Sunday, 17 November 2019

ಸಾಧಾರಣ ಕಾಲದ ಮೂವತ್ಮೂರನೇ ವಾರ ಸೋಮವಾರ

18/ಹಸಿರು/ಸೋಮ/ಐಚ್ಛಿಕ ಸ್ಮರಣೆ - ಪ್ರೇಷಿತರಾದ ಸಂತ ಪೇತ್ರ ಮತ್ತು ಪೌಲರ ಮಹಾ ದೇವಾಲಯಗಳ ಅಭಿಷೇಕೋತ್ಸವ 
1ನೇ ವಾಚನ - 1 ಮಕ್ಕ 1: 1೦-15, 41-43, 54-57, 62-64
ಕೀರ್ತನೆ - 119: 53, 61, 134, 15೦, 155, 158
ಶುಭಸಂದೇಶ - ಲೂಕ 18: 35-43

1ನೇ ವಾಚನ - 1 ಮಕ್ಕ 1: 1೦-15, 41-43, 54-57, 62-64
ಅಧಿಕಾರಿಗಳಿಂದ ವಿಷಲತೆಯ ಬೇರೊಂದು ಚಿಗುರಿಕೊಂಡಿತು. ಇವನೇ ಅಂತಿಯೋಕ ಎಪಿಫನೆಸ್ ಎಂಬವನು. ಇವನು ‘ಅಂತಿಯೋಕ’ ಎಂಬ ರಾಜನ ಮಗ; ರೋಂ ನಗರದಲ್ಲಿ ಒತ್ತೆಯಾಳಾಗಿ ಬಿದ್ದಿದ್ದ. ಗ್ರೀಕ್ ರಾಜ್ಯದ 137ರಲ್ಲಿ ಇವನು ಪಟ್ಟಕ್ಕೆ ಬಂದ. ಆ ದಿನಗಳಲ್ಲಿ ಧರ್ಮಶಾಸ್ತ್ರವನ್ನು ಮೀರಿ ನಡೆಯುತ್ತಿದ್ದ ಕೆಲವರು ಇಸ್ರಯೇಲಿನಲ್ಲಿ ತಲೆಯೆತ್ತಿಕೊಂಡರು. ಇವರು, “ನಮ್ಮ ಸುತ್ತಮುತ್ತಲಿನ ಅನ್ಯಜನರ ಸಂಗಡ ಸಂಧಾನ ಮಾಡಿಕೊಳ್ಳೋಣ ಬನ್ನಿ; ನಾವು ಅವರಿಂದ ಬೇರೆಯಾದಾಗಿನಿಂದ ಬಹಳ ಸಂಕಟಗಳಿಗೆ ಈಡಾಗಿದ್ದೇವೆ,” ಎಂದು ಹೇಳುತ್ತಾ ಅನೇಕರನ್ನು ತಪ್ಪುದಾರಿಗೆ ಎಳೆದರು. ಹಲವರಿಗೆ ಈ ಸಲಹೆ ಹಿತರಕವಾಗಿಯೇ ಕಂಡಿತು. ಕೆಲವು ಮಂದಿ ಅರಸನವರೆಗೂ ಹೋದರು. ಅರಸನೂ ಅವರಿಗೆ ಅನ್ಯಜನರ ಆಚಾರವಿಚಾರಗಳನ್ನು ಅನುಸರಿಸಲು ಅಪ್ಪಣೆಕೊಟ್ಟನು. ಪರಿಣಾಮವಾಗಿ, ಅವರು ಹೋಗಿ ಅನ್ಯಜನರ ಸಂಪ್ರದಾಯದಂತೆ ಜೆರುಸಲೇಮಿನಲ್ಲೆ ಒಂದು ವ್ಯಾಯಾಮ ಶಾಲೆಯನ್ನು ಕಟ್ಟಿಸಿದರು. ಸುನ್ನತಿ ಚಿಹ್ನೆಗಳನ್ನು ಮರೆಮಾಚಿದರು, ಪವಿತ್ರ ಒಡಂಬಡಿಕೆಯನ್ನು ಮೀರಿದರು, ಅನ್ಯಜನರೊಡನೆ ಮಿಶ್ರವಾದರು, ದುಷ್ಟತನಕ್ಕೆ ದಾಸರಾದರು. ಅನ್ಯಧರ್ಮೀಯರ ಪೂಜಾಪದ್ಧತಿ ತರುವಾಯ ಅರಸ ಅಂತಿಯೋಕನು, “ಎಲ್ಲರು ಒಂದೇ ಜನಾಂಗದಂತೆ ಬಾಳಬೇಕು; ಪ್ರತಿಯೊಬ್ಬನು ತನ್ನ ಸ್ವಂತ ಧರ್ಮವನ್ನು ಬಿಟ್ಟುಬಿಡಬೇಕು,” ಎಂದು ಪ್ರಕಟಿಸಿದನು. ಎಲ್ಲ ಜನಾಂಗದವರು ಅರಸನ ಮಾತಿಗೆ ಓಗೊಟ್ಟಿದ್ದರು. ಇಸ್ರಯೇಲರಲ್ಲಿ ಅನೇಕರು ಅವನ ಪೂಜೆಮಾಡಲು ಒಪ್ಪಿ, ಮೂರ್ತಿಗಳಿಗೆ ಬಲಿ ಅರ್ಪಿಸಿದರು; ಸಬ್ಬತ್‍ದಿನವನ್ನು ಅಪವಿತ್ರಗೊಳಿಸಿದರು. 145ನೇ ವರ್ಷದ ಮಾರ್ಗಶಿರ ಮಾಸದ ಹದಿನೈದನೆಯ ದಿನದಂದು ‘ವಿನಾಶಕರ ವಿಕಟ ಮೂರ್ತಿ’ಯನ್ನು ಬಲಿಪೀಠದ ಮೇಲೆ ಸ್ಥಾಪಿಸಿದನು. ಜುದೇಯದ ಊರುಕೇರಿಗಳಲ್ಲಿ ಎಲ್ಲೆಲ್ಲೂ ವಿಗ್ರಹಗಳಿಗೆ ಪೀಠಗಳನ್ನು ನಿರ್ಮಿಸಲಾಯಿತು. ಮನೆಯ ಬಾಗಿಲುಗಳಲ್ಲೂ ಊರಬೀದಿಗಳಲ್ಲೂ ಧೂಪಾರತಿಗಳನ್ನು ಎತ್ತಿಸಲಾಯಿತು. ಕೈಗೆ ಸಿಕ್ಕಿದ ಧರ್ಮಶಾಸ್ತ್ರ ಗ್ರಂಥಗಳನ್ನು ಹರಿದು ಬೆಂಕಿಗೆ ಹಾಕಲಾಯಿತು. ಯಾರಾರಲ್ಲಿ ಒಡಂಬಡಿಕೆಯ ಗ್ರಂಥವಿತ್ತೋ ಯಾರಾರು ಧರ್ಮಶಾಸ್ತ್ರಕ್ಕೆ ಬದ್ಧರಾಗಿದ್ದರೋ ಅವರನ್ನು ರಾಜಾಜ್ಞೆಯಂತೆ ಮರಣಕ್ಕೆ ಗುರಿಮಾಡಲಾಯಿತು. ಆದರೂ ಇಸ್ರಯೇಲರಲ್ಲಿ ಅನೇಕರು ರಾಜಾಜ್ಞೆಯನ್ನು ಪ್ರತಿಭಟಿಸಿ, ಅಶುದ್ಧ ಆಹಾರವನ್ನು ತಿನ್ನಲು ನಿರಾಕರಿಸಿದರು. ಪವಿತ್ರ ಒಡಂಬಡಿಕೆಯನ್ನು ಮೀರಿ ಅಂಥ ಆಹಾರವನ್ನು ತಿನ್ನುವುದಕ್ಕಿಂತ ಸಾಯುವುದೇ ಲೇಸೆಂದು ಎಣಿಸಿ ಸಾವಿಗೆ ಸಿದ್ಧರಾದರು. ಅಂತೆಯೇ ಹಲವರು ಪ್ರಾಣತ್ಯಾಗ ಮಾಡಿದರು. ಆಗ ಭೀಕರ ಕೋಪಾಗ್ನಿ ಇಸ್ರಯೇಲಿನ ಮೇಲೆ ಉರಿಯ ಹತ್ತಿತು.

ಕೀರ್ತನೆ - 119: 53, 61, 134, 15೦, 155, 158
53 : ನಿನ್ನ ಶಾಸ್ತ್ರದ ಭ್ರಷ್ಠರನು ಕಂಡಾಗ / ನನಗೆ ಬರುತ್ತದೆ ಕೋಪೋದ್ರೇಕ //
61 : ದುರ್ಜನರ ಪಾಶಗಳು ಸುತ್ತಿಕೊಂಡಿವೆ ನನ್ನನು / ಆದರು ನಾ ಮರೆಯಲಿಲ್ಲ ನಿನ್ನ ಧರ್ಮಶಾಸ್ತ್ರವನು //
134 : ಜನಶೋಷಣೆಯಿಂದ ಮುಕ್ತಗೊಳಿಸೆನ್ನನು / ಕೈಗೊಳ್ಳುವೆನು ಆಗ ನಿನ್ನ ನಿಯಮಗಳನು
150 : ದುಷ್ಕರ್ಮಿಗಳು ಬಂದಿಹರೆನ್ನ ಸವಿೂಪಕ್ಕೆ / ದೂರವಿರುವರು ಅವರು ನಿನ್ನ ಧರ್ಮಶಾಸ್ತ್ರಕೆ
155 : ದೂರವಿದೆ ದುರುಳರಿಗೆ ಆ ಜೀವೋದ್ಧಾರ / ಅವರಿಗಿದೆ ನಿನ್ನ ನಿಬಂಧನೆಗಳ ತಾತ್ಸಾರ
158 : ಆ ದ್ರೋಹಿಗಳನು ಕಂಡಾಗ ಆಗುತಿದೆ ಅಸಹ್ಯ / ಏಕೆನೆ ನಿನ್ನ ನುಡಿಯಂತೆ ಅವರು ನಡೆಯರಯ್ಯಾ

ಶುಭಸಂದೇಶ - ಲೂಕ 18: 35-43
ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ ಕುರುಡನೊಬ್ಬನು ದಾರಿಯ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು. ಜನಸಂದಣಿಯ ಶಬ್ದವನ್ನು ಆಲಿಸಿ, ಅದೇನೆಂದು ವಿಚಾರಿಸಿದನು. “ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾರೆ,” ಎಂದು ಅವನಿಗೆ ತಿಳಿಸಲಾಯಿತು. ಕೂಡಲೇ ಅವನು, “ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಗಟ್ಟಿಯಾಗಿ ಕೂಗಿಕೊಂಡನು. ಮುಂದೆ ಹೋಗುತ್ತಿದ್ದವರು, “ಸುಮ್ಮನಿರು” ಎಂದು ಅವನನ್ನು ಗದರಿಸಿದರು. ಅವನಾದರೋ, “ದಾವೀದ ಕುಲಪುತ್ರರೇ, ನನಗೆ ದಯೆತೋರಿ” ಎಂದು ಮತ್ತಷ್ಟು ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು, ಅಲ್ಲೇ ನಿಂತು, ಅವನನ್ನು ತಮ್ಮ ಬಳಿಗೆ ಕರೆದುತರುವಂತೆ ಅಪ್ಪಣೆಮಾಡಿದರು. ಅವನು ಹತ್ತಿರಕ್ಕೆ ಬಂದಾಗ, “ನನ್ನಿಂದ ನಿನಗೇನಾಗಬೇಕು?” ಎಂದು ಕೇಳಲು ಅವನು, “ಸ್ವಾವಿೂ, ನನಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, “ದೃಷ್ಟಿಯನ್ನು ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ,” ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿಬಂದಿತು. ದೇವರನ್ನು ಸ್ತುತಿಸುತ್ತಾ ಅವನೂ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ದೇವರನ್ನು ಕೊಂಡಾಡಿದರು.

ಚಿಂತನೆ
ಜೆರಿಕೊ ಪಟ್ಟಣದಲ್ಲಿ ಯೇಸು ಕುರುಡನಿಗೆ ದೃಷ್ಟಿದಾನ ಮಾಡುತ್ತಾರೆ. ಜೆರಿಕೊ ಎಂದರೆ `ಪರಿಮಳ' ಎಂದರ್ಥ. ಈ ಕುರುಡನು ಯೇಸುವನ್ನು ದಾವಿದ ಕುಲಪುತ್ರರೇ ಎಂದು ಸಂಬೋದಿಸಿತ್ತಾನೆ. ಈ ಬಿರುದು ರಕ್ಷಕನಿಕೆ ನೀಡಲಾಗಿದೆ. ರಕ್ಷಕನು ಬಂದು ನಮ್ಮನ್ನು ರೋಮನ್ನರ ಅಧೀನದಿಂದ ಬಿಡುಗಡೆ ಮಾಡುವನೆಂದು ಜನರು ನಂಬಿದ್ದರು. ಬಹುಶಃ ಯೇಸುವಿನ ಅದ್ಬುತಗಳ ಬಗ್ಗೆ ಆಲಿಸಿದ್ದ ಕುರುಡನು ಗಟ್ಟಿಯಿಂದ ಯೇಸುವನ್ನು ಕೂಗಿ ಕರೆಯುತ್ತಾನೆ. ಯೇಸುವಿನಲ್ಲಿ ತನ್ನ ವಿಶ್ವಾಸವನ್ನು ವ್ಯಕ್ತಪಡಿಸುತ್ತಾನೆ. ಕಣ್ಣಿದ್ದ ಅನೇಕರು ಯೇಸುವನ್ನು ರಕ್ಷಕನೆಂದು ಗುರುತಿಸಲು ವಿಫಲರಾದರು. ಆದರೆ ಈ ಕುರಡು ವಿಶ್ವಾಸಿಸಿ ದೇವರ ಕೃಪೆಗೆ ಪಾತ್ರನಾದ. ಆತನ ವಿಶ್ವಾಸ ಮತ್ತು ಪ್ರಾರ್ಥನೆ ಹಾದಿಯಲ್ಲಿ ಹೋಗುತ್ತಿದ್ದ ಯೇಸುವನ್ನು ತಡೆದು ನಿಲ್ಲಿಸಿತು. ನಾವು ಸಹ ಅದೇ ವಿಶ್ವಾಸದಿಂದ ಪ್ರಾರ್ಥನೆ ಮಾಡಿದರೆ ನಮ್ಮ ಪ್ರಾರ್ಥನೆಗೆ ದೇವರನ್ನು ತಡದುನಿಲ್ಲಿಸುವ ಶಕ್ತಿಯಿದೆ. ಸೌಖ್ಯದ ನಂತರ ಆ ಕುರುಡ ಯೇಸುವಿನ ಶಿಷ್ಯನಾದಂತೆ ನಾವು ಸಹ ಯೇಸುವಿನ ಹಿಂಬಾಲಕರಾಗಬೇಕಿದೆ.

No comments:

Post a Comment