನ ಮತ್ಸರದಿಂದಲೆ ಮರಣ ಪ್ರವೇಶಿಸಿತು ಲೋಕವನು ಅವನ ಪಕ್ಷಕೆ ಸೇರಿದವರೆಲ್ಲರು ಅನುಭವಿಸುವರು ಅದನು. ಸಜ್ಜನರ ಆತ್ಮಗಳಿರುವುವು ದೇವರ ಕೈಯೊಳು ಅವರನ್ನು ಮುಟ್ಟದು ಮಹಾಯಾತನೆ ಯಾವುದು. ಮಂದಮತಿಯ ಕಣ್ಣಿಗೆ ಸತ್ತವರಂತೆ ಅವರು ಕಾಣಿಸಿಕೊಂಡರು ಅವರು ಗತಿಸಿ ಹೋದುದು ಅವನಿಂದ ತೊಲಗಿದ ಕೇಡಂತಿತ್ತು. ಸಜ್ಜನರಿಗಾದ ಸಾವು ಮಹಾ ವಿಪತ್ತು ಎಂದವನಿಗೆ ತೋರಿತು ಅವರಾದರೋ ಶಾಂತಿಸಮಾಧಾನದಿಂದ ನೆಮ್ಮದಿಯಾಗಿರುವರು. ಮಾನವನ ದೃಷ್ಟಿಯಲ್ಲಿ ಅವರು ಕಂಡುಬಂದರು ಶಿಕ್ಷಿಸಲ್ಪಟ್ಟವರಂತೆ ಅವರಲ್ಲಾದರೋ ತುಂಬಿತ್ತು ಅಮರತ್ವದ ನಂಬಿಕೆ ನಿರೀಕ್ಷೆ. ಅವರು ಅನುಭವಿಸಿದ ಶಿಕ್ಷೆ ಅಲ್ಪ, ಹೊಂದುವ ಸೌಭಾಗ್ಯ ಅಪಾರ ಶೋಧಿಸಿದ ತರುವಾಯ ದೇವರಿಗೆ ಅವರು ಕಂಡುಬಂದರು ಯೋಗ್ಯಾರ್ಹ. ಶೋಧಿಸಿದರವರನು ಪುಟಕ್ಕಿಟ್ಟ ಚಿನ್ನದಂತೆ ಅಂಗೀಕೃತರಾದರು ಪೂರ್ಣ ದಹನಬಲಿಯಂತೆ. ಪ್ರಕಾಶಿಸುವರು ದೇವರನು ಸಂದರ್ಶಿಸುವ ಕಾಲದಲಿ ಹೊಳೆಯುವರು ಒಣಹುಲ್ಲಿನೊಳಗಿನ ಕಿಡಿಗಳೋಪಾದಿ. ನ್ಯಾಯತೀರಿಸುವರವರು ಜನಾಂಗಗಳಿಗೆ ದೊರೆತನ ಮಾಡುವರವರು ಜನಗಳ ಮೇಲೆ ದೇವರ ಪ್ರಜೆಗಳಾಗಿರುವರು ಸದಾಕಾಲಕೆ. ಸತ್ಯವನು ಅರಿವರು ದೇವರಲಿ ಭರವಸೆಯಿಡುವವರು ಅವರೊಂದಿಗೆ ಪ್ರೀತಿಯಿಂದ ಬಾಳುವರು ನಂಬಿಗಸ್ತರು. ದೇವರಿಂದ ಆಯ್ಕೆಯಾದವರಿಗಿರುವುದು ಕೃಪಾನುಗ್ರಹವು ದೇವರೇ ಕಾಪಾಡುವರು ಸಜ್ಜನರನು.

ಕೀರ್ತನೆ - 34: 1-2, 16-19
1 : ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು / ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು //
2 : ಪ್ರಭುವಿನಲ್ಲಿದೆ ನನ್ನ ಮನದಭಿಮಾನ / ದೀನರಿದನು ಕೇಳಿ, ಪಡೆಯಲಿ ಸುಮ್ಮಾನ //
16 : ದುರ್ಜನರಿಗಾದರೋ ಪ್ರಭು ವಿಮುಖನು / ಅವರ ಹೆಸರನು ಧರೆಯಿಂದ ಅಳಿಸುವನು //
17 : ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ / ನೆರವೀವನವರ ಕಷ್ಟನಿವಾರಣೆಗೆ //
18 : ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ / ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ //
19 : ಸಜ್ಜನನಿಗೊದಗುವ ಸಂಕಟಗಳು ವಿಪರೀತ / ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ //

ಶುಭಸಂದೇಶ - ಲೂಕ 17: 7-1೦
“ನಿಮಗೆ ಒಬ್ಬ ಆಳಿದ್ದಾನೆಂದು ಭಾವಿಸೋಣ. ಅವನು ಹೊಲ ಉತ್ತೋ, ಕುರಿ ಮೇಯಿಸಿಯೋ ಮನೆಗೆ ಬರುತ್ತಾನೆ. ಬಂದಾಕ್ಷಣವೇ, ‘ಬಾ, ನನ್ನೊಂದಿಗೆ ಊಟಮಾಡು,’ ಎಂದು ನಿಮ್ಮಲ್ಲಿ ಯಾರಾದರೂ ಅವನಿಗೆ ಹೇಳುತ್ತಾರೆಯೇ? ಇಲ್ಲ. ಅದಕ್ಕೆ ಬದಲಾಗಿ ‘ಊಟ ಸಿದ್ಧಮಾಡು; ನಾನು ಊಟಮಾಡಿ ಮುಗಿಸುವ ತನಕ ನಡುಕಟ್ಟಿಕೊಂಡು ನನಗೆ ಉಪಚಾರ ಮಾಡು. ಅನಂತರ ನೀನು ಊಟ ಮಾಡುವೆಯಂತೆ,’ ಎಂದು ಹೇಳುತ್ತಾರಲ್ಲವೇ? ತಮ್ಮ ಆಜ್ಞೆಯ ಪ್ರಕಾರ ನಡೆದುಕೊಂಡ ಆಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆಯೇ? ಇಲ್ಲ. ಹಾಗೆಯೇ ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, ‘ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ,’ ಎಂದುಕೊಳ್ಳಿರಿ,” ಎಂದರು.

ಚಿಂತನೆ
ಕೆಲಸ ಮಾಡದೇ ಸತ್ತವರಿದ್ದಾರೆ, ಆದರೆ ಕೆಲಸ ಮಾಡಿ ಸತ್ತವರು ಯಾರೂ ಇಲ್ಲ. ಕೆಲಸವು ಮನುಷ್ಯನನ್ನು ಉನ್ನತಿಗೆ ಏರಿಸುತ್ತದೆ ಹೊರತು ಅವನತಿಗಲ್ಲ. ಜಗತ್ತಿನಲ್ಲಿ ಬದುಕ ಬೇಕೆನ್ನುವ ಸಾಧನೆ ಮಾಡಬೇಕೆನ್ನುವ ಮನುಷ್ಯನು ತನ್ನ ಜೀವನದಲ್ಲಿ ಏನನ್ನಾದರೂ ಮಾಡುತ್ತಲೇ ಇರಬೇಕು. ತನ್ನನ್ನು ಒಂದು ಉಪಯುಕ್ತ ಕೆಲಸದಲ್ಲಿ ತೊಡಗಿಸಿಕೊಳ್ಳಲಾರದ ಮನುಷ್ಯನು ತನಗಾಗಲಿ, ಇನ್ನೊಬ್ಬರಿಗಾಗಲಿ ಉಪಯೋಗವಾಗುವ ಮನುಷ್ಯನೇ ಅಲ್ಲ. ತಾನು ಕೈಗೆತ್ತಿಕೊಂಡ ಕೆಲಸವನ್ನು ಮನುಷ್ಯನು, ಅದರಲ್ಲಿ ತನ್ನ ಮನಸ್ಸನ್ನು ಸಂಪೂರ್ಣವಗಿ ತೊಡಗಿಸಿಕೊಂಡು, ಶ್ರದ್ಧೆ ವಿಶ್ವಾಸಗಳಿಂದ ಮಾಡಬೇಕು. ಮಾಡುವ ಕೆಲಸವನ್ನು ಶ್ರದ್ಧೆ, ಪ್ರಾಮಾಣಿಕವಾಗಿ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವುದಾಗಿ ಯೇಸು ತಿಳಿಸುತ್ತಾರೆ.

No comments:

Post a Comment